ಬ್ಯಾಂಕುಗಳ ಈ ಕಾರ್ಯ ಸರಿಯೇ?

7

ಬ್ಯಾಂಕುಗಳ ಈ ಕಾರ್ಯ ಸರಿಯೇ?

Published:
Updated:

ಬ್ಯಾಂಕುಗಳಲ್ಲಿ ಕರೆಂಟ್ ಅಕೌಂಟ್ ಹಾಗೂ ಸೇವಿಂಗ್ಸ್ ಅಕೌಂಟ್‌ಗಳಿಗೆ (ಚಾಲು ಖಾತೆ ಹಾಗೂ ಉಳಿತಾಯ ಖಾತೆಗಳಿಗೆ) ಜೊತೆಗೂಡಿಸಿ ಹೃಸ್ವವಾಗಿ ‘ಕಸ’ (casa) ಎನ್ನುತ್ತಾರಂತೆ. ಇವುಗಳ ಮೇಲೆ ಠೇವಣಿದಾರರಿಗೆ ತುಂಬಾ ಕಡಿಮೆ ಬಡ್ಡಿಯನ್ನು ಕೊಡಬೇಕಾಗಿರುವುದರಿಂದ ಇಂತಹ ಖಾತೆಗಳು ಬ್ಯಾಂಕುಗಳಲ್ಲಿ ತುಂಬಾ ಲಾಭದಾಯಕವಂತೆ. ಹಾಗಾಗಿ ಇಂಥಾ ಖಾತೆಗಳ ಸಂಚಯನಕ್ಕೆ ಎಲ್ಲಾ ಬ್ಯಾಂಕುಗಳ ನಡುವೇ ವಿಪರೀತ ಸ್ಪರ್ಧೆ ಇದೆ.ಇದೇನೋ ಸರಿ. ಆದರೆ ಇದಕ್ಕಾಗಿ ಹಿರಿಯ ವಯಸ್ಸಿನ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳನ್ನು ಅಮಾನುಷವಾಗಿ ದುಡಿಸಿಕೊಳ್ಳುತ್ತಿರುವುದು ಸರಿಯೇ? ಕೆಲ ದಿನಗಳ ಹಿಂದೆ, ಅದೂ ಭಾನುವಾರ ಸಂಜೆ ಎಂಟು ಗಂಟೆಗೆ 58-59 ವರ್ಷ ವಯಸ್ಸಿನ ಇಬ್ಬರು ಬ್ಯಾಂಕ್ ಅಧಿಕಾರಿಗಳು ನಮ್ಮ ಮನೆಗೆ ಬಂದು ತಮ್ಮ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆಯಬೇಕೆಂದು ದಯಾನೀಯವಾಗಿ ಬೇಡಿಕೊಂಡರು.ಆದರೆ ನಮ್ಮ ಕುಟುಂಬದವರೆಲ್ಲಾ ಬೇರೆ ಬ್ಯಾಂಕ್‌ನಲ್ಲಿ ಈಗಾಗಲೇ ವಿವಿಧ ಖಾತೆಗಳಿರುವುದರಿಂದ ಹೊಸ ಖಾತೆಗಳ ಅವಶ್ಯಕತೆ ನಮಗಿಲ್ಲ ಎಂದು ತಿಳಿಸಿದೆವು. ಅಷ್ಟರಲ್ಲಿ ಅವರಲ್ಲೊಬ್ಬ ಅಸ್ವಸ್ಥಗೊಂಡು ಅಲ್ಲಿಯೇ ಕುಸಿದು ಬಿದ್ದರು. ಆಗ ಕತ್ತಲಾಗಿದ್ದರೂ ನಾವು ಅವನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದೆವು. ನಂತರ ಇನ್ನೊಬ್ಬ ಅಧಿಕಾರಿ ಕಣ್ಣೀರಿನೊಂದಿಗೆ ತಮ್ಮ ಪ್ರವರ ಹೇಳಿಕೊಂಡರು. ಅಸ್ವಸ್ಥಗೊಂಡಿರುವ ಅಧಿಕಾರಿ 10 ತಿಂಗಳ ಹಿಂದೆಯೇ ತೀರಾ ಅನಾರೋಗ್ಯದಿಂದ ನಿಮಿತ್ತ ಸ್ವಯಂ ನಿವೃತ್ತಿ ಅರ್ಜಿ ಕೊಟ್ಟಿದ್ದರೂ, ತಮ್ಮ ಬ್ಯಾಂಕ್‌ನ ಸ್ಥಾಪನೆಯ ‘ಶತಮಾನೋತ್ಸವ’ ವರ್ಷಾಚರಣೆ ಸಂದರ್ಭಕ್ಕೆ ಕೊಟ್ಟ ಗುರಿಯನ್ನು ಹೊಸ ‘ಕಸ’ ಖಾತೆಗಳನ್ನು ಪರಿಚಯಿಸಲಿಲ್ಲ ಎಂಬ ಕಾರಣಕ್ಕೆ ಅವರ ವಿ.ಆರ್.ಎಸ್. ತಡೆ ಹಿಡಿದಿದ್ದು ಅವರ ಅನಾರೋಗ್ಯ ಉಲ್ಬಣಗೊಂಡಿದ್ದರೂ ಅವರನ್ನು ಸೇವೆಯಿಂದ ಬಿಡುಗಡೆ ಮಾಡದೇ ಅಮಾನವೀಯತೆ ತೋರಿಸಲಾಗಿದೆಯಂತೆ.ಅದರಂತೆ ಇನ್ನೊಬ್ಬ ಅಧಿಕಾರಿಗೂ ನಿವೃತ್ತಿಯಾಗಲು ಕೇವಲ ಮೂರೇ ತಿಂಗಳು ಬಾಕಿಯಿದ್ದರೂ, ಬ್ಯಾಂಕ್‌ನ ಶತಮಾನೋತ್ಸವ ಆಚರಣೆ ಆಗುವವರೆಗೆ ಅವರು ಉಳಿದಿರುವ ಮೂರು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳೂ 300 ಹೊಸ ‘ಕಸ’ ಖಾತೆಗಳನ್ನು ತೆರೆಯಲು ತಪ್ಪಿದರೆ ಅವರ ನಿವೃತ್ತಿ ಸೌಲಭ್ಯಗಳನ್ನೆಲ್ಲಾ ತಡೆ ಹಿಡಿಯುವುದಾಗಿ ಬ್ಯಾಂಕ್‌ನ ಮೇಲಧಿಕಾರಿಗಳು ಬೆದರಿಕೆ ಹಾಕಿದ್ದಾರಂತೆ. ಹಾಗಾಗಿ ಆದಿತ್ಯವಾರವೂ ರಜೆ ಹಾಕಿ ವಿಶ್ರಾಂತಿ ಪಡೆಯಲಾಗದಂತೆ. ಬಹುಶಃ ಇಂತಹ ಅಮಾನವೀಯ ಪರಿಸ್ಥಿತಿ ಬ್ಯಾಂಕುಗಳಲ್ಲಿ ಇರುವುದರಿಂದಲೇ ಈಗಿನ ಯುವಕರು ಬ್ಯಾಂಕ್ ನೌಕರಿಯೆಂದರೆ ದೂರ ಓಡುತ್ತಾರೆ!ನಗರ ಪ್ರದೇಶದಲ್ಲಿ ಎಲ್ಲಾ ವಿದ್ಯಾವಂತ ಜನರೂ ಒಂದಲ್ಲ ಒಂದು ಬ್ಯಾಂಕ್‌ನಲ್ಲಿ ಖಾತೆ ಹೊಂದಿಯೇ ಇರುವುದರಿಂದ ಹೊಸದಾಗಿ ತಮ್ಮಲ್ಲಿ ಖಾತೆ ತೆರೆಯಲು ಜನರನ್ನು ಬೇರೆ ಬೇರೆ ಬ್ಯಾಂಕ್‌ನವರು ಪೀಡಿಸುವುದರಲ್ಲಿ ಅರ್ಥವಿಲ್ಲ. ಒಂದೇ ವ್ಯಕ್ತಿ ಹೀಗೆ 3-4 ಬ್ಯಾಂಕ್‌ಗಳಲ್ಲಿ ಅನಗತ್ಯವಾಗಿ ಖಾತೆ ಹೊಂದುವುದರಿಂದ ತೆರಿಗೆಗಳ್ಳತನಕ್ಕೆ ಅಥವಾ ಹಣಕಾಸಿನ ಅವ್ಯವಹಾರಕ್ಕೆ ಸ್ವತಃ ಬ್ಯಾಂಕುಗಳೇ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಅಷ್ಟೇ ಅಲ್ಲ ಬ್ಯಾಂಕ್‌ನ ಸಾಲಗಾರರಿಗೆಲ್ಲಾ ಅದೇ ಬ್ಯಾಂಕ್‌ನಲ್ಲಿ ತಮ್ಮ ಕುಟುಂಬದವರ ಹಾಗೂ ಬಂಧುಮಿತ್ರರ ಕನಿಷ್ಠ 25 ಖಾತೆಗಳನ್ನಾದರೂ ಹೊಸದಾಗಿ ತೆರೆದರೆ ಮಾತ್ರ ಸಾಲ ಸೌಲಭ್ಯ ಮುಂದುವರಿಸುವುದಾಗಿ ಷರತ್ತು ಹಾಕಿ ಸಾಲಗಾರರಿಗೆ ವಿಪರೀತ ಕಿರುಕುಳ ಕೊಡಲಾಗುತ್ತಿದೆಯಂತೆ. ಇದನ್ನೆಲ್ಲಾ ರಿಸರ್ವ್ ಬ್ಯಾಂಕ್ ತಕ್ಷಣ ಪರಿಶೀಲಿಸಿ ಪ್ರತಿಬಂಧಿಸಬೇಕು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry