ಶುಕ್ರವಾರ, ಡಿಸೆಂಬರ್ 6, 2019
26 °C

ಬೊಂಬೆಯಾಟ ಸೂತ್ರಧಾರಿ

Published:
Updated:
ಬೊಂಬೆಯಾಟ ಸೂತ್ರಧಾರಿ

ಬೊಂಬೆಗಳ ತಯಾರಿಯಲ್ಲಿ ರಮೇಶ್ ಚಾಕಚಕ್ಯರು. ಮರೆಯಲ್ಲಿ ಸೂತ್ರಧಾರನಾಗಿ ನಿಂತು ಪ್ರದರ್ಶನವನ್ನು ಯಶಸ್ವಿಗೊಳಿಸುವುದರಲ್ಲೂ ಸಿದ್ಧಹಸ್ತರು. ಕರಾವಳಿಯ ಈ ಕಲೆಗೆ ಯುರೋಪ್‌ನ ಪ್ರಾಗ್‌ನಲ್ಲಿ ನಡೆದ ‘ಜಾಗತಿಕ ಬೊಂಬೆಯಾಟ’ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ಸಾಮಾನ್ಯ ಸಂಗತಿಯಲ್ಲ. ಭಾರತದಿಂದ ಆಯ್ಕೆಯಾದ ಏಕೈಕ ತಂಡ ಎಂಬ ಹೆಗ್ಗಳಿಕೆ ಈ ತಂಡದ್ದು!.‘ಪ್ರಾಗ್‌ನಲ್ಲಿ 38 ದೇಶಗಳ ಬೊಂಬೆಯಾಟ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಅನಿಮೇಶನ್, ಆಧುನಿಕ ಬೊಂಬೆಗಳು ಮುಂತಾದ ವಿವಿಧ ವಿಭಾಗದಲ್ಲಿ ವಿವಿಧ ದೇಶಗಳ ಎಂಟು ತಂಡಗಳು ಪ್ರಶಸ್ತಿ ಪಡೆದಿವೆ. ನಮ್ಮ ತಂಡ ಪ್ರದರ್ಶಿಸಿದ ‘ನರಕಾಸುರ ವಧೆ’ ಯಕ್ಷಗಾನ ಪ್ರಸಂಗ ಪ್ರಶಸ್ತಿಗೆ ಪಾತ್ರವಾಯಿತು ಎಂದು ಹೆಮ್ಮೆಯಿಂದ ಹೇಳುತ್ತಾರೆ ರಮೇಶ್.‘ಒಂದು ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50ರಿಂದ 100ರಷ್ಟು ಯಕ್ಷಗಾನ ಬೊಂಬೆಯಾಟ ಸಂಘಗಳಿದ್ದವು. ಮೂರು ದಶಕಗಳ ಹಿಂದೆ ತುಳುನಾಡಲ್ಲಿ ತಮ್ಮದೂ ಸೇರಿ ಎಂಟು ಯಕ್ಷಗಾನ ಬೊಂಬೆ ಯಾಟ ತಂಡಗಳಿದ್ದುವು. ಬೆಳ್ತಂಗಡಿಯಲ್ಲಿ ಎರಡು, ಉಳಿದವು ಉಡುಪಿ ಜಿಲ್ಲೆಯಲ್ಲಿದ್ದವು. ಈ ಪೈಕಿ ಈಗ ಉಳಿದಿರುವುದು ನಮ್ಮದು ಮತ್ತು ಉಪ್ಪಿನಕುದ್ರು ತಂಡ ಎನ್ನುತ್ತಾರೆ ರಮೇಶ್.ನಮ್ಮ ತಂಡದ  ಪಾಕಿಸ್ತಾನದ ಲಾಹೋರ್ ನಲ್ಲಿ ‘ಶ್ರೀ ದೇವಿ ಮಹಾತ್ಮೆ’ ಪ್ರಸಂಗ ಪ್ರದರ್ಶಿಸಿತು. ವಿದೇಶದಲ್ಲಿ ಪ್ರದರ್ಶನ ನೀಡುವ ಪೌರಾಣಿಕ ಪ್ರಸಂಗದ ಸಾರಾಂಶವನ್ನು ಆಂಗ್ಲ ಭಾಷೆಯಲ್ಲಿ ಓದಿ ಹೇಳುತ್ತಿದ್ದೆವು. ವಿದೇಶದಲ್ಲಿ ಪ್ರೇಕ್ಷಕರಿಗೆ ನಮ್ಮ ಪ್ರದರ್ಶನ ಮತ್ತು ಪ್ರಸಂಗ ಪಾತ್ರಗಳ ಬಗ್ಗೆ ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗುತ್ತಿತ್ತು. ಪಂಚವಟಿ, ಇಂದ್ರಜಿತು ಕಾಳಗ, ವೀರಮಣಿ ಕಾಳಗ, ಲಂಕಾ ದಹನ, ಗರುಡ ಗರ್ವಭಂಗ, ಅತಿಕಾಯ ಕಾಳಗ, ವಾಲಿ ವಧೆ ನಮ್ಮ ತಂಡದ ಪ್ರಮುಖ ಪ್ರಸಂಗಗಳು ಎನ್ನುತ್ತಾರವರು.‘ಪುತ್ಥಳಿ ಯಾತ್ರೆ’ ಮೂಲಕ ಶಾಲಾ ವಠಾರಕ್ಕೆ ಬೊಂಬೆಗಳ ಪಯಣ ಎನ್ನುವುದು ಹೊಸ ಕಲ್ಪನೆ. ಆ ಮೂಲಕ ಎಳೆಯರಲ್ಲಿ ಯಕ್ಷಗಾನ ಪರಿಚಯಿಸುವುದು ಉದ್ದೇಶ. ‘ಪುತ್ಥಳಿ ಯಾತ್ರೆ’ಯನ್ನು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಸುಧಾಮೂರ್ತಿ ಪ್ರಾಯೋಜಿಸಿದ್ದಾರೆ. ಸರ್ಕಾರ, ಸಂಘ- ಸಂಸ್ಥೆ, ಕಲಾಭಿಮಾನಿಗಳು ಸಹಾಯಹಸ್ತ ಚಾಚಿದರೆ ಈ ಕಲೆ ಉಳಿಸುವ ನಿಟ್ಟಿನಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುಕೂಲ ಎನ್ನುತ್ತಾರೆ ರಮೇಶ್. ಅವರ ದೂರವಾಣಿ ನಂಬರ್‌ಗಳು ಹೀಗಿವೆ: 04994223927/224235, ಮೊಬೈಲ್: 09446772277

 

ಪ್ರತಿಕ್ರಿಯಿಸಿ (+)