ಗುರುವಾರ , ಜನವರಿ 30, 2020
20 °C

ಬ್ಯಾಂಕ್‌ ನೌಕರರರ ಮುಷ್ಕರ: ಗ್ರಾಹಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಮೈಸೂರು ಜಿಲ್ಲಾ ಬ್ಯಾಂಕ್‌ ನೌಕರರ ಸಂಘ ಬುಧವಾರ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿದರು.ನಗರದ ನೆಹರು ವೃತ್ತದ ಎಸ್‌ಬಿಎಂ ಕಚೇರಿ ಬಳಿ ಜಮಾಯಿಸಿದ ನಗರದ ರಾಷ್ಟ್ರೀಕೃತ ಬ್ಯಾಂಕ್‌ ನೌಕರರು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದನ್ನು ನಾವು ಒಪ್ಪುವುದಿಲ್ಲ. ಬ್ಯಾಂಕುಗಳನ್ನು ವಿಲೀನ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.ಕೇಂದ್ರ ಸರ್ಕಾರವು ಬ್ಯಾಂಕುಗಳ ಮೇಲೆ ಕಣ್ಣು ಇರಿಸಿದೆ. ವಿದೇಶಿ ಬ್ಯಾಂಕುಗಳಿಗೆ ಮಣೆ ಹಾಕುವ ಸಲುವಾಗಿ ಪರವಾನಗಿಗಳನ್ನು ವಿತರಿಸಲು ಹೊರಟಿದೆ. ವಿದೇಶಿ ಬ್ಯಾಂಕುಗಳಿಗೆ ಯಾವುದೇ ಕಾರಣಕ್ಕೂ ಪರವಾನಗಿ ವಿತರಿಸಬಾರದು. ದೇಶದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳು ಲಾಭದ ಹಾದಿಯಲ್ಲಿ ಇವೆ. ಹೀಗಾಗಿ, ವಿದೇಶಿ ಬ್ಯಾಂಕುಗಳು ದೇಶಕ್ಕೆ ಕಾಲಿರಿಸುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.ಅಗತ್ಯವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ನೌಕರರಿಗೆ ನೀಡುತ್ತಿರುವ ಸಂಬಳ ಸಾಕಾಗುತ್ತಿಲ್ಲ. ವೇತನ ಪರಿಷ್ಕರಣೆ ಮಾಡಬೇಕೆಂಬ ಬೇಡಿಕೆ ಇನ್ನೂ ಬಾಕಿ ಉಳಿದಿದೆ. ಕೂಡಲೇ ನೌಕರರ ವೇತನ ಪರಿಷ್ಕರಣೆ ಮಾಡುವ ಮೂಲಕ ನೌಕರರ ಶ್ರೇಯೋಭಿವೃದ್ಧಿ ಕಾಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಎಸ್‌ಬಿಐ, ಎಸ್‌ಬಿಎಂ, ಕೆನರಾ, ಕಾರ್ಪೊರೇಷನ್‌ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರ್‌ ಸೇರಿದಂತೆ ಇತರೆ ರಾಷ್ಟ್ರೀಕೃತ ಬ್ಯಾಂಕಿನ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಮೈಸೂರು ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಅಧ್ಯಕ್ಷ ಬಿ.ಸಿ. ರಾಮಯ್ಯ, ಕಾರ್ಯದರ್ಶಿ ಬಾಲಕೃಷ್ಣ, ಖಜಾಂಚಿ ವೆಂಕಟಕೃಷ್ಣ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಇದೇ ವೇಳೆ ಬ್ಯಾಂಕ್‌ ಅಧಿಕಾರಿಗಳು ಸರಸ್ವತಿಪುರಂ ಎಸ್‌ಬಿಎಂ ವಲಯ ಕಚೇರಿ ಬಳಿ ಜಮಾಯಿಸಿ ಪ್ರತಿಭಟನೆ ಮಾಡಿದರು.ಗ್ರಾಹಕರ ಪರದಾಟ: ಬ್ಯಾಂಕ್‌ ನೌಕರರ ರಾಷ್ಟ್ರವ್ಯಾಪಿ ಮುಷ್ಕರದಿಂದಾಗಿ ಗ್ರಾಹಕರ ದೈನಂದಿನ ವ್ಯವಹಾರಕ್ಕೆ ಅಡಚಣೆ ಉಂಟಾ­ಯಿತು.ರಾಷ್ಟ್ರೀಕೃತ ಬ್ಯಾಂಕ್‌ಗಳು ಮುಷ್ಕರ ಹಮ್ಮಿಕೊಂಡಿರುವ ವಿಷಯ ತಿಳಿಯದ ಗ್ರಾಹಕರು ಬ್ಯಾಂಕಿನ ಬಳಿ ಬಂದು ಬಾಗಿಲು ಮುಚ್ಚಿದ್ದನ್ನು ನೋಡಿ ವಾಪಸಾಗುತ್ತಿದ್ದರು. ವ್ಯಾಪಾರಸ್ಥರು, ಉದ್ಯಮಿಗಳು ಮುಷ್ಕರದಿಂದಾಗಿ ತೊಂದರೆ ಅನುಭವಿಸಿದರು.

ಪ್ರತಿಕ್ರಿಯಿಸಿ (+)