ಸೋಮವಾರ, ಮೇ 16, 2022
29 °C

ಬೊಂಬಾಟ್ ಬಾಲಿವುಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕತ್ರೀನಾ ಹೋಲುವ ಬೆಡಗಿ ನರ್ಗೀಸ್

ಮೊದಲ ನೋಟಕ್ಕೆ ಕತ್ರೀನಾ ಕೈಫ್ ಎನಿಸುವ ಈ ಚೆಲುವೆಯ ಹೆಸರು ನರ್ಗೀಸ್ ಫಖ್ರಿ.   ರೂಪದರ್ಶಿಯಾದ ಈಕೆ ರಣಬೀರ್ ನಾಯಕನಾಗಿರುವ ‘ರಾಕ್‌ಸ್ಟಾರ್’ ಚಿತ್ರದ ನಾಯಕಿ. ನಿರ್ದೇಶಕ ಇಮ್ತಿಯಾಜ್ ಅಲಿ ನರ್ಗೀಸ್‌ಳ ಚೆಲುವೆಗೆ ಮರುಳಾಗಿ ಆಕೆಯನ್ನು ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಿದನಂತೆ.ನರ್ಗೀಸ್ ಅರೆ ಪಾಕಿಸ್ತಾನಿ ಮತ್ತು ಅರೆ ಜೆಕ್ ದೇಶದ ಹುಡುಗಿ. ಬಾಲಿವುಡ್‌ನಲ್ಲಿ ಅದೃಷ್ಟ ಅರಸುತ್ತಿರುವ ನರ್ಗೀಸ್, ಮೊದಲಿಗೇ ರಣಬೀರ್ ಜೊತೆ ನಟಿಸುವ ಅವಕಾಶ ಸಿಕ್ಕಿರುವುದರಿಂದ ಖುಷಿಯಾಗಿದ್ದಾಳೆ.ನೋಡಿದಾಕ್ಷಣ ಕತ್ರೀನಾ ಎನಿಸುವ ಕಾರಣಕ್ಕೆ ನರ್ಗೀಸ್ ಫಖ್ರಿಯನ್ನು ಬಾಲಿವುಡ್ ಬೆರಗು ಗಣ್ಣಿನಿಂದ ನೋಡುತ್ತಿದೆ. ಅಂದಹಾಗೆ ಈ ಚಿತ್ರದ ಎರಡನೇ ನಾಯಕಿ ಅದಿತಿ ರಾವ್.ಕಿರುತೆರೆಗೆ ಹೃತಿಕ್

ಅಂತೂ ಇಂತೂ ಹೃತಿಕ್ ರೋಶನ್ ಕಿರುತೆರೆಗೆ ಬಂದಾಯ್ತು. ಅಮೆರಿಕದ ಜನಪ್ರಿಯ ಟಿವಿ ಶೋ ‘ಸೋ ಯು ಥಿಂಕ್ ಯು ಕ್ಯಾನ್ ಡಾನ್ಸ್’ ರಿಯಾಲಿಟಿ ಶೋನ ರೀಮೇಕ್ ಭಾರತಕ್ಕೆ ಕಾಲಿಟ್ಟಿದೆ. ಅದರ ನಿರೂಪಣೆಯ ಹೊಣೆ ಹೊರಲು ಪ್ರತಿಭಾವಂತ ನೃತ್ಯಗಾರ ಹೃತಿಕ್ ರೋಶನ್ ಒಪ್ಪಿದ್ದಾರೆ.ಶ್ರಮಜೀವಿ ಹೃತಿಕ್ ಈ ಮೊದಲು ಕಿರುತೆರೆಯಲ್ಲಿ ಮಿಂಚುವ ಅವಕಾಶಗಳನ್ನು ನಿರಾಕರಿಸಿದ್ದ. ಈ ಅವಕಾಶವನ್ನು ಒಪ್ಪಿಕೊಂಡಿರುವುದರ ಹಿಂದಿನ ಕಾರಣ ತಿಳಿದುಬಂದಿಲ್ಲ. ಶೋಗಾಗಿ ಹೃತಿಕ್‌ಗೆ ಎರಡು ಕೋಟಿ ನೀಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಅದೇ ಕಾರಣವೂ ಇರಬಹುದು.ಮತ್ತೊಮ್ಮೆ ಅನುಷ್ಕಾ- ರಣವೀರ್

‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರದ ಯಶಸ್ವಿ ಜೋಡಿ ರಣವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಮತ್ತೆ ಕಾಮಿಡಿ ಚಿತ್ರವೊಂದರಲ್ಲಿ ಜೊತೆಯಾಗಲಿದ್ದಾರೆ. ‘ಲೇಡೀಸ್ ವರ್ಸಸ್ ರಿಕಿ ಬೆಹಲ್’ ಹೆಸರಿನ ಈ ಚಿತ್ರ ಹಾಸ್ಯ ಪ್ರಧಾನವಾದದ್ದು. ಯಶ್ ರಾಜ್ ನಿರ್ಮಾಣದ ಈ ಚಿತ್ರದ ಕತೆಯನ್ನು ಆದಿತ್ಯ ಚೋಪ್ರಾ ಅಭಿವೃದ್ಧಿಪಡಿಸಿದ್ದಾರೆ. ರಣವೀರ್ ಮತ್ತು ಅನುಷ್ಕಾ ಜೋಡಿಯ ಬಗ್ಗೆ ಅಪಾರ ಭರವಸೆಯನ್ನು ಇಟ್ಟುಕೊಂಡಿರುವ ಆದಿತ್ಯಾ ಆ ವಿಶ್ವಾಸದಿಂದಲೇ ಜೋಡಿ ಪುನರಾವರ್ತನೆಯಾಗಿದೆ ಎಂದಿದ್ದಾರೆ. ಏಪ್ರಿಲ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಸಣ್ಣಗಾಗಲು ನಿರ್ಧರಿಸಿದ ಸೋನಾಕ್ಷಿ

ತಾನು ಭಾರತೀಯ ಹೆಣ್ಣುಮಗಳು. ಅದರಿಂದ ಸಣ್ಣಗಾಗಲು ಪ್ರಯತ್ನಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದ ಸೋನಾಕ್ಷಿ ಸಿನ್ಹ ‘ರೇಸ್-2’ ಚಿತ್ರಕ್ಕಾಗಿ ಸಪೂರವಾಗಲು ನಿರ್ಧರಿಸಿದ್ದಾಳೆ.‘ದಬಂಗ್’ ಚಿತ್ರದ ಯಶಸ್ಸು ಆಕೆಗೆ ಅವಕಾಶಗಳನ್ನು ತಂದು ಕೊಡುತ್ತಿದೆ. ‘ರೇಸ್-2’ನಲ್ಲಿ ಗ್ಲಾಮರ್ ಹುಡುಗಿಯ ಪಾತ್ರ ಸಿಕ್ಕಿರುವ ಕಾರಣ ಆಕೆ ತನ್ನ ತೂಕ ಇಳಿಸುವ ಕೆಲಸಕ್ಕೆ ಮುಂದಾಗಿದ್ದಾಳೆ.‘ನಾನು ತುಂಬಾ ದಪ್ಪಗಿದ್ದೆ. ‘ದಬಂಗ್’ಗಾಗಿ ಮೊದಲು ತೂಕ ಇಳಿಸಿಕೊಂಡೆ. ಬಳಿಕ ‘ಜೋಕರ್’ಗೆ  ತೂಕ ಕಡಿಮೆ ಮಾಡಿಕೊಂಡೆ. ‘ರೇಸ್- 2’ ಚಿತ್ರಕ್ಕೆ ಮತ್ತಷ್ಟು ತೆಳ್ಳಗಾಗಲು ನಿರ್ಧರಿಸಿದ್ದೇನೆ. ಪಾತ್ರಕ್ಕೆ ಅಗತ್ಯ ಇರುವ ಕಾರಣ ನಾನು ಸಣ್ಣಗಾಗಲು ತೀರ್ಮಾನಿಸಿದ್ದೇನೆ’ ಎಂದಿರುವ ಸೋನಾಕ್ಷಿ ಒಟ್ಟಾರೆ ಚೆನ್ನಾಗಿ ಕಾಣುವುದು ಮುಖ್ಯ ಎಂದು ಹೇಳಿ ತನ್ನ ಮೊದಲಿನ ಹೇಳಿಕೆಗೆ ವಿರುದ್ಧವಾದ ದಾರಿ ತುಳಿದಿದ್ದಾಳೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.