ಶನಿವಾರ, ಜೂನ್ 12, 2021
23 °C

ಬೋನಿಗೆ ಬಿದ್ದ ಗಂಡು ಚಿರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ತಾಲ್ಲೂಕಿನ ಕರಿಮಾರನಹಳ್ಳಿ ಗ್ರಾಮದ ತೋಟದ ಮನೆಗೆ ಬೇಟೆ ಅರಸಿ ಶುಕ್ರವಾರ ರಾತ್ರಿ ಬಂದಿದ್ದ ಚಿರತೆಯೊಂದು ಕೊಟ್ಟಿಗೆಯಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.ಈ ಚಿರತೆ 10 ದಿನಗಳಿಂದ ಗ್ರಾಮದ ಬೋಜೇಗೌಡ ಎಂಬುವವರಿಗೆ ಸೇರಿದ ಮೂರು ಕುರಿ, ಒಂದು ಸೀಮೆ ಹಸುವಿನ ಕರುವನ್ನು ತಿಂದು ಹಾಕಿದೆ. ಈ ಹಿನ್ನೆಲೆಯಲ್ಲಿ ಬೋನು ಇರಿಸಲಾಗಿತ್ತು.ಬೋಜೇಗೌಡರ ಮನೆಯ ಪಕ್ಕದ ಕೊಟ್ಟಿಗೆಗೆ ಕಳೆದ ವಾರ ನುಗ್ಗಿದ್ದ ಚಿರತೆ ಕರುವನ್ನು ಎಳೆದೊಯ್ದಿತ್ತು. ಆ ನಂತರ ದಿನ ಬಿಟ್ಟು ದಿನ ರಾತ್ರಿ ಕೊಟ್ಟಿಗೆಗೆ ದಾಳಿ ಮಾಡುತ್ತಿದ್ದ ಚಿರತೆ ಮೂರು ಕುರಿಗಳನ್ನು ಕೊಂದಿತ್ತು. ಆದರೆ ಕುರಿಗಳನ್ನು ಕಿರುಬ ತಿಂದು ಹಾಕುತ್ತಿದೆ ಎಂದು ಬೋಜೇಗೌಡರು ಭಾವಿಸಿದ್ದರು. ಪ್ರಾಣಿ ಯಾವುದು ಎಂದು ಕಂಡುಹಿಡಿಯಲು ಗುರುವಾರ ರಾತ್ರಿ ಮನೆಯ ಮುಂದೆ ಕಾರು ನಿಲ್ಲಿಸಿ, ಅದರೊಳಗೆ ಅವಿತು ಕುಳಿತರು.ರಾತ್ರಿ  ಬಂದ ಚಿರತೆ ಕುರಿ ಎತ್ತಿಕೊಂಡು ಹೋಗುವುದನ್ನು ಕಣ್ಣಾರೆ ಕಂಡರು. ಮರುದಿನ ಬೋಜೇಗೌಡ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಬಾಗೂರು ಹೋಬಳಿ ಆದಿಹಳ್ಳಿ ಗ್ರಾಮದಲ್ಲಿದ್ದ ಬೋನು ತಂದು ಇವರ ಕೊಟ್ಟಿಗೆಯಲ್ಲಿ ಇರಿಸಲಾಯಿತು. ಬೋನಿನೊಳಗೆ ಎರಡು ಕುರಿಗಳನ್ನು ಕಟ್ಟಿ ಹಾಕಲಾಯಿತು. ಶುಕ್ರವಾರ ರಾತ್ರಿ ಅದನ್ನು ತಿನ್ನಲು ಬೋನಿಗೆ ನುಗ್ಗಿದ ಚಿರತೆ ಸೆರೆಯಾಯಿತು.ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆ ಇದ್ದ ಬೋನನ್ನು ವಾಹನದಲ್ಲಿ ತೆಗೆದುಕೊಂಡು ಸಕಲೇಶಪುರದ ಬಳಿ ಇರುವ ಕಬ್ಬಿನಾಲೆ ಅರಣ್ಯ ಪ್ರದೇಶಕ್ಕೆ ಬಿಟ್ಟರು. ಮೂರು ವರ್ಷದ ಗಂಡು ಚಿರತೆ ಇದಾಗಿದೆ ಎಂದು ಅರಣ್ಯಾಧಿಕಾರಿ ದಯಾನಂದ  ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.