ಶುಕ್ರವಾರ, ನವೆಂಬರ್ 22, 2019
22 °C

`ಬ್ಯಾಟಿಂಗ್‌ನಲ್ಲಿ ಸುಧಾರಣೆ ಅಗತ್ಯ'

Published:
Updated:

ಹೈದರಾಬಾದ್ (ಪಿಟಿಐ): ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿದೆ ನಿಜ. ಆದರೆ, ತಂಡದ    ಬ್ಯಾಟ್ಸ್‌ಮನ್‌ಗಳು ತಮ್ಮ ಪ್ರದರ್ಶನಮಟ್ಟವನ್ನು ಇನ್ನಷ್ಟು ಸುಧಾರಿಸಿಕೊಳ್ಳುವುದು ಅಗತ್ಯ ಎಂದು ಈ ತಂಡದ ಆಟಗಾರ ಕ್ಯಾಮರೂನ್ ವೈಟ್ ಹೇಳಿದ್ದಾರೆ.`ಬ್ಯಾಟ್ಸ್‌ಮನ್‌ಗಳು ಪ್ರದರ್ಶನಮಟ್ಟ ಉತ್ತಪಡಿಸಿಕೊಳ್ಳಬೇಕು. ನಮ್ಮ  ಬೌಲರ್‌ಗಳು ಇದುವರೆಗೆ ಸಮರ್ಥ ಆಟ ತೋರಿದ್ದಾರೆ. ಆದ್ದರಿಂದ ನಾನೂ ಒಳಗೊಂಡಂತೆ ಎಲ್ಲ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಆಡಿದರೆ, ಬೌಲರ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ' ಎಂದು ಭಾನುವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಸೋಲಿಸಿದ ಬಳಿಕ ಅವರು ಪ್ರತಿಕ್ರಿಯಿಸಿದರು.ಸನ್‌ರೈಸರ್ಸ್ ತಂಡ ಈ ಪಂದ್ಯದಲ್ಲಿ `ಸೂಪರ್ ಓವರ್'ನಲ್ಲಿ ಜಯ ಸಾಧಿಸಿತ್ತು. ಗೆಲುವಿಗೆ 131 ರನ್‌ಗಳ ಗುರಿ ಬೆನ್ನಟ್ಟಿದ್ದ ಹೈದರಾಬಾದ್‌ನ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 130 ರನ್ ಪೇರಿಸಿದ ಕಾರಣ ಪಂದ್ಯ `ಟೈ'ನಲ್ಲಿ ಕೊನೆಗೊಂಡಿತ್ತು. ಬಳಿಕ ನಡೆದ `ಸೂಪರ್ ಓವರ್'ನಲ್ಲಿ ಸನ್‌ರೈಸರ್ಸ್ ಗೆಲುವು ತನ್ನದಾಗಿಸಿಕೊಂಡಿತ್ತು.`ಸೂಪರ್ ಓವರ್'ನಲ್ಲಿ ಸನ್‌ರೈಸರ್ಸ್ ತಂಡ 20 ರನ್ ಪೇರಿಸಿದರೆ, ರಾಯಲ್ ಚಾಲೆಂಜರ್ಸ್ 15 ರನ್ ಗಳಿಸಲಷ್ಟೇ ಶಕ್ತವಾಗಿತ್ತು. `ಈ ಪಂದ್ಯದಲ್ಲಿ ನಾವು ಇನ್ನಷ್ಟು ಉತ್ತಮವಾಗಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮಾಡಬಹುದಿತ್ತು. ಬೌಲಿಂಗ್‌ನಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ. ಬೌಲಿಂಗ್ ಹೊರತುಪಡಿಸಿ ಇತರ ವಿಭಾಗಗಳಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶಗಳಿವೆ' ಎಂದು ವೈಟ್ ಹೇಳಿದ್ದಾರೆ.`ಸೂಪರ್ ಓವರ್'ನಲ್ಲಿ ಆರ್‌ಸಿಬಿ ಪರ ಬೌಲ್ ಮಾಡಿದ ವಿನಯ್ ಕುಮಾರ್ ಅವರ ಓವರ್‌ನಲ್ಲಿ ವೈಟ್ ಎರಡು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 17 ರನ್ ಕಲೆಹಾಕಿದ್ದರು. ಈ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸನ್‌ರೈಸರ್ಸ್ ಪರ ಬೌಲ್ ಮಾಡಿದ ಡೇಲ್ ಸ್ಟೇಯ್ನ ಎದುರಾಳಿ ತಂಡದ ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿಗೆ 15 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದರು.`ಪಂದ್ಯದಲ್ಲಿ ನಮಗೆ ಗೆಲುವು ಪಡೆಯುವ ಹಲವು ಅವಕಾಶಗಳು ಲಭಿಸಿದ್ದವು. ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದೆವು. ಎಲ್ಲ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯಕ್ಕೆ ಸಜ್ಜಾಗಬೇಕಿದೆ' ಎಂದು ಆರ್‌ಸಿಬಿಯ ಮೊಸೆಸ್ ಹೆನ್ರಿಕ್ಸ್ ನುಡಿದಿದ್ದಾರೆ.

ಪ್ರತಿಕ್ರಿಯಿಸಿ (+)