ಸೋಮವಾರ, ಅಕ್ಟೋಬರ್ 21, 2019
26 °C

ಬೊಂಬಾಟ್ ಬಾಲಿವುಡ್

Published:
Updated:

`ಕಾಳಿ~ ಗುಂಗಿನಲ್ಲಿ ಪ್ರಿಯಾಂಕಾ

`ಅಂಜಾನಾ ಅಂಜಾನಿ~ ಮತ್ತು `ಸಾಥ್ ಕೂನ್ ಮಾಫ್~ ಚಿತ್ರಗಳ ಸೋಲಿನಿಂದ ಕಂಗೆಟ್ಟಿರುವ ಪ್ರಿಯಾಂಕಾ ಚೋಪ್ರಾ ಕಳೆದ ವಾರ ಬಿಡುಗಡೆಯಾದ `ಡಾನ್-2~ ಚಿತ್ರದ ಪ್ರಶಂಸೆಯಿಂದಲೂ ಹಿಗ್ಗಿಲ್ಲ.ಬಹಳ ಸಾವಧಾನವಾಗಿ ತನ್ನ ಮುಂದಿನ `ಅಗ್ನಿಪಥ್~ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ. `ಕ್ರಿಶ್~ ನಂತರ ಹೃತಿಕ್ ರೋಶನ್‌ಗೆ ಜೋಡಿಯಾಗಿ ಮತ್ತೆ ನಟಿಸಿರುವ ಪ್ರಿಯಾಂಕಾ ಈ ಸಿನಿಮಾ ತನ್ನ ವೃತ್ತಿ ಬದುಕಿಗೆ ತಿರುವು ನೀಡಲಿದೆ ಎಂದು ನಂಬಿದ್ದಾರೆ.

 

ಜ.26ರಂದು ಬಿಡುಗಡೆಯಾಗಲಿರುವ ಅಗ್ನಿಪಥ್‌ನಲ್ಲಿ ಪ್ರಿಯಾಂಕಾಗೆ ಮಹಾರಾಷ್ಟ್ರದ ಹುಡುಗಿಯ ಪಾತ್ರ. ಪಾತ್ರದ ಹೆಸರು ಕಾಳಿ. ನಾಯಕ ಪ್ರೀತಿಸುವ ಹುಡುಗಿಯಾಗಿ, ತುಂಟಾಟ ಆಡುವ ಬೆಡಗಿಯಾಗಿ, ಸೀರೆಯಲ್ಲಿಯೂ ಗ್ಲಾಮರ್‌ಗೊಂಬೆಯಾಗಿ ಕಾಣಿಸಿಕೊಂಡಿರುವ ಪ್ರಿಯಾಂಕಾಗೆ ತನ್ನ ಪಾತ್ರವನ್ನು ಜನರು ಇಷ್ಟಪಡುತ್ತಾರೆ ಎಂಬ ನಂಬಿಗೆ ಇದೆ. `ಎರಡನೇ ಬಾರಿಗೆ ಮಹಾರಾಷ್ಟ್ರದ ಹುಡುಗಿಯಾಗಿ ನಟಿಸಿದ್ದೇನೆ.`ಕಮೀನೆ~ ಚಿತ್ರದ ಸ್ವೀಟಿ ಪಾತ್ರ ಕೂಡ ಮಹಾರಾಷ್ಟ್ರದ ಹುಡುಗಿಯದೇ. ಆದರೆ ಕಾಳಿಗೂ ಸ್ವೀಟಿಗೂ ಬಹಳ ವ್ಯತ್ಯಾಸಗಳಿವೆ. ನಿರ್ದೇಶಕ ಕರಣ್ ಮಲ್ಹೋತ್ರ ಕಾಳಿ ಪಾತ್ರದ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಅದರಿಂದ ನನಗೆ ಪಾತ್ರ ನಿಭಾಯಿಸುವುದು ಕಷ್ಟವಾಗಿಲ್ಲ.ಸ್ವೀಟಿ ಪಾತ್ರಕ್ಕಿಂತ ಕಾಳಿ ವಿಭಿನ್ನವಾಗಿರುವಂತೆ ಕಾಯ್ದುಕೊಂಡಿರುವೆ~ ಎಂದು ಹೇಳಿರುವ ಅವರು ಸೆಟ್‌ನಲ್ಲಿ ಹಿರಿಯನಟರಾದ ಸಂಜಯ್ ದತ್ ಮತ್ತು ರಿಷಿ ಕಪೂರ್ ಸಾಕಷ್ಟು ಸಲಹೆ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. `ಅಗ್ನಿಪಥ್~ ಭರ್ಜರಿ ಯಶಸ್ಸಿನ ಸಿನಿಮಾ ಆಗಲಿದೆ ಎಂಬ ನಿರೀಕ್ಷೆ ಹೊತ್ತುಕೊಂಡಿರುವ ಪ್ರಿಯಾಂಕಾ ಸದ್ಯಕ್ಕೆ ಪ್ರಚಾರ ಕಾರ್ಯದಲ್ಲಿ ನಿರತಳಾಗಿದ್ದಾರೆ.

ಸಲ್ಮಾನ್ ಮನಸ್ಸು ಬದಲು

ರೀಮೇಕ್ ಸಿನಿಮಾಗಳಿಂದ ಕಡೆಗೂ ಸಲ್ಮಾನ್ ಖಾನ್‌ಗೆ ಬೇಸರ ಬಂದಿದೆ. ಜೊತೆಗೆ ಆಕ್ಷನ್ ಸಿನಿಮಾಗಳಿಂದಲೂ ವಿಮುಖವಾಗಬೇಕೆಂದು ಅವರು ತೀರ್ಮಾನಿಸಿದಂತಿದೆ. ಇತ್ತೀಚೆಗೆ `ಮೈ ನೆ ಪ್ಯಾರ್ ಕಿಯಾ~ ಸಿನಿಮಾದ ನಿರ್ದೇಶಕ ಸೂರಜ್ ಬಾರ್ಜಾತ್ಯ ಅವರನ್ನು ಭೇಟಿ ಮಾಡಿ ಮಾತನಾಡಿರುವ ಅವರು, ಹಳೆಯ ರೋಮ್ಯಾಂಟಿಕ್ ಹೀರೋ ಪಾತ್ರಗಳ ಬಗ್ಗೆ ಒಲವು ತೋರಿಸಿದರಂತೆ.ತಾನು ನಟಿಸುತ್ತಿರುವ ರೀಮೇಕ್ ಚಿತ್ರಗಳು ಗೆಲ್ಲುತ್ತಿದ್ದರೂ ಸಲ್ಮಾನ್‌ಗೆ `ಹಮ್ ಆಪ್ಕೆ ಹೇ ಕೌನ್~, `ಮೈ ನೆ ಪ್ಯಾರ್ ಕಿಯಾ~, `ಹಮ್ ಸಾಥ್ ಸಾಥ್ ಹೇ~ ಚಿತ್ರಗಳಲ್ಲಿ ಪ್ರೇಮ್ ಆಗಿ ನಟಿಸಿದ್ದ ತನ್ನ ಒರಿಜಿನಲ್ ಇಮೇಜ್‌ನಲ್ಲಿ ನಟಿಸುವಾಸೆ. ಸದ್ಯಕ್ಕೆ ಒಪ್ಪಿಕೊಂಡಿರುವ ರೀಮೇಕ್ ಸಿನಿಮಾಗಳನ್ನು ಮುಗಿಸಿ ನಂತರ `ಪ್ರೇಮ್~ ಪಾತ್ರಗಳಲ್ಲಿ ನಟಿಸುವ ಮನಸ್ಸು ಮಾಡಿರುವ ಸಲ್ಮಾನ್ ಭಿನ್ನತೆ ಬೇಕಾಗಿದೆ ಎನ್ನುತ್ತಿದ್ದಾರೆ.ಲವರ್ ಬಾಯ್ ಪಾತ್ರ ಕೂಡ ಈ ಹಿಂದೆ ಮಾಡಿದ್ದೇ ಅಲ್ಲವೇ? ಎಂದು ಪ್ರಶ್ನಿಸಿದರೆ ಮಾತ್ರ, `ಹೌದು ಆದರೆ ತುಂಬಾ ದಿನಗಳ ನಂತರ ಅದನ್ನು ಮಾಡಲು ಅಡ್ಡಿ ಇಲ್ಲ~ ಎಂದು ಮುಗುಳ್ನಗೆ ಬೀರುತ್ತಿದ್ದಾರೆ.                         

Post Comments (+)