ಬ್ಯಾಂಕ್ ಮುಖ ಕಂಡ ಮೊದಲ ತಲೆಮಾರು !

7

ಬ್ಯಾಂಕ್ ಮುಖ ಕಂಡ ಮೊದಲ ತಲೆಮಾರು !

Published:
Updated:
ಬ್ಯಾಂಕ್ ಮುಖ ಕಂಡ ಮೊದಲ ತಲೆಮಾರು !

ತುಮಕೂರು:`ಬ್ಯಾಂಕ್ ಸೌಲಭ್ಯದಿಂದ ವಂಚಿತರಾದವರ ಬಳಿಗೆ ಬ್ಯಾಂಕ್ ಸೇವೆ~ ಎಂಬ ವಿನೂತನ ಯೋಜನೆ ಜಾರಿಗೆ ತಂದಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಚಿಕ್ಕನಾಯಕನಹಳ್ಳಿ ಶಾಖೆ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ.ಸಹಕಾರ ಬ್ಯಾಂಕ್ ಇಟ್ಟ ಈ ಹೊಸ ಹೆಜ್ಜೆಯಿಂದಾಗಿ ರಾಜ್ಯದಲ್ಲಿ ಬೆರಳಣಿಕೆಯಷ್ಟು ಸಂಖ್ಯೆಯಲ್ಲಿರುವ,  ನಿಷ್ಕೃಷ್ಟ ಜೀವನ ಸಾಗಿಸುತ್ತಿರುವ ದಕ್ಕಲರು, ಸಿದ್ಧಿಗಳು, ಶಿಳ್ಳೆಕ್ಯಾತರು, ಹಂದಿಜೋಗಿಗಳು ಬ್ಯಾಂಕ್ ಕಂಡ ಮೊದಲ ತಲೆಮಾರು ಎಂಬ ದಾಖಲೆಗೆ ಸೇರಿದಂತಾಗಿದೆ.ಇವರ‌್ಯಾರಿಗೂ ಭೂಮಿ ಇರಲಿ, ಸ್ವಂತ ಮನೆಯೂ ಇಲ್ಲ. ಸರ್ಕಾರಿ ಭೂಮಿಯಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೀಗ ಬ್ಯಾಂಕ್‌ನ ಮುಂದಾಳತ್ವದಲ್ಲಿ 25 ಸ್ವಸಹಾಯ ಸಂಘಗಳನ್ನು ರಚಿಸಿಕೊಂಡಿದ್ದಾರೆ.  ಸಾಲ ಮರುಪಾವತಿ ಉತ್ತಮವಾಗಿದೆ. ಇದೂವರೆಗೂ ಈ ಅಲೆಮಾರಿಗಳಿಗೆ 30 ಲಕ್ಷ ಸಾಲ ವಿತರಿಸಲಾಗಿದೆ.`ಎಷ್ಟೋ ಶ್ರೀಮಂತರು ಸಾಲ ತೀರಿಸಲು ಮೀನಾಮೇಷ ಎಣಿಸುತ್ತಾರೆ, ಆದರೆ ಅಂದಿನ ಸಂಪಾದನೆಯಲ್ಲಿ ಅಂದಿನ ಊಟ ಕಾಣುವ ಅಲೆಮಾರಿಗಳು ಬ್ಯಾಂಕಿನ ಬಗ್ಗೆ ಕೃತಜ್ಞತೆಯಿಂದ ಮಾತನಾಡುವುದರ ಜತೆಗೆ ಪ್ರಾಮಾಣಿಕವಾಗಿ ಸಾಲ ತೀರಿಸುತ್ತಿದ್ದಾರೆ~ ಎನ್ನುವುದು ಬ್ಯಾಂಕ್ ಸಿಬ್ಬಂದಿಯ ಮನದಾಳದ ಮಾತು.ಬದಲಾಯ್ತು ಬದುಕು: ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಆಟಿಕೆ ಮಾರಿ, ಭಿಕ್ಷೆ ಬೇಡಿ ಹೊಟ್ಟೆ ಹೊರೆಯುವ ದಕ್ಕಲಿಗರು, ಶಾಸ್ತ್ರ ಹೇಳಿಕೊಂಡು ತಿರುಗುವ ಸುಡುಗಾಡು ಸಿದ್ಧರು, ಚೌರಿ ಇತ್ಯಾದಿ ಕೇಶಾಲಂಕಾರ ಸಾಮಗ್ರಿ ಮಾರುವ ಸಿಳ್ಳೇಕ್ಯಾತ, ದೊಂಬಿದಾಸರು, ಚಿಲಕಾಣಿ ಸೇರಿದಂತೆ ಕಬ್ಬಿಣದ ಸಾಮಗ್ರಿ ತಯಾರಿಸುವ ಹಂದಿ ಜೋಗಿಗಳು, ಮುಸ್ಲಿಮ್ ಸಮುದಾಯದಲ್ಲಿ ನಿಕೃಷ್ಟರಾಗಿ ಬದುಕುತ್ತಿರುವ ದರವೇಸಿಗಳು, ವಾದ್ಯ ನುಡಿಸಿ ಹೊಟ್ಟೆ ಹೊರೆಯುವ ಹಕ್ಕಿಪಿಕ್ಕಿಗಳು ಸೇರಿದಂತೆ ಹಲವು ಸಮುದಾಯಗಳು ಇದೀಗ ಆರ್ಥಿಕ ಸ್ವಾವಲಂಬನೆಯ ಹೊಸ ಪಾಠಕ್ಕೆ ಮಾದರಿಯಾಗಿದ್ದಾರೆ.`ಈ ಮೊದಲು ಅರೆ ಹೊಟ್ಟೆ ತಿಂದು ಮಲಗ್ತಿದ್ವಿ. ಮಾರನೇ ದಿನ ಮತ್ತೆ ಸಾಲ, ಮತ್ತೆ ಬಡ್ಡಿ, ಮತ್ತೆ ಅರ್ಧ ಹೊಟ್ಟೆ. ಆದರೆ ಈಗ ಬ್ಯಾಂಕ್‌ನವರು ನಮ್ಮ ಸಂಘ ರಚಿಸಿ ಕಡಿಮೆ ಬಡ್ಡಿಗೆ ಸಾಲ ಕೊಟ್ಟಿದ್ದಾರೆ. ನಾವು ದುಡಿದ ಹಣದ ಸ್ವಲ್ಪ ಭಾಗವನ್ನು ಉಳಿಸಲು ಮಾರ್ಗ ತೋರಿಸಿದ್ದಾರೆ. ಹೀಗಾಗಿ ನೆಮ್ಮದಿಯಾಗಿ ಎರಡು ಹೊತ್ತು ಊಟ ಮಾಡುತ್ತಿದ್ದೇವೆ. ಆಪತ್ತಿಗೆಂದು ಸ್ವಲ್ಪ ಹಣ ಕೂಡಿಸುತ್ತಿದ್ದೇವೆ~ ಎನ್ನುತ್ತಾರೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮಾರುತಿನಗರ ದಕ್ಕಲರ ಕಾಲೊನಿಯ ಯಲ್ಲಮ್ಮ ಮತ್ತು ರಾಮಕ್ಕ.ಈ ಬಳಕೆದಾರ ಸ್ನೇಹಿ ಸಾಲ ಯೋಜನೆಯ ಪರಿಣಾಮ ಕಣ್ಣಿಗೆ ಹೊಡೆದಂತೆ ಗೋಚರವಾಗುವುದು ಹಕ್ಕಿಪಿಕ್ಕಿ ಜನಾಂಗದ ಮನೆಗಳಲ್ಲಿ. `ಈ ಮೊದಲು ನಾವು ಹಳೆಯ ವಾದ್ಯಗಳನ್ನು ಬಳಸುತ್ತಿದ್ದಾಗ ನಮ್ಮ ಕಲೆಗೆ ಬೆಲೆ ಇರಲಿಲ್ಲ. ಒಂದು ಸಮಾರಂಭಕ್ಕೆ ವಾದ್ಯ ನುಡಿಸಿದರೆ ಮುನ್ನೂರು ರೂಪಾಯಿ ದುಡಿಯುವುದು ಕಷ್ಟವಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬ್ಯಾಂಕ್‌ನವರು ಸಂಘ ಮಾಡಿ ಸಾಲ ಕೊಟ್ಟಿದ್ದಾರೆ. ಈ ಹಣದಿಂದ ಹೊಸ ವಾದ್ಯ, ಹೊಸ ಯೂನಿಫಾರ್ಮ್ ತೆಗೆದುಕೊಂಡಿದ್ದೇವೆ. ಸೀಸನ್ ಇದ್ದಾಗ ದಿನಕ್ಕೆ ರೂ. 1500 ದುಡಿಯುತ್ತಿದ್ದೇವೆ~ ಎಂದು ವಿವರಿಸುತ್ತಾರೆ ಆಶ್ರೀಹಾಳ್ ಗ್ರಾಮದ ಹಕ್ಕಿಪಿಕ್ಕಿ ಯುವಕರು.ವಿಮೋಚನೆ: ಖಾಸಗಿ ಲೇವಾದೇವಿದಾರರ ಬಿಗಿ ಹಿಡಿತದಿಂದ ಬಡವರನ್ನು ವಿಮೋಚನೆ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಲು ಆಲೋಚಿಸಿದೆ. ಉತ್ತಮ ಫಲಿತಾಂಶವೂ ಸಿಕ್ಕಿದೆ ಎನ್ನುತ್ತಾರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಚಿಕ್ಕನಾಯಕನಹಳ್ಳಿ ಶಾಖೆ ವ್ಯವಸ್ಥಾಪಕ ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ನರಸಿಂಹಮೂರ್ತಿ ಸಲಹೆ, ಸಹಕಾರದಿಂದ ನೂರಾರು ಬಡವರ ಬದುಕಿಗೆ ಬ್ಯಾಂಕ್ ಹೊಸ ದಿಕ್ಕು ನೀಡಲು ಸಾಧ್ಯವಾಯಿತು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry