ಬ್ಯಾಂಕ್ ವಿರುದ್ಧ ಕ್ರಮಕ್ಕಾಗಿ ಧರಣಿ

7

ಬ್ಯಾಂಕ್ ವಿರುದ್ಧ ಕ್ರಮಕ್ಕಾಗಿ ಧರಣಿ

Published:
Updated:

ಗುಲ್ಬರ್ಗ: ನಗರದ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ 20ಕ್ಕಿಂತ ಹೆಚ್ಚು ವರ್ಷಗಳಿಂದ ನಿತ್ಯ ಠೇವಣಿ ಸಂಗ್ರಹಕಾರರಾಗಿ ಸೇವೆ ಸಲ್ಲಿಸುತ್ತಿದ್ದವರನ್ನು ಕೆಲಸದಿಂದ ತೆಗೆದುಹಾಕಿರುವ ಕ್ರಮ ಖಂಡನೀಯ. ಕೂಡಲೇ ಬ್ಯಾಂಕ್ ವಿರುದ್ಧ ಸರ್ಕಾರ ಕ್ರಮ ಜರುಗಿಸಿ, ಕಾನೂನು ಪ್ರಕಾರ ಅಸಂಘಟಿತ ಕಾರ್ಮಿ ಕರಿಗೆ ಸಲ್ಲುವ ನ್ಯಾಯವನ್ನು ಒದಗಿಸಬೇಕು ಎಂದು ಆಲ್ ಬ್ಯಾಂಕ್ ಡೈಲಿ ಡೆಪಾಸಿಟ್ ಕಲೆಕ್ಟರ್ಸ್ ಒಕ್ಕೂಟ ಸೋಮವಾರ ಇಲ್ಲಿ ಒತ್ತಾಯಿಸಿತು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರವರ್ತಕ ಬ್ಯಾಂಕ್ ಆಗಿರುವ ಕೆಜಿಬಿ, ಠೇವಣಿ ಸಂಗ್ರಹಕಾರರನ್ನು ಬೀದಿಗೆ ತಳ್ಳಿದೆ. ಈ ಮೂಲಕ ಉದ್ಯಮ ವಿವಾದ ಕಾಯ್ದೆ ಕಲಂ 15 ಅನ್ನು ಬ್ಯಾಂಕ್ ಅನುಸರಿಸಿಲ್ಲ ಮತ್ತು ಠೇವಣಿ ಸಂಗ್ರಹ ವಿಭಾಗವನ್ನು ಮುಚ್ಚುವ ಮೊದಲು ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯ ಒಪ್ಪಿಗೆ ಪಡೆದಿಲ್ಲ ಎಂದು ಒಕ್ಕೂಟದ ಹುಬ್ಬಳ್ಳಿ ಘಟಕದ ಅಧ್ಯಕ್ಷ ಎಂ.ರಾಮರಾವ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.ಅಸಂಘಟಿತ ಕಾರ್ಮಿಕರಿರುವ ಹೋಟೆಲ್, ಸಿನಿಮಾ ಮಂದಿರಗಳಲ್ಲೂ ಕನಿಷ್ಠ ಪ್ರತಿವರ್ಷ ಗ್ರ್ಯಾಚುಟಿ, ನೋಟಿಸ್ ನೀಡಲಾಗುತ್ತಿದೆ. ಏಪ್ರಿಲ್ 1, 2010ರಿಂದಲೇ ಠೇವಣಿ ಸಂಗ್ರಹಕಾರರನ್ನು ತೆಗೆದುಹಾಕಿರುವ ಕೃಷ್ಣಾ ಗ್ರಾಮೀಣ ಬ್ಯಾಂಕ್, ಕಾರ್ಮಿಕರಿಗೆ ಯಾವ ಸವಲತ್ತನ್ನು ನೀಡಿಲ್ಲ ಎಂದು ಆರೋಪಿಸಿದರು.ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವರ ಗಮನವನ್ನು ಸೆಳೆಯಲಾಗಿದೆ. ಕೃಷ್ಣಾ ಗ್ರಾಮೀಣ ಬ್ಯಾಂಕ್, ಸಚಿವರ ನಿರ್ದೇಶನವನ್ನು ಮಾನ್ಯ ಮಾಡಿಲ್ಲ. ಕೇಂದ್ರ ಕಾರ್ಮಿಕ ಇಲಾಖೆಯು  ಠೇವಣಿ ಸಂಗ್ರಹ ವಿಭಾಗ ಮುಚ್ಚುವುದಕ್ಕೆ ಅನುಮತಿ ನೀಡುವವರೆಗೂ ಎಲ್ಲ ಕಾರ್ಮಿಕರಿಗೂ ಸಂಬಳ ನೀಡಬೇಕು. ನಿಯಮ ಉಲ್ಲಂಘಿಸಿದ ಬ್ಯಾಂಕ್  ವಿರುದ್ಧ ಬಳ್ಳಾರಿಯಲ್ಲಿರುವ ಪ್ರಾದೇಶಿಕ ಕಾರ್ಮಿಕ ಆಯುಕ್ತರು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತುವು ದರಿಂದ ವೃಥಾ ಸಮಯ ಹಾಳಾಗುತ್ತದೆ. ಈ ಹಂತದಲ್ಲಿ ಕಾರ್ಮಿಕರು ಅಕ್ಷರಶಃ ಬೀದಿಪಾಲಾಗ ಬಹುದಾಗಿದೆ. ಅಸಂಘಟಿತ ಕಾರ್ಮಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಕೊಂಡು ಬ್ಯಾಂಕ್ ಆಸ್ತಿ ಜಪ್ತಿ ಮಾಡಿಕೊಂಡಾದರೂ, ಹೊರಬಿದ್ದ ಕಾರ್ಮಿಕರಿಗೆ ಸವಲತ್ತು ನೀಡಬೇಕು ಎಂದರು.ನ್ಯಾಯ ದೊರೆಯುವ ತನಕ ಕೃಷ್ಣಾ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಹೇಳಿದರು. ಉದ್ಯೋಗ ಕಳೆದುಕೊಂಡ ಬ್ಯಾಂಕ್ ಠೇವಣಿ ಸಂಗ್ರಹಕಾರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry