ಬೌದ್ಧಿಕ ಹಕ್ಕು ಕಾಯ್ದೆ: ಸಿಹಿ ಕಹಿ

7

ಬೌದ್ಧಿಕ ಹಕ್ಕು ಕಾಯ್ದೆ: ಸಿಹಿ ಕಹಿ

Published:
Updated:
ಬೌದ್ಧಿಕ ಹಕ್ಕು ಕಾಯ್ದೆ: ಸಿಹಿ ಕಹಿ

ಅಂತೂ ಇಂತೂ 2012ರ ಬೌದ್ಧಿಕ ಹಕ್ಕು ಕಾಯ್ದೆ (ತಿದ್ದುಪಡಿ) ಮಸೂದೆಗೆ ರಾಜ್ಯಸಭೆ ಅನುಮೋದನೆ ಸೂಚಿಸಿದೆ. ಈ ಮೂಲಕ ಗೀತರಚನೆಕಾರರು, ಗಾಯಕರು ಹಾಗೂ ಸಂಗೀತ ಸಂಯೋಜಕರಿಗೆ ನ್ಯಾಯಯುತವಾಗಿ ರಾಯಧನ ಸಿಗಲಿದೆ ಎಂಬ ಆಶಾಕಿರಣ ಮೂಡಿದೆ.1957ರಲ್ಲೇ ಇಂಥದ್ದೊಂದು ಕಾಯ್ದೆ ಅಸ್ತಿತ್ವದಲ್ಲಿದ್ದರೂ ಅದು ಕಾಗದದ ಹುಲಿಯಂತಿತ್ತು. ಇದರಿಂದ ಚಿತ್ರರಂಗದಲ್ಲಿ ನಿಜವಾಗಿಯೂ ಬೆವರು ಸುರಿಸಿದವರಿಗೆ ಪ್ರತಿಫಲ ದೊರೆಯುತ್ತಿರಲಿಲ್ಲ. ನಿರ್ಮಾಪಕರಿಗೆ, ಆಡಿಯೊ ಕಂಪೆನಿಗಳಿಗೆ ಆಗುತ್ತಿದ್ದ ಅನುಕೂಲ ಹಾಡು ಬರೆದವರಿಗೆ, ಅದಕ್ಕೆ ದನಿಗೂಡಿಸಿದವರಿಗೆ, ಹೆಜ್ಜೆ ಹಾಕಿದವರಿಗೆ ಆಗುತ್ತಿರಲಿಲ್ಲ. ಜಾವೇದ್ ಅಖ್ತರ್, ಆರ್.ಎನ್.ಜಯಗೋಪಾಲ್‌ರಂಥ ಘಟಾನುಘಟಿಗಳು ಬೌದ್ಧಿಕ ಹಕ್ಕಿನ ಪರವಾಗಿ ಬಹುದಿನಗಳಿಂದ ದನಿ ಎತ್ತಿದ್ದರು.ಕಾಯ್ದೆ ಲೋಕಸಭೆಯಲ್ಲೂ ಅನುಮೋದನೆಗೊಂಡು ರಾಷ್ಟ್ರಪತಿಗಳ ಅಂಕಿತ ಪಡೆದರೆ ಚಿತ್ರರಂಗದ ಬಹುಪಾಲು ಜನರಿಗೆ, ಸೀಮಿತ ಮಾರುಕಟ್ಟೆ ಹೊಂದಿರುವ ಕನ್ನಡದಂಥ ಅನೇಕ ಚಿತ್ರರಂಗಗಳಿಗೆ ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಈ ಮಧ್ಯೆ ಕಾಯ್ದೆ ಜಾರಿಯಾದರೂ ಈಗ ನೀಡುತ್ತಿದ್ದ ಹಣವನ್ನು ಕಡಿತ ಮಾಡಿ `ರಂಗೋಲಿ ಕೆಳಗೆ ತೂರುವ~ ಚಾತುರ್ಯ ನಿರ್ಮಾಪಕರಿಗೆ, ಆಡಿಯೊ ಕಂಪೆನಿಗಳಿಗೆ ಇದೆ ಎಂಬ ಆತಂಕವಿದೆ. ಕಾಯ್ದೆಯ `ಸಿಹಿ ಕಹಿ~ ಕುರಿತು ಚಿತ್ರೋದ್ಯಮದ ಪ್ರತಿನಿಧಿಗಳು, ವಾಹಿನಿಗಳ ಮುಖ್ಯಸ್ಥರು ಆಡಿರುವ ಮಾತುಗಳು ಇಲ್ಲಿವೆ.

ಒಳ್ಳೆಯ ಉತ್ಪನ್ನ ಬರಲಿದೆ...

ಮೊದಲೆಲ್ಲಾ ಹಾಡು ಬರೆದವರಿಗೆ ಸಂಗೀತ ಸಂಯೋಜಕರಿಗೆ `ಅರೆ ಕಾಸಿನ ಮಜ್ಜಿಗೆ~ ಎಂಬಂತೆ ಹಣ ದೊರೆಯುತ್ತಿತ್ತು. ಕಾಯ್ದೆ ಜಾರಿಗೆ ಬಂದರೆ ರೇಡಿಯೋ ಮತ್ತು ಟಿವಿ ವಾಹಿನಿಗಳು ಪ್ರತಿ ಬಾರಿ ಪ್ರಸಾರ ಮಾಡಿದಾಗಲೂ ಬೌದ್ಧಿಕ ಹಕ್ಕು ಹೊಂದಿದವರಿಗೆ ರಾಯಧನ ನೀಡಬೇಕಾಗುತ್ತದೆ. ಇದರಿಂದ ಚಿತ್ರರಂಗದಲ್ಲಿ ದುಡಿಯುತ್ತಿರುವವರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಒಳ್ಳೆಯ ಉತ್ಪನ್ನ ನೀಡಲು ಸಾಧ್ಯವಾಗುತ್ತದೆ

- ಗುರುಕಿರಣ್, ಸಂಗೀತ ನಿರ್ದೇಶಕ

ಒಂದು ಕಣ್ಣಿಗೆ ಸುಣ್ಣ

ಕಾಯ್ದೆ ಜಾರಿಯಾದರೆ ಚಿತ್ರಸಂಗೀತ ಕ್ಷೇತ್ರವನ್ನು ಮತ್ತಷ್ಟು ಹಾಳು ಮಾಡಿದಂತಾಗುತ್ತದೆ. ಮಸೂದೆ ಜಾರಿ ಹಿಂದೆ ಕೆಲವು ಬಹುರಾಷ್ಟ್ರೀಯ ಕಂಪನಿಗಳ ಷಡ್ಯಂತ್ರವಿದೆ.ಕಲಾವಿದರಿಗೆ, ಸಾಹಿತಿಗಳಿಗೆ ನೀಡುತ್ತಿದ್ದ ಹಣದ ಪ್ರಮಾಣವನ್ನು ಕಡಿಮೆ ಮಾಡುವ ಯತ್ನ ಇದು. ಬೇರೆ ಉದ್ಯಮಗಳ ಲಾಭಕೋರತನದ ಬಗ್ಗೆ ತಲೆ ಕೆಡಿಸಿಕೊಳ್ಳದ ಸರ್ಕಾರ ಆಡಿಯೊ ಕಂಪೆನಿಗಳ ಮೇಲೆ ಏಕೆ ಕಣ್ಣಿಟ್ಟಿದೆ ಎಂಬುದು ಅರ್ಥವಾಗುತ್ತಿಲ್ಲ. ಏಕಪಕ್ಷೀಯವಾಗಿ ಮಸೂದೆ ರೂಪಿಸಲಾಗಿದೆ.

- ವೇಲು, ಲಹರಿ ರೆಕಾರ್ಡಿಂಗ್ ಕಂಪೆನಿ ಮುಖ್ಯಸ್ಥಗೊಂದಲ ಬಗೆಹರಿದಿಲ್ಲ

ಮಾಧ್ಯಮ ಸಂಸ್ಥೆಗಳಿಂದ ಹಣ ಬರುತ್ತದೆ ನಿಜ. ಆದರೆ ಆರ್ಕೆಸ್ಟ್ರಾಗಳಲ್ಲಿ, ಡಿಸ್ಕೊಥೆಕ್ ಮುಂತಾದ ಕಡೆಗಳಲ್ಲಿಯೂ ಸಿನಿಮಾ ಹಾಡುಗಳನ್ನು ಹಾಡುತ್ತಾರೆ. ಈ ಬಗ್ಗೆ ಕಾಯ್ದೆ ಏನು ಹೇಳುತ್ತದೆ ಎಂಬುದು ಸ್ಪಷ್ಟವಾಗಬೇಕು.

 

ಡಬ್ಬಿಂಗ್, ರಿಮೇಕ್ ಮಾಡುವವರಿಗೆ ಇದು ಹೇಗೆ ಅನ್ವಯಿಸುತ್ತದೆ ಎಂಬುದು ತಿಳಿಯಬೇಕು. ಇದುವರೆಗೆ ಕೇವಲ ಆಡಿಯೊ ಕಂಪೆನಿಗಳು ಮಾತ್ರ ಬೌದ್ಧಿಕ ಹಕ್ಕಿನ ಬಹುಪಾಲು ಹಣವನ್ನು ಪಡೆಯುತ್ತಿದ್ದವು. ಕಾಯ್ದೆಯಿಂದ ನಿರ್ಮಾಪಕರಿಗೂ ಅನುಕೂಲವಾಗಲಿದೆ. 

- ಮಂಜುಳಾ ಗುರುರಾಜ್, ಗಾಯಕಿ

ಎಚ್ಚರಿಕೆ ಗಂಟೆಕಾಯ್ದೆಯಿಂದ ಕೆಲವರಿಗೆ ತೊಂದರೆ ಆಗಬಹುದು ಆದರೆ ಇದರಿಂದ ಚಿತ್ರೋದ್ಯಮದ ಬಹುಪಾಲು ಜನರಿಗೆ ಅನುಕೂಲವೇ ಆಗಿದೆ. ಬಡ ಕಲಾವಿದರನ್ನು, ಸಾಹಿತಿಗಳನ್ನು ಟಿಶ್ಯೂ ಪೇಪರ್‌ನಂತೆ ಬಳಸಿ ಎಸೆಯುವುದು ತಪ್ಪುತ್ತದೆ.

 

ವ್ಯಾಪಾರಿ ಮನೋಭಾವದವರಿಗೆ ಕಡಿವಾಣ ಹಾಕುವುದರ ಜತೆಗೆ ಆರ್ಕೆಸ್ಟ್ರಾ ಮುಂತಾದ ಕಡೆ ರಾಯಧನ ನೀಡದೆ ಹಾಡಿದವರಿಗೂ ಎಚ್ಚರಿಕೆ ಗಂಟೆಯಾಗಲಿದೆ.

 - ಬಿ.ಸುರೇಶ, ಚಿತ್ರ ಸಾಹಿತಿ, ನಿರ್ದೇಶಕ

ಶೋಷಣೆ ತಪ್ಪಲಿದೆ...ಕಾಯ್ದೆಯು ಪ್ರಸಾರಕರು ಹಾಗೂ ಆಡಿಯೋ ಕಂಪೆನಿಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡಿದೆ. ಪ್ರಸಾರಕರು ತಾವು ಬಳಸುವ ಸಿನಿಮಾ ಉತ್ಪನ್ನಕ್ಕೆ ಇಂತಿಷ್ಟು ಹಣ ಸಂದಾಯ ಮಾಡುವುದಾದರೆ ಅದರಿಂದ ಸಂಗೀತದ ಹಕ್ಕುದಾರರ ಶೋಷಣೆಯನ್ನು ತಪ್ಪಿಸಬಹುದು. ಇದು ಪಾರದರ್ಶಕ ಹಾಗೂ ನ್ಯಾಯುಯತ ಕ್ರಮ.

 - ಗೌತಮ್ ಮಾಚಯ್ಯ, ಝೀಟಿವಿ ವಾಣಿಜ್ಯ ವಿಭಾಗದ ಮುಖ್ಯಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry