ಬುಧವಾರ, ಏಪ್ರಿಲ್ 14, 2021
24 °C

ಬ್ಯಾಂಕಿಂಗ್: ಅವಕಾಶಗಳ ಭರಾಟೆ

ವಿಶಾಲ್ ಶ್ರೀವಾಸ್ತವ Updated:

ಅಕ್ಷರ ಗಾತ್ರ : | |

ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಬ್ಯಾಂಕಿಂಗ್ ಕ್ಷೇತ್ರ ಮಹತ್ವದ ಬೆಳವಣಿಗೆಯನ್ನು ಕಂಡಿದೆ. ಬ್ಯಾಂಕುಗಳು ಇಂದು ತಮ್ಮ ಚಟುವಟಿಕೆಗಳನ್ನು ವಿಭಿನ್ನಗೊಳಿಸಿದ್ದು, ವಿನೂತನ ಸೇವೆಗಳನ್ನು ನೀಡುತ್ತಿವೆ. ಭಾರತದ ಬಹುತೇಕ ಬ್ಯಾಂಕುಗಳು ಜಾಗತಿಕ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿವೆ.ಆದರೆ, ದೇಶದ ಜನಸಂಖ್ಯೆಯ ಪ್ರಧಾನ ಭಾಗವಾದ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯ ವ್ಯಾಪ್ತಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಈಗ ಗ್ರಾಮೀಣ ಪ್ರದೇಶದ ಜನ ಖರ್ಚು ಮಾಡುವ ಹಾಗೂ ಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ.ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗೆ ಸಾಕಷ್ಟು ಅವಕಾಶಗಳಿರುವುದರಿಂದ ಐಸಿಐಸಿಐ, ಎಚ್‌ಡಿಎಫ್‌ಸಿಯಂಥ ಅಂತರ ರಾಷ್ಟ್ರೀಯ ಬ್ಯಾಂಕುಗಳು ತಮ್ಮ ಶಾಖೆಗಳನ್ನು ಈ ಪ್ರದೇಶಗಳಲ್ಲಿ ತೆರೆಯುತ್ತಿವೆ.ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಸರ್ಕಾರಿ ಸಂಸ್ಥೆಗಳು ನಡೆಸುತ್ತವೆ ಹಾಗೂ ಅಲ್ಲಿನ ಉದ್ಯೋಗಿಗಳು ಸರ್ಕಾರದ ನಿಧಿಗಳಿಂದ ವೇತನ ಪಡೆಯುತ್ತಾರೆ. ಖಾಸಗಿ ಕ್ಷೇತ್ರದ ಬ್ಯಾಂಕುಗಳನ್ನು ಆರ್‌ಬಿಐ ಅನುಮೋದನೆಯೊಂದಿಗೆ ಸಾಲ ಕೊಡುವ ಖಾಸಗಿ ಸಂಸ್ಥೆಗಳು ನಡೆಸುತ್ತವೆ. ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗಿಂತಲೂ ಬಡ್ಡಿ ದರ ಈ ಬ್ಯಾಂಕುಗಳಲ್ಲಿ ಸ್ವಲ್ಪ ಹೆಚ್ಚಾಗಿರುತ್ತದೆ.ಆರಂಭಿಕ ಹಂತದ ಉದ್ಯೋಗಗಳು 

ಬ್ಯಾಂಕಿಂಗ್‌ನಲ್ಲಿ ಇರುವ ಆರಂಭಿಕ ಹಂತದ ಉದ್ಯೋಗಗಳೆಂದರೆ ಕಾರ್ಯ ಚಟುವಟಿಕೆಗಳನ್ನು ನಿಭಾಯಿಸುವುದು ಹಾಗೂ ವ್ಯಾಪಾರ ಚಟುವಟಿಕೆಗಳು. ಕಾರ್ಯ ಚಟುವಟಿಕೆಗಳ ವಿಷಯಕ್ಕೆ ಬಂದಾಗ ನೀವು ಸದಾ ಸಿದ್ಧರಾಗಿದ್ದು, ಪ್ರಕ್ರಿಯೆಗಳನ್ನು ಅನುಸರಿಸಬೇಕು. ಏಕೆಂದರೆ, ಬ್ಯಾಂಕಿಂಗ್ ಕ್ಷೇತ್ರ ಅತ್ಯಂತ ವ್ಯವಸ್ಥಿತವಾದ ಉದ್ಯಮವಾಗಿದ್ದು, ಪ್ರತಿಯೊಂದನ್ನೂ ನೀತಿಗಳು ಹಾಗೂ ವಿಧಾನಗಳನ್ನು ಗಮನದಲ್ಲಿಟ್ಟುಕೊಂಡೇ ನೆರವೇರಿಸಬೇಕಾಗುತ್ತದೆ.ವ್ಯಾಪಾರ ವಿಭಾಗಕ್ಕೆ ಬಂದಾಗ, ವ್ಯಾಪಾರ ನಡೆಸುವ ವ್ಯಕ್ತಿಗಳು ಪ್ರಸನ್ನಶೀಲರಾಗಿದ್ದು, ಗ್ರಾಹಕರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಅರಿತಿರಬೇಕು. ಅವರು ಬ್ಯಾಂಕ್‌ನ ಪ್ರತಿಬಿಂಬವೇ ಆಗಿರುವುದರಿಂದ ವ್ಯವಹರಿಸುವ ಸೇವೆಗಳ ಬಗ್ಗೆ ಎಲ್ಲ ಮಾಹಿತಿ ಹೊಂದಿರಬೇಕು.  ಗ್ರಾಹಕರ ಜೊತೆಗಿನ ಆತ್ಮೀಯ ಸಂಬಂಧ ಪ್ರತಿ ಬ್ಯಾಂಕಿಗೂ ಅವಶ್ಯ. ಹೀಗಾಗಿ ಆರಂಭಿಕ ಹಂತದ ಸಿಬ್ಬಂದಿ ಮುಖ್ಯವಾಗುತ್ತಾರೆ. ಕೌಶಲದ ಅಗತ್ಯ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಭ್ಯರ್ಥಿಯು ಅಂಕಿಗಳನ್ನು ಲೀಲಾಜಾಲವಾಗಿ ಬಳಸುವುದನ್ನು ಅರಿತಿರಬೇಕು. ಏಕೆಂದರೆ ಇಲ್ಲಿ ಎಲ್ಲವೂ ಅಂಕಿಗಳದ್ದೇ ಸಾಮ್ರೋಜ್ಯ. ಹಾಗಾಗಿ ನೀವು ಸುಲಭವಾಗಿ ಅಂಕಿಗಳನ್ನು ಬಳಸಲು ಶಕ್ತರಾಗಬೇಕಲ್ಲದೆ ಅತ್ಯಂತ ಸ್ನೇಹಶೀಲರಾಗಿರಬೇಕು. ಇದರ ಜೊತೆಗೆ ಕಾರ್ಯನಿಷ್ಠೆಯನ್ನು ಹೊಂದಿರಬೇಕು. ಹಣಕಾಸಿನ ವ್ಯವಹಾರದಲ್ಲಿ ನಿಷ್ಠೆಗೆ ಅತ್ಯಂತ ಪ್ರಮುಖ ಸ್ಥಾನ ಇದೆ. ಹೊಸ ಗ್ರಾಹಕರನ್ನು ಪಡೆಯುವ, ಹಣಕಾಸಿನ ಉದ್ಯಮದಲ್ಲಿ ಪ್ರತಿ ವ್ಯಕ್ತಿಯ ಜೊತೆಗೂ ಪ್ರತ್ಯೇಕವಾಗಿ ವ್ಯವಹರಿಸುವ ಸಾಮರ್ಥ್ಯವನ್ನು ಪಡೆದಿರಬೇಕು.

ಇತರ ಕ್ಷೇತ್ರಗಳಲ್ಲಿ ವೃತ್ತಿ ಕೈಗೊಳ್ಳುವುದನ್ನು ನಿರ್ದಿಷ್ಟ ಕಲಿಕೆ ನಿರ್ಧರಿಸಿದರೆ, ಬ್ಯಾಂಕಿಂಗ್ ಕ್ಷೇತ್ರವನ್ನು ಮಾತ್ರ ಯಾವುದೇ ವಿಭಾಗದಲ್ಲಿ ಕಲಿತವರೂ ಕೈಗೊಳ್ಳಬಹುದು. ಇಲ್ಲಿ ಎಲ್ಲರಿಗೂ ಅವಕಾಶವಿದೆ.ಸಂದರ್ಶನಕ್ಕೆ ಸಿದ್ಧತೆ


ನೇಮಕಾತಿಗಾಗಿ ನಡೆಯುವ ಯಾವುದೇ ಒಂದು ಸಂದರ್ಶನವು ಉದ್ಯೋಗದಾತನಿಗೆ ನೀವು ಯಾವ ರೀತಿಯ ಉದ್ಯೋಗಿ ಎಂಬುದನ್ನು ತಿಳಿಸುವ ಅವಕಾಶವನ್ನು ನೀಡುತ್ತದೆ. ಈ ಕಾರಣಕ್ಕಾಗೇ ಉದ್ಯೋಗ ಸಂದರ್ಶನಕ್ಕೆ ಚೆನ್ನಾಗಿ ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಜ್ಞಾನವು ನೀವು ಹೊಂದಿರುವ ಪ್ರಬಲವಾದ ಅಸ್ತ್ರ.

ಪದವೀಧರರು, ಸ್ನಾತಕೋತ್ತರ ಪದವೀಧರರಿಗೆ ವಿಮೆ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಒಂದು ಅಥವಾ ಎರಡು ವರ್ಷಗಳ ವಿಶೇಷ ಶಿಕ್ಷಣ ನೀಡುವ ಹಲವಾರು ಸಂಸ್ಥೆಗಳಿವೆ. ಅಲ್ಲಿ ನಿಮಗೆ ಬ್ಯಾಂಕಿಂಗ್ ಕುರಿತಂತೆ ಮೂಲ ವಿಷಯಗಳು ಹಾಗೂ ಮುಂದುವರಿದ ವಿಷಯಗಳನ್ನು ಕಲಿಸಲಾಗುತ್ತದೆ.ಬ್ಯಾಂಕಿಂಗ್ ಕುರಿತ ಮೂಲ ಜ್ಞಾನವನ್ನು ಬೋಧಿಸುವ ಹಲವಾರು ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಬ್ಯಾಂಕಿಂಗ್ ಕ್ಷೇತ್ರ ಪ್ರವೇಶಿಸುವ ಮುನ್ನ ಅದರ ಬಗ್ಗೆ ಮೂಲ ಜ್ಞಾನವನ್ನು ಹೊಂದುವುದು ಅತಿ ಮುಖ್ಯ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳಿಂದ ಇದು ಅತ್ಯಂತ ಲಾಭದಾಯಕ ಕ್ಷೇತ್ರವಾಗಿ ಪರಿಣಮಿಸಿದೆ.ಇದರಲ್ಲೇ ಉದ್ಯಮ ಬ್ಯಾಂಕಿಂಗ್, ಹೋಲ್‌ಸೇಲ್ ಬ್ಯಾಂಕಿಂಗ್, ರೀಟೇಲ್ ಬ್ಯಾಂಕಿಂಗ್ ಇತ್ಯಾದಿ ವಿಭಾಗಗಳಿವೆ. ನೀವು ಬ್ಯಾಂಕಿಂಗ್ ವೃತ್ತಿ ಸೇರುವ ನಿರ್ಧಾರ ಕೈಗೊಳ್ಳುವ ಮುನ್ನ ಇಡೀ ಬ್ಯಾಂಕಿಂಗ್ ಉದ್ಯಮದ ಬಗ್ಗೆ, ಅದರ ವಿಶೇಷಗಳು, ಕೆಲಸದ ಹೊಣೆಗಾರಿಕೆ ಹಾಗೂ ವ್ಯಾಪ್ತಿಯ ಬಗ್ಗೆ ಪರಿಪೂರ್ಣ ಜ್ಞಾನವನ್ನು ಹೊಂದಿರಬೇಕು.  

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.