ಬ್ಯಾಂಕ್ ನೌಕರರಿಂದ ಮುಷ್ಕರ

7

ಬ್ಯಾಂಕ್ ನೌಕರರಿಂದ ಮುಷ್ಕರ

Published:
Updated:

 


ಬಳ್ಳಾರಿ: ಬೆಲೆ ಏರಿಕೆ ಕುರಿತ ಕೇಂದ್ರ ಸರ್ಕಾರದ ನೀತಿ, ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಹಾಗೂ ಅಖಿಲ ಭಾರತ  ಬ್ಯಾಂಕ್ ಉದ್ಯೋಗಿಗಳ ಫೆಡರೇಷನ್ (ಬಿಇಎಫ್‌ಐ)ಗಳು ಕರೆ ನೀಡಿರುವ  ರಾಷ್ಟ್ರಮಟ್ಟದ ಬ್ಯಾಂಕ್ ಮುಷ್ಕರಕ್ಕೆ ನಗರದಲ್ಲಿ ಗುರುವಾರ ವಿವಿಧ ಬ್ಯಾಂಕ್‌ಗಳ ನೌಕರರು ಬೆಂಬಲ ನೀಡಿದರು.

 

ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ (ಎಸ್‌ಬಿಎಂ), ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್,  ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್, ಆಂಧ್ರಾ ಬ್ಯಾಂಕ್ ಸೇರಿದಂತೆ ಸುಮಾರು 20ಕ್ಕೂ ಅಧಿಕ ಬ್ಯಾಂಕ್‌ಗಳ ನೌಕರರು ಹಾಗೂ ಅಧಿಕಾರಿಗಳು ಕೆಲಸ ಸ್ಥಗಿತಗೊಳಿಸಿ ಮುಷ್ಕರ  ನಡೆಸಿದರು.

 

ಮುಷ್ಕರದಿಂದಾಗಿ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆ ದೊರೆಯದೆ ತೀವ್ರ ಅಡಚಣೆ ಉಂಟಾಯಿತು.

ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿಯ ಭಾಗವಾಗಿ ಬ್ಯಾಂಕ್‌ಗಳ ಮೇಲೆ ಹಿಡಿತ ಸಾಧಿಸಲು ಹೊರಟಿರುವ ಕೇಂದ್ರ ಸರ್ಕಾರವು, ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣದಂತಹ ಅವೈಜ್ಞಾನಿಕ ನಿರ್ಧಾರಕ್ಕೆ ಮುಂದಾಗಿದೆ. ಸಾರ್ವಜನಿಕ ವಲಯವನ್ನು ಸಂಪೂರ್ಣ ಖಾಸಗೀಕರಣಗೊಳಿಸಿ ಬಂಡವಾಳ ಶಾಹಿ ಕೈಗಿಡುವ ಹುನ್ನಾರ ನಡೆಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

 

ಸ್ಥಳೀಯ ಎಸ್‌ಬಿಎಂ  ಪ್ರಧಾನ ಶಾಖೆಯ ಎದುರು ಮುಷ್ಕರ ನಡೆಸಿ, ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿ ಘೋಷಣೆ ಕೂಗಿದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಬ್ಯಾಂಕ್‌ಗಳ ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ತರುವ ನೀತಿ ಜಾರಿಯಾಗಬಾರದು ಎಂದು ಕೋರಿದರು.

 

ಲಾಭ ಇಲ್ಲ ಎಂಬ ನೆಪ ಮುಂದಿರಿಸಿ, ಗ್ರಾಮೀಣ ಬ್ಯಾಂಕ್‌ಗಳನ್ನು ಮುಚ್ಚಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಜಾಗತೀಕರಣಕ್ಕೆ ಬೆಂಬಲ ನೀಡಿದೆ ಎಂದು ಪ್ರತಿಭಟನೆಯ ನೇತೃತ್ವವಹಿಸಿದ್ದ ಜಿಲ್ಲಾ ಬ್ಯಾಂಕ್ ನೌಕರರ ಸಂಘದ  ಕಾರ್ಯದರ್ಶಿ ಜೆ.ಯೋಗೇಂದ್ರ ಹಾಗೂ ಅಧ್ಯಕ್ಷ ಸತ್ಯನಾರಾಯಣ ದೂರಿದರು.

 

ಖಾಸಗಿ ವಲಯಕ್ಕೆ ಅನಿಯಮಿತ ಪ್ರಮಾಣದ ಸಾಲ ನೀಡಲು ಮುಂದಾಗಿರುವುದೇ ಬ್ಯಾಂಕ್‌ಗಳ ಹಿತಾಸಕ್ತಿಗೆ ಧಕ್ಕೆ ಉಂಟುಮಾಡಿದೆ. ಬಡವರ ಹಣವನ್ನು ಉದ್ಯಮಿಗಳ ಕೈಗಿಡುವ ಸರ್ಕಾರದ ನೀತಿಯಿಂದ ಜನಸಾಮಾನ್ಯರಿಗೆ ಧಕ್ಕೆ ಎದುರಾಗಿದೆ. ಗ್ರಾಮೀಣ ಬ್ಯಾಂಕ್‌ಗಳ ಸೇವೆಯನ್ನು ಹೊರಗುತ್ತಿಗೆಗೆ ನೀಡುವ ಅವೈಜ್ಞಾನಿಕ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು. ವಿದೇಶಿ ಬ್ಯಾಂಕ್‌ಗಳು ದೇಶದಲ್ಲಿ ನೆಲೆ ಊರಲು ಅವಕಾಶ ನೀಡಬಾರದು. ಭಾರತೀಯ ಸ್ಟೇಟ್ ಬ್ಯಾಂಕ್‌ನೊಂದಿಗೆ ಸಹಯೋಗಿ ಬ್ಯಾಂಕ್‌ಗಳನ್ನು ವಿಲೀನ ಗೊಳಿಸುವ ಯೋಚನೆ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

 

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಹಂಪ ಯ್ಯ, ವಾಸು, ಅನಂತಪದ್ಮನಾಭ, ಆನಂದ ತೀರ್ಥ, ಬದರಿ ನಾರಾಯಣ, ಸುರೇಂದ್ರ, ಗಂಗಾ ಧರ, ಸುರೇಶಕುಮಾರ್,  ರವೀಂದ್ರ  ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry