ಸೋಮವಾರ, ಏಪ್ರಿಲ್ 19, 2021
23 °C

ಬ್ಯಾಂಕ್ ಸಾಲ ವಿತರಣೆಗಾಗಿ ಒತ್ತಾಯಿಸಿ ಪ್ರತಿಭಟನೆ:52 ರೈತರ ಬಂಧನ,ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕ್ ಸಾಲ ವಿತರಣೆಗಾಗಿ ಒತ್ತಾಯಿಸಿ ಪ್ರತಿಭಟನೆ:52 ರೈತರ ಬಂಧನ,ಬಿಡುಗಡೆ

ಆಳಂದ: ತಾಲ್ಲೂಕಿನ ತಡಕಲ್ ಗ್ರಾಮದಲ್ಲಿನ ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಹೈನುಗಾರಿಕೆ ಮತ್ತು ಪೈಪ್ ಲೈನ್ ಸಾಲ ನೀಡಲು ಸ್ಥಳೀಯ ವ್ಯವಸಾಯ ಸೇವಾ ಸಹಕಾರಿ ಸಂಘ ಹಿಂದೇಟು ಹಾಕುತ್ತಿರುವ ಕ್ರಮವನ್ನು ಖಂಡಿಸಿ ರೈತರು ಬ್ಯಾಂಕ್ ಕಚೇರಿಗೆ ಬೀಗ ಮುದ್ರೆ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಉಗ್ರಸ್ವರೂಪ ಪಡೆದ ಕಾರಣ ಪೊಲೀಸರು 52 ಜನ ರೈತರನ್ನು ವಶಕ್ಕೆ ತೆಗೆದುಕೊಂಡು ಬಿಡುಗಡೆ ಮಾಡಿದ ಘಟನೆ ಶುಕ್ರವಾರ ನಡೆಯಿತು.ತಡಕಲ್ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಸಹಕಾರಿ ಸಂಘದ ಅಧ್ಯಕ್ಷರ ಪ್ರತಿಕೃತಿ ದಹನ ಮಾಡಲಾಯಿತು. ರೈತ ಮುಖಂಡ ಬಸವರಾಜ ಪವಾಡಶೆಟ್ಟಿ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ರೈತರ ಹಿತದೃಷ್ಠಿಯಿಂದ ಆರಂಭವಾದ ಸಹಕಾರಿ ಸಂಘವು ಇಂದು ರೈತರಿಗೆ ಸಾಲ ಒದುಗಿಸಲು ತಾರತಮ್ಯ ಮಾಡುತ್ತಿರುವುದು ನಾಚೀಗೇಡಿನ ಸಂಗತಿ ಎಂದು ಆರೋಪಿಸಿದರು.ಹೈನುಗಾರಿಕೆ ಉತ್ತೇಜನ, ಪೈಪ್‌ಲೈನ್ ಸಾಲ ವಿತರಣೆ ಮತ್ತು ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು. ರೈತ ಮುಖಂಡರಾದ ಬಸವರಾಜ ಬಿರಾದಾರ, ಲಕ್ಷ್ಮೀಪುತ್ರ ಅಳ್ಳೆ, ಸಿದ್ರಾಮಪ್ಪ ರುದ್ರವಾಡಿ, ಗುರುನಾಥ ಚಿಮ್ಮನ, ಬಂಡೆಪ್ಪ ಪೂಜಾರಿ, ಶ್ರೀಶೈಲ್ ಗುಗ್ರೆ, ಕುಪೇಂದ್ರ ನಾಮನೆ, ಕಲ್ಯಾಣಿ ಮದನಕರ, ರೇವಣಸಿದ್ದ ಖಜೂರಿ, ಸೈಬಣ್ಣಾ ಸಿಂಗೆ ಇತರರಿದ್ದರು. ಪಿಎಸ್‌ಐ ಎಮ್. ಹಾಲೇಶ ನೇತೃತ್ವದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ತೀವ್ರಗೊಳಿಸಿದಾಗ 52 ಮಂದಿ ರೈತರನ್ನು ವಶಕ್ಕೆ ತೆಗೆದುಕೊಂಡು ಆಳಂದ ಪೊಲೀಸ್ ಠಾಣೆಗೆ ತರಲಾಯಿತು. ನಂತರ ಡಿವೈಎಸ್‌ಪಿ ಎಸ್.ಬಿ.ಸಾಂಬಾ ನ್ಯಾಯಸಮ್ಮತವಾದ ರೀತಿಯಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಶಾಂತಿಯುತ ಹೋರಾಟ ನಡೆಸಲು ತಿಳಿಸಿದರು.

 

ಸಾಯಂಕಾಲ ಎಲ್ಲ ರೈತರನ್ನು ಬಿಡುಗಡೆ ಮಾಡಲಾಯಿತು. ಸಂಘದ ವ್ಯಾಪ್ತಿಯ ತಡಕಲ್, ನಸೀರವಾಡಿ, ಕೋತನ ಹಿಪ್ಪರರ್ಗಾ, ಕಣಮಸ, ಭಾಲಖೇಡ, ಶುಕ್ರವಾಡಿ ಮತ್ತಿತರ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.