ಬೈ ಬೈ ಗಣಪ

7

ಬೈ ಬೈ ಗಣಪ

Published:
Updated:

`ಗಣಪಣ್ಣ ನಿನ್ ಪ್ರಯಾಣಕ್ಕೆಲ್ಲಾ ಪ್ಯಾಕಿಂಗ್ ಆಗಿದೆ. ಸ್ಟೀಮರ್ ಡಿಪಾರ್ಚರ್‌ಗೆ ಎರಡು ಗಂಟೇ ಮೊದಲೇ `ಸೀ ಪೋರ್ಟ್~ ನಾಗಿರ‌್ಬೇಕು. ಪಾಸ್‌ಪೋರ್ಟು, ಬ್ಯಾಗೇಜ್ ಸ್ಕ್ಯಾನಿಂಗ್, ಅದು ಇದು ಅಂತ ರಾಮಾಣ್ಯ ಇರ‌್ತದೆ ಡಿನ್ನರ್ ಮುಗಿಸ್ಕಂಡು ರೆಡಿಯಾಗ್ಬುಡು ಟ್ಯಾಕ್ಸಿ ಬರ್ತದೆ~ ಎಂದು ಪರಮೇಶಿ ಲಾರ್ಡ್ ಗಣೇಶನಿಗೆ ಅವಸರ ಮಾಡಿದ.`ಇದೇನಯ್ಯಾ ಇದು? ಈಗ ಇನ್ನೂ `ಟೀ ಟೈಮ್~ ಅಷ್ಟೆ. ಡಿನ್ನರ್ ಮುಗಿಸಿಬಿಡು ಅಂತೀಯಲ್ಲ ಯಾಕೆ? ನನ್ನ ಆದಷ್ಟು ಕ್ವಿಕ್ ಆಗಿ ಸಾಗಾಕಬೇಕು ಅಂತನಾ?~`ಛೆ, ಛೆ, ಅಂಗಲ್ಲ ಗಣಪಣ್ಣ, ರೈಲು, ಬಸ್ಸು, ಪ್ಲೇನು, ಷಿಪ್ಪು ಇವುಗಳಾಗೆ ಪ್ರಯಾಣ ಮಾಡಾರೆಲ್ಲ ಒಂದಷ್ಟು ಬ್ಯಾಗ ಮನೆ ಬಿಟ್ರೇನೇ ಬೆಟರ‌್ರು. ಇಲ್ಲಾಂದ್ರೆ ಈ ಸಿಟಿ ಟ್ರಾಫಿಕ್ ಜಾಮ್‌ನಾಗೆ ಸಿಗಾಕ್ಕಂಡು ರೈಲು, ಬಸ್ಸು, ಫ್ಲೈಟು ಎಲ್ಲ ಮಿಸ್ಸಾಯ್ತವೆ~

`ನನ್ನ ಕರ್ಮ ನೋಡು, ಬರೋವಾಗ ಜುಂ ಅಂತ ಫ್ಲೈಟ್‌ನಲ್ಲೇ ಬರ‌್ತಿನಿ. ರಿಟರ್ನ್ ಜರ್ನಿ ನೀರಿನ ಮೇಲೇ ಮಾಡ್ಬೇಕು~`ಏನ್ಮಾಡಾದು? ಸಂಪ್ರದಾಯ ಬಿಡಾಕಾಯ್ತದಾ? ಅದ್ನೇ ಫಾಲೋ ಮಾಡ್ಬೇಕು~

`ಈ ವಿಚಿತ್ರ ನೋಡು. ನಾನು ಬರೋ ಮೊದಲು `ಗಣೇಶ ಬರ‌್ತನೆ~, `ಗಣೇಶ ಬರ‌್ತನೆ~ ಅಂತ ಖುಷಿಯಾಗಿರ‌್ತಿರ. ಬಂದ ಮೇಲೆ ಸಂಜೇನೇ ಸೆಂಡ್ ಆಫ್ ಕೊಡ್ತಿರ. ವೆರಿ ಸ್ಯಾಡ್~

`ಏನ್ಮಾಡಾಕಾಯ್ತದೆ ಗಣಪಣ್ಣ, ಕಾಲ ಕೆಟ್ಟೋಗದೆ. ಬೆಲೆಗಳೆಲ್ಲ ಆಕಾಸ ಮುಟ್ತಾ ಅವೆ.ಹಿಂದೆಲ್ಲ ನಿನ್ನ ವಾರಗಟ್ಲೆ ಚೀಫ್ ಗೆಸ್ಟ್ ಆಗಿ ಇರಿಸ್ಕಂಡು ತರಾವರಿ ಕಡುಬು, ವೆರೈಟಿ ವೆರೈಟಿ ಸ್ವೀಟ್ಸು ನೈವೇದ್ಯ ಮಾಡ್ತಿದ್ವಿ. ಆದ್ರೆ ಈಗ ನಮ್ಗೇ ದಿನ ಕಳೆಯಾದು ಡಿಫಿಕಲ್ಟ್ ಆಗದೆ. ಇನ್ನು ನಿನ್ನಂತಾ ಭಾರಿ ಗೆಸ್ಟು ಅಂದ್ರೆ ಸುಮ್ಕೆ ಆಯ್ತದಾ ಮೇಂಟೇನ್ ಮಾಡಾದು?~

`ಅಲ್ಲಯ್ಯಾ, ಹಿಂದೆಲ್ಲ ಬೆಲ್ಲ ಹಾಕಿ, ರುಚಿ ರುಚಿಯಾಗಿ ಕಡುಬು, ಹೋಳಿಗೆ ಪಾಯಸ ಮಾಡ್ತಿದ್ರಿ. ಅದೇನೋ ಈಗ ಎಲ್ಲ ಭಕ್ಷ್ಯಗಳನ್ನೂ ಸಕ್ಕರೆ ಹಾಕಿ ಮಾಡಿದೀರಿ ಒರಿಜಿನಲ್ ಟೇಸ್ಟೇ ಇಲ್ಲದ ಹಾಗಾಗಿದೆ~`ಏನ್ಮಾಡಾಕಾಯ್ತದೆ. ಬೆಲ್ಲದ ರೇಟು ಜಾಸ್ತಿ. ಸಕ್ರೆಗೆ ಅದಕ್ಕಿಂತ ಬೆಲೆ ರವಷ್ಟು ಕಡಿಮೆ. ಅದ್ಕೇ ಅಂಗ್ ಮಾಡ್ಬೇಕಾತು~`ಪರಮೇಶಿ, ಹಿಂದೆಲ್ಲ ಮಳೆ ಬೆಳೆ ಚೆನ್ನಾಗಿದ್ದು, ಜನ ಎಲ್ಲ ಖುಷಿಯಿಂದ ನನ್ನ ಹಬ್ಬ ಮಾಡಿ, ತಿಂಗಳ ತನಕ ಉತ್ಸವ ಆರ್ಕೆಷ್ಟ್ರಾ, ಡ್ಯಾನ್ಸು ಎಲ್ಲ ಅರೇಂಜ್ ಮಾಡಿ ಎಂಜಾಯ್ ಮಾಡ್ತಿದ್ರು. ಈಗ ಯಾಕೆ ಹೀಗಾಯ್ತು? `ಬೆಲೆ ಏರಿಕೆ - ಬೆಲೆ ಏರಿಕೆ~ ಅಂತ ಗೋಳಾಡ್ತಿರಲ್ಲ?~`ಗೊತ್ತು ಗುರಿ ಇಲ್ಲದ ಇಂಡಸ್ಟ್ರಿಯಲೈಜೇಷನ್ ಅದ್ಕೆಲ್ಲ ಕಾರಣ, ಗಣಪಣ್ಣ, ಫಲವತ್ತಾಗಿರಾ ಹೊಲ, ಗದ್ದೆ, ತೋಟಗಳ್ನ ಅಕ್ವೈರ್ ಮಾಡ್ಕಂಡು ಫ್ಯಾಕ್ಟ್ರಿಗಳನ್ನ ಮಾಡ್ತಾ ಅವರೆ ಭೂಮಿ ಕಳಕಂಡ ರೈತರ ಮಕ್ಳು ಸಿಟಿ ಕಡೆ ಕೆಲಸ ಹುಡುಕ್ಕಂಡು ಹೊಂಟ್ರು. ಬೆಳೆ ಬೆಳೆಯಾಕೆ ಭೂಮಿ ಎಲ್ಲೈತೆ. ಉಳಾಕೆ ಜನ ಎಲ್ಲವರೆ?~`ಹಾಗಿದ್ರೆ ಅನ್ನ ಬೆಳೆಯೋ ಭೂಮಿ ಮೇಲೆ ಕಟ್ಟಿರೋ ಇವರ ಫ್ಯಾಕ್ಟ್ರಿಗಳು ತಯಾರು ಮಾಡೋ ಕಬ್ಬಿಣ, ಐಷಾರಾಮಿ ಕಾರುಗಳನ್ನ ಹಸಿದ ಜನ ತಿನ್ನಬೇಕು ಅನ್ನು?~

`ಅಂಗೇ ಆಗದೆ. ಫುಡ್ ಗ್ರೈನ್ಸ್‌ಗಿಂತ ಕಾರುಗಳ ಪ್ರೊಡಕ್ಷನ್ನೇ ಜಾಸ್ತಿ ಆಗೈತೆ. ರೈತರು ಅಕ್ವೈರ್ ಆದ ತಮ್ಮದೇ ಜಮೀನಿನಾಗೆ ದೇಶದ ಕುಬೇರರು ಕಟ್ಟಿದ ಕಾರ್ಖಾನೆಗಳಾಗೆ ಲೇಬರರ್ಸ್‌ ಆಗಿ ದುಡೀತಾ ಅವರೆ~`ಸರಿ, ಉಳೋಕೆ ಭೂಮಿನೇ ಇಲ್ಲದ ಮೇಲೆ ಆಹಾರ ಧಾನ್ಯ ಬೆಳೆಯೋದೆಲ್ಲಿ ಬಂತು? ಅರಬ್ಬಿ ಸಮುದ್ರದಲ್ಲಿ ಬೆಳೀಬೇಕು ಅಷ್ಟೆ~`ಗಣಪಣ್ಣ, ಸಿಟಿ ಸುತ್ತ ಮುತ್ತ ಇರೋ ಕೆರೆ ಅಂಗಳನೂ ಬಿಟ್ಟಿಲ್ಲ ಬಿಲ್ಡರ‌್ಸು. ಎಲ್ಲಿ ನೋಡುದ್ರೂ ಅಪಾರ್ಟ್‌ಮೆಂಟ್ಸು. ಭೂಮಿ ಕೊರೆದೂ ಕೊರೆದೂ ಸಾವಿರಾರು ಬೋರ್‌ವೆಲ್ಸ್ ತೋಡ್ತಾ ಅವ್ರೆ ಇಂಗೇ ಆದ್ರೆ ಭೂಮಿಟೊಳ್ಳಾಗಿ ಸಿಟಿನಾಗೆ ಭೂಕಂಪ ಆಗಾಕಿಲ್ವಾ?~

`ಅದನ್ನ ನಿಮ್ಮ ರಾಜ್ಯ ಆಳುವ ಪ್ರಭುಗಳೇ ಹೇಳಬೇಕು. ಗೊತ್ತು ಗುರಿ ಇಲ್ಲದೆ ಫರ್ಟೈಲ್ ಲ್ಯಾಂಡ್ಸ್ ಸ್ವಾಧೀನ ಮಾಡಿಕೊಂಡು ಲೇ ಔಟ್, ಇಂಡಸ್ಟ್ರಿಯಲ್ ಟೌನ್ ಮಾಡ್ತಾ ಇದ್ರೆ ಮುಂದಿನ ವರ್ಷ ನಾನು ಬಂದಾಗ ಅಕ್ಕಿ ಕೆ.ಜಿ.ಗೆ ಐವತ್ತು ರೂಪಾಯಿಗೆ ಸೇಲ್ ಆದರೂ ಆಶ್ಚರ್ಯ ಇಲ್ಲ~`ಬರೇ ಗಾಳಿ ಕುಡಕಂಡಿರಾನ ಅಂದ್ರೆ ವೆಹಿಕಲ್ಸ್ ಬಿಡೋ ಹೊಗೇನೆ ಸಿಟಿ ರಸ್ತೆಗಳ ತುಂಬಾ ತುಂಬಿರ‌್ತದೆ~`ಅಲ್ಲಯ್ಯಾ, ನಿಮ್ಮ ಎಮ್ಮೆಲ್ಲೆಗಳು ಏನೋ ಸ್ಟಡಿ ಟೂರ್ ಅಂತ ಫಾರಿನ್ ಕಂಟ್ರೀಸ್‌ಗೆ ಹೋಗ್ತಾರಂತಲ್ಲ, ಅದರಿಂದ ನಿಮ್ಮಂತ ವೋಟುದಾರರಿಗೆ ಏನು ಬೆನಿಫಿಟ್ ಆಗುತ್ತೆ?~

`ಅಯ್ಯೋ ನೀನೊಂದು. ನಾವು ವೋಟು ಆಕಿದ ಮ್ಯಾಗೆ ನಮ್ಮನ್ನ `ಕ್ಯಾರೇ~ ಅನ್ನಾಕಿಲ್ಲ ಅವ್ರ. ವೋಟು ಕೊಟ್ಟೋನು ಕೋಡಂಗಿ, ಎಲೆಕ್ಟ್ ಆದೋನು ಈರಭದ್ರ ಅನ್ನಂಗಾಗದೆ. ಸಿಟಿ ತುಂಬಾ ಕಸದ ರಾಶಿ ತುಂಬ್ಕಂಡು ಗಬ್ಬು ನಾತ ಬಡೀತದೆ. ಆದ್ರೂ ಅವರೆಲ್ಲ ಸ್ಟಡಿ ಟೂರ್ ವೋಯ್ತರಂತೆ~`ನಿಜ, ನಿಜ. ನಾನು ಏರ್‌ಪೋರ್ಟ್ ಬಿಟ್ಟು ಸಿಟಿ ಬೌಂಡರಿ ರೀಚ್ ಆಗ್ತಿದ್ದ ಹಾಗೇ ಗಬ್ಬು ವಾಸನೆ ಬಡೀತು. ಎಲ್ಲೆಲ್ಲೂ ಕಸದ ರಾಶಿ. ಇದೇನು ಇಲ್ಲಿ ಸರ್ಕಾರ ಅಥವಾ ಮುನಿಸಿಪಾಲಿಟಿ ಅನ್ನೋದು ಇದೆಯಾ? ಅನ್ನಿಸಿತು~`ಗಣಪಣ್ಣ, ನಮ್ ರಾಜ್ಯದಾಗೆ ಕುರ್ಚಿಗೆ ಕಾದಾಟ ಮಾಡಾದ್ರಗೇ ಟರ್ಮ್ ಮುಗೀತಾ ಬಂದದೆ ಇನ್ನು ಸಿವಿಕ್ ಪ್ರಾಬ್ಲಮ್ಸ ಸಾಲ್ವ್ ಮಾಡಾಕೆ ಟೇಮ್ ಎಲೈತೆ ಅವರ‌್ಗೆಲ್ಲ?~

`ಅದೆಲ್ಲ ಹೋಗಲಿ, ನೀನು ಇನ್ನೂ ಈ ಬಾಡಿಗೆ ಮನೆಯಲ್ಲೇ ಇದೀಯಲ್ಲ, ಸೈಟು ಅಥವಾ ಸ್ವಂತ ಮನೆ ಏನೂ ಮಾಡಿಕೊಂಡಿಲ್ಲವಲ್ಲ, ಯಾಕೆ?~`ಗಣಪಣ್ಣ ಸೈಟು ಅಷ್ಟು ಈಜಿಯಾಗಿ ಸಿಗಾಕೆ ನಾನೇನು ಎಮ್ಮೆಲ್ಲೆನಾ? ಅಥವಾ ಮಿನಿಸ್ಟರಾ? ನಾಕೈದು ದಪ ಸೈಟಿಗೆ ಅರ್ಜಿ ಆಕಿದ್ದೆ. ಸಿಕ್ಕಿಲ್ಲ. ಇನ್‌ಪ್ಲೂಯೆನ್ಸು ಅಥವಾ ಕಾಸು ಬಿಚ್ಚದೆ ಇದ್ರೆ ನನ್ನಂತೋರ‌್ಗೆ ಯಾವ ಕೆಲಸನೂ ಆಗಾಕಿಲ್ಲ~`ಹೋಗಲಿ, ಪ್ರೈವೇಟ್ ಬಿಲ್ಡರ್ಸ್‌ ಹತ್ರ ಒಂದು ಫ್ಲಾಟ್ ಖರೀದಿ ಮಾಡು~`ಅಯ್ಯಯ್ಯಪ್ಪೋ, ಫ್ಲಾಟು! ನನ್ನಂತೋರು ಖರೀದಿ ಮಾಡಾದಾ? ಮೊದಲೆಲ್ಲ ಅಷ್ಟು ಲಕ್ಷ - ಇಷ್ಟು ಲಕ್ಷ ಅಂತಿದ್ರು. ಈಗ ಕೋಟಿ ಕೋಟಿ ಸುರೀಬೇಕಂತೆ ಒಳ್ಳೆ ಜಾಗದಾಗೆ ಚೆನ್ನಾಗಿರಾ ಫ್ಲಾಟ್ ತಗಳಾಕೆ~`ಹಾಗಾದರೆ ಜನ ಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಈ ಸಿಟೀಲಿ ಮನೆ ಸಿಗೋದಿಲ್ಲ ಅನ್ನು?~`ಎಲ್ಲಿ ಬಂತು ಗಣಪಣ್ಣ? ನಮ್ಮಂತೋರು ಎರಡೊತ್ತು ಹೊಟ್ಟೆ ತುಂಬಾ ಉಂಡರೆ ಅದೇ ನಮಗೆ ಸ್ವರ್ಗ ಸುಖ. ಫ್ಲಾಟು ಅನ್ನಾದು ಕನಸಿನ ಮಾತು~`ಪರಮೇಶಿ ನೀನು ನೋಡಿದರೆ ಹೀಗಂತಿಯಾ. ಆದರೆ ನಿಮ್ಮ ದೇಶದಲ್ಲಿ ಕೋಟಿ ಕೋಟಿ ರೂಪಾಯಿ ಬೆಲೆ ಕಾರುಗಳಿಗೆ ಬುಕ್ ಮಾಡಿ ಸಾವಿರಾರು ಜನ ಕಾಯ್ತಾ ಇದಾರಂತೆ?~

`ಅದೇ ನೋಡು ನಮ್ಮ ದೇಶದ ಡೆಮಾಕ್ರಸಿಯಾಗಿರೋ ವಿಪರ್ಯಾಸ~`ಛೆ, ಛೆ. ವೆರಿ ವೆರಿ ಸ್ಯಾಡ್. ನಿನ್ನಂತಾ ಆರ್ಡಿನರಿ ಪೀಪಲ್ ಇಷ್ಟು ಕಷ್ಟ ಪಡೋದನ್ನ ನೋಡಿದರೆ, ಇನ್ನು ಮುಂದೆ ನಾನು ಇಲ್ಲಿಗೆ ಬಂದು ನಿಮಗೆ ತೊಂದರೆ ಕೊಡಬಾರದು ಅನ್ನಿಸುತ್ತೆ~`ಪ್ಲೀಜ್, ಅಂಗೆಲ್ಲಾ ಯೇಳಬ್ಯಾಡ ಗಣಪಣ್ಣ, ನಾವು ಬಡವರಾದರೂ ವರ್ಸಕ್ಕೊಂದು ದಪ ನಿನ್ನ ಬರಮಾಡ್ಕಂಡು ಕಡುಬು ತಿನ್ನಿಸಿ ಕಳಿಸ್ತಿವಿ. ಬೈ ಬೈ ಗಣಪಣ್ಣ. ಬಾನ್ ವಾಯೇಜ್~

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry