ಬ್ಯಾಂಕ್‌ನಲ್ಲಿ ಗೊಂಬೆ ಹಬ್ಬ

7

ಬ್ಯಾಂಕ್‌ನಲ್ಲಿ ಗೊಂಬೆ ಹಬ್ಬ

Published:
Updated:

ಪ್ರತಿದಿನ ಹಣದೊಂದಿಗೇ ವ್ಯವಹಾರ ಮಾಡಿಮಾಡಿ, ಹಣ ಎಂದರೆ ರೋಸಿ ಹೋಗಿರಬಹುದೇನೋ ಎಂಬಂತಿರುತ್ತದೆ ಅವರೆಲ್ಲರ ಮುಖ. ಒಂದು ಪುಟ್ಟ ನಗುವಿಲ್ಲ, ಸಮಾಧಾನದ ಉಸಿರಿಲ್ಲ.

ಒತ್ತಡದ ಕೆಲಸ ಅವರನ್ನು ಹೈರಾಣಾಗಿಸಿರುತ್ತದೆ. ಆದರೆ, ಎಲ್ಲಾ ಬ್ಯಾಂಕ್‌ಗಳಿಗಿಂತ ತುಸು ವಿಭಿನ್ನವಾಗಿ ಗುರುತಿಸಿಕೊಳ್ಳಲು ಮುಂದಾಗಿರುವ ಈ ಬ್ಯಾಂಕ್ ಅದ್ದೂರಿಯಾಗಿ ನವರಾತ್ರಿ ಹಬ್ಬವನ್ನು ಆಚರಿಸುತ್ತಿದೆ.ವಿಧವಿಧದ ಹೂವಿನ ತೋರಣ, ಒಳಗೆ ಕಾಲಿಟ್ಟರೆ ಘಂ ಎನ್ನುವ ಸುವಾಸನೆ, ಬಣ್ಣಬಣ್ಣದ ಚಿತ್ತಾರ. ಬಂದ ಗ್ರಾಹಕರ ಕೈಗೆ ನಗುಮುಖದಲ್ಲಿ ಸಿಹಿ ನೀಡುವ ಸಿಬ್ಬಂದಿ. ಗಂಭೀರತೆಗೆ ಮತ್ತೊಂದು ಹೆಸರಾಗಿರುವ ಬ್ಯಾಂಕ್‌ಗಳಲ್ಲಿ ಇದ್ಯಾವ `ಎಫೆಕ್~್ಟ ಎಂದುಕೊಳ್ಳುವ ಬದಲು ನೀವೂ ನಗುತ್ತಾ ನವರಾತ್ರಿ ಹಬ್ಬದ ಶುಭಾಶಯ ಕೋರಬಹುದು.ಮಲ್ಲೇಶ್ವರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮುತುವರ್ಜಿಯಿಂದ ಹಬ್ಬ ಆಚರಿಸುತ್ತಿದೆ. ಪರಪರನೆ ಎಣಿಸುವ ನೋಟುಗಳ ಬದಲಾಗಿ ಈಗ ಇಲ್ಲಿ ಕಾಣುವುದು ಗೊಂಬೆಗಳ ಲೋಕ. ನವರಾತ್ರಿಗೆ ಸಂಬಂಧಿಸಿದ ಹಲವಾರು ಪೌರಾಣಿಕ ಕಥೆಗಳನ್ನು ಹೇಳುವ ಗೊಂಬೆಗಳು ಮನಸೆಳೆಯುತ್ತವೆ.ವೀಣೆ ನುಡಿಸುವ ಶಾರದೆ, ವಿದ್ಯೆ ದಯಪಾಲಿಸುವ ಸರಸ್ವತಿ, ಸೀತಾ ರಾಮ ಕಲ್ಯಾಣ, ಅಂಬಾರಿ ಹೊತ್ತ ಆನೆ, ದಸರಾ ಮೆರುಗು, ಸೈನಿಕರ ನಗುಮುಖ ಎಲ್ಲವೂ ಇಲ್ಲಿ ಮನಸೆಳೆಯುತ್ತವೆ.ಬ್ಯಾಂಕ್‌ನ ಒಳಭಾಗದಲ್ಲೇ  ನಿರ್ಮಿಸಲಾದ ಹೂಹಾಸಿನ ಮೇಲೆ ಪ್ರತಿಷ್ಠಾಪಿಸಲಾದ ಗೊಂಬೆಗಳನ್ನು ನಾನಾ ರೀತಿಯ ಕಜ್ಜಾಯಗಳಿಂದ ನೈವೇದ್ಯ ಮಾಡಿ ಪೂಜಿಸಲಾಗುತ್ತಿದೆ. ಮಧ್ಯೆ ದುರ್ಗಾ ಮಾತೆಯ ದೊಡ್ಡದೊಂದು ಗೊಂಬೆ ವಿರಾಜಿಸುತ್ತಿದ್ದರೆ, ಪಕ್ಕದಲ್ಲಿ ಹಸಿರು ಹುಲ್ಲು ಹಾಸಿನ ಮೇಲೆ ಭಾರತೀಯ ಕ್ರಿಕೆಟ್ ತಂಡ ತನ್ನ ಕೈಂಕರ್ಯದಲ್ಲಿ ನಿರತವಾಗಿದೆ. ಅಲ್ಲೇ ಪಕ್ಕಕ್ಕೆ ಕಣ್ಣು ಹಾಯಿಸಿದರೆ ಮಿನಿ ಮೃಗಾಲಯ ಕಣ್ಮನ ಸೆಳೆಯುತ್ತದೆ.

ಅಲ್ಲಿರುವ ವಿವಿಧ ರೀತಿಯ ಪ್ರಾಣಿಗಳು ಒಟ್ಟಾಗಿ ಸೇರಿ ನವರಾತ್ರಿ ಸಂಭ್ರಮದಲ್ಲಿ ತಲ್ಲೆನವಾಗಿರುವಂತಿದೆ. `ಸದಾ ಗಿಜಿಗುಡುವ ಜೀವನದಲ್ಲಿ ನೆಮ್ಮದಿ ನೀಡಲು ಬರುವ ಹಬ್ಬಗಳನ್ನು ಮನಸಾರೆ ಆಚರಿಸಿ ಸಂಭ್ರಮಿಸಬೇಕು.

ಸಂತೋಷ ಹಂಚಿಕೊಳ್ಳಲು ಹಿರಿಯರು ಬಳುವಳಿಯಾಗಿ ನೀಡಿದ ಹಬ್ಬಗಳ ಪಯಣ ಹರ್ಷದ ವರ್ಷಧಾರೆ ಸುರಿಸಬೇಕು. ಹೀಗಾಗಿ ಭಾರತೀಯ ಸಂಸ್ಕೃತಿಯ ದ್ಯೋತಕವಾದ ಹಬ್ಬಗಳ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ~ ಎಂಬುದು ಬ್ಯಾಂಕ್‌ನವರ ಮಾತು.ಅಂದಹಾಗೆ, ಮನೆಯಲ್ಲೂ ಸಂಭ್ರಮದಿಂದ ಹಬ್ಬ ಆಚರಣೆ ಮಾಡುವ ಹೆಂಗಳೆಯರೇ ಬ್ಯಾಂಕ್‌ನಲ್ಲೂ ಗೊಂಬೆಗಳನ್ನು ಒಪ್ಪವಾಗಿ ಅಲಂಕರಿಸಿದ್ದಾರೆ. ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುತ್ತ ದಿನ ದೂಡುವ ಸಿಬ್ಬಂದಿ ಬಂದವರಿಗೆ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ಇದೇ 24ರವರೆಗೆ ಈ ಗೊಂಬೆಗಳು ಬ್ಯಾಂಕ್‌ನಲ್ಲಿ ಗಮನ ಸೆಳೆಯಲಿವೆ. ಬಣ್ಣಬಣ್ಣದ ತೋರಣಗಳೊಳಗೆ ಬೆಚ್ಚನೆ ಕುಳಿತಿರುವ ಗೊಂಬೆಗಳೂ ಸಂಭ್ರಮದಲ್ಲಿ ಮಿಂದೇಳುತ್ತಿರಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry