ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೊಂಬಾಟ್ ಬೊಂಬೆ

Published : 7 ಅಕ್ಟೋಬರ್ 2013, 19:30 IST
ಫಾಲೋ ಮಾಡಿ
Comments

ಈಗ ಎಲ್ಲೆಲ್ಲೂ ದಸರಾ ಸಡಗರ. ಬೊಂಬೆಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಬೊಂಬೆಗಳ ನಗರಿ ಚನ್ನಪಟ್ಟಣದಲ್ಲೂ ಕಣ್ಣು ಹಾಯಿಸಿದಲ್ಲೆಲ್ಲಾ ಬೊಂಬೆಗಳದ್ದೇ ಕಾರುಬಾರು. ಕುಶಲ ಕರ್ಮಿಗಳು ಹಗಲಿರುಳೂ ಇದರ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ.

ಬೊಂಬೆಗಳ ನಗರಿ ಚನ್ನಪಟ್ಟಣದ ಬೀದಿಬೀದಿಗಳಲ್ಲೀಗ ಕುದುರೆ, ಆನೆ, ಅಂಬಾರಿಗಳದ್ದೇ ರಾಜ್ಯಭಾರ. ಕಣ್ಣು ಹಾಯಿಸಿದಲ್ಲೆಲ್ಲ ಎತ್ತಿನ ಬಂಡಿ, ರಾಗಿ ಬೀಸುವ– ಭತ್ತ ಕುಟ್ಟುವ ಕಲ್ಲುಗಳದ್ದೇ ಕಾರುಬಾರು. ಒಂದೆಡೆ ಬೊಂಬೆಗಳ ನರ್ತನ, ಇನ್ನೊಂದೆಡೆ ವಿವಿಧ ಕಲಾವಿದರಿಂದ ಯಕ್ಷಗಾನ. ಗರಿ ಬಿಚ್ಚಿ ನೋಡುಗರನ್ನು ನವಿಲು ಮೋಡಿ ಮಾಡಿದರೆ, ಗೀತೋಪದೇಶ ಮಾಡುವ ಕೃಷ್ಣ ಎಲ್ಲರನ್ನೂ ಭಕಿ್ತ ಸಾಗರದಲ್ಲಿ ಮುಳುಗಿಸುತ್ತಾನೆ...

ಇವೆಲ್ಲವೂ ದಸರಾ ಹಬ್ಬದ ‘ಎಫೆಕ್ಟ್’. ಹೌದು. ನಾಡಹಬ್ಬ ದಸರಾ ಆರಂಭ ಆಗಿರುವಂತೆಯೇ ಚನ್ನಪಟ್ಟಣದಲ್ಲಿನ ಬೊಂಬೆಗಳಿಗೆ ಬೇಡಿಕೆ ಇನ್ನಷ್ಟು ಹೆಚ್ಚಿದೆ. ಕುಶಲ ಕರ್ಮಿಗಳು ಹಗಲಿರುಳೂ ಬೊಂಬೆಗಳ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ.

ನವರಾತ್ರಿಯ ಸಡಗರಕ್ಕೆ ಚನ್ನಪಟ್ಟಣದ ಬೊಂಬೆಗಳು ಕಳೆಕಟ್ಟುವುದು ಹೊಸದೇನಲ್ಲ.  ಇತಿಹಾಸ ಪ್ರಸಿದ್ಧ ದಸರಾ ಹಬ್ಬಕ್ಕೆಂದೇ ಈ ಬೊಂಬೆಗಳು ನಾಡಿನಾಚೆಗೂ ತಮ್ಮ ಬೇಡಿಕೆ ಕುದುರಿಸಿಕೊಂಡಿವೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ– ಧಾರವಾಡ ನಗರಗಳಿಂದ ಮಾತ್ರವಲ್ಲದೆ ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್‌, ಪಶ್ಚಿಮ ಬಂಗಾಳದಿಂದಲೂ ಇವಕ್ಕೆ ಬೇಡಿಕೆ ಉಂಟು.

‘ಸಾಂಪ್ರದಾಯಿಕ ಶೈಲಿಯ ಚನ್ನಪಟ್ಟಣದ ನೈಜ ಬೊಂಬೆಗಳಿಗೆ ಪ್ರತಿ ವರ್ಷ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಿನಲ್ಲಿ ಉತ್ತಮ ಮಾರುಕಟ್ಟೆ ಇರುತ್ತದೆ. ಈ ಸಮಯ ಮುಗಿಯಿತೆಂದರೆ ಇಲ್ಲಿನ ಕುಶಲ ಕರ್ಮಿಗಳು ಮತ್ತು ಬೊಂಬೆ ಉದ್ಯಮದ ಮಾಲೀಕರಿಗೆ ಶಿಕ್ಷಣ ಕ್ಷೇತ್ರವೇ ಆಸರೆ. ಮಾಂಟೆಸರಿ, ಸರ್ವ ಶಿಕ್ಷಣ ಅಭಿಯಾನ, ಎಲ್‌.ಕೆ.ಜಿ, ಯು.ಕೆ.ಜಿ ಪಠ್ಯಾಧಾರಿತ ಸಂಬಂಧಿತ ಆಟಿಕೆ ಹಾಗೂ ಕಾರ್ಪೊರೇಟ್‌ ಕಂಪೆನಿಗಳ ಬೇಡಿಕೆಗೆ ಅನುಗುಣವಾದ ಪರಿಕರಗಳನ್ನು ಕೆತ್ತನೆ ಮಾಡಿಕೊಡುವುದೇ ಇವರಿಗೆ ಜೀವನಾಧಾರ’ ಎನ್ನುತ್ತಾರೆ ‘ಶ್ರೀ ಟಾಯ್ಸ್‌ ಫ್ಯಾಕ್ಟರಿ’ ಮಾಲೀಕ ಎಲ್‌. ಈಶ್ವರ ರಾಜು.

ದಸರಾ ಬೊಂಬೆ ಸೆಟ್‌
‘ಮೈಸೂರಿನ ಅರಮನೆಯಲ್ಲಿ ದಸರಾ ಮೆರವಣಿಗೆ ಸಂದರ್ಭದಲ್ಲಿ ಹೇಗೆ ಅಂಬಾರಿ ಪ್ರದರ್ಶನ ಮಾಡಲಾಗುತ್ತದೆಯೋ ಅಂತಹುದೇ ಮಾದರಿಯ ಬೊಂಬೆ ಸೆಟ್‌ಗಳು ಇಲ್ಲಿನ ಪ್ರಮುಖ ಆಕರ್ಷಣೆ.   ಸಾಮಾನ್ಯವಾಗಿ ಈ ಸೆಟ್‌ಗಳಲ್ಲಿ ವಾದ್ಯವೃಂದ, ಸಿಪಾಯಿ, ಕುದುರೆ, ಆನೆ, ಅದರ ಮೇಲೆ ಅಂಬಾರಿ, ಸಿಪಾಯಿಗಳು, ಅವರ ಹಿಂದೆ ಒಂಟೆಯ ಸಾಲುಗಳನ್ನು ಒಪ್ಪವಾಗಿ ಜೋಡಿಸಲಾಗಿರುತ್ತದೆ. ಇವುಗಳನ್ನು
600 ರಿಂದ 950 ರೂಪಾಯಿವರೆಗೂ ಮಾರಲಾಗುತ್ತದೆ. ಇವಕ್ಕೆ ಬೆಂಗಳೂರು, ಮೈಸೂರು, ಮಹಾರಾಷ್ಟ್ರದಿಂದ ಹೆಚ್ಚಿನ ಬೇಡಿಕೆ ಉಂಟು. ಸ್ಥಳೀಯ ಗ್ರಾಹಕರೂ ಈ ಬೊಂಬೆಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಈಗೊಂದು ತಿಂಗಳಿಂದ ಇಂತಹ ಸೆಟ್‌ಗಳ ನಿರ್ಮಾಣದಲ್ಲಿ ಇಲ್ಲಿನ ಕರಕುಶಲ ಕರ್ಮಿಗಳು  ನಿರತರಾಗಿದ್ದಾರೆ’ ಎನ್ನುತ್ತಾರೆ ಈಶ್ವರ.

‘ದಸರಾ ಸೆಟ್‌ 21 ಇಂಚು ಉದ್ದ, 4.5 ಇಂಚು ಅಗಲ ಹಾಗೂ 8.5 ಇಂಚು ಎತ್ತರ ಇರುತ್ತದೆ. ಇವುಗಳ ಜತೆಗೆ ಭಾರತೀಯ ಸಂಸ್ಕೃತಿ ಬಿಂಬಿಸುವ ವಿವಿಧ ರೀತಿಯ ಬೊಂಬೆಗಳ ತಯಾರಿಕೆಯೂ ಆಗುತ್ತಿದೆ. ರೈತ ಕುಟುಂಬ, ಎತ್ತಿನ ಗಾಡಿ, ರಾಗಿಕಲ್ಲು ಬೀಸುವ, ಭತ್ತ ಕುಟ್ಟುವ, ಯಕ್ಷಗಾನ, ವಾದ್ಯವೃಂದದ ಬೊಂಬೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಅಲ್ಲದೆ ದೇಶದ ವಿವಿಧ ರಾಜ್ಯಗಳ ಜನರ ಸಾಂಪ್ರದಾಯಿಕ ಉಡುಗೆ– ತೊಡುಗೆ ಶೈಲಿಯನ್ನು ಬಿಂಬಿಸುವ ಬೊಂಬೆಗಳನ್ನು ತಯಾರಿಸಲಾಗುತ್ತಿದೆ. ಅದರೊಂದಿಗೆ ಸೊಂಡಿಲು ಎತ್ತಿದ ಆನೆ, ಕಾಲು ಎತ್ತಿರುವ ಆನೆ, ಗೀತೋಪದೇಶ ಮಾಡುತ್ತಿರುವ ಕೃಷ್ಣ, ಗರಿ ಬಿಚ್ಚಿರುವ ನವಿಲು, ಒಂಟೆ ಮತ್ತಿತರ ಪ್ರಾಣಿ ಪಕ್ಷಿಗಳ ಬೊಂಬೆಗಳನ್ನು ತಯಾರಿಸ­ಲಾಗುತ್ತದೆ’ ಎಂಬ ಮಾಹಿತಿ ನೀಡುತ್ತಾರೆ ಅವರು.

ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಬೆಂಗಳೂರು–ಮೈಸೂರು ರಸ್ತೆಯಲ್ಲಿ ಹಾದು ಹೋಗುವವರು ದಸರಾ ಸೆಟ್‌ ಬೊಂಬೆಗಳ ಜತೆಗೆ ಇತರ ಬೊಂಬೆಗಳನ್ನೂ ಖರೀದಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಚೀನಾದ ಸವಾಲು
ಚೀನಾ ಬೊಂಬೆಗಳ ಆಕ್ರಮಣವೂ ಚನ್ನಪಟ್ಟಣದ ಬೊಂಬೆ ಉದ್ಯಮವನ್ನು ಅಲುಗಾಡಿಸಿದೆ. ಗುಣಮಟ್ಟದಲ್ಲಿ ಇಲ್ಲಿನ ಬೊಂಬೆಗಳ ಜತೆ ಸ್ಪರ್ಧಿಸಲಾಗದ ಚೀನಾ ಬೊಂಬೆಗಳು, ಬೆಲೆ ಸಮರ ಸಾರಿದ್ದು, ಅತಿ ಕಡಿಮೆ ಬೆಲೆಗೆ ಗ್ರಾಹಕರನ್ನು ಸೆಳೆಯುತ್ತಿವೆ. ಸರ್ಕಾರದ ಬೆಂಬಲ, ಪ್ರೋತ್ಸಾಹವಿಲ್ಲದೆ ಇಲ್ಲಿನ ಕುಶಲಕರ್ಮಿಗಳು ಚೀನಾದಂತಹ ದೈತ್ಯ ದೇಶದ ಸವಾಲನ್ನು ಎದುರಿಸಬೇಕಾಗಿ ಬಂದಿದೆ ಎಂಬುದು ಕುಶಲಕರ್ಮಿ ಮಾಲಿನಿ ಅವರ ಆತಂಕ. 

ಬೊಂಬೆ ತಯಾರಿಕೆ ಹೇಗೆ?
‘ಆಲೆಮರದಿಂದ ಇಲ್ಲಿನ ಬೊಂಬೆಗಳನ್ನು ತಯಾರಿಸಲಾಗುತ್ತದೆ. ರಾಸಾಯನಿಕ ಬಣ್ಣದ ಪದಾರ್ಥಗಳನ್ನು ಬಳಸಿ ಅಥವಾ ಕೇವಲ ಗಿಡಮೂಲಿಕೆಗಳ ಬಣ್ಣದ ಪದಾರ್ಥವನ್ನೇ ಬಳಸಿಯೂ ಬೊಂಬೆಗಳನ್ನು ತಯಾರಿಸಲಾಗುತ್ತಿದೆ. ರಾಸಾಯನಿಕ ಪದಾರ್ಥಗಳ ಬಳಕೆ ಕಡಿಮೆ ಮಾಡಿ, ತರಕಾರಿ ಮತ್ತು ಗಿಡಮೂಲಿಕೆಗಳ ಬಣ್ಣ ಬಳಸಲು ಒತ್ತು ನೀಡಲಾಗುತ್ತಿದೆ. ಆದರೆ ಕೆಂಪು, ಕಿತ್ತಳೆ, ಹಸಿರು, ಹಳದಿ, ನೀಲಿ ಬಣ್ಣಗಳನ್ನು ಮಾತ್ರ ಗಿಡ ಮೂಲಿಕೆಗಳಿಂದ ಸಿದ್ಧಪಡಿಸಲು ಸಾಧ್ಯವಾಗಿದೆ. ರಾಸಾಯನಿಕ ಪದಾರ್ಥಗಳಲ್ಲಿ 15 ಬಗೆಯ ಬಣ್ಣಗಳು ದೊರೆಯುತ್ತವೆ’ ಎಂದು ಅವರು ವಿವರಿಸಿದರು.

‘ಅರಗು ಹಾಕಿ ಬೊಂಬೆಗಳಿಗೆ ಅಂತಿಮ ಸ್ಪರ್ಶ ನೀಡುವುದು ಚನ್ನಪಟ್ಟಣದ ಬೊಂಬೆಗಳ ವಿಶೇಷ. ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಅರಗಿನ ಬೆಲೆ ಕೆ.ಜಿಗೆ 950 ರೂಪಾಯಿ ಇದೆ. ಈ ಬೆಲೆ ದುಬಾರಿಯಾದ ಕಾರಣ ಬಹುತೇಕ ಬೊಂಬೆ ಉದ್ಯಮಿಗಳು ಮತ್ತು ಕುಶಲಕರ್ಮಿಗಳು ಈ ಉದ್ಯಮದಿಂದ ವಿಮುಖ­ರಾಗಿ­ದ್ದಾರೆ. ಅಲ್ಲದೆ ಸರ್ಕಾರದಿಂದ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ದೊರೆಯದಿರುವುದರಿಂದ ಬೊಂಬೆ ಉದ್ಯಮ ತೆವಳುತ್ತಾ ಸಾಗುತ್ತಿದೆ’ ಎಂದು ಕುಶಲಕರ್ಮಿ ಮಾಲಿನಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT