ಶನಿವಾರ, ಮೇ 8, 2021
25 °C

ಬೊಫೋರ್ಸ್: ಅಮಿತಾಭ್ ಬಚ್ಚನ್ ಗೆ ಸ್ವೀಡಿಷ್ ತನಿಖೆಗಾರರಿಂದ ಕ್ಲೀನ್ ಚಿಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಬೊಫೋರ್ಸ್ ಪ್ರಕರಣದ ಸ್ವೀಡನ್ನಿನ ಮುಖ್ಯ ತನಿಖೆಗಾರರು ಖ್ಯಾತ ಚಿತ್ರ ನಟ ಅಮಿತಾಭ್ ಬಚ್ಚನ್ ಅವರನ್ನು ~ಆರೋಪ ಮುಕ್ತ~ರನ್ನಾಗಿ ಮಾಡುವುದರೊಂದಿಗೆ ಅಮಿತಾಭ್ ನಿರಾಳರಾಗಿದ್ದಾರೆ. ಆದರೆ ಈ ಆರೋಪದಿಂದಾಗಿ ~ಇಷ್ಟೊಂದು ವರ್ಷಗಳಲ್ಲಿ ನಾನು ಅನುಭವಿಸಿದ ನೋವು, ದುಗುಡಕ್ಕೆ ಎಣೆಯಿಲ್ಲ~ ಎಂದು ದುಃಖ ತೋಡಿಕೊಂಡಿದ್ದಾರೆ.~ವಾಸ್ತವ ಮತ್ತು ಸತ್ಯಕ್ಕೆ ಜಯ ದೊರೆತಿದೆ. ನನ್ನ ಬದುಕಿನಲ್ಲಿ ಹಲವಾರು ಘಟನೆಗಳು ನಡೆದು ಹೋದವು. ಆರೋಪಗಳು ಬಂದವು, ವಾಸ್ತವದ ವಿರುದ್ಧ ಪರೀಕ್ಷೆಗಳು ನಡೆದವು. ಅತ್ಯಂತ ಕೆಟ್ಟ ಕ್ಷಣಗಳನ್ನು ಎದುರಿಸಬೇಕಾಯಿತು. ಬಿರುಗಾಳಿಯೊಂದಿಗೆ ಸೆಣಸಾಡಬೇಕಾಯಿತು. ಅದರ ಭೀಕರತೆಯ ಮೂರ್ಖ ಫಲ ಉಣ್ಣಬೇಕಾಯಿತು~ ಎಂದು ಬಚ್ಚನ್ ತಮ್ಮ ಬ್ಲಾಗ್ ನಲ್ಲಿ  ಬರೆದಿದ್ದಾರೆ.ಹೂಟ್.ಆರ್ಗ್ ವೆಬ್ ಸೈಟ್ ಗೆ ನೀಡಿದ ಸಂದರ್ಶನದಲ್ಲಿ ಮಾಜಿ ಸ್ವೀಡಿಷ್ ಪೊಲೀಸ್ ಮುಖ್ಯಸ್ಥ ಸ್ಟೆನ್ ಲಿಂಡ್ ಸ್ಟೋರ್ಮ್ ಅವರು 1990ರಲ್ಲಿ ಸ್ವೀಡನ್ ಗೆ ಬಂದಿದ್ದ ಭಾರತೀಯ ತನಿಖೆಗಾರರು ~ಬಚ್ಚನ್ ಆಯಾಮ~ವನ್ನು ಹೆಣೆದಿದ್ದರು ಎಂದು ಆಪಾದಿಸಿದ್ದಾರೆ. ಲಿಂಡ್ ಸ್ಟೋರ್ಮ್ ಅವರು ಸ್ಚೀಡನ್ ನಲ್ಲಿ ಬೊಫೋರ್ಸ್ ಹಗರಣದ ತನಿಖೆಯ ನೇತೃತ್ವ ವಹಿಸಿದ್ದವರು.~ಅವರು ನನಗೆ ಅಮಿತಾಭ್ ಬಚ್ಚನ್ ಹೆಸರು ಸೇರಿದಂತೆ ಕೆಲವೊಂದು ಹೆಸರುಗಳ ಪಟ್ಟಿಯನ್ನು ನೀಡಿದರು. ಲಂಚ ಪ್ರಕರಣಗಳಲ್ಲಿ ಬಚ್ಚನ್ ಸಂಪರ್ಕ ಇರುವುದನ್ನು ಖಚಿತ ಪಡಿಸಲು ನಿರಾಕರಿಸಿದ್ದರಿಂದ ನಿಮ್ಮನ್ನು ಪೂರ್ಣವಾಗಿ ನಂಬುವುದಿಲ್ಲ ಎಂದೂ ಅವರು ನನಗೆ ಹೇಳಿದ್ದರು~ ಎಂದು ಲಿಂಡ್ ಸ್ಟೋರ್ಮ್ ಸಂದರ್ಶನದಲ್ಲಿ ತಿಳಿಸಿದ್ದಾರೆ.~ಈ ಸ್ವೀಡನ್ ಪ್ರವಾಸದ ಸಂದರ್ಭದಲ್ಲಿ ಭಾರತೀಯ ತನಿಖೆಗಾರರು ಸ್ವೀಡಿಷ್ ವೃತ್ತ ಪತ್ರಿಕೆ ಡ್ಯಾಜೆನ್ಸ್ ನೈಟೆರ್ (ಡಿಎನ್) ನಲ್ಲಿ ~ಬಚ್ಚನ್ ಆಯಾಮ~ವನ್ನು ಬಿತ್ತಿದರು. ಬಚ್ಚನ್ ಅವರು ಪತ್ರಿಕೆಯನ್ನು ಇಂಗ್ಲೆಂಡ್ ನಲ್ಲಿ ನ್ಯಾಯಾಲಯಕ್ಕೆ ಎಳೆದು ಗೆದ್ದರು. ಡಿಎನ್ ಕ್ಷಮಾಪಣೆ ಕೇಳಬೇಕಾಯಿತು. ಕಥೆ ಭಾರತೀಯ ತನಿಖೆಗಾರರಿಂದ ಬಂತು ಎಂದು ಅವರು (ಡಿಎನ್) ಹೇಳಿದರು~ ಎಂದು ಲಿಂಡ್ ಸ್ಟೋರ್ಮ್ ವೆಬ್ ಸೈಟ್ ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.~ಘಟನೆಯ 25 ವರ್ಷಗಳ ಬಳಿಕ ಮುಂಚೂಣಿಯಲ್ಲಿ ನಿಂತು ಆಪಾದನೆ ಮಾಡಿ, ತನಿಖೆ ನಡೆಸಿದವರು ನನ್ನ ಮುಗ್ಧತೆ ಬಗ್ಗೆ ಹೇಳಿದ್ದನ್ನು ಈದಿನ ನಾನು ಓದಿದೆ~ ಎಂದು ಬಚ್ಚನ್ ಬ್ಲಾಗ್ ನಲ್ಲಿ ಬರೆದಿದ್ದಾರೆ.~ಏನಿದ್ದರೂ ವಿಚಾರಣೆಯ ಈ ಕಾಲಘಟ್ಟದಲ್ಲಿ ನಾನು ಅನುಭವಿಸಿದ ನೋವಿಗೆ ಎಣೆಯಿಲ್ಲ. ದಿನಗಳು, ತಿಂಗಳುಗಳು, ವರ್ಷಗಳಲ್ಲಿ ಈ ಆರೋಪದಿಂದಾಗಿ ನಾನು ಅನುಭವಿಸಿದ ದುಗುಡ, ನೋವನ್ನು ಅರ್ಥ ಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಇದರಲ್ಲಿ ಷಾಮೀಲಾದವರು ಕ್ಷಣಿಕ ಜಯ ಗಳಿಸಿದರು. ಆದರೆ ಅಂತಿಮವಾಗಿ ಅಧಿಕಾರ, ಬಲ, ಮುಖ್ಯವಾಗಿ ಆತ್ಮಸಾಕ್ಷಿ  ಎಲ್ಲವನ್ನೂ ಕಳೆದುಕೊಂಡಿದ್ದಾರೆ~ ಎಂದು ಬಚ್ಚನ್ ಬರೆದಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.