ಬುಧವಾರ, ಜನವರಿ 22, 2020
22 °C
ಕೊಡಗು ಜಿಲ್ಲೆ: ಬೆಂಬಲ ಬೆಲೆಯಡಿ ಭತ್ತ ಖರೀದಿ ಆರಂಭ

ಬ್ಯಾಂಕ್‌ ಖಾತೆ ಮೂಲಕ ಹಣ ಪಾವತಿ

ಪ್ರಜಾವಾಣಿ ವಾರ್ತೆ/ ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಮಡಿಕೇರಿ: ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ಮೆಕ್ಕೆಜೋಳವನ್ನು ಕೊಡಗು ಜಿಲ್ಲೆಯ ವಿವಿಧೆಡೆ ಖರೀದಿಸಲು ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಆರಂಭಿಸಿದ್ದು, ಖರೀದಿ ಹಣವನ್ನು ಇದೇ ಮೊದಲ ಬಾರಿಗೆ ರೈತರ ಬ್ಯಾಂಕ್‌ ಖಾತೆಗೆ ಪಾವತಿಸಲಾಗುತ್ತಿದೆ.ಮಡಿಕೇರಿಯ ಎಪಿಎಂಸಿ ಆವರಣದಲ್ಲಿರುವ ನಿಗಮದ ಕೇಂದ್ರದಲ್ಲಿ ಗುರುವಾರ ಭತ್ತ ಖರೀದಿಯನ್ನು ಆರಂಭಿಸಲಾಗಿದೆ. ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನ ಎಪಿಎಂಸಿ ಆವರಣದಲ್ಲಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಎಪಿಎಂಸಿ ಆವರಣದಲ್ಲಿ ಶುಕ್ರವಾರದಿಂದ ಖರೀದಿ ಪ್ರಕ್ರಿಯೆ ಆರಂಭಗೊಳ್ಳಲಿದೆ.ಬೆಂಬಲ ಬೆಲೆ ಯೋಜನೆಯಡಿ ಭತ್ತ ಹಾಗೂ ಮೆಕ್ಕೆಜೋಳವನ್ನು ಖರೀದಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್‌ ಫೋರ್ಸ್‌ ಸಮಿತಿ ತೀರ್ಮಾನಿಸಿದೆ.₨ 1,600 ಬೆಲೆ ನಿಗದಿ

ಕೇಂದ್ರ ಸರ್ಕಾರವು ಭತ್ತ ಖರೀದಿಗೆ (ಕ್ವಿಂಟಲ್‌) ₨ 1,310 ಬೆಂಬಲ ಬೆಲೆ ನಿಗದಿಪಡಿಸಿದೆ. ಜೊತೆಗೆ ರಾಜ್ಯ ಸರ್ಕಾರವು ₨ 290 ಪ್ರೋತ್ಸಾಹ ಧನ ನೀಡುತ್ತಿದ್ದು, ಒಟ್ಟು ಪ್ರತಿ ಕ್ವಿಂಟಲ್‌ಗೆ ₨ 1,600 ರೈತರ ಕೈ ಸೇರಲಿದೆ.ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಾತ್ರ ಮೆಕ್ಕೆಜೋಳವನ್ನು ಬೆಳೆಯಲಾಗುತ್ತಿದ್ದು,  ಕುಶಾಲನಗರ ಕೇಂದ್ರದಲ್ಲಿ ಭತ್ತದ ಜೊತೆ ಮೆಕ್ಕೆಜೋಳವನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗುತ್ತಿದೆ. ಮೆಕ್ಕೆಜೋಳಕ್ಕೆ ₨ 1,310 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.ಪ್ರಸ್ತುತ ಮಾರುಕಟ್ಟೆಯಲ್ಲಿ ಭತ್ತಕ್ಕೆ ₨ 1,100–1,300 ದರವಿದ್ದು, ಇದಕ್ಕಿಂತಲೂ ₨ 300–500ವರೆಗೆ ಹೆಚ್ಚಿನ ದರವು ಬೆಂಬಲ ಬೆಲೆ ಯೋಜನೆಯಡಿ ದೊರೆಯುತ್ತಿದೆ. ಜಿಲ್ಲೆಯ ರೈತರು ಹರ್ಷಗೊಂಡಿದ್ದಾರೆ.ಬ್ಯಾಂಕ್‌ ಖಾತೆಗೆ ಹಣ

ಇದೇ ಮೊದಲ ಬಾರಿಗೆ ಹಣವನ್ನು ರೈತರ ಬ್ಯಾಂಕ್‌ ಖಾತೆಗೆ ಆನ್‌ಲೈನ್‌ ಮೂಲಕ ಪಾವತಿಸಲು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ ಪ್ರತಿಯೊಬ್ಬ ರೈತರಿಗೂ ಬ್ಯಾಂಕ್‌ ಖಾತೆಯನ್ನು ಹೊಂದಲು ಸೂಚಿಸಲಾಗುತ್ತಿದೆ.ಸಾಮಾನ್ಯವಾಗಿ ರೈತರು ಬ್ಯಾಂಕ್‌ ಖಾತೆಗಳನ್ನು ಹೊಂದಿರುತ್ತಾರೆ. ತಮ್ಮ ಬ್ಯಾಂಕ್‌ ಖಾತೆಯ ಆರ್‌ಟಿಜಿಎಸ್‌ 13 ಸಂಖ್ಯೆಯನ್ನು ರೈತರು ನೀಡಬೇಕಾಗಿದೆ. ಭತ್ತವು ಗಟ್ಟಿಯಾಗಿ, ಶುಚಿಯಾಗಿರಬೇಕು, ಹುಳು ಹುಪ್ಪಟೆಗಳಿಂದ ಹೊಂದಿರಬಾರದು.ಆರ್‌ಟಿಸಿ ಪ್ರತಿ, ಕೃಷಿ ಇಲಾಖೆಯ ತಾಂತ್ರಿಕ ತಜ್ಞರು ಭತ್ತದ ಗುಣಮಟ್ಟದ ಬಗ್ಗೆ ನೀಡಿದ ದೃಢೀಕರಣ ಪತ್ರ, ಭತ್ತವನ್ನು 50 ಕೆ.ಜಿ. ಸಾಮರ್ಥ್ಯದ ಗೋಣಿಚೀಲದಲ್ಲಿಯೇ (ಪ್ರತಿ ಚೀಲಕ್ಕೆ ಪ್ರತ್ಯೇಕ ಹಣ ನೀಡಲಾಗುತ್ತದೆ) ತುಂಬಿರಬೇಕು ಹಾಗೂ ಭತ್ತದ ತೇವಾಂಶವು ಶೇ 17ಕ್ಕಿಂತ ಕಡಿಮೆ ಇರಬೇಕು ಎನ್ನುವ ಷರತ್ತನ್ನು ವಿಧಿಸಲಾಗಿದೆ.ಮಾರ್ಚ್‌ 31 (2014)ರವರೆಗೆ ಖರೀದಿಸಲಾಗುವುದು ಎಂದು ನಿಗಮದ ಅಧಿಕಾರಿ ಕುಟ್ಟಪ್ಪ ತಿಳಿಸಿದರು.ಕೆಂಪು ಭತ್ತ ಖರೀದಿ ಇಲ್ಲ

ಜಿಲ್ಲೆಯಲ್ಲಿ 35,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಾಗಿದ್ದು, ಅಂದಾಜು 70,000 ಟನ್‌ ಭತ್ತ ಇಳುವರಿಯನ್ನು ನಿರೀಕ್ಷಿಸಲಾಗಿದೆ. ಮೆಕ್ಕೆಜೋಳವು 3,000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದ್ದು, 9,000 ಟನ್‌ ಇಳುವರಿ ನಿರೀಕ್ಷಿಸಲಾಗಿದೆ. ಸರ್ಕಾರದ ಆದೇಶದಂತೆ ಬಿಳಿ ಭತ್ತವನ್ನು ಮಾತ್ರ ಖರೀದಿಸಲಾಗುತ್ತಿದೆ. ಅತುರಾ ಬತ್ತ (ಕೆಂಪು ಬತ್ತ) ಖರೀದಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಆದೇಶ ಬಂದಿಲ್ಲ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ತಿಳಿಸಿದರು.

ಪ್ರತಿಕ್ರಿಯಿಸಿ (+)