ಬ್ಯಾಂಕ್ ಖಾತೆಯಲ್ಲೂ `ಬ್ಯಾನರ್ ಕರಾಮತ್ತು'

7
ಕದ್ದ ಅದಿರು ರಫ್ತಿಗೆ ಬೇನಾಮಿ ಚಿತ್ರ, ಹೆಸರು

ಬ್ಯಾಂಕ್ ಖಾತೆಯಲ್ಲೂ `ಬ್ಯಾನರ್ ಕರಾಮತ್ತು'

Published:
Updated:

ಬೆಂಗಳೂರು: ಅಭಿನಂದನೆ, ಶುಭಾಶಯ ಸಲ್ಲಿಕೆ ಮತ್ತಿತರ ಉದ್ದೇಶಗಳಿಗೆ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಸಂಘಸಂಸ್ಥೆಗಳ ಸದಸ್ಯರು ಬಳ್ಳಾರಿಯ ರಸ್ತೆಯುದ್ದಕ್ಕೂ ಹಾಕುತ್ತಿದ್ದ ಬ್ಯಾನರುಗಳು, ಫ್ಲೆಕ್ಸ್‌ಗಳಲ್ಲಿನ ಭಾವಚಿತ್ರಗಳನ್ನು ಬಳಸಿಕೊಂಡು ಹೊಸಪೇಟೆಯ ಕೋವೂರು ಸೋಮಶೇಖರ್ ಅಲಿಯಾಸ್ ಐಎಲ್‌ಸಿ ಸೋಮಶೇಖರ್ ನೂರಾರು ಕೋಟಿ ರೂಪಾಯಿ ಮೌಲ್ಯದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದ!ಅಚ್ಚರಿ ಎನಿಸಿದರೂ ಇದು ನಿಜ. ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಎರಡು ವರ್ಷಗಳಿಂದ ಬಂಧನದಲ್ಲಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಅತ್ಯಂತ ನಿಕಟವರ್ತಿಗಳಲ್ಲಿ ಸೋಮಶೇಖರ್ ಒಬ್ಬ. ರಸ್ತೆ ಬದಿಯಲ್ಲಿ ಹಾಕುತ್ತಿದ್ದ ಬ್ಯಾನರುಗಳು, ಫ್ಲೆಕ್ಸ್‌ಗಳಲ್ಲಿ ಇರುತ್ತಿದ್ದ ಯಾರದ್ದೋ ಭಾವಚಿತ್ರಗಳನ್ನು ಬಳಸಿಕೊಂಡು ಬೇನಾಮಿ ಕಂಪೆನಿಗಳ ನೋಂದಣಿ, `ಟಿನ್' (ವಾಣಿಜ್ಯ ತೆರಿಗೆ ಪಾವತಿದಾರರ ಗುರುತು) ಸಂಖ್ಯೆ ನೋಂದಣಿ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದ ಎಂಬುದು ಸಿಬಿಐ ತನಿಖೆ ವೇಳೆ ಬಯಲಾಗಿದೆ.2009 ಮತ್ತು 2010ರಲ್ಲಿನ ಒಂದೂವರೆ ವರ್ಷದ ಅವಧಿಯಲ್ಲಿ ಈತ ಬರೋಬ್ಬರಿ ಹತ್ತು ಲಕ್ಷ ಟನ್ ಅದಿರನ್ನು ಬೇಲೆಕೇರಿ ಬಂದರಿನಿಂದಲೇ ರಫ್ತು ಮಾಡಿದ್ದ. ಈ ಪೈಕಿ ಏಳು ಲಕ್ಷ ಟನ್ ಅದಿರು ಕಳ್ಳತನ ಮಾಡಿದ್ದಾಗಿತ್ತು.ನೆರೆಯ ಆಂಧ್ರಪ್ರದೇಶದ ಕೃಷ್ಣಪಟ್ಟಣ ಬಂದರು, ಗೋವಾದ ಕೆಲ ಬಂದರುಗಳು ಮತ್ತು ತಮಿಳುನಾಡಿನ ಚೆನ್ನೈನ ಬಂದರಿನಿಂದಲೂ ಅಕ್ರಮವಾಗಿ ಅದಿರು ರಫ್ತು ಮಾಡಿದ್ದಾನೆ. ಈ ಎಲ್ಲಾ ವಹಿವಾಟಿಗೂ ರಸ್ತೆ ಬದಿಯಲ್ಲಿ ಸಿಕ್ಕ ಭಾವಚಿತ್ರಗಳು ಮತ್ತು ಆತನೇ ನಮೂದಿಸಿದ ಹೆಸರುಗಳನ್ನೇ ಬಳಸಿಕೊಂಡಿದ್ದ.ಗಣಿ ಉದ್ಯಮ ಉತ್ತುಂಗದ ಸ್ಥಿತಿಯಲ್ಲಿದ್ದ ಕಾಲದಲ್ಲಿ ಬಳ್ಳಾರಿಯಿಂದ ಅತಿಹೆಚ್ಚು ಪ್ರಮಾಣದ ಅದಿರನ್ನು ವಿದೇಶಕ್ಕೆ ರಫ್ತು ಮಾಡಿದವರಲ್ಲಿ ಸೋಮಶೇಖರ್ ಅಗ್ರ ಸ್ಥಾನದಲ್ಲಿದ್ದ. ದಿವಾಕರ ಮಿನರಲ್ಸ್, ಸಿದ್ದೇಶ್ವರ ಟ್ರೇಡರ್ಸ್, ತಿರುಮಲ ಟ್ರೇಡರ್ಸ್ ಸೇರಿದಂತೆ ಐದಕ್ಕೂ ಹೆಚ್ಚು ಬೇನಾಮಿ ಕಂಪೆನಿಗಳನ್ನು ಅಸ್ತಿತ್ವಕ್ಕೆ ತಂದಿದ್ದ ಈತ, ಅವುಗಳ ಮೂಲಕವೇ ಅಕ್ರಮವಾಗಿ ಅದಿರು ರಫ್ತು ಮಾಡಿದ್ದ. ಇದರಿಂದಾಗಿ ಕೆಲವೇ ತಿಂಗಳ ಅವಧಿಯಲ್ಲಿ ಬಳ್ಳಾರಿಯ ಪ್ರಮುಖ ಶ್ರೀಮಂತರಲ್ಲಿ ಒಬ್ಬನಾಗಿದ್ದ ಎಂಬ ಸಂಗತಿಗಳು ಸಿಬಿಐ ತನಿಖೆಯ ವೇಳೆ ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತಿವೆ.ರಸ್ತೆ ಬದಿ ಕಾರ್ಯಾಚರಣೆ: ಬೇನಾಮಿ ಕಂಪೆನಿಗಳನ್ನು ಸ್ಥಾಪಿಸುವ ಮುನ್ನ ಸೋಮಶೇಖರ್ ಕೆಲವರನ್ನು ಭಾವಚಿತ್ರಗಳ ಸಂಗ್ರಹ ಕಾರ್ಯಾಚರಣೆಗೆ ಇಳಿಸಿದ್ದ. ಆತನ ಸೂಚನೆಯಂತೆ ಬಳ್ಳಾರಿಯ ಪ್ರಮುಖ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ಅವರು, ಅಲ್ಲಿ ಹಾಕಿದ್ದ ಬ್ಯಾನರುಗಳು ಮತ್ತು ಫ್ಲೆಕ್ಸ್‌ಗಳಲ್ಲಿ ಇದ್ದ ಹಲವು ವ್ಯಕ್ತಿಗಳ ಭಾವಚಿತ್ರವನ್ನು ಕ್ಯಾಮೆರಾ ಮೂಲಕ ಸೆರೆ ಹಿಡಿದಿದ್ದರು. ನಂತರ ಅವುಗಳನ್ನು ಮುದ್ರಿಸಲಾಗಿತ್ತು. ಹೀಗೆ ಸಿದ್ಧಪಡಿಸಿದ ಭಾವಚಿತ್ರಗಳಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ಬೇನಾಮಿ ಕಂಪೆನಿಗಳ ನೋಂದಣಿ, `ಟಿನ್' ನೋಂದಣಿ ಮತ್ತು ಬ್ಯಾಂಕ್ ಖಾತೆ ತೆರೆಯಲು ಬಳಸಲಾಗಿತ್ತು.ಕಂಪೆನಿಗಳ ನೋಂದಣಿಗೆ ಬಳಸಿಕೊಂಡ ಭಾವಚಿತ್ರಗಳಲ್ಲಿ ಇದ್ದ ವ್ಯಕ್ತಿಗಳಿಗೆ ಸೋಮಶೇಖರ್ ತಾನೇ `ನಾಮಕರಣ' ಮಾಡುತ್ತಿದ್ದ. ತನಗೆ ಬೇಕಾದ ಹೆಸರನ್ನು ಅರ್ಜಿ ನಮೂನೆಗಳಲ್ಲಿ ಬರೆಯುತ್ತಿದ್ದ. `ಟಿನ್' ನೋಂದಣಿ ಮತ್ತು ಬ್ಯಾಂಕ್ ಖಾತೆ ತೆರೆಯುವುದಕ್ಕೂ ಇದೇ ಮಾದರಿ ಅನುಸರಿಸುತ್ತಿದ್ದ. ಅಂತಿಮವಾಗಿ ಈ ಎಲ್ಲಾ ವಹಿವಾಟುಗಳೂ ಆತನ ಹೆಸರಿನಲ್ಲೇ ಇದ್ದ ಐಎಲ್‌ಸಿ ಇಂಡಸ್ಟ್ರೀಸ್‌ನೊಂದಿಗೆ ಥಳಕು ಹಾಕಿಕೊಂಡಿದ್ದವು ಎಂದು ಮೂಲಗಳು ತಿಳಿಸಿವೆ.ಬ್ಯಾಂಕ್ ಅಧಿಕಾರಿಗಳ ನೆರವು: ಬೇರೆಯವರ ಭಾವಚಿತ್ರ ಮತ್ತು ಅಸ್ತಿತ್ವದಲ್ಲೇ ಇಲ್ಲದ ವ್ಯಕ್ತಿಗಳ ಹೆಸರನ್ನು ಬಳಸಿಕೊಂಡು ಸೋಮಶೇಖರ್ ಮೊದಲು ಬಳ್ಳಾರಿ ಮತ್ತು ಹೊಸಪೇಟೆಯ ಲಕ್ಷ್ಮಿ ವಿಲಾಸ್ ಬ್ಯಾಂಕ್ ಶಾಖೆಗಳಲ್ಲಿ ಬೇನಾಮಿ ಕಂಪೆನಿಗಳ ಖಾತೆ ತೆರೆದಿದ್ದ. ನಂತರ ಆ ಖಾತೆಗಳ ಪಾಸ್ ಪುಸ್ತಕವನ್ನೇ ಆಧಾರವಾಗಿ ಬಳಸಿಕೊಂಡು ಎಕ್ಸಿಸ್ ಬ್ಯಾಂಕ್ ಮತ್ತು ಕಾರ್ಪೋರೇಷನ್ ಬ್ಯಾಂಕ್‌ಗಳ ಶಾಖೆಗಳಲ್ಲಿ ಖಾತೆ ತೆರೆದಿದ್ದ. ಇಂತಹ ಒಂದೊಂದು ಖಾತೆಯಲ್ಲೂ ಅಲ್ಪಾವಧಿಯಲ್ಲೇ ಹತ್ತಾರು ಕೋಟಿ ರೂಪಾಯಿ ವರ್ಗಾವಣೆ ಆಗಿದೆ.ಆರಂಭದಲ್ಲಿ ರಸ್ತೆ ಬದಿಯ ಫ್ಲೆಕ್ಸ್, ಬ್ಯಾನರುಗಳಲ್ಲಿನ ಭಾವಚಿತ್ರಗಳನ್ನು ಬಳಸಿಕೊಂಡು ಬೇನಾಮಿ ಖಾತೆ ತೆರೆಯಲು ಲಕ್ಷ್ಮಿ ವಿಲಾಸ್ ಬ್ಯಾಂಕ್‌ನ ಕೆಲ ಅಧಿಕಾರಿಗಳು ಆರೋಪಿಗೆ ನೆರವು ನೀಡಿರುವುದು ತನಿಖೆಯ ವೇಳೆ ದೃಢಪಟ್ಟಿದೆ. ಈ ಕುರಿತು ಸಿಬಿಐ ಅಧಿಕಾರಿಗಳು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ವರದಿ ಸಲ್ಲಿಸಿದ್ದಾರೆ. ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.ಈ ಪ್ರಕರಣದಲ್ಲಿ ಎಕ್ಸಿಸ್ ಬ್ಯಾಂಕ್ ಮತ್ತು ಕಾರ್ಪೋರೇಷನ್ ಬ್ಯಾಂಕ್ ಅಧಿಕಾರಿಗಳ ಪಾತ್ರದ ಬಗ್ಗೆಯೂ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಬ್ಯಾಂಕ್ ಅಧಿಕಾರಿಗಳು ಆರೋಪಿ ಜೊತೆ ಷಾಮೀಲಾಗಿರುವುದು ಅಥವಾ ದೊಡ್ಡ ಮೊತ್ತದ ಹಣ ವರ್ಗಾವಣೆ ಕುರಿತು ರಿಸರ್ವ್ ಬ್ಯಾಂಕ್ ಮತ್ತು ಸಂಬಂಧಿಸಿದ ಸಂಸ್ಥೆಗಳಿಗೆ ಮಾಹಿತಿ ನೀಡದೇ ಕರ್ತವ್ಯಲೋಪ ಎಸಗಿರುವುದು ಪತ್ತೆಯಾದಲ್ಲಿ ಅವರ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಲು ಸಿಬಿಐ ನಿರ್ಧರಿಸಿದೆ.ಇಲ್ಲೂ `ಸೆಲ್ಫ್ ಚೆಕ್' ಮಹಿಮೆ!

ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ತೆರೆದಿದ್ದ ಬೇನಾಮಿ ಕಂಪೆನಿಗಳ ಬ್ಯಾಂಕ್ ಖಾತೆಯಿಂದ `ಸೆಲ್ಫ್ ಚೆಕ್' ಬಳಸಿ ಸೋಮಶೇಖರ್ ನಿರಂತರವಾಗಿ ಹಣ ನಗದೀಕರಿಸುತ್ತಿದ್ದ. ಇತರೆಯವರಿಗೆ ಹಣ ನೀಡುವಾಗಲೂ ಯಾರದ್ದೋ ಹೆಸರಿನಲ್ಲಿ ತಾನೇ ಸಹಿ ಮಾಡಿದ `ಸೆಲ್ಫ್ ಚೆಕ್' ಕೊಡುತ್ತಿದ್ದ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.ತಾನು ರಫ್ತು ಮಾಡಿದ ಅದಿರಿನಲ್ಲಿ ಬಹುಪಾಲನ್ನು ಜನಾರ್ದನ ರೆಡ್ಡಿ, ಅವರ ಆಪ್ತರಾದ ಸ್ವಸ್ತಿಕ್ ನಾಗರಾಜ್ ಹಾಗೂ ಖಾರದಪುಡಿ ಮಹೇಶ್‌ನಿಂದ ಖರೀದಿ ಮಾಡಿರುವುದಾಗಿ ಸೋಮಶೇಖರ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಕಾರ್ಪೋರೇಷನ್ ಬ್ಯಾಂಕ್‌ನ ಖಾತೆಯ `ಸೆಲ್ಫ್ ಚೆಕ್'ಗಳನ್ನು ರೆಡ್ಡಿ ಅವರಿಗೆ ನೀಡಿದ್ದ. ಅವರ ಕಡೆಯವರು ಆ ಚೆಕ್‌ಗಳನ್ನು ಬ್ಯಾಂಕ್‌ಗೆ ನೀಡಿ ಹಣ ಪಡೆದುಕೊಳ್ಳುತ್ತಿದ್ದರು ಎಂಬುದೂ ತನಿಖೆಯಲ್ಲಿ ದೃಢಪಟ್ಟಿದೆ.ಸೋಮಶೇಖರ್ ನೀಡುತ್ತಿದ್ದ `ಸೆಲ್ಫ್ ಚೆಕ್'ಗಳನ್ನು ಬಳಸಿ ಜನಾರ್ದನ ರೆಡ್ಡಿ ಕಡೆಯವರು ಪ್ರತಿ ಶುಕ್ರವಾರ ಬ್ಯಾಂಕ್‌ನಿಂದ ಹಣ ಪಡೆಯುತ್ತಿದ್ದರು. ಹವಾಲಾ ದಂಧೆಯಲ್ಲಿ ತೊಡಗಿರುವ ಕೆಲವು ವ್ಯಕ್ತಿಗಳು ಈ ಚೆಕ್‌ಗಳನ್ನು ಪಡೆದು, ಅವುಗಳನ್ನು ಬ್ಯಾಂಕ್‌ಗೆ ನೀಡಿ ನಗದೀಕರಿಸುತ್ತಿದ್ದರು ಎಂಬುದೂ ತನಿಖೆ ವೇಳೆ ಖಚಿತಪಟ್ಟಿದೆ.ತನಿಖೆ ಚುರುಕು

ಬೇಲೆಕೇರಿ ಬಂದರಿನ ಮೂಲಕ ನಡೆದಿರುವ ಅದಿರು ಕಳ್ಳಸಾಗಣೆ ಹಗರಣದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಐವರು ಆರೋಪಿಗಳನ್ನು ವಶದಲ್ಲಿ ಇರಿಸಿಕೊಂಡಿರುವ ಸಿಬಿಐ ಪೊಲೀಸರು, ಹಗರಣದ ಹೂರಣ ಹೊರತೆಗೆಯಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಬಂಧಿಸಿರುವ ಯರ್ರಿಸ್ವಾಮಿ, ದೀಪಕ್ ಸಿಂಗ್ ಮತ್ತು ಬುಧವಾರ ಬಂಧಿತನಾಗಿರುವ ಸೋಮಶೇಖರ್ ಅವರನ್ನು ನಿರಂತರವಾಗಿ ಪ್ರಶ್ನಿಸಲಾಗುತ್ತಿದೆ. ನ್ಯಾಯಾಂಗ ಬಂಧನದಲ್ಲಿದ್ದ ಸ್ವಸ್ತಿಕ್ ನಾಗರಾಜ್ ಮತ್ತು ಖಾರದಪುಡಿ ಮಹೇಶ್ ಅವರನ್ನೂ ಸಿಬಿಐ ವಶಕ್ಕೆ ಪಡೆದಿದೆ. ಸಿಬಿಐನ ಬೆಂಗಳೂರು ಘಟಕದ ಮುಖ್ಯಸ್ಥರಾಗಿರುವ ಡಿಐಜಿ ಆರ್.ಹಿತೇಂದ್ರ ನೇತೃತ್ವದ ತಂಡ ಆರೋಪಿಗಳನ್ನು ದಿನವಿಡೀ ವಿಚಾರಣೆ ನಡೆಸುತ್ತಿದೆ.ಸಿಬಿಐ ಸಂಗ್ರಹಿಸಿದ ಮಾಹಿತಿ

ಬೇನಾಮಿ ಕಂಪೆನಿಗಳಿಂದ ನೂರಾರು ಕೋಟಿ ವಹಿವಾಟುಯಾರದ್ದೋ ಭಾವಚಿತ್ರ, ಹೆಸರು ಬಳಕೆಬ್ಯಾನರ್, ಫ್ಲೆಕ್ಸ್‌ನಿಂದ ಭಾವಚಿತ್ರ `ಕಳ್ಳತನ'ಹಣ ಪಡೆಯಲು `ಸೆಲ್ಫ್ ಚೆಕ್'ಭಾರಿ ಅಕ್ರಮಕ್ಕೆ ಎಲ್‌ವಿಬಿ, ಎಕ್ಸಿಸ್, ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿಗಳ ನೆರವು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry