ಬ್ಯಾಂಕಿನಿಂದ ಜಮೀನು ಮುಟ್ಟುಗೋಲು: ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ

7

ಬ್ಯಾಂಕಿನಿಂದ ಜಮೀನು ಮುಟ್ಟುಗೋಲು: ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ

Published:
Updated:

ಬೆಂಗಳೂರು:  ತಮಿಳುನಾಡಿನ ಹೊಸೂರು ತಾಲ್ಲೂಕಿನ ಕೋತಕೊಂಡಪಳ್ಳಿ ಗ್ರಾಮದಲ್ಲಿ ಇರುವ ವಿವಿಧ ಸರ್ವೆ ನಂಬರ್‌ಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೇ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ.

ಸರ್ವೇ ನಂ.692, 694, 740 ಸೇರಿದಂತೆ 15ಕ್ಕೂ ಅಧಿಕ ನಿವೇಶನದ ವಿವಾದ ಇದಾಗಿದೆ. ಟಿ.ಎಸ್.ಚೌಧರಿ ಎನ್ನುವವರಿಂದ ನಿವೇಶನ ಪಡೆದು ಮೋಸ ಹೋದ ನಗರದ ಹಲವಾರು ಮಂದಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಈ ಆದೇಶ ಹೊರಡಿಸಿದ್ದಾರೆ.

ಕೃಷಿ ಜಮೀನನ್ನು ಕೃಷಿಯೇತರವಾಗಿ ಪರಿವರ್ತಿಸಿ ಹಲವಾರು ನಿವೇಶನ ಮಾಡಿದ್ದ ಚೌಧರಿ ಅವರಿಂದ ಸುಗುಣಾ ಹಾಗೂ ಇತರರು ನಿವೇಶನ ಪಡೆದುಕೊಂಡಿದ್ದರು.

 ಆದರೆ ಈ ಜಮೀನನ್ನು ಒತ್ತೆ ಇಟ್ಟ ಚೌಧರಿ ಅವರು ಮೂರು ಲಕ್ಷ ರೂಪಾಯಿ ಪಡೆದುಕೊಂಡಿದ್ದು, ಅದನ್ನು ಮರುಪಾವತಿಸಿಲ್ಲ ಎಂದು ದೂರಿ ಪಂಜಾಬ್ ಬ್ಯಾಂಕ್ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಈ ಹಿನ್ನೆಲೆಯಲ್ಲಿ ಜಮೀನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಬ್ಯಾಂಕ್‌ಗೆ ಅನುಮತಿ ನೀಡಿತು.

ಸಿವಿಲ್ ಕೋರ್ಟ್ ಆದೇಶದ ಬಗ್ಗೆ ಅರ್ಜಿದಾರರಿಗೆ ಯಾವುದೇ ಮಾಹಿತಿ ನೀಡದ ಬ್ಯಾಂಕ್ ಅವರ ನಿವೇಶನವನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಯಿತು.

ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಚೌಧರಿ ಅವರಿಂದ 300ಕ್ಕೂ ಅಧಿಕ ಮಂದಿ ನಿವೇಶನ ಪಡೆದುಕೊಂಡಿದ್ದಾರೆ.

ಈ ರೀತಿ ನೋಟಿಸ್ ನೀಡದೇ ಮುಟ್ಟುಗೋಲು ಹಾಕಿಕೊಂಡರೆ ಎಲ್ಲರೂ ಬೀದಿ ಪಾಲಾಗಬೇಕಾಗುತ್ತದೆ ಎಂದು ಅರ್ಜಿದಾರರ ಪರ ವಕೀಲ ಬಿ.ರುದ್ರಗೌಡ ಅವರು ಕೋರ್ಟ್ ಗಮನ ಸೆಳೆದರು.  ಈ ಹಿನ್ನೆಲೆಯಲ್ಲಿ ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳಲು ಕೋರ್ಟ್ ಆದೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry