ಭಾನುವಾರ, ಜೂಲೈ 12, 2020
29 °C

ಬ್ಯಾಂಕ್ ಸಾಧನೆಗೆ ಶ್ರೀಗಳ ಪ್ರಶಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕ್ ಸಾಧನೆಗೆ ಶ್ರೀಗಳ ಪ್ರಶಂಸೆ

ಗೋಕಾಕ: ಸಹಕಾರಿ ಸಂಘಟನೆಯ ಜೀವಾಳವೇ ವಿಶ್ವಾಸ. ಅಂಥ ವಿಶ್ವಾಸದ ಅಡಿಪಾಯದೊಂದಿಗೆ ಸಂಸ್ಥೆಯೊಂದು ಶತಮಾನೋತ್ಸವದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಅದ್ಭುತ. ಆ ಸಾಧನೆಗೆ ಸದಸ್ಯರು ಮತ್ತು ಅವರ ಪ್ರತಿನಿಧಿಗಳು ನೀಡಿದ ಕೊಡುಗೆ ಅಪಾರ ಎಂದು ವಿಜಾಪುರ ಜ್ಞಾನ ಯೋಗಾಶ್ರಮದ  ಸಿದ್ಧೇಶ್ವರ ಸ್ವಾಮೀಜಿ ಪ್ರಶಂಸೆ ಮಾಡಿದರು.ಸೋಮವಾರ ನಗರದ ಕೆ.ಎಲ್.ಇ. ಶಾಲಾ ಆವರಣದಲ್ಲಿ ಸಮಾರೋಪಗೊಂಡ ಮೂರು ದಿನಗಳ  ಗೋಕಾಕ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕ್ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಸಹಕಾರಿ ತತ್ವದ ಮೂಲಕ ಸಂಸ್ಥೆಯೊಂದು ಸಾಧಿಸಿದ ಯಶಸ್ಸಿನಲ್ಲಿ ಸದಸ್ಯರು ಮತ್ತು ಠೇವುದಾರರ ಪಾಲಿಗಿಂತ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಅಸಲು-ಬಡ್ಡಿ ಮರುಪಾವತಿ ಮಾಡುವ ವ್ಯಕ್ತಿಯ ಪ್ರಾಮಾಣಿಕತೆಯ ಪಾಲೇ ದೊಡ್ಡದು ಎಂದರು.ನೂರಕ್ಕೂ ಅಧಿಕ ವರ್ಷಗಳ ಸೇವೆಯ ಮೂಲಕ ಸದಸ್ಯರ ವಿಶ್ವಾಸವನ್ನು ಸಂಪಾದಿಸಿರುವ ಇಂಥ ಸಂಸ್ಥೆ ಇತರರಿಗೂ ಮಾದರಿ ಆಗಲಿ ಎಂದ ಶ್ರೀಗಳು, ಸಹಕಾರಿ ತತ್ವಗಳನ್ನು ಚಾಚೂ ತಪ್ಪದೇ ಪಾಲಿಸುವ ಸಂಸ್ಥೆ ನಷ್ಟವನ್ನು ಅನುಭವಿಸಲಾರದು ಎಂದು ಅಭಿಪ್ರಾಯ ಪಟ್ಟರು.ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಬಸವರಾಜ ಜಗಜಂಪಿ ಗೋಕಾಕ ಅರ್ಬನ್ ಬ್ಯಾಂಕ್ ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶಿಸಿದರು. ನೇತೃತ್ವ ವಹಿಸಿದ್ದ ಘೋಡಗೇರಿಯ ಶ್ರೀ ಶಿವಾನಂದ ಮಠದ  ಮಲ್ಲಯ್ಯ ಸ್ವಾಮೀಜಿ,  ಎಲ್ಲ ಸಹಕಾರಿ ಸಂಸ್ಥೆಗಳು ಶತಮಾನೋತ್ಸವ ಆಚರಿಸಿ ಇತರರಿಗೆ ಮಾದರಿಯಾಗಲಿ ಎಂದು ಆಶಿಸಿದರು.ಇದಕ್ಕೂ ಮೊದಲು ಬ್ಯಾಂಕ್‌ನ ಹಿರಿಯ ನಿರ್ದೇಶಕರಾದ ಸಿ.ಬಿ.ತಾರಳಿ, ಸಿ.ಸಿ.ಆಲತಗಿ, ಎಂ.ಡಿ. ಚುನಮರಿ, ಎಸ್.ಜಿ.ಸೊಲ್ಲಾಪೂರಮಠ, ಎಸ್.ಬಿ. ಅಂಕಲಿ ಮತ್ತು ಶಾಂತಕ್ಕಾ ಘೋಡಗೇರಿ ಅವರನ್ನು ಸತ್ಕರಿಸಿ, ಗೌರವಿಸಲಾಯಿತು.ನಿವೃತ್ತ ಪ್ರಾಚಾರ್ಯ ಡಾ. ವಿ.ವಿ. ಬಾಗಲಕೋಟಿ ಅವರ ಆಂಗ್ಲ ಭಾಷಾ ಕೃತಿಯನ್ನು   ಸಿದ್ಧೇಶ್ವರ ಸ್ವಾಮೀಜಿ ಬಿಡುಗಡೆ ಮಾಡಿದರು. ಬ್ಯಾಂಕ್  ಉಪಾಧ್ಯಕ್ಷ ಡಿ.ಸಿ. ಬಿದರಿ, ನಿರ್ದೇಶಕರಾದ ಎಸ್.ಟಿ.ಹಾಗರಗಿ, ಜಯಾನಂದ (ರಾಜು) ಮುನವಳ್ಳಿ, ಬಸವರಾಜ ಕಲ್ಯಾಣಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾವತಿ ಮಗದುಮ್ ಅವರು ವಚನ ಹಾಡಿದರು. ಹಿರಿಯ ನಿರ್ದೇಶಕ ಸಿ.ಬಿ.ತಾರಳಿ ಸ್ವಾಗತಿಸಿದರು. ಇನ್ನೊಬ್ಬ ಹಿರಿಯ ನಿರ್ದೇಶಕ ಸುರೇಶ ಸೊಲ್ಲಾಪೂರಮಠ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಬ್ಯಾಂಕ್ ಚೇರಮನ್ ಮಲ್ಲಿಕಾರ್ಜುನ ಚುನಮರಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.