ಶನಿವಾರ, ಜೂನ್ 19, 2021
28 °C

ಬೊಕ್ಕಸಕ್ಕೆ 1.03 ಲಕ್ಷ ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂದಿನ ಆರ್ಥಿಕ ವರ್ಷದಲ್ಲಿ ವಿವಿಧ ಮೂಲಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಒಟ್ಟು 1,03,369 ಕೋಟಿ ರೂಪಾಯಿ ಜಮೆ ನಿರೀಕ್ಷೆ ಮಾಡಲಾಗಿದೆ.ರಾಜ್ಯದ ಸ್ವಂತ ತೆರಿಗೆ ಆದಾಯದಲ್ಲಿ ಶೇಕಡ 18ರಷ್ಟು ಹೆಚ್ಚಳ ನಿರೀಕ್ಷಿಸಿದ್ದು, ಈ ಮೂಲದ ಆದಾಯ 51,821 ಕೋಟಿಗೆ ಏರಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ. ತೆರಿಗೆಯೇತರ ಮೂಲಗಳಿಂದ ರೂ 3,193 ಕೋಟಿ, ಕೇಂದ್ರ ತೆರಿಗೆ ಪಾಲಿನಲ್ಲಿ ರೂ 13,094 ಕೋಟಿ ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರದಿಂದ ರೂ 13,354 ಕೋಟಿ ಅನುದಾನ ದೊರೆಯಬಹುದು ಎಂದು ಅಂದಾಜಿಸಲಾಗಿದೆ.21,609 ಕೋಟಿ ರೂಪಾಯಿಯನ್ನು ವಿವಿಧ ಮೂಲಗಳಿಂದ ಸಾಲ ಪಡೆಯಲು ನಿರ್ಧರಿಸಲಾಗಿದೆ. ಸಾಲವಲ್ಲದ ಸ್ವೀಕೃತಿಗಳಿಂದ ರೂ 125 ಕೋಟಿ ಮತ್ತು ಸಾಲ ವಸೂಲಿ ಮೂಲಕ ರೂ 174 ಕೋಟಿ ಸಂಗ್ರಹಿಸುವ ಗುರಿ ಇದೆ. ರಾಜ್ಯ ಸರ್ಕಾರಿ ಸ್ವಾಮ್ಯದ ವಿವಿಧ ಮಂಡಳಿಗಳು, ನಿಗಮಗಳು ಮತ್ತು ಸ್ಥಳೀಯ ಸಂಸ್ಥೆಗಳು ಆಂತರಿಕ ಸಂಪನ್ಮೂಲ ಸೃಜನೆಯ ಮೂಲಕ ಹಾಗೂ ಸ್ವಂತ ಸಾಮರ್ಥ್ಯದ ಮೇಲೆ ಮಾಡಿದ ಸಾಲಗಳ ಮೂಲದಿಂದ 6,740 ಕೋಟಿ ರೂಪಾಯಿ ಕ್ರೋಡೀಕರಿಸುವ ಪ್ರಸ್ತಾವ ಬಜೆಟ್‌ನಲ್ಲಿದೆ.ಉದ್ದೇಶಿತ ತೆರಿಗೆ ಪರಿಹಾರಗಳು ಮತ್ತು ಹೆಚ್ಚಳಗಳ ಜಾರಿಯಿಂದ ತೆರಿಗೆ ಆದಾಯದಲ್ಲಿ 150 ಕೋಟಿ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆ ಇದೆ. ತೆರಿಗೆ ಪರಿಹಾರಗಳ ಮೂಲಕ ಈ ನಷ್ಟವನ್ನು ತುಂಬಿಕೊಳ್ಳಲು ಯೋಚಿಸಲಾಗಿದೆ.2012-13ನೇ ಸಾಲಿನ ಒಟ್ಟು ವೆಚ್ಚವನ್ನು 1,02,742 ಕೋಟಿ ರೂಪಾಯಿ ಎಂಬುದಾಗಿ ಅಂದಾಜು ಮಾಡಲಾಗಿದೆ. ರೂ 80,530 ಕೋಟಿ ರಾಜಸ್ವ ವೆಚ್ಚವಾದರೆ, ರೂ 16,542 ಕೋಟಿ ಬಂಡವಾಳ ವೆಚ್ಚ. ಈ ಅವಧಿಯಲ್ಲಿ ಸಾಲದ ಮರುಪಾವತಿಗಾಗಿ ರಾಜ್ಯ ಸರ್ಕಾರವು 5,670 ಕೋಟಿ ವೆಚ್ಚ ಮಾಡಲಿದೆ.

ಈ ಬಜೆಟ್‌ನಲ್ಲಿ ರಾಜಸ್ವ ಹೆಚ್ಚುವರಿಯನ್ನು ರೂ 931 ಕೋಟಿ ಎಂದು ಅಂದಾಜಿಸಲಾಗಿದೆ.15,312 ಕೋಟಿ ರೂಪಾಯಿ ವಿತ್ತೀಯ ಕೊರತೆ ನಿರೀಕ್ಷಿಸಿದ್ದು, ಅದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ 2.94ರಷ್ಟಾಗಿರುತ್ತದೆ. 2012-13ನೇ ಆರ್ಥಿಕ ವರ್ಷದ ಕೊನೆಯಲ್ಲಿ ರಾಜ್ಯದ ಒಟ್ಟು ಹೊಣೆಗಾರಿಕೆಗಳ ಮೊತ್ತ 1,14,744 ಕೋಟಿ ರೂಪಾಯಿ ತಲುಪಲಿದೆ.

 

ಜಿಎಸ್‌ಡಿಪಿಯ ಶೇ 22.03ರಷ್ಟು ಹೊಣೆಗಾರಿಕೆ ಇರುತ್ತದೆ. ರಾಜಸ್ವ ಹೆಚ್ಚುವರಿ, ವಿತ್ತೀಯ ಕೊರತೆ ಮತ್ತು ಒಟ್ಟು ಹೊಣೆಗಾರಿಕೆಗಳು `ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ~ಯಲ್ಲಿ ನಿಗದಿಪಡಿಸಿರುವ ಮಿತಿಯೊಳಗೆ ಇವೆ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.