ಬುಧವಾರ, ಜೂನ್ 16, 2021
23 °C

ಬೋರ್ಡ್ ರೂಮಿನ ಸುತ್ತಮುತ್ತ: ಮಾತು- ಜ್ವಾಲೆ ಇದ್ದಂತೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚರ್ಚೆಯಾ ವೇಳೆಯೊಳು ಎಲ್ಲರೂ ನುಡಿದಿರಲು/

ಚರ್ಚೆಯಾ ವಿಷಯವದು ಹಾದಿ ತಪ್ಪುವುದು//

ಅರ್ಚಿಯನು ಹರಡದೆಯೆ ಬಳಸಬಲ್ಲಾತಂಗೆ/

ವರ್ಚಸ್ಸು ಬೆಳೆಯುವುದು-ನವ್ಯಜೀವಿ//

ಹಿಂದಿನ ಅಂಕಣದಲ್ಲಿ ಓದಿದಂತೆ ನಮ್ಮ ಮಾತಿನಲ್ಲಿ `ಪ್ರಾಸ~, ಅಂದರೆ ಪ್ರಾಮಾಣಿಕತೆ ಹಾಗೂ ಸರಳತೆ ಮೈಗೂಡಿಸಿಕೊಂಡಲ್ಲಿ, ಬೋರ್ಡ್‌ರೂಮಿನ ಸುತ್ತಮುತ್ತಲಿನ ನಮ್ಮ ಮಾತುಕತೆಗೆ ಸಹಪಾಠಿಗಳಿಂದ ಮನ್ನಣೆ ದೊರೆಯುವುದರಲ್ಲಿ ಸಂಶಯವೇ ಇಲ್ಲ. ಆಸಕ್ತಿದಾಯಕ ವಿಷಯ ಏನೆಂದರೆ, ಇವೆರಡೂ ಅಸ್ತ್ರಗಳನ್ನು ನಾವೆಂದೂ ಹೊರಗೆಲ್ಲೋ ಹುಡುಕಿ ನಮ್ಮದಾಗಿಸಿಕೊಳ್ಳಲು ದುಬಾರಿ ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕಿಲ್ಲ. ಇವೆರಡೂ ಸ್ವಾಭಾವಿಕವಾಗಿ ನಮ್ಮಳಗೇ ಇವೆ. ಅದನ್ನು ಗುರುತಿಸಿ ಮಾತಾಗಿಸುವುದಷ್ಟೇ ನಮ್ಮ ಕೆಲಸ.ನಾನು ಹಿಂದೆ ಐಬಿಎಂ ಕಂಪನಿಯಲ್ಲಿ ಕೆಲಸದಲ್ಲಿದ್ದಾಗ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥನೊಬ್ಬನಿದ್ದ. ಆತನ ಮಾತನ್ನು ಕೇಳುವುದೇ ಒಂದು ಅನುಭವ. ಆಂಗ್ಲ ಭಾಷೆಯ ಮೇಲಿನ ಅವನ ಹಿಡಿತ ಯಾರೂ ಮೆಚ್ಚುವಂತಹುದು. ಆಕ್ಸ್‌ಫರ್ಡ್ ನಿಘಂಟುವನ್ನು ಸಂಪೂರ್ಣ ಅರೆದು ಕುಡಿದವನಂತೆ ಅವನ ಪದಪ್ರಯೋಗ.ಒಮ್ಮೆ ನನ್ನ ಸಮ್ಮುಖದಲ್ಲೇ ತನ್ನ ವಿಭಾಗದ ಕಿರಿಯನೊಬ್ಬನಿಗೆ `ಯೂ ಮಸ್ಟ್ ಎಮಿಲಿಯೊರೇಟ್~ ಎಂದು ಸಲಹೆ ನೀಡಿದ್ದ. ನನಗದು ಅರ್ಥವಾಗಿರಲಿಲ್ಲ. ನಂತರ ಆ ಕಿರಿಯ ಸಹೋದ್ಯೋಗಿಯನ್ನು ವಿಚಾರಿಸಿದಾಗ ಅವನೂ ತನಗೇನೂ ಅರ್ಥವಾಗಲಿಲ್ಲವೆಂದೇ ತಲೆಯಲ್ಲಾಡಿಸಿದ. `ಹಾಗಾದರೆ ಆತನನ್ನು ಅದರರ್ಥ ಕೇಳಿ ಹೇಗೆ ತಾನೆ ಪಾಲಿಸುತ್ತೀಯೆ?~ ಎಂದು ಪ್ರಶ್ನಿಸಿದೆ. ಅದಕ್ಕೆ ಅವನು, `ಅವರನ್ನು ಅರ್ಥ ಕೇಳದೇ ಇರುವುದೇ ಮೇಲು. ಹಾಗೊಮ್ಮೆ ಕೇಳಿದರೆ ಅವರು ಕೊಡುವ ಉತ್ತರಕ್ಕೆ ಮತ್ತೆ ಅರ್ಥ ಕೇಳಬೇಕಾದೀತು. ದಿನವೆಲ್ಲ ಇದರದೇ ಕೆಲಸದಲ್ಲಿ ವಿಭಾಗದ ಮತ್ತಿನ್ಯಾವ ಕೆಲಸವನ್ನೂ ಮಾಡುವ ಹಾಗಿಲ್ಲ~ ಎನ್ನುತ್ತ ನಕ್ಕುಬಿಟ್ಟಿದ್ದ.ಆದರೆ, ನನಗೆ ಏನೋ ಕುತೂಹಲ. ಆತ ಬಳಸಿದ ಪದವನ್ನೇ ಮನನ ಮಾಡುತ್ತ ನನ್ನ ಡೆಸ್ಕಿಗೆ ಬಂದು ನಿಘಂಟುವಿನ ಮೊರೆ ಹೋಗಿದ್ದೆ. ಎಮಿಲಿಯೊರೇಟ್ ಅಂದರೆ `ಇಂಪ್ರೂ~ ಎಂದರ್ಥ. ಅಂದರೆ ಉತ್ತಮಗೊಳ್ಳು ಎಂದು. ಆತ ತನ್ನ ಸಹಪಾಠಿಗೆ ತನ್ನ ಕೆಲಸದಲ್ಲಿ ಇನ್ನೂ ಉತ್ತಮಗೊಳ್ಳುವಂತೆ ಸಲಹೆ ನೀಡಿದ್ದನೇ ಹೊರತು ಮತ್ತೇನನ್ನೂ ಅಲ್ಲ. ಆದರೆ, ಆ ಕಿರಿಯನಿಗೆ ಅದರ ಅರ್ಥವಾಗಿರಲಿಲ್ಲ. ಪ್ರಾಯಶಃ ಅದರ ಅರ್ಥವನ್ನು ಪತ್ತೆಹಚ್ಚುವ ಕುತೂಹಲವೂ ಇಲ್ಲವಾದ್ದರಿಂದ ತಾನು ಉತ್ತಮಗೊಳ್ಳಬೇಕೆಂಬ ವಿಚಾರದಲ್ಲಿ ಮುಂದೆ ಸಾಗುವ ಪ್ರಯತ್ನವನ್ನೂ ಆತ ಮಾಡದೆಯೇ ಇದ್ದಿರಬಹುದು!ಬರೆಯುವಾಗಲೂ ನಿಮ್ಮ ಭಾಷಾ ವಿದ್ವತ್ತನ್ನು ತೀವ್ರವಾಗಿ ಪ್ರದರ್ಶಿಸಿದರೆ, ಓದುಗನು ತನ್ನಿಚ್ಛೆ ಇದ್ದಲ್ಲಿ ನಿಘಂಟುವೊಂದನ್ನು ಪಕ್ಕದಲ್ಲಿ ಇಟ್ಟುಕೊಂಡೇ ಓದಿ ನಿಮ್ಮ ಬರವಣಿಗೆಗೆ ಸಲ್ಲಬೇಕಾದ ಗೌರವವನ್ನೂ ಸಲ್ಲಿಸಬಹುದು. ಆದರೆ, ಮಾತನಾಡುವಾಗ ಭಾಷೆ ಆದಷ್ಟೂ ಸರಳವಾಗಿರಬೇಕು. ಕೇಳುಗರು ಹಲವರಿದ್ದಾಗಲಂತೂ ಒಬ್ಬೊಬ್ಬರ ಭಾಷಾ ಜ್ಞಾನದ ಮಟ್ಟವನ್ನೂ ಅರಿತು ಮಾತನಾಡುವುದು ಆಗದ ಕೆಲಸವಾದ್ದರಿಂದ, ಸರಳವಾಗಿಯೇ ಮಾತನಾಡಿಬಿಟ್ಟರೆ ಎಲ್ಲರಿಗೂ ಅರ್ಥವಾಗುವುದರಲ್ಲಿ ಸಂದೇಹವೇ ಇಲ್ಲ. ನಮ್ಮ ಮಾತು ಮತ್ತೊಬ್ಬರಿಗೆ ಅರ್ಥವಾಗದೇ ಇದ್ದಾಗ, ನಮ್ಮ ಮಾತಿಗೆ ಯಾವುದೇ ಅರ್ಥವಿಲ್ಲವೆಂಬ ಸಾಮಾನ್ಯ ಜ್ಞಾನ ನಮಗೆ ಮೊದಲಿನಿಂದಲೂ ಇದ್ದುಬಿಟ್ಟರೆ ಕ್ಷೇಮ.ಇನ್ನು ಪ್ರಾಮಾಣಿಕತೆಯ ವಿಚಾರ. ಕಂಪನಿಯೊಂದರ ಸ್ತರದಲ್ಲಿ ಇದು ಅಗತ್ಯವೇ ಎಂದು ಹಲವರು ನನ್ನನ್ನು ಕೇಳಿದ್ದಾರೆ. ಅಲ್ಲಿ ಒಬ್ಬ, ಮತ್ತೊಬ್ಬನನ್ನು ತಿಂದುಹಾಕಲೆಂದೇ ಹೊಂಚು ಹಾಕಿರುತ್ತಾರೆ. ಹೇಗೆ ಒಬ್ಬನನ್ನು ಕೆಳಕ್ಕೆ ದೂಡಿ ಅವನ ಜಾಗದಲ್ಲಿ ತಾನು ಮೇಲೇರಬಹುದೆಂದು ಕಾತರರಾಗಿರುತ್ತಾರೆ. ಈ ಸನ್ನಿವೇಶದಲ್ಲಿ ಪ್ರಾಮಾಣಿಕ ಮಾತುಗಳಿಗೆ ಬೆಲೆಯುಂಟೆ ಎಂಬ ಪ್ರಶ್ನೆ ಸೂಕ್ತವಲ್ಲದಿದ್ದರೂ ಸಮಂಜಸವಾಗಿರುವುದರಲ್ಲಿ ಸಂಶಯವಿಲ್ಲ.ಪ್ರಾಮಾಣಿಕತೆ ಎಂಬ ಪದಕ್ಕೆ ಅರ್ಥವೊಂದನ್ನು ಕಂಪನಿಯ ಕೆಲಸಕ್ಕೆ ಒಪ್ಪುವ ರೀತಿಯಲ್ಲಿ ನಾವು ಕಲ್ಪಿಸಿಕೊಂಡಾಗ ನಮಗೆ ಈ ಗೊಂದಲ ಇರುವುದಿಲ್ಲ. ಪ್ರಾಮಾಣಿಕ ಮಾತು ಅಂದರೆ ಇರುವುದನ್ನು ಇದ್ದಂತೆಯೇ ಹೇಳುವುದು ಎಂಬುದು ಒಂದರ್ಥ. ನಮಗೆ ಸರಿ ತೋಚಿದ್ದನ್ನು ಹೇಳಿಬಿಟ್ಟರೆ ಅದು ಅಷ್ಟರಮಟ್ಟಿಗೆ ಪ್ರಾಮಾಣಿಕ ಮಾತಾಗುತ್ತದೆ. ಆದರೆ, ನಮಗೆ ಸರಿತೋಚಿದ್ದು ವಾಸ್ತವದಲ್ಲಿ ಸತ್ಯವಾಗಿರಬೇಕೆಂದೇನೂ ಇಲ್ಲವಲ್ಲ. ಇಲ್ಲೇ ನಾವು ಎಚ್ಚರ ವಹಿಸಬೇಕು.ನಮ್ಮ ಮಾತು ಇನ್ನೊಬ್ಬನ ಚಿಂತನೆ ಆಗದಿರಬಹುದು ಅಥವಾ ಸಮ್ಮತವಿರದಿರಬಹುದು. ಅದರಲ್ಲೂ ನಮ್ಮ ಮೇಲಧಿಕಾರಿಗೆ ಹಿಡಿಸದೆಯೆ ಇರಬಹುದು ಕೂಡ. ಕಂಪನಿಯಲ್ಲಿ ಮೇಲಧಿಕಾರಿಯನ್ನು ಎದುರು ಹಾಕಿಕೊಂಡು ಯಾರೂ ಮೇಲೆ ಬಂದಿಲ್ಲ. ಇದು ಸರ್ಕಾರಿ  ನೌಕರಿಯ, ಖಾಸಗಿ  ನೌಕರಿಯ, ಐ.ಬಿ. ಕಂಪನಿಗಳ ಒಟ್ಟಾರೆ ಎಲ್ಲ ನೌಕರಿಗಳ ವಿಶೇಷತೆ. ಈ ಎರಡು ವಿಷಯಗಳನ್ನು ಮೊದಲು ಅರ್ಥ ಮಾಡಿಕೊಂಡರೆ ನಮಗಿರುವ ಗೊಂದಲದಿಂದ ಹೊರಬರುವುದು ಸುಲಭ.ಹಾಗಾದರೆ ನಮ್ಮ ಅನಿಸಿಕೆಗಳನ್ನು ಹೇಳದೆಯೆ ಮೇಲಧಿಕಾರಿಯನ್ನು ಸಂತುಷ್ಟಗೊಳಿಸುವುದೇ ಪ್ರಾಮಾಣಿಕ ಮಾತು ಎಂದೂ ನಾನು ಹೇಳುತ್ತಿಲ್ಲ. ಅಥವಾ ಹೇಳಬೇಕೆಂದೆನ್ನುವ ಎಲ್ಲವನ್ನೂ ಮತ್ತೊಬ್ಬನ ಮೇಲೆ ಎರಚಿಬಿಡುವಂತೆ ಮಾತನಾಡುವುದೇ ಪ್ರಾಮಾಣಿಕ ಮಾತೆಂದು ಕೂಡ ನಾನು ಅನುಮೋದನೆ ಮಾಡುತ್ತಿಲ್ಲ.

ನನ್ನ ಚಿಂತನೆಯಲ್ಲಿ ಪ್ರಾಮಾಣಿಕ ಮಾತೆಂದರೆ ನಮ್ಮ ಅನಿಸಿಕೆಗಳನ್ನು, ನಮ್ಮ ಸಲಹೆಗಳನ್ನು ನಮ್ಮ ಪರಿಹಾರಗಳನ್ನು ಒಗಟಾಗಿಸದೆ, ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಮುಚ್ಚುಮರೆ ಇಲ್ಲದೆ ತಿಳಿಸುವುದೇ ಆಗಿದೆ. ಹಾಗೆ ತಿಳಿಸುವಾಗ ಮತ್ತಿತರರ ಅನಿಸಿಕೆಗಳನ್ನು ತುಚ್ಛವಾಗಿ ಪ್ರತಿಬಿಂಬಿಸುವ ಮಾತುಗಳಿಗೆ ಅಲ್ಲಿ ಎಡೆಕೊಡಬಾರದಷ್ಟೆ.ಹೀಗೆ ನಮ್ಮ ವಿಚಾರಗಳನ್ನು ತಿಳಿಸಿದ ನಂತರ ಅವುಗಳೇ ಸರಿಯೆಂದು ಕಡೆಯವರೆಗೂ ಜಿದ್ದಿಗೆ ಬಿದ್ದವರಂತೆ ವಾದಕ್ಕಿಳಿಯುವುದು ಇದೆಯಲ್ಲ, ಅದು ನನ್ನ ಪ್ರಾಮಾಣಿಕ ಮಾತಿನ ಚೌಕಟ್ಟಿನಿಂದ ಹೊರಗುಳಿಯುತ್ತದೆ, ಅಷ್ಟೆ. ನಮ್ಮ ವಿಚಾರವನ್ನು ಮಂಡಿಸಿದ ನಂತರ ಮತ್ತೊಬ್ಬರ ವಿಚಾರವನ್ನು ಸೂಕ್ಷ್ಮವಾಗಿ ಗ್ರಹಿಸುವುದೇ ಪ್ರಾಮಾಣಿಕ ಮಾತಿನ ಬುನಾದಿ.

 

ನಾಯಕನಾದವನಿಗಂತೂ ಈ ಗುಣವಿದ್ದರೆ, ಅಂತವನ ಕಂಪನಿ ಸರಾಗವಾಗಿ ಮೇಲೇರುವುದರ ಜೊತೆಯಲ್ಲೇ ಆತನ ಕಂಪನಿಯ ಎಲ್ಲರೂ ನಗುಮೊಗದಿಂದ ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡುವವರೂ ಆಗಿರುತ್ತಾರೆ.ಸರಳತೆ ಹಾಗೂ ಪ್ರಾಮಾಣಿಕತೆ ಎಂಬುದು ಮಾತಿನಲ್ಲಿ ಇದ್ದರೆ ಏನು ಪ್ರಯೋಜನ ಎಂದು ಅರಿಯಬೇಕಾದರೆ, ನೀವೆಲ್ಲ ನಿಮ್ಮ ನಿಮ್ಮ ಕಂಪನಿಗಳಲ್ಲಿ ನಡೆಯುವ ಅಸಂಖ್ಯಾತ ಮೀಟಿಂಗುಗಳನ್ನು ಒಮ್ಮೆ ನೆನಪಿಗೆ ತಂದುಕೊಳ್ಳಿ.ಆ ಮೀಟಿಂಗಿನಲ್ಲಿ ಒಬ್ಬ ತನ್ನ ವಿಚಾರವೇ ಸರ್ವಸಮ್ಮತವೆನ್ನುವ ಗುಂಗಿನಲ್ಲಿ ದೊಡ್ಡ ದೊಡ್ಡ ಮಾತುಗಳನ್ನೇ ಆಡಿರುತ್ತಾನೆ. ಇನ್ನಾವುದೋ ವಿಷಯದ ಚರ್ಚೆ ನಡೆದಿರುತ್ತದೆ.ನಾಲ್ಕಾರು ತಾಸುಗಳ ನಂತರ ತಾವೆಲ್ಲ ಅಲ್ಲಿ ಬಂದದ್ದೇಕೆಂಬ ಉದ್ದೇಶವೇ ಮರೆತು ಇನ್ನಾವುದೋ  ವಿಷಯಕ್ಕೆ ಪರಿಹಾರ ಕಂಡುಕೊಂಡ ಅಲ್ಪ ತೃಪ್ತಿಯಲ್ಲಿ ಎಲ್ಲರೂ ಕಾಫಿ ಹೀರಿ ತಮ್ಮ ತಮ್ಮ ರೂಮುಗಳಿಗೆ ಅಥವಾ ಇನ್ನಾವುದೋ ಮತ್ತೊಂದು ಮೀಟಿಂಗಿಗೆಂದು ದೌಡಾಯಿಸಿರುತ್ತಾರೆ.ಇವರೆಲ್ಲರಲ್ಲೂ ಪ್ರಾಮಾಣಿಕ ಹಾಗೂ ಸರಳ ಮಾತುಗಳೇ ಇದ್ದಿದ್ದರೆ, ಯಾವುದೇ ಮೀಟಿಂಗ್  ಕೂಡ, ಅದೆಷ್ಟೇ ಮುಖ್ಯವಾಗಿರಲಿ ಒಂದು ತಾಸಿನ ಮೇಲೆ ನಡೆಯುವ ಪ್ರಮೇಯವೇ ಇರುವುದಿಲ್ಲ. ಹಿಡಿದ    ವಿಷಯವನ್ನು ಪಾರ್ಕಿನಲ್ಲಿ ಒಂಟಿಯಾಗಿ ಪಕ್ಕದಲ್ಲಿ ಕುಳಿತ ನಲ್ಲೆಯ ಹಾಗೆ ಸಮಯ ಹಾಳು ಮಾಡದೆ ಪರಾಮರ್ಶಿಸುತ್ತೇವೆ. ಎಲ್ಲರೂ ಒಪ್ಪುವ ಪರಿಹಾರವೊಂದನ್ನು ಅದಕ್ಕೆ ಹುಡುಕಿ, ಅದರ ಅನುಷ್ಠಾನದಲ್ಲಿ ಯಾರ‌್ಯಾರ ಪಾತ್ರ ಏನೆಂಬುದನ್ನು ದಾಖಲಿಸಿ ಅದಕ್ಕಾಗಿ ಎಲ್ಲರ ಸಮ್ಮತಿ  ಪಡೆಯುತ್ತೇವೆ.ಇಂತಹ ವಾತಾವರಣವಿದ್ದಾಗ ಅಲ್ಲಿ ಯಾರೊಬ್ಬನದೂ ಸೋಲು-ಗೆಲುವುಗಳೆಂಬುದು ಇರುವುದಿಲ್ಲ. ಯಾರೊಬ್ಬನಿಗೂ ನೋವಾಗುವ ಸನ್ನಿವೇಶವೂ ಏರ್ಪಡುವುದಿಲ್ಲ. ಚರ್ಚೆಗೆ ಒಳಪಟ್ಟ ವಿಷಯ ಕೂಲಂಕಷವಾಗಿ ಚರ್ಚೆಯಾಗುವುದೇ ವಿನಃ ಅದರ ಕಗ್ಗೊಲೆಯಾಗುವ ಪರಿಸ್ಥಿತಿಯೇ ಉದ್ಭವವಾಗುವುದಿಲ್ಲ.ಅರ್ಚಿ ಅಂದರೆ ಜ್ವಾಲೆ. ಹರಡುವುದೇ ಅದರ ಸ್ವಭಾವ. ನಾವದಕ್ಕೆ ಅಗತ್ಯಕ್ಕಿಂತ ವಿಪರೀತ ಎಣ್ಣೆ ಸುರಿದು ಬೇಕಾಬಿಟ್ಟಿ ಗಾಳಿ ಊದಿದರೆ ಅದು ಎಲ್ಲೆಡೆಯೂ ಹರಡಿ, ತನಗೆ ಎದುರಾಗುವ ಎಲ್ಲವನ್ನೂ ಧ್ವಂಸ ಮಾಡುವುದೇ ಸತ್ಯ. ಆದರೆ, ಯಾರು ಅದನ್ನು ಹರಡದೆಯೆ ನಿಯಂತ್ರಿಸಬಲ್ಲರೋ, ಅದೇ ಅರ್ಚಿಯಿಂದ ಆತ ತನಗೆ ಬೇಕೆನಿಸುವ ಆಹಾರವನ್ನು ಹದವಾಗಿ ಬೇಯಿಸಿ ಉಂಡು ತೃಪ್ತನಾಗಬಲ್ಲ ಕೂಡ.ನಮ್ಮ ಮಾತು ಇದೇ ರೀತಿಯಲ್ಲಿ ಅರ್ಚಿ ಇದ್ದ ಹಾಗೆ. ನಾವದನ್ನು ಅದೆಷ್ಟು ಪ್ರಾಮಾಣಿಕ ಹಾಗೂ ಸರಳವಾಗಿಡಬಲ್ಲೆವೋ, ನಮಗಷ್ಟು ವರ್ಚಸ್ಸು ಖಂಡಿತ... 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.