ಮಂಗಳವಾರ, ಮಾರ್ಚ್ 28, 2023
33 °C

ಬೊಕ್ಕಸ ಭರ್ತಿಯ ಸದ್ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಪರೋಕ್ಷ ತೆರಿಗೆಯ ವರಮಾನವು ಹೆಚ್ಚಿರುವುದು ದೇಶದ ಅರ್ಥ ವ್ಯವಸ್ಥೆಯ ಆರೋಗ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಜಾಗತಿಕ ಹಣಕಾಸು ಬಿಕ್ಕಟ್ಟಿನ ಪ್ರತಿಕೂಲಗಳನ್ನೆಲ್ಲ ದೇಶದ ಅರ್ಥ ವ್ಯವಸ್ಥೆಯು ಸಮರ್ಥವಾಗಿ ಎದುರಿಸಿ ಇನ್ನಷ್ಟು ಬಲಿಷ್ಠವಾಗಿ ಬೆಳೆಯುತ್ತಿರುವುದು ಈ ತೆರಿಗೆ ಸಂಗ್ರಹದಿಂದ ವೇದ್ಯವಾಗುತ್ತದೆ. ಸರ್ಕಾರದ ತೆರಿಗೆ ಮತ್ತು ಹಣಕಾಸು ಉತ್ತೇಜನಾ ಕ್ರಮಗಳಿಂದ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಭಾರಿ ಪ್ರಮಾಣದಲ್ಲಿ ವಿಸ್ತರಣೆಯಾಗುತ್ತಿರುವುದು ತೆರಿಗೆ ಸಂಗ್ರಹ ರೂಪದಲ್ಲಿ ಪ್ರತಿಫಲನಗೊಳ್ಳುತ್ತಿದೆ. ಸೀಮಾ ಸುಂಕ, ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆಗಳಿಂದ ಕೇಂದ್ರದ ಬೊಕ್ಕಸಕ್ಕೆ ಹರಿದು ಬಂದ ವರಮಾನವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 42ರಷ್ಟು ಏರಿಕೆ ಸಾಧಿಸಿರುವುದು ಅತ್ಯುತ್ತಮ ಸಾಧನೆ. ಹಣಕಾಸು ವರ್ಷದ ಅಂತ್ಯಕ್ಕೆ ರೂ. 3.13 ಲಕ್ಷ ಕೋಟಿಗಳಷ್ಟು ತೆರಿಗೆ ವರಮಾನ ಸಂಗ್ರಹದ ಗುರಿ ನಿಗದಿಪಡಿಸಲಾಗಿದ್ದು, ಇದುವರೆಗಿನ ಸಂಗ್ರಹವು (ರೂ. 2.07 ಲಕ್ಷ ಕೋಟಿ) ಶೇ 66ರಷ್ಟು ಆಗಿದೆ. ವರ್ಷಾಂತ್ಯದ ಹೊತ್ತಿಗೆ ನಿಗದಿತ ಮೊತ್ತದ ತೆರಿಗೆ ಸಂಗ್ರಹದ ಬಗ್ಗೆ ಆತ್ಮವಿಶ್ವಾಸದ ಮಾತುಗಳೂ ಕೇಳಿ ಬರುತ್ತಿರುವುದು ಶುಭ ಸೂಚನೆ. ನೇರ ಮತ್ತು ಪರೋಕ್ಷ ತೆರಿಗೆ ಬಾಬತ್ತಿನಿಂದ ಒಟ್ಟು ರೂ. 7.45 ಲಕ್ಷ ಕೋಟಿಗಳನ್ನು ಸಂಗ್ರಹಿಸಲು ಸರ್ಕಾರ ಗುರಿ ನಿಗದಿಪಡಿಸಿದೆ. ಈ ಸಕಾರಾತ್ಮಕ ಸಂಗತಿಗಳು ಒಟ್ಟಾರೆ ಆರ್ಥಿಕ ಚಟುವಟಿಕೆಗಳ ಚಕ್ರವು ಸಮರ್ಪಕವಾಗಿ ಉರುಳುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ.ಬೊಕ್ಕಸಕ್ಕೆ ಸಂಗ್ರಹವಾಗುವ ತೆರಿಗೆ ಪ್ರಮಾಣ ಹೆಚ್ಚಳಗೊಳ್ಳುವುದು ಎಂದರೆ, ಸರ್ಕಾರವು ಕೈಗೊಳ್ಳುವ ಜನೋಪಯೋಗಿ ಕಾರ್ಯಕ್ರಮಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಸಂಪನ್ಮೂಲದ ಲಭ್ಯತೆ ಇರುವುದು ಮತ್ತು  ಕೊರತೆ ಇಲ್ಲದಿರುವುದು ಎಂದೂ ಅರ್ಥ. ಮೂಲ ಸೌಕರ್ಯ  ರಂಗವೂ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ವೆಚ್ಚ ಮಾಡಲು ಸರ್ಕಾರ ಹಿಂದೇಟು ಹಾಕುವ ಪರಿಸ್ಥಿತಿ ಇಲ್ಲ. ತೆರಿಗೆ ಸಂಗ್ರಹಕ್ಕೆ ಪೂರಕವಾಗಿ ಕೈಗಾರಿಕಾ ರಂಗದ ಉತ್ಪಾದನೆಯೂ ನಿರೀಕ್ಷಿತ ರೀತಿಯಲ್ಲಿ ಇದೆ. ಇನ್ನೊಂದೆಡೆ ವಾಣಿಜ್ಯ ಬ್ಯಾಂಕ್‌ಗಳು ಮತ್ತು ಬೃಹತ್ ಉದ್ದಿಮೆ ಸಂಸ್ಥೆಗಳ ಮುಂಗಡ ತೆರಿಗೆ ಪಾವತಿ ಪ್ರಮಾಣವೂ ದೇಶದ ಹಣಕಾಸು ರಂಗದ ಆರೋಗ್ಯ ಚೆನ್ನಾಗಿರುವುದನ್ನು ಸೂಚಿಸುತ್ತದೆ. ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಇರುವ ಮೂಲಕ ಬೊಕ್ಕಸ ಭರ್ತಿಯಾಗಿದ್ದರೂ, ಅದರಿಂದ ಎಲ್ಲರಿಗೂ ಅದರಲ್ಲೂ ಜನಸಾಮಾನ್ಯರಿಗೆ ಎಷ್ಟರಮಟ್ಟಿಗೆ ಪ್ರಯೋಜನ ದೊರೆತಿದೆ ಎನ್ನುವುದೂ ಮುಖ್ಯ. ಎಲ್ಲೆಡೆ ‘ಹಿತಾನುಭವ’ದ ಕುರುಹುಗಳೇನೂ ಕಾಣುತ್ತಿಲ್ಲ. ಉಳ್ಳವರ ವಿಮಾನ ಪ್ರಯಾಣದಿಂದ ಹಿಡಿದು ಬಡವರ ದಿನನಿತ್ಯದ ಅವಶ್ಯಕ ಸರಕುಗಳು ದಿನೇ ದಿನೇ ದುಬಾರಿಗೊಳ್ಳುತ್ತಲೇ ಸಾಗಿವೆ. ಬೆಲೆ ಏರಿಕೆ ಬಿಸಿ ಅನುಭವ. ಆರ್ಥಿಕ ಪರಿಣತರಾಗಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರದಲ್ಲಿ ಜನಸಾಮಾನ್ಯರ ಬದುಕು ದುರ್ಭರವಾಗುತ್ತಿರುವುದು ವಿಪರ್ಯಾಸ. ಸರ್ಕಾರ ತೆರಿಗೆ ಸಂಗ್ರಹ ಹೆಚ್ಚಳದ ಪ್ರಯೋಜನವನ್ನು ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಮಾತ್ರ ಬೊಕ್ಕಸ ಭರ್ತಿಗೂ ಅರ್ಥ ಬಂದೀತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.