ಭಾನುವಾರ, ಜೂನ್ 20, 2021
28 °C

ಬೊಂಬಾಟ್ ಬಾಲಿವುಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೊಂಬಾಟ್ ಬಾಲಿವುಡ್

`ಮೆಹರುನ್ನೀಸಾ~ ವಿದ್ಯಾ

`ದಿ ಡರ್ಟಿ ಪಿಕ್ಚರ್~ ಚಿತ್ರದ ನಟನೆಗೆ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿರುವ ವಿದ್ಯಾ ಬಾಲನ್ ಅಭಿನಯದ `ಕಹಾನಿ~ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅದರ ನಂತರ ಸುಧೀರ್ ಮಿಶ್ರಾ ಅವರ `ಮೆಹರುನ್ನೀಸಾ~ ಚಿತ್ರದಲ್ಲಿ ನಟಿಸಲು ವಿದ್ಯಾ ಒಪ್ಪಿಕೊಂಡಿದ್ದಾರೆ.

 

ಅದು ಮಹಿಳೆಯ ಬದುಕಿನ ಎರಡು ಮಜಲುಗಳನ್ನು ತೋರಿಸುವ ಸಿನಿಮಾ. ಚಿತ್ರದಲ್ಲಿ 20 ಮತ್ತು 62ನೇ ವಯಸ್ಸಿನ ಎರಡು ಪಾತ್ರಗಳನ್ನು ವಿದ್ಯಾ ನಿರ್ವಹಿಸಲಿದ್ದಾರೆ. ರಿಷಿ ಕಪೂರ್ ಮತ್ತು ಅಮಿತಾಬ್ ಬಚ್ಚನ್ ಕೂಡ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.

 

ಚಿತ್ರದ ಬಗ್ಗೆ ಮಾತನಾಡುತ್ತಾ, ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ವಿದ್ಯಾ ಅವರನ್ನು ಹೋಲಿಸಿರುವ ಅಮಿತಾಬ್, `ಈ ಸಿನಿಮಾ ಕೊಂಚ ವಹೀದಾ ಅವರ ಬದುಕನ್ನು ಆಧರಿಸಿದೆ. ಅದಕ್ಕೆ ವಿದ್ಯಾ ಸೂಕ್ತ ಆಯ್ಕೆ~ ಎಂದಿದ್ದಾರೆ. ಈ ಚಿತ್ರದಲ್ಲಿಯೂ ತಮ್ಮ ಮೇಕಪ್ ಮತ್ತು ಕಾಸ್ಟ್ಯೂಮ್ ವಿಭಿನ್ನವಾಗಿದೆ ಎಂದಷ್ಟೇ ಸಿನಿಮಾ ಬಗ್ಗೆ ವಿದ್ಯಾ ಹೇಳಿಕೊಂಡಿದ್ದಾರೆ.ರಣಬೀರ್- ಶಾಹೀದ್ ಜೋಡಿ?

ರಣಬೀರ್ ಕಪೂರ್ ಮತ್ತು ಶಾಹೀದ್ ಕಪೂರ್ ಒಟ್ಟಾಗಿ ನಟಿಸಲಿದ್ದಾರೆ. ಅದು  1993ರಲ್ಲಿ ಯಶಸ್ವಿಯಾಗಿದ್ದ `ಆಂಕೇನ್~ ಸಿನಿಮಾದ ಎರಡನೇ ಭಾಗದಲ್ಲಿ. ನಿರ್ದೇಶಕ ಪಹಲಾಜ್ ನಿಹಲಾನಿ ಅಂದು ನಟಿಸಿದ್ದ ಗೋವಿಂದ ಮತ್ತು ಚಿಂಕಿ ಪಾಂಡೆ ಪಾತ್ರಕ್ಕೆ ರಣಬೀರ್ ಕಪೂರ್ ಮತ್ತು ಶಾಹೀದ್ ಕಪೂರ್ ಅವರನ್ನು ಆಯ್ಕೆ ಮಾಡಿದ್ದಾರೆ.

 

`ನನ್ನ `ಆಂಕೇನ್-2~ ಚಿತ್ರ ಮೊದಲ ಸಿನಿಮಾಗಿಂತ ಹಾಸ್ಯಮಯವಾಗಿ ಇರಲಿದೆ. ಚಿತ್ರದಲ್ಲಿ ರಣಬೀರ್- ಶಾಹೀದ್ ಇಬ್ಬರೂ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. ಸ್ಕ್ರಿಪ್ಟ್ ಕೆಲಸ ಈಗಾಗಲೇ ಮುಗಿದಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

 

ನಾಯಕಿಯರ ಹುಡುಕಾಟ ನಡೆದಿದೆ. ರಣಬೀರ್- ಶಾಹೀದ್ ಜೊತೆ ಮೊದಲ ಹಂತದ ಮಾತುಕತೆಯೂ ಮುಗಿದಿದೆ~ ಎಂದು ನಿಹಲಾನಿ ಹೇಳಿಕೊಂಡಿದ್ದಾರೆ.

ಮನೀಷಾ ಕತೆ `ಹೀರೋಯಿನ್~

ಸತ್ಯ ಘಟನೆಗಳು ಮತ್ತು ನಿಜ ವ್ಯಕ್ತಿಗಳ ಬದುಕಿನಿಂದ ಸ್ಫೂರ್ತಿ ಪಡೆಯುವ ನಿರ್ದೇಶಕ ಮಧುರ್ ಭಂಡಾರ್‌ಕರ್ ಇದೀಗ ತಮ್ಮ `ಹೀರೋಯಿನ್~ ಚಿತ್ರದ ಸ್ಫೂರ್ತಿ ನಟಿ ಮನೀಷಾ ಕೊಯಿರಾಲಾ ಬದುಕು ಎಂದು ಹೇಳಿಕೊಂಡಿರುವ ಸುದ್ದಿ ಬಂದಿದೆ.90ರ ದಶಕದಲ್ಲಿ ಬೇಡಿಕೆಯ ಉತ್ತುಂಗದಲ್ಲಿ ಇದ್ದ ಮನೀಷಾ ಇದ್ದಕ್ಕಿದ್ದಂತೆಯೇ ಪಾತಾಳಕ್ಕೆ ಇಳಿದರು. ಅದಕ್ಕೆ ಕಾರಣ ಆಕೆಯ ವೈಯಕ್ತಿಕ ಬದುಕು. ಅದು ಅವಳ ವೃತ್ತಿ ಬದುಕನ್ನು ಛಿದ್ರ ಮಾಡಿತು. ಆಲ್ಕೋಹಾಲ್‌ಗೆ ದಾಸಿಯಾದ ಮನೀಷಾ ಬದುಕು ಮದುವೆ ನಂತರವೂ ಸುಧಾರಿಸದೇ ಹೋಯಿತು.

 

ಅದನ್ನೇ ಆಧರಿಸಿ `ಹೀರೋಯಿನ್~ ಸಿದ್ಧಪಡಿಸುತ್ತಿರುವುದಾಗಿ ಮಧುರ್ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. ಆದರೆ ಅಧಿಕೃತವಾಗಿ ಇದು ಒಬ್ಬ ನಟಿಯ ಕತೆಯಲ್ಲ, ಹಲವು ನಟಿಯರ ಬದುಕಿನ ಕತೆ ಎಂದು ಹೇಳುತ್ತಿದ್ದಾರೆ.ವಿಕ್ಷಿಪ್ತ ಮಗನ ಅಪ್ಪನಾಗಿ ಅಕ್ಷಯ್

ಚೆನ್ನೈನಲ್ಲಿ 15 ವರ್ಷದ ಬಾಲಕ ತನ್ನ ಶಿಕ್ಷಕಿಯನ್ನು ಕೊಂದ ಘಟನೆಯನ್ನು ಆಧಾರವಾಗಿಟ್ಟುಕೊಂಡು ಮಹೇಶ್ ಮಜ್ರೇಕರ್ ಮರಾಠಿಯಲ್ಲಿ ಈಗಾಗಲೇ  ಸಿನಿಮಾ ರೂಪಿಸಿದ್ದಾರೆ. ಇದೀಗ ಅದನ್ನು ಹಿಂದಿಗೆ ರೀಮೇಕ್ ಮಾಡುವ ಹಂಬಲ ವ್ಯಕ್ತಪಡಿಸಿದ್ದಾರೆ.

 

`ಶಿಕ್ಷಣಾಚ್ಯಾ ಐಚಾ ಘೊ~ ಹೆಸರಿನ ಈ ಮರಾಠಿ ಚಿತ್ರದಲ್ಲಿ ಶಿಕ್ಷಣದ ಕಡೆಗೆ ಒಲವು ಇರದ ಮಕ್ಕಳನ್ನು ಅದರೆಡೆಗೆ ಸೆಳೆಯುವುದು ಹೇಗೆ? ಎಂಬುದನ್ನು ಸಮರ್ಥವಾಗಿ ತೋರಿಸಲಾಗಿದೆ ಎನ್ನುತ್ತಾರೆ ಅವರು.`ಚೆನ್ನೈನಲ್ಲಿ ನಡೆದ ಘಟನೆಯನ್ನು ತಮ್ಮ ಕತೆ ಹೋಲುತ್ತದೆ. ಅದನ್ನು ಹಿಂದಿಗೆ ರೀಮೇಕ್ ಮಾಡುವುದಾದರೆ ಅಕ್ಷಯ್ ಕುಮಾರ್ ಅದರಲ್ಲಿ ನಟಿಸಬೇಕು ಎಂಬ ಶರತ್ತನ್ನು ನನಗೆ ನಾನೇ ವಿಧಿಸಿಕೊಂಡೆ. ಅಕ್ಷಯ್ ಕುಮಾರ್ ಒಪ್ಪಿಗೆ ನೀಡಿದ್ದು, ವಿಕ್ಷಿಪ್ತ ಮಗುವಿನ ತಂದೆಯಾಗಲು ನಿರ್ಧರಿಸಿದ್ದಾರೆ.

 

ಅಕ್ಷಯ್ ಕುಮಾರ್ ತಮ್ಮ ಚಿತ್ರದಲ್ಲಿ ನಟಿಸಿದರೆ ಅದು ಹೆಚ್ಚು ಜನರಿಗೆ ತಲುಪುತ್ತದೆ ಎಂಬ ಉದ್ದೇಶ ನನ್ನದು. ಸಿನಿಮಾದಲ್ಲಿ ಮಗುವಿನ ಮನಸ್ಥಿತಿಗೆ ಸಮರ್ಥನೆ ನೀಡುವುದರ ಬದಲು ಉತ್ತರ ಇದೆ. ಶಾಲಾ ದಿನಗಳು ಎಂದರೆ ಮಕ್ಕಳು ಒತ್ತಡ ಅನುಭವಿಸುವಂತಾಗಿದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ~ ಎಂದು ಮಹೇಶ್ ಚಿತ್ರದ ಬಗ್ಗೆ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.