ಭಾನುವಾರ, ಮೇ 16, 2021
26 °C

ಬೋರ್ ಹಾಕಿಸ್ತಾರ ಮರ‌್ತ ಬಿಡ್ತಾರ...

ಆನಂದತೀರ್ಥ ಪ್ಯಾಟಿ, ಗುಲ್ಬರ್ಗ Updated:

ಅಕ್ಷರ ಗಾತ್ರ : | |

ಬರೀ ಬೇಸಿಗೆಯಂತೇನೂ ಇಲ್ಲ; ಹೈದರಾಬಾದ್ ಕರ್ನಾಟಕ ಪ್ರದೇಶವು ವರ್ಷವಿಡೀ ಕುಡಿಯುವ ನೀರಿನ ಬವಣೆ ಅನುಭವಿಸುತ್ತದೆ. ಮಳೆಗಾಲದಲ್ಲೂ ಕಿಲೋ ಮೀಟರ್‌ಗಟ್ಟಲೇ ದೂರದಿಂದ ನೀರು ತರುವ ಸ್ಥಿತಿ ಇರುವಾಗ ಬೇಸಿಗೆಯ ಸಮಸ್ಯೆ ಬಣ್ಣಿಸಲು ಅಸಾಧ್ಯ.ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಸರ್ಕಾರದ ಚಿತ್ತ ನೀರಿನತ್ತ ಹರಿಯುತ್ತಿರುವುದು ಆಶಾದಾಯಕ ಎನ್ನಬಹುದು. ಇದರಿಂದಾಗಿಯೇ, ಡಿಸೆಂಬರ್ ತಿಂಗಳಲ್ಲಿ ಆಯಾ ಜಿಲ್ಲಾಡಳಿತಗಳು ಸಲ್ಲಿಸುವ ಕ್ರಿಯಾಯೋಜನೆಗೆ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡುತ್ತಿದೆ.ಮಳೆಕೊರತೆಯಿಂದ ಅಂತರ್ಜಲ ಮಟ್ಟ ಕುಸಿತಗೊಂಡು, ಕೊಳವೆಬಾವಿ ಒಣಗಿರುವುದು ಗ್ರಾಮಾಂತರ ಪ್ರದೇಶದಲ್ಲಿ ನೀರಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಹಾಹಾಕಾರ ಉಂಟಾದ ಒಂದೆರಡು ಹಳ್ಳಿಗಳಲ್ಲಿ ಕಳೆದ ವರ್ಷ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದ ಗುಲ್ಬರ್ಗ ಜಿಲ್ಲೆಯಲ್ಲಿ ಈ ಸಲ ಅಷ್ಟೊಂದು ಸಮಸ್ಯೆ ತೀವ್ರ ಸ್ವರೂಪ ಪಡೆದಿಲ್ಲ. ಏಳು ತಾಲ್ಲೂಕುಗಳ 235 ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆಯನ್ನು ಗಮನಿಸಿ, ಅಲ್ಲಿ ಕೊಳವೆಬಾವಿ ಕೊರೆಯುವ ಕೆಲಸ ನಡೆಯುತ್ತಿದೆ.ಬರಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ನಿವಾರಣೆಗಾಗಿ ಪಂಚಾಯಿತಿ ರಾಜ್ ಇಲಾಖೆಯು 2011-12ನೇ ಸಾಲಿನಲ್ಲಿ ಗುಲ್ಬರ್ಗ ಜಿಲ್ಲಾ ಪಂಚಾಯಿತಿಗೆ ರೂ. 1.36 ಕೋಟಿ ಬಿಡುಗಡೆ ಮಾಡಿದೆ. ಈ ಅನುದಾನದಿಂದ ಜಿಲ್ಲೆಯಾದ್ಯಂತ 266 ಹೊಸ ಕೊಳವೆಬಾವಿ ಕೊರೆಯುವ ಕಾರ್ಯ ಕೈಗೆತ್ತಿಕೊಂಡಿದ್ದು, ಈಗಾಗಲೇ 230 ಹೊಸ ಕೊಳವೆಬಾವಿ ಕೊರೆಯಲಾಗಿದೆ. ಇದಲ್ಲದೇ ಗ್ರಾಮೀಣ ಪಂಚಾಯತ್ ರಾಜ್ ಇಲಾಖೆಯು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ರೂ. 2.50 ಕೋಟಿ ಬಿಡುಗಡೆ ಮಾಡಿದೆ.ಇಷ್ಟೆಲ್ಲ ಇದ್ದರೂ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಸಮಸ್ಯೆಯಿಂದ ಬಳಲುತ್ತಿರುವುದು ಔರಾದ್ ಹಾಗೂ ಬಸವಕಲ್ಯಾಣ ತಾಲ್ಲೂಕುಗಳ ಗ್ರಾಮಗಳು. ಹಾಗೆ ನೋಡಿದರೆ, ಇಲ್ಲಿ ಸಾಕಷ್ಟು ನೀರು ಲಭ್ಯವಿದೆ; ಆದರೆ ನಿರ್ವಹಣೆಯ ಕೊರತೆಯಿಂದಲೇ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂಬುದು ಜನರ ದೂರು. `ಕೊಳವೆಬಾವಿ ಇದ್ದರೆ ಕರೆಂಟ್ ಇಲ್ಲ. ಟ್ಯಾಂಕ್ ಕಟ್ಟಲಾಗಿದೆ; ಆದರೆ ಅದಕ್ಕೆ ಪೈಪ್‌ಲೈನ್ ಅಳವಡಿಸಿಲ್ಲ~ ಎಂಬಂಥ ಸ್ಥಿತಿ ಅನೇಕ ಹಳ್ಳಿಗಳಲ್ಲಿ ಕಂಡುಬರುತ್ತದೆ.ತುಂಗಭದ್ರಾ ಎಡದಂಡೆ ಕಾಲುವೆಯ ಸೌಲಭ್ಯ ಪಡೆದ ಕೊಪ್ಪಳ ಹಾಗೂ ಗಂಗಾವತಿ ತಾಲ್ಲೂಕುಗಳ ಅರ್ಧ ಭಾಗದಲ್ಲಿ ನೀರಿನ ಸಮಸ್ಯೆ ಇಲ್ಲ. ಜಿಲ್ಲೆಯ ಉಳಿದೆಡೆ ಕೊರತೆ ಕಂಡುಬಂದರೂ, ಈವರೆಗೆ ಹಾಹಾಕಾರ ಉಂಟಾಗಿಲ್ಲ. ಬೇಸಿಗೆಯಲ್ಲಿ ಎದುರಾಗಬಹುದಾದ ಸಮಸ್ಯೆ ನೀಗಿಸಲು ರೂ. 15.10 ಕೋಟಿ ಮೊತ್ತದ ಕ್ರಿಯಾಯೋಜನೆ ಕಳಿಸಲಾಗಿದೆ.ಗ್ರಾಮಾಂತರ ಭಾಗದಲ್ಲಿ ಕೊಳವೆಬಾವಿಗಳೇ ನೀರಿನ ಪ್ರಮುಖ ಆಸರೆಯಾಗಿದ್ದು, ಇವು ಕೆಟ್ಟುನಿಂತರೆ ಜನರು ಪರದಾಡಬೇಕಾಗುತ್ತದೆ. ಇದನ್ನು ತಪ್ಪಿಸಲು, ಕೊಳವೆಬಾವಿ ದುರಸ್ತಿಗೆ ಬೇಕಾದ ಎಲ್ಲ ಸಾಧನ- ಸಲಕರಣೆ ಹೊಂದಿದ ಸುಸಜ್ಜಿತ ಎರಡು ವಾಹನಗಳು ಶೀಘ್ರವೇ ಕೊಪ್ಪಳಕ್ಕೆ ಬರಲಿವೆ ಎಂದು ಹೇಳಲಾಗಿತ್ತಾದರೂ, ಈವರೆಗೆ ಆ ವಾಹನಗಳು ಬಂದಿಲ್ಲ!ರಾಯಚೂರು ಜಿಲ್ಲೆಯಲ್ಲಿ ಎಡದಂತೆ ಕಾಲುವೆ ವ್ಯಾಪ್ತಿಗೆ ಬರುವ ಕೆರೆ- ಹೊಂಡಗಳಿಗೆ ನೀರು ತುಂಬಿಸುವ ಮೂಲಕ, ಕುಡಿಯುವ ನೀರಿನ ಅಭಾವ ಎದುರಿಸಲು ಸಜ್ಜಾಗುವಂತೆ ಸೂಚಿಸಲಾಗಿತ್ತು. ಆದರೆ ಈವರೆಗೆ ಆ ಕೆಲಸವೇ ಪೂರ್ಣಗೊಂಡಿಲ್ಲ ಎಂಬುದು ಜನಪ್ರತಿನಿಧಿಗಳ ದೂರು.

 

ಕೊಳವೆಬಾವಿ ಕೊರೆಸಲು ಹಾಗೂ ಈಗಾಗಲೇ ನೀರು ಬಾರದೇ ಕೆಟ್ಟುನಿಂತ ಕೊಳವೆಬಾವಿ ದುರಸ್ತಿಗೆ ಒಂದು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಇಷ್ಟೆಲ್ಲ ಕೆಲಸ ನಡೆದರೂ ದೇವದುರ್ಗ, ಲಿಂಗಸುಗೂರು, ಮಾನವಿ ತಾಲ್ಲೂಕುಗಳ ಹಳ್ಳಿಗಳಲ್ಲಿ ನೀರಿನ ಅಭಾವ ಗಂಭೀರವಾಗಿದೆ.ಯಾದಗಿರಿ ಜಿಲ್ಲೆಯಲ್ಲಿ, ಶಹಾಪುರ ಹಾಗೂ ಸುರಪುರದಲ್ಲಿ ಮಾತ್ರ ನೀರಿನ ಬವಣೆ ಕಡಿಮೆಯಿದ್ದರೆ ಗುರುಮಠಕಲ್ ಹಾಗೂ ಯಾದಗಿರಿಯಲ್ಲಿ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. 35 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ನಿರೀಕ್ಷೆಯಿದ್ದು, ತುರ್ತು ಕಾಮಗಾರಿಗೆ 85 ಲಕ್ಷ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.ಲಕ್ಷಾಂತರ ಮೊತ್ತದ ಹತ್ತಾರು ಕಾಮಗಾರಿಗಳ ಮಧ್ಯೆಯೂ ನೀರಿನ ಅಭಾವ ಉಲ್ಬಣಗೊಂಡ ಎಷ್ಟೋ ಹಳ್ಳಿಗಳು ಜಿಲ್ಲಾಡಳಿತದ ಗಮನಕ್ಕೆ ಇನ್ನೂ ಬಂದಿಲ್ಲ. ಟ್ಯಾಂಕ್ ಎದುರು ನೂರಾರು ಬಿಂದಿಗೆ ಇಟ್ಟು ಕಾಯುವುದು, ಸೈಕಲ್ ಮೇಲೆ ಕೊಡ ಹಾಕಿಕೊಂಡು ತರುವುದು ಹಾಗೂ ಕಿಲೋಮೀಟರ್ ದೂರದ ಕೊಳವೆಬಾವಿಯಿಂದ ನೀರು ಹೊತ್ತು ತರುವ ದೃಶ್ಯಗಳು ಕಾಣುತ್ತವೆ.

 

`ಪ್ರಾಬ್ಲಂ ಅದ ಅಂತ ಗೊತ್ತಾದಾಗ ಹಳ್ಯಾಗ ಒಂದ್ ಬೋರ್ ಹಾಕಿಸ್ತಾರ. ಮತ್ ಮರ‌್ತ ಬಿಡ್ತಾರ...~ ಎನ್ನುವ ಗ್ರಾಮಸ್ಥರ ದೂರಿನಲ್ಲಿ, ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸರ್ಕಾರ ಮುಂದಾಗುತ್ತಿಲ್ಲ ಎಂಬ ಅಸಮಾಧಾನ ಎದ್ದು ಕಾಣಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.