ಸೋಮವಾರ, ಮೇ 23, 2022
30 °C
ಸ್ನೊಡೆನ್ ಪ್ರಯಾಣಿಸುತ್ತಿದ್ದ ಶಂಕೆ, ವಾಯುಗಡಿ ಪ್ರವೇಶಿಸಲು ಬಿಡದ ಫ್ರಾನ್ಸ್, ಇಟಲಿ, ಸ್ಪೇನ್

ಬೊಲಿವಿಯಾ ಅಧ್ಯಕ್ಷರ ವಿಮಾನಕ್ಕೆ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೊಲಿವಿಯಾ ಅಧ್ಯಕ್ಷರ ವಿಮಾನಕ್ಕೆ ನಿರ್ಬಂಧ

ವಿಯೆನ್ನಾ/ಪ್ಯಾರಿಸ್ (ಎಪಿ): ಬೊಲಿವಿಯಾ ಅಧ್ಯಕ್ಷ ಇವೊ ಮೊರಲೆಸ್ ಅವರ ವಿಮಾನದಲ್ಲಿ ಅಮೆರಿಕದ ಬೇಹುಗಾರಿಕೆ ಮಾಹಿತಿಗಳನ್ನು ಹೊರಗೆಡಹಿದ ಎಡ್ವರ್ಡ್ ಸ್ನೊಡೆನ್ ಕೂಡ ಇದ್ದಾರೆಂದು ಶಂಕಿಸಿದ ಫ್ರಾನ್ಸ್, ಇಟಲಿ, ಪೋರ್ಚುಗಲ್, ಸ್ಪೇನ್ ರಾಷ್ಟ್ರಗಳು ಈ ವಿಮಾನಕ್ಕೆ ತಮ್ಮ ವಾಯು ಗಡಿ ಪ್ರವೇಶಿಸಲು ಅವಕಾಶ ನೀಡದ ನಾಟಕೀಯ ಬೆಳವಣಿಗೆ ಮಂಗಳವಾರ ನಡೆದಿದೆ.ಈ ಕಾರಣದಿಂದ ವಿಮಾನದ ಸಂಚಾರ ಮಾರ್ಗದಲ್ಲಿ ಬದಲಾವಣೆಯಾಗಿ ಅದು ಮಂಗಳವಾರ ರಾತ್ರಿ ಆಸ್ಟ್ರಿಯಾ ತಲುಪಿತು. ನಂತರ ವಿಯೆನ್ನಾ ಮೂಲಕ ಬುಧವಾರ ಬೊಲಿವಿಯಾಗೆ ತೆರಳಿದೆ.`ನಾನು ಅಪರಾಧಿಯಲ್ಲ': `ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಅಪರಾಧಿಯಲ್ಲ' ಎಂದು ಇವೊ ಮೊರಲೆಸ್ ಅವರು ಹೇಳಿದ್ದಾರೆ.

ವಿಯೆನ್ನಾದಲ್ಲಿ ಮಾತನಾಡಿದ ಅವರು, ತನ್ನ ವಾಯುಗಡಿ ಪ್ರವೇಶಿಸುವ ಮೊದಲು ವಿಮಾನದ ತಪಾಸಣೆ ನಡೆಸುವಂತೆ ಮ್ಯಾಡ್ರಿಡ್ ಸೂಚಿಸಿತ್ತು. ಇದು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವುದರಿಂದ ತಪಾಸಣೆಗೆ ತಾವು ನಿರಾಕರಿಸಿದ್ದಾಗಿ ಮೊರಲೆಸ್ ತಿಳಿಸಿದ್ದಾರೆ.ಫ್ರಾನ್ಸ್, ಸ್ಪೇನ್ ಸ್ಪಷ್ಟನೆ: ಬೊಲಿವಿಯಾ ಅಧ್ಯಕ್ಷರ ವಿಮಾನಕ್ಕೆ ತಮ್ಮ ವಾಯು ಗಡಿ ಪ್ರವೇಶಿಸುವ ಅವಕಾಶವನ್ನು ನಿರಾಕರಿಸಿರಲಿಲ್ಲ ಎಂದು ಫ್ರಾನ್ಸ್ ಮತ್ತು ಸ್ಪೇನ್ ದೇಶಗಳ ವಿದೇಶಾಂಗ ಸಚಿವಾಲಯಗಳು ಸ್ಪಷ್ಟನೆ ನೀಡಿವೆ.ಅಧ್ಯಕ್ಷರಿದ್ದ ವಿಮಾನಕ್ಕೆ ವಾಯು ಗಡಿ ಪ್ರವೇಶಿಸಲು ಅವಕಾಶ ನೀಡದ ರಾಷ್ಟ್ರಗಳ ನಿಲುವನ್ನು ಬೊಲಿವಿಯಾದ ಉಪಾಧ್ಯಕ್ಷ ಅಲ್ವರೊ ಗರ್ಸಿಯಾ ಖಂಡಿಸಿದ್ದಾರೆ. ಜೊತೆಗೆ ಈ ರಾಷ್ಟ್ರಗಳು ಸ್ಪಷ್ಟನೆ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ.ಈ ಮಧ್ಯೆ, ವಿಶ್ವಸಂಸ್ಥೆಯಲ್ಲಿನ ಬೊಲಿವಿಯಾದ ಪ್ರತಿನಿಧಿ ಸಚಾ ಲೊರೆಂಟಿ ಅವರು ಯೂರೋಪ್‌ನ ನಾಲ್ಕು ರಾಷ್ಟ್ರಗಳ ನಿಲುವನ್ನು ಟೀಕಿಸಿದ್ದಾರೆ.`ಈ ರಾಷ್ಟ್ರಗಳು ವಿಶ್ವಸಂಸ್ಥೆ ರೂಪಿಸಿರುವ ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿವೆ. ಮಾತ್ರವಲ್ಲದೆ ರಾಷ್ಟ್ರದ ಅಧ್ಯಕ್ಷರ ಜೀವಕ್ಕೆ ಅಪಾಯ ಉಂಟುಮಾಡುವ ಸನ್ನಿವೇಶ ಸೃಷ್ಟಿಸಿದ್ದವು' ಎಂದು ಅವರು ದೂರಿದ್ದಾರೆ.ಹಿನ್ನೆಲೆ: ರಷ್ಯಾದ ಮಾಸ್ಕೊದಲ್ಲಿ ನಡೆದ ಶೃಂಗಸಭೆಯೊಂದರಲ್ಲಿ ಭಾಗವಹಿಸಿದ್ದ ಮೊರಲೆಸ್ ಅವರು ವಾಪಸ್ ಬೊಲಿವಿಯಾಗೆ ಹೊರಟ್ಟಿದರು. ಆದರೆ, ಈ ವಿಮಾನದಲ್ಲಿ  ಸ್ನೊಡೆನ್ ಇದ್ದಾರೆ ಎಂದು ಫ್ರಾನ್ಸ್, ಪೋರ್ಚುಗಲ್, ಇಟಲಿ ಶಂಕಿಸಿದ್ದವು. ಆದ್ದರಿಂದ ವಿಮಾನಕ್ಕೆ ತಮ್ಮ ವಾಯು ಗಡಿ ಮೂಲಕ ಹಾದು ಹೋಗಲು ಅವಕಾಶ ನೀಡಿರಲಿಲ್ಲ.ವಿಮಾನಕ್ಕೆ ಇಂಧನ ತುಂಬಿಸಲು ಅವಕಾಶ ನೀಡುವುದಾಗಿ ಸ್ಪೇನ್ ಒಪ್ಪಿತ್ತು. ಆದರೆ, ಕ್ಯಾನರಿ ದ್ವೀಪದಲ್ಲಿ ಇಳಿದಾಗ ತಪಾಸಣೆ ಮಾಡಲು ಅವಕಾಶ ನೀಡಬೇಕು ಎಂಬ ಷರತ್ತು ವಿಧಿಸಿತ್ತು.ಆಶ್ರಯ ನೀಡುವಂತೆ ಕೋರಿ ಸ್ನೊಡೆನ್ ಸಲ್ಲಿಸಿದ ಮನವಿಯನ್ನು ತಮ್ಮ ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೊರಲೆಸ್ ಹೇಳಿದ್ದರು.

ಹಾಗಾಗಿ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸ್ನೊಡೆನ್ ಇರಬಹುದೆಂದು ಈ ರಾಷ್ಟ್ರಗಳು ಅನುಮಾನ ವ್ಯಕ್ತಪಡಿಸಿದ್ದವು. ಆದರೆ, ವಿಮಾನದಲ್ಲಿ ಸ್ನೊಡೆನ್ ಇಲ್ಲ ಎಂದು ಆಸ್ಟ್ರಿಯಾ ಮತ್ತು ಬೊಲಿವಿಯಾದ ಅಧಿಕಾರಿಗಳು ಮಂಗಳವಾರವೇ ಸ್ಪಷ್ಟಪಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.