ಮಂಗಳವಾರ, ಏಪ್ರಿಲ್ 20, 2021
26 °C

ಬ್ಯಾಂಕ್ ಮುಷ್ಕರ: ಗ್ರಾಹಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ ತರುವುದು ಮತ್ತು ಖಂಡೇಲ್‌ವಾಲ್ ಸಮಿತಿ ಶಿಫಾರಸು ಜಾರಿ ವಿರೋಧಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ನೌಕರರು ಬುಧವಾರದಿಂದ ಎರಡು ದಿನಗಳ ಮುಷ್ಕರ ಆರಂಭಿಸಿರುವುದು ನಗರದ ನಾಗರಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.



ಮುಷ್ಕರದ ಬಗ್ಗೆ ಮಾಹಿತಿ ಇರದ ಕೆಲ ಗ್ರಾಹಕರು ಬುಧವಾರ ಬ್ಯಾಂಕ್ ಬಳಿ ಬಂದು ವಾಪಸ್ ಹೋಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಬ್ಯಾಂಕ್ ಕಾರ್ಯ ಸ್ಥಗಿತಗೊಂಡಿರುವುದರಿಂದ ಚೆಕ್ ಮೂಲಕ ಹಣ ವಿನಿಮಯ ಮಾಡುತ್ತಿದ್ದವರಿಗೆ ತೀವ್ರ ತೊಂದರೆಯಾಗಿದೆ. ಆದರೆ, ಎಟಿಎಂ ಘಟಕಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಸಾಮಾನ್ಯನಿಗೆ ಬುಧವಾರ ಅಷ್ಟೇನು ಸಮಸ್ಯೆಯಾಗಿಲ್ಲ.



`ಮೆಜೆಸ್ಟಿಕ್, ಶಿವಾಜಿನಗರ ಸೇರಿದಂತೆ ಕೆಲ ಬಸ್ ನಿಲ್ದಾಣಗಳಲ್ಲಿರುವ ಎಟಿಎಂ ಘಟಕಗಳ ಮುಂದೆ ಸಾರ್ವಜನಿಕರು ಬೆಳಿಗ್ಗೆ ಸಾಲುಗಟ್ಟಿ ನಿಂತಿದ್ದರು. ಆದರೆ, ಮುಷ್ಕರದ ಪರಿಣಾಮದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿ ರಸ್ತೆಗಳಲ್ಲೂ ಎಟಿಎಂ ಘಟಕಗಳು ಇರುವುದರಿಂದ ಸಾರ್ವಜನಿಕರು ಒಂದಿಲ್ಲೊಂದು ಘಟಕಕ್ಕೆ ಹೋಗಿ ಹಣ ಪಡೆಯುತ್ತಾರೆ~ ಎಂದು ಆಟೊ ಚಾಲಕ ಪಾಲಾಕ್ಷ ಅಭಿಪ್ರಾಯಪಟ್ಟರು.



`ಮುಷ್ಕರದ ಬಗ್ಗೆ ಮೊದಲೇ ಅರಿತಿದ್ದ ಕೆಲವರು ಹಣ ಪಡೆಯಲು ಮಂಗಳವಾರ ರಾತ್ರಿಯೇ ಎಟಿಎಂ ಘಟಕದ ಮುಂದೆ ಸಾಲುಗಟ್ಟಿದ್ದರು. ಆದರೆ, ಬುಧವಾರ ಅಂತಹ ಪರಿಸ್ಥಿತಿ ಇರಲಿಲ್ಲ~ ಎಂದು ಎಂ.ಜಿ.ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಘಟಕದ ಸೆಕ್ಯುರಿಟಿ ಗಾರ್ಡ್ ಹೇಳಿದರು.



`ದೇಶದಾದ್ಯಂತ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ, ನಗರದ ಎಲ್ಲಾ ಬ್ಯಾಂಕ್‌ಗಳ ಕಾರ್ಯ ಸ್ಥಗಿತಗೊಂಡಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಏಜೆನ್ಸಿಗಳು ಮಂಗಳವಾರವೇ ಎಟಿಎಂ ಘಟಕಗಳಿಗೆ ಹಣ ತುಂಬಿವೆ. ಆದ್ದರಿಂದ ಜನಸಾಮಾನ್ಯರಿಗೆ ಮುಷ್ಕರದ ಬಿಸಿ ತಟ್ಟಿಲ್ಲ. ಎಟಿಎಂ ಯಂತ್ರಗಳಲ್ಲಿ ಹಣ ಇರುವವರೆಗೆ ಮಾತ್ರ ಅವುಗಳು ಕೆಲಸ ನಿರ್ವಹಿಸಲಿದ್ದು, ಬಳಿಕ ಆ ಸೇವೆ ಕೂಡ ಸ್ಥಗಿತಗೊಳ್ಳಲಿದೆ. ಮುಷ್ಕರದ ಎರಡನೇ ದಿನವಾದ ಗುರುವಾರ ಎಟಿಎಂ ಘಟಕದಲ್ಲಿ ಹಣ ಖಾಲಿಯಾಗಿ ನಾಗರಿಕರು ಖಂಡಿತ ಸಮಸ್ಯೆಗೆ ಗುರಿಯಾಗಲಿದ್ದಾರೆ~ ಎಂದು ಎಸ್‌ಬಿಎಂ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಎಚ್.ಎಸ್.ಹಿರಿಯಣ್ಣಯ್ಯ `ಪ್ರಜಾವಾಣಿ~ಗೆ ತಿಳಿಸಿದರು.



`ಪರ್ಯಾಯ ಬ್ಯಾಂಕಿಂಗ್ ಕ್ಷೇತ್ರಗಳು ಎಂದು ಕರೆಯಲ್ಪಡುವ ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಮುಷ್ಕರದಿಂದ ಎಟಿಎಂನಲ್ಲಿ ಹಣ ಖಾಲಿಯಾಗಬಹುದು ಎಂಬ ಆತಂಕದಿಂದ ಗ್ರಾಹಕರು ಹಣದ ಅಗತ್ಯವಿಲ್ಲದಿದ್ದರೂ ಹಣ ಬಿಡಿಸಿಕೊಳ್ಳುತ್ತಿದ್ದಾರೆ. ಗುರುವಾರಕ್ಕೆ ಮುಷ್ಕರ ಮುಗಿಯಬಹುದು ಎಂಬ ವಿಶ್ವಾಸ ಕೂಡ ಇಲ್ಲ. ಬೇಡಿಕೆಗಳು ಈಡೇರದಿದ್ದರೆ ಮುಷ್ಕರ ಮುಂದುವರಿಸಲು ಚಿಂತಿಸಲಾಗುತ್ತಿದೆ~ ಎಂದು ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ವೇಣುಗೋಪಾಲ್ ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.