ಬ್ಯಾಂಡ್‌ಸ್ಟ್ಯಾಂಡ್

ಶನಿವಾರ, ಜೂಲೈ 20, 2019
27 °C

ಬ್ಯಾಂಡ್‌ಸ್ಟ್ಯಾಂಡ್

Published:
Updated:

ಮೈಸೂರು ಅರಸರ ಕಲೆ, ಸಂಸ್ಕೃತಿ, ಸಂಗೀತಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರ ಪರಿಣಾಮ ಮೈಸೂರಿಗೆ ಸಾಂಸ್ಕೃತಿಕ ನಗರಿ ಎಂಬ ಹೆಸರು ಬರಲು ಕಾರಣವಾಯಿತು. ಮುಂದೆ ಮೈಸೂರು ಪ್ರಾಂತ್ಯದ ರಾಜಧಾನಿಯನ್ನು ಬೆಂಗಳೂರಿಗೆ ವರ್ಗಾಯಿಸಿ ಬೆಂಗಳೂರಿನಲ್ಲಿಯೂ ಸಂಗೀತದ ಬೆಳವಣಿಗೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು.ಕಬ್ಬನ್‌ಪಾರ್ಕ್ ಬೆಂಗಳೂರಿನ ಪ್ರಮುಖ ಶ್ವಾಸಕೋಶಗಳಲ್ಲೊಂದು. ಹಸಿರೇ ಇದರ ಜೀವಾಳ. ಋತುಗಳಿಗೆ ಅನುಸಾರವಾಗಿ ಬಗೆಬಗೆಯ ಹೂಗಳು ಅರಳುವ ನಗೆಬೀರುವ ಕಬ್ಬನ್ ಉದ್ಯಾನ ಹಲವು ಬಗೆಯ ಪಕ್ಷಿಗಳಿಗೆ ಆಶ್ರಯ ತಾಣ. ಇಂತಹ ಉದ್ಯಾನ ಸ್ಥಾಪನೆಗೆ ಕಾರಣರಾದ ಸರ್ ಮಾರ್ಕ್ ಕಬ್ಬನ್ ಅವರ ನೆನಪಿಗೆ ಅವರದೊಂದು ಪ್ರತಿಮೆ ರೂಪುಗೊಂಡಿದ್ದು 1868ರ ಸುಮಾರಿಗೆ. ಅದರ ಆಸುಪಾಸಿನಲ್ಲಿ ರಾಜ್ಯಾಡಳಿತದ ಸಮುಚ್ಚಯವಾದ ಅಠಾರ ಕಚೇರಿ (ಈಗಿನ ಹೈಕೋರ್ಟ್) ತಲೆ ಎತ್ತಿತು.ಸಂಜೆ ವೇಳೆ, ರಜೆ ದಿನಗಳಲ್ಲಿ ದಂಡು ಪ್ರದೇಶ ನಿವಾಸಿಗಳು ಕಬ್ಬನ್ ಪ್ರತಿಮೆಯ ಮುಂಭಾಗದಲ್ಲಿ ಸೇರಿ ಆಹ್ಲಾದಕರ ವಾತಾವರಣವನ್ನು ಸವಿಯುತ್ತಿದ್ದರು. ಹೀಗೆ ಬಂದವರ ಮನರಂಜನೆಗಾಗಿ ಸೈನಿಕ ಸಂಗೀತ ತಂಡ ವಾದ್ಯಗೋಷ್ಠಿಯನ್ನು ನಡೆಸಿಕೊಡಲು ಆರಂಭಿಸಿದ ಮೇಲೆ ಅಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು.ಸಂಗೀತ ಪ್ರೇಮಿಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗಿದ್ದನ್ನು ಗಮನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರು, ಕಬ್ಬನ್ ಪಾರ್ಕ್‌ನಲ್ಲಿ ವೇದಿಕೆಯೊಂದನ್ನು ನಿರ್ಮಿಸಿ ಸಂಗೀತ ಆಸ್ವಾದನೆಯ ಅವಕಾಶ ಮಾಡಿಕೊಡಲು ಉತ್ಸುಕರಾದರು. ಇದಕ್ಕಾಗಿ ಶೇಷಾದ್ರಿ ಅಯ್ಯರ್ ಸ್ಮಾರಕ ಭವನದ (ಈಗಿನ ಸಾರ್ವಜನಿಕ ಗ್ರಂಥಾಲಯ ಕಚೇರಿ) ಪಕ್ಕದಲ್ಲಿ ನಾಲ್ಕು ಎಕರೆ ಪ್ರದೇಶ ನಿಗದಿಯಾಯಿತು.ಅದೇ ಸ್ಥಳದಲ್ಲಿ ವೃತ್ತಾಕಾರದ ಕಲಾತ್ಮಕ ಮಂಟಪ ನಿರ್ಮಾಣಗೊಂಡಿತು. ಇದನ್ನು ಸಿದ್ಧಪಡಿಸಿಕೊಟ್ಟವರು ಇಂಗ್ಲೆಂಡಿನ ವಾಲ್ಟರ್ ಮೆಕ್ ಫ್ಲಾರೆನ್ ಕಂಪೆನಿಯವರು. 1918 ಮಾರ್ಚ್ 14 ರಂದು ಈ ಮಂಟಪದಲ್ಲಿ ಮೈಸೂರು ಅರಮನೆ ಬ್ಯಾಂಡ್ ತಂಡ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಬೆಂಗಳೂರಿನ ಸಂಗೀತ ಕ್ಷೇತ್ರದಲ್ಲೊಂದು ಹೊಸ ಇತಿಹಾಸ ಪ್ರಾರಂಭವಾಯಿತು. ಇದರೊಂದಿಗೆ ಸಂಗೀತಗೋಷ್ಠಿಗಳಿಗೆ ನೂತನ ಸ್ಥಳ ನಿರ್ಮಾಣವಾಯಿತು. ಮಂಟಪದ ಸುತ್ತಲೂ ಸಂಗೀತಾಭಿಮಾನಿಗಳು ಆರಾಮವಾಗಿ ಕುಳಿತುಕೊಳ್ಳಲೂ ಅನುಕೂಲ ಕಲ್ಪಿಸಲಾಯಿತು. ಆಗಾಗ ವಾದ್ಯಗೋಷ್ಠಿಗಳು ನಡೆಯ ತೊಡಗಿದವು. ಕೇಳುಗರು ಹೆಚ್ಚಾದಂತೆ ಸೈನ್ಯದ ಸಂಗೀತ ತಂಡಗಳು ವಾರಕ್ಕೆರಡು ಬಾರಿ ಇಲ್ಲಿ ಸಂಗೀತ ಕಛೇರಿ ನೀಡುತ್ತಿದ್ದವು.1927ರ ಆಗಸ್ಟ್ ಮಾಹೆಯಲ್ಲಿ ಕೃಷ್ಣರಾಜ ಒಡೆಯರ್ ಅವರು ಅಧಿಕಾರ ವಹಿಸಿಕೊಂಡ ರಜತ ವರ್ಷಾಚರಣೆ ಕಾರ್ಯಕ್ರಮಗಳು ಏರ್ಪಾಡಾದವು. ಆಗ ಕಬ್ಬನ್ ಪಾರ್ಕ್‌ನ ವಾದ್ಯರಂಗ ಮಂಟಪದಲ್ಲಿ ಮದ್ರಾಸಿನ ಪಯೋನಿಯರ್ಸ್ ಬ್ಯಾಂಡ್‌ನವರು ಸಂಗೀತಗೋಷ್ಠಿಯನ್ನು ನಡೆಸಿಕೊಟ್ಟರು (8-8-1927).ಬೆಂಗಳೂರು, ಮೈಸೂರು ಸೈನಿಕ ಸಂಗೀತ ತಂಡಗಳಲ್ಲದೆ ಮದ್ರಾಸ್ ವಾದ್ಯ ತಂಡಗಳು ಇಲ್ಲಿ ವಾದ್ಯಗೋಷ್ಠಿಗಳನ್ನು ನಡೆಸುತ್ತಿದ್ದಾಗ ಕೇಳುಗರ ಸಂಖ್ಯೆ ಕ್ರಮೇಣ ಹೆಚ್ಚಿತು. ಕೇವಲ ಕಂಟೋನ್ಮೆಂಟ್ (ದಂಡು) ಪ್ರದೇಶದ ನಾಗರಿಕರೇ ಇವರಲ್ಲಿದ್ದರು. ಬೆಂಗಳೂರು ಹಳೇಪೇಟೆಯವರು ಇದನ್ನು ಕುತೂಹಲದಿಂದ ನೋಡಲಾರಂಭಿಸಿದರು.ಆದರೆ ಪಾಶ್ಚಾತ್ಯ ಸಂಗೀತಕ್ಕಿಂತ ಭಾರತೀಯ ವಾದ್ಯಗೋಷ್ಠಿಗಳನ್ನು ನೋಡಲು,  ಕೇಳಲು ಉತ್ಸುಕರಾಗಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದ್ದು  ಬ್ರಿಟಿಷರಿಗೆ ಇಷ್ಟವಾಗಲಿಲ್ಲ. ಸ್ಥಳ ಬದಲಾಯಿಸಲು ಒತ್ತಾಯ ಹೇರಿದರು. ರಸ್ತೆ ಇಲ್ಲದೆ ಜಾಗದಲ್ಲಿ ವೇದಿಕೆ ನಿರ್ಮಾಣ ಮಾಡಲು ನಿರ್ಧಾರವಾಯಿತು. ಆಗ ಆಯ್ಕೆಯಾಗಿದ್ದು ಅಠಾರ ಕಚೇರಿ ಹಾಗೂ ಮ್ಯೂಸಿಯಂ ನಡುವಣ ವಿಶಾಲವಾದ ಪ್ರದೇಶ.ಶೇಷಾದ್ರಿ ಸ್ಮಾರಕ ಭವನ ಪಕ್ಕದಲ್ಲಿದ್ದ ವಾದ್ಯಮಂಟಪವನ್ನು ಈ ಸ್ಥಳಕ್ಕೆ ವರ್ಗಾಯಿಸಿ ಪುನರ್ ನಿರ್ಮಾಣ ಮಾಡಿ ಸುತ್ತ ಆಸನಗಳನ್ನು ಕಲ್ಪಿಸಲಾಯಿತು. ಇನ್ನಷ್ಟು ಗಿಡಗಳನ್ನು ನೆಡಲಾಯಿತು. ಈ ಸ್ಥಳವನ್ನು ಅಚ್ಚುಕಟ್ಟಾಗಿ ಇಡುವ ಹೊಣೆಗಾರಿಕೆ ಬೆಂಗಳೂರು ಪುರಸಭೆಯವರು ಮಾಡುತ್ತಿದ್ದರು. ವಾರದಲ್ಲಿ ಎರಡು ಮೂರು ದಿನ ಇಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದವು. `ಬ್ಯಾಂಡ್ ಸ್ಟ್ಯಾಂಡ್~ ಎಂದೇ ಹೆಸರಾದ ಈ ವಾದ್ಯ ರಂಗ ಮಂಟಪದಲ್ಲಿ ವಾದ್ಯಗೋಷ್ಠಿಗಳೇ ಹೆಚ್ಚಿರುತ್ತಿದ್ದವು.ಸ್ವಾತಂತ್ರ್ಯದ ಬಳಿಕ ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ ವಾದ್ಯಗೋಷ್ಠಿಗಳನ್ನು ವ್ಯವಸ್ಥೆ ಮಾಡುವ ಜವಾಬ್ದಾರಿ ಬೆಂಗಳೂರು ಪುರಸಭೆಗೇ ಬಂತು. ಅನೇಕ ವರ್ಷಗಳ ಕಾಲ ವಾರಕ್ಕೊಂದು ದಿನ ಅಲ್ಲಿ ವಾದ್ಯಗೋಷ್ಠಿ ಏರ್ಪಾಡಾಗುತ್ತಿತ್ತು. ಮುಂದೆ ಯಾಕೋ ಏನೋ ಕಬ್ಬನ್ ಉದ್ಯಾನ ಆಕರ್ಷಣೆಯ ಬಿಂದುವಾಗಿದ್ದ ವಾದ್ಯ ರಂಗ ಮಂಟಪದಲ್ಲಿ ವಾದ್ಯಗೋಷ್ಠಿಗಳು ನಿಂತುಹೋಗಿ ಈ ಬ್ಯಾಂಡ್ ಸ್ಟ್ಯಾಂಡ್ ಕೇವಲ `ಸ್ಟ್ಯಾಂಡ್~ ಆಗಿ ಹೋಗಿತ್ತು.1990ರ ದಶಕದಲ್ಲಿ ಉದ್ಯಾನದ ಹೊಣೆ ಹೊತ್ತ ತೋಟಗಾರಿಕೆ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗಳು ಜಂಟಿಯಾಗಿ ಉದ್ಯಾನದಲ್ಲಿ ಉದಯರಾಗ ಎಂಬ ಕಾರ್ಯಕ್ರಮ ಆರಂಭಿಸಿದವು. ಭಾನುವಾರ ಮುಂಜಾನೆ ವಾದ್ಯಗೋಷ್ಠಿ ಜತೆ `ಸಂಗೀತಗಾರರ~ ಗಾಯನ ಕಛೇರಿಗಳೂ ಏರ್ಪಾಡಾಗಲಾರಂಭಿಸಿದವು. ಆದರೆ ಅದೀಗ ನಿಸ್ತೇಜವಾಗಿದೆ. ಪುನಶ್ಚೇತನಕ್ಕೆ ಕಾಯುತ್ತಿದೆ,ಅದೇನೇ ಇದ್ದರೂ ಇಂದು ವಿಶ್ವ ಸಂಗೀತ ದಿನ. ಬೆಂಗಳೂರಿನ ಸಂಗೀತ ಪ್ರೇಮಿಗಳ ತಾಣ ಕಬ್ಬನ್ ಉದ್ಯಾನದ ವಾದ್ಯ ರಂಗ ಮಂಟಪಕ್ಕೊಂದು ನಮನ. ಹಾಗೆಯೇ ನಿರಂತರ ಹಕ್ಕಿಗಳ ಗಾಯನಕ್ಕೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry