ಬೋಧನೆಯಿಂದ ಭಾಷಾಭಿಮಾನ ಬೆಳೆಸಿ

7

ಬೋಧನೆಯಿಂದ ಭಾಷಾಭಿಮಾನ ಬೆಳೆಸಿ

Published:
Updated:

ಬಾಗಲಕೋಟೆ: “ಕನ್ನಡ ಭಾಷೆಯನ್ನು ಮತ್ತಷ್ಟು ಸಮೃದ್ಧಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ವಿದ್ಯಾರ್ಥಿಗಳಲ್ಲಿ ಭಾಷೆಯ ಬಗ್ಗೆ ಅಭಿಮಾನ ಬೆಳೆಸುವಂತಹ ನವೀನ ಬೋಧನಾ ತಂತ್ರಗಳನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕು” ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿದ್ಧರಾಮ ಮನಹಳ್ಳಿ ಕರೆ ನೀಡಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಮಹಾಮಂಡಳದ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಹಳೆಗನ್ನಡದ ಓದು ಮತ್ತು ರಸಗ್ರಹಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರು ತಮ್ಮ ಬೋಧನೆ ಹಾಗೂ ಬರಹಗಳಿಂದ ಮಕ್ಕಳಿಗೆ ಹಳೆಗನ್ನಡದ ಕಾವ್ಯಶಕ್ತಿ ಹಾಗೂ ರಸವತ್ತತೆ ತಿಳಿಸಿಕೊಡಬೇಕು ಎಂದು ಹೇಳಿದ ಮನಹಳ್ಳಿ ಅವರು, ರನ್ನ-ಪಂಪರ ಕಾವ್ಯಗಳ ಉದಾಹರಣೆ ನೀಡುವ ಮೂಲಕ ಭಾಷೆ ಬೋಧನೆಯಲ್ಲಿ ಶಿಕ್ಷಕರ ಜವಾಬ್ದಾರಿಯನ್ನು ವಿವರಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಡಾ.ಮಲ್ಲಿಕಾ ಘಂಟಿ, ‘ಹಳೆಗನ್ನಡದ ಓದು ದೂರವಾಗುತ್ತಿದೆ. ಪರಿಣಾಮಕಾರಿ ಬೋಧನೆ ಇಲ್ಲದಿರುವುದರಿಂದ ಮಕ್ಕಳಿಗೆ ಹಳೆಗನ್ನಡದ ರಸಗ್ರಹಣ ಶಕ್ತಿ ಬೆಳೆಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ’ ಎಂದರು.ಪ್ರಾಧಿಕಾರದ ಇನ್ನೋರ್ವ ಸದಸ್ಯ ರಂಗರೆಡ್ಡಿ ಕೋಡಿರಾಂಪೂರ, ಹಳೆಗನ್ನಡದ ಓದುವಿಕೆ ಮತ್ತು ಅದರ ರಸವತ್ತತೆ ಸವಿಯುವಲ್ಲಿ ಶಿಕ್ಷಕರ ಜಾಣ್ಮೆ ಅಡಗಿದೆ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಬಾಡಗಂಡಿ, ಶಿಕ್ಷಕನ ಕಾರ್ಯದಕ್ಷತೆ ಬೋಧನಾಕ್ರಮವನ್ನು ಅವಲಂಬಿಸಿದೆ ಎಂದರು.ಡಾ.ಜಾಜಿ ದೇವೇಂದ್ರಪ್ಪ, ಅಮೀನಗಡ ಅವರು ಪಂಪಭಾರತದಲ್ಲಿ ಪರಿಸರ ವರ್ಣನೆ ಮತ್ತು ರನ್ನನ ಗದಾಯುದ್ಧದ ಪ್ರಸಂಗಗಳ ಕುರಿತು ಉಪನ್ಯಾಸ ನೀಡಿದರು.ಶಿಕ್ಷಕ, ಸಾಹಿತಿ ದೊಡ್ಡಣ್ಣ ಗದ್ದನಕೇರಿ ಸಂಪಾದಕತ್ವದ ‘ಮುಳುಗಿ ಹೋಗುವ ಮುನ್ನ’ ಮುಳುಗಡೆ ನಾಡಿನ ಸಂಪ್ರದಾಯ ಪದಗಳ ಸಂಕಲನವನ್ನು ಸಿದ್ದರಾಮ ಮನಹಳ್ಳಿ ಹಾಗೂ ಮಲ್ಲಿಕಾ ಘಂಟಿ ಬಿಡುಗಡೆಗೊಳಿಸಿದರು.ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಮಹಾಮಂಡಳದ ಉಪಾಧ್ಯಕ್ಷ ವಿ.ಎಸ್.ಕುಂಬಾರ, ಕಂಠಿ ಕಾಲೇಜಿನ ಪ್ರಾಚಾರ್ಯ ಎಚ್.ಎಸ್.ಪೂಜಾರ, ಕೆ.ವೈ.ಬಲಕುಂದಿ, ಡಾ.ಜಾಜಿ ದೇವೇಂದ್ರಪ್ಪ, ಬಿ.ಪಿ.ಹಿರೇಸೋಮಣ್ಣವರ ಮತ್ತಿತರರು ಉಪಸ್ಥಿತರಿದ್ದರು.ಸಂಜೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಡಾ.ಸಂಗಮೇಶ ಕಲ್ಯಾಣಿ, ಬಿ.ಪಿ.ಹಿರೇಸೋಮಣ್ಣವರ, ಎಂ.ಎಸ್.ಸೊನ್ನದ, ಎಂ.ವಿ.ಫಕ್ಕೀರಣ್ಣವರ, ಎಸ್.ಬಿ.ಕೊಪ್ಪದ ಭಾಗವಹಿಸಿದ್ದರು.ರವಿ ಉಪ್ಪಾರ ಮತ್ತು ಶಿವು ನ್ಯಾಮಗೌಡ ನಾಡಗೀತೆ ಹಾಡಿದರು. ಮಹಾಮಂಡಳದ ಅಧ್ಯಕ್ಷ ಕೆ.ಎಸ್.ತೆಗ್ಗಿ ಸ್ವಾಗತಿಸಿದರು. ಶಿಕ್ಷಕ ಹಂಚಿನಾಳ ನಿರೂಪಿಸಿದರು. ಶಿಬಿರ ಸಂಯೋಜಕ ದೊಡ್ಡಣ್ಣ ಗದ್ದನಕೇರಿ ವಂದಿಸಿದರು. ಜಿಲ್ಲೆಯ ಇನ್ನೂರಕ್ಕೂ ಅಧಿಕ ಶಿಕ್ಷಕ/ಶಿಕ್ಷಕಿಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry