ಗುರುವಾರ , ನವೆಂಬರ್ 21, 2019
21 °C

ಬೊಮ್ಮಾಯಿ ಸೇರಿ 23 ಅಭ್ಯರ್ಥಿಗಳ 36 ನಾಮಪತ್ರ ಸಲ್ಲಿಕೆ

Published:
Updated:

ಹಾವೇರಿ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಗೆ ಕೇವಲ ಎರಡು ದಿನ ಬಾಕಿ ಉಳಿದಿದ್ದು, ಸೋಮವಾರದಂದು ಜಲ ಸಂಪನ್ಮೂಲ ಬಸವರಾಜ ಬೊಮ್ಮಾಯಿ ಸೇರಿದಂತೆ 23 ಅಭ್ಯರ್ಥಿಗಳಿಂದ ಒಟ್ಟು 36 ನಾಮಪತ್ರಗಳು ಸಲ್ಲಿಕೆಯಾಗಿವೆ.ಹಾವೇರಿಯಲ್ಲಿ ಐದು, ಶಿಗ್ಗಾವಿಯಲ್ಲಿ ಐದು, ಹಾನಗಲ್‌ನಲ್ಲಿ ಮೂರು, ಬ್ಯಾಡಗಿಯಲ್ಲಿ ಹತ್ತು, ಹಿರೇಕೆರೂರರಲ್ಲಿ ನಾಲ್ಕು, ರಾಣೆಬೆನ್ನೂರಲ್ಲಿ ಒಂಬತ್ತು ನಾಮಪತ್ರಗಳು ಸಲ್ಲಿಸಲಾಗಿದೆ. ಇದರಲ್ಲಿ ಬಿಜೆಪಿಯ ಆರು, ಕಾಂಗ್ರೆಸ್‌ನ 12, ಜೆಡಿಎಸ್‌ನ ಮೂರು, ಕೆಜೆಪಿಯ ಆರು, ಬಿಎಸ್‌ಆರ್‌ನ ಎರಡು, ಪಕ್ಷೇತರರು ಏಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ಸೋಮವಾರ ನಾಮಪತ್ರ ಸಲ್ಲಿಸಿದವರಲ್ಲಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಕೆ.ಬಿ.ಕೋಳಿವಾಡ, ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ನೆಹರೂ ಓಲೇಕಾರ, ರುದ್ರಪ್ಪ ಲಮಾಣಿ, ಯು.ಬಿ.ಬಣಕಾರ, ಜಿ.ಶಿವಣ್ಣ, ಅಜ್ಜಂಪೀರ್ ಖಾದ್ರಿ, ಮಾಜಿ ಉಪ ಸಭಾಪತಿ ಮನೋಹರ ತಹಶೀಲ್ದಾರ್ ಪ್ರಮುಖರಾಗಿದ್ದಾರೆ.ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಅಜ್ಜಂಪೀರ್ ಖಾದ್ರಿ, ಜೆಡಿಎಸ್ ಅಭ್ಯರ್ಥಿಯಾಗಿ ಸುಮಂಗಲಾ ಮೈಸೂರ, ಕೆಜೆಪಿ ಅಭ್ಯರ್ಥಿಯಾಗಿ ಬಾಪುಗೌಡ ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ.ಹಾವೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ರುದ್ರಪ್ಪ ಲಮಾಣಿ (2 ನಾಮಪತ್ರ), ಬಿಜೆಪಿಯಿಂದ ಡಾ. ಮಲ್ಲೇಶಪ್ಪ ಹರಿಜನ 2 ನಾಮಪತ್ರ), ಕೆಜೆಪಿ ಅಭ್ಯರ್ಥಿಯಾಗಿ ನೆಹರೂ ಓಲೇಕಾರ ನಾಮಪತ್ರ ಸಲ್ಲಿಸಿದ್ದಾರೆ.ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಜಿ. ಶಿವಣ್ಣ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ಬಿ. ಕೋಳಿವಾಡ (ನಾಲ್ಕು ನಾಮಪತ್ರ), ಜೆಡಿಎಸ್ ಅಭ್ಯರ್ಥಿಯಾಗಿ ಡಾ.ಮೋಹನ ಹಂಡೆ, ಪಕ್ಷೇತರರಾಗಿ ಗಂಗಾಧರ ಹಾದಿಮನಿ ನಾಮಪತ್ರ ಸಲ್ಲಿದ್ದಾರೆ.ಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಯು.ಬಿ. ಬಣಕಾರ, ಬಿಜೆಪಿ ಅಭ್ಯರ್ಥಿಯಾಗಿ ಪಾಲಾಕ್ಷಗೌಡ ಪಾಟೀಲ, ಪಕ್ಷೇತರ ಅಭ್ಯರ್ಥಿ ಶಿವಪ್ಪ ಬೇವಿನಹಳ್ಳಿ ನಾಮಪತ್ರ ಸಲ್ಲಿಸಿದರೆ, ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಭಾಪತಿ ಮನೋಹರ ತಹಶೀಲ್ದಾರ್ (2 ನಾಮಪತ್ರ), ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮಶೇಖರ ಕೊತಂಬರಿ ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು ಈವರೆಗೆ ನಾಲ್ಕು ಅಭ್ಯರ್ಥಿಗಳಿಂದ ಆರು ನಾಮಪತ್ರಗಳು ಸಲ್ಲಿಕೆಯಾಗಿವೆ.ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿರೂಪಾಕ್ಷಪ್ಪ ಬಳ್ಳಾರಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವರಾಜ ಶಿವಣ್ಣನವರ, ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ದಾದಾಪೀರ ಬೂಸಿ, ಪಕ್ಷೇತರ ಅಭ್ಯರ್ಥಿಗಳಾಗಿ ರುದ್ರಯ್ಯ ಸಾಲಿಮಠ, ರಾಜು ಶಿಗ್ಲಿ, ಶಿವಬಸಪ್ಪ ಬಾಗನ್ನನವರ, ದೇವಪ್ಪ ಹುಳಕಯಲ್ಲಪ್ಪನವರ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.ಅಭ್ಯರ್ಥಿಗಳ ಮೆರವಣಿಗೆ

ಹಾವೇರಿ: ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಬೃಹತ್ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.ಬಿಜೆಪಿ ಅಭ್ಯಥಿ ಡಾ.ಮಲ್ಲೇಶಪ್ಪ ಹರಿಜನ ಅವರು ಪಕ್ಷದ ಮುಖಂಡರ ಹಾಗೂ ಸಾವಿರಾರು ಕಾರ್ಯಕರ್ತರ ಜತೆಯಲ್ಲಿ ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆಗೆ ತೆರಳಿದರು.ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಡಾ.ಮಲ್ಲೇಶಪ್ಪ ಹರಿಜನ ಅವರಿಗೆ ಜೈಕಾರ ಹಾಕಿದರಲ್ಲದೇ, ಮೆರವಣಿಗೆ ಮಧ್ಯದಲ್ಲಿಯೇ ಹರಿಜನ ಅವರಿಗೆ ಮತ ಹಾಕುವಂತೆ ಮನವಿ ಮಾಡುತ್ತಾ ತೆರಳಿರುವುದು ವಿಶೇಷವಾಗಿತ್ತು.ಇನ್ನೂ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ಅವರು ಸಹ ಸಾವಿರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ಸೋಮವಾರ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಪುರಸಿದ್ದೇಶ್ವರ ದೇವಸ್ಥಾನದಿಂದ ಎಂ.ಜಿ.ರಸ್ತೆ ಮೂಲಕ ಮೆರವಣಿಗೆ ಆರಂಭಿಸಿದ ರುದ್ರಪ್ಪ ಲಮಾಣಿ ಅವರು, ಎಂ.ಜಿ.ರಸ್ತೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.ಮಾರ್ಗದುದ್ದಕ್ಕೂ ಪಕ್ಷ ಧ್ವಜ ಹಿಡಿದು ಸಾಗಿದ ಕಾರ್ಯಕರ್ತರು ರುದ್ರಪ್ಪ ಲಮಾಣಿ ಪರ ಘೋಷಣೆಗಳನ್ನು ಕೂಗಿದರು. ಇನ್ನು ವಿವಿಧ ತಾಲ್ಲೂಕುಗಳಲ್ಲಿ ಅಭ್ಯರ್ಥಿಗಳು ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಮೆರವಣಿಗೆ ಮೂಲಕ ಸಲ್ಲಿಸಿದರು

ಪ್ರತಿಕ್ರಿಯಿಸಿ (+)