ಮಂಗಳವಾರ, ಜೂನ್ 22, 2021
27 °C
ಹುಬ್ಬಳ್ಳಿಯಲ್ಲಿ ಅಂಗವಿಕಲರ ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿ ಆರಂಭ

ಬ್ಯಾಟಿಂಗ್‌ ಸೊಬಗು; ಡೈವಿಂಗ್‌ ರೋಮಾಂಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಪಾಯಿಂಟ್‌ ಕ್ಷೇತ್ರದಲ್ಲಿದ್ದ ಫೀಲ್ಡರ್‌ ಎಸೆದ ಚೆಂಡು ಸ್ಟಂಪ್‌ಗೆ ಬಡಿಯದೆ ಮುಂದೆ ಸಾಗುತ್ತಿದ್ದಂತೆ ಚಿರತೆಯ ವೇಗದಲ್ಲಿ ಜಿಗಿದ ತುಷಾರ್‌ ಬ್ಯಾಟ್ಸ್‌ಮನ್‌ಗಳ ‘ಓಟ’ಕ್ಕೆ ತಡೆ ಹಾಕಿದಾಗ ಸಹ ಆಟಗಾರರು ಮೈದಾನದಿಂದ ಮತ್ತು ಪೆವಿಲಿಯನ್‌ನಿಂದ ಚಪ್ಪಾಳೆಯ ಮಳೆ ಸುರಿಸಿದರು.ಇದಕ್ಕೂ ಮೊದಲು ಪಂದ್ಯದ ಮೊದಲ ಎಸೆತದಲ್ಲೇ ಎದುರಾಳಿ ತಂಡದ ಆಟಗಾರ ಶಿವನಾರಾಯಣ ಅವರ ಸ್ಟಂಪ್ ಎಗರಿಸಿದ ಎಡಗೈ ವೇಗಿ ರಫೀಕುಲ್‌ ಟೂರ್ನಿಗೆ ರೋಚಕ ಆರಂಭ ಒದಗಿಸಿ ಕೆಲವೇ ಸಂಖ್ಯೆಯ ಪ್ರೇಕ್ಷಕರ ಹೃದಯ ಕುಣಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ದೇಬಬ್ರತ್ ರಾಯ್‌ ಮತ್ತು ಉತ್ಪಲ್‌ ಗಳಿಸಿದ ಆಕರ್ಷಕ ಬೌಂಡರಿ­ಗಳು ಮೈದಾನದಲ್ಲಿ ಸಂಭ್ರಮದ ಅಲೆಗಳನ್ನು ಎಬ್ಬಿಸಿತು.ಇಂಥ ಅನೇಕ ಪ್ರಸಂಗಗಳು ಇಲ್ಲಿನ ಬುಧವಾರ ಆರಂಭಗೊಂಡ ಅಖಿಲ ಭಾರತ ಅಂಗವಿಕಲರ ಕ್ರಿಕೆಟ್‌ ಸಂಸ್ಥೆ ಆಶ್ರಯದ ‘ಡೆನಿಸನ್‌ ಟ್ರೋಫಿ’ ಅಂಗವಿಕಲರ ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಯಲ್ಲಿ ದಿನದುದ್ದಕ್ಕೂ ಕಂಡು ಬಂದವು.ಅಂಗವೈಕಲ್ಯವನ್ನು ಮರೆತು ಕ್ರಿಕೆಟ್‌ ಮೂಲಕ ಜೀವನೋತ್ಸಾಹ ಹೆಚ್ಚಿಸಿಕೊಂಡಿರುವವರ ಕ್ರಿಕೆಟ್‌ ಇದು. ದೇಶದ ವಿವಿಧ ವಲಯಗಳಿಂದ ಬಂದಿ­ರುವ ಎಂಟು ತಂಡಗಳು ಪಾಲ್ಗೊಂಡಿರುವ ಟೂರ್ನಿಯ ಪಂದ್ಯಗಳು ಕೆಎಸ್‌ಸಿಎ ಮೈದಾನ ಮತ್ತು ದೇಶಪಾಂಡೆ ನಗರದ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ನಡೆಯುತ್ತಿದ್ದು ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ನ ರೋಮಾಂ­ಚನದ ಸವಿ ಇದೆ. ಸೊಟ್ಟಗಿರುವ ಕಾಲು, ಒಂದೇ ಕೈ ಇತ್ಯಾದಿ ನ್ಯೂನತೆ ಇದ್ದರೂ ಸೊಗಸಾದ ಬ್ಯಾಟಿಂಗ್‌ ಜೊತೆಗೆ ಡೈವಿಂಗ್‌ನ ರೋಚಕತೆಯನ್ನೂ ಪ್ರದರ್ಶಿಸುತ್ತಿದ್ದಾರೆ ಈ ಆಟಗಾರರು. ಕೆಎಸ್‌ಸಿಎ ಮೈದಾನದಲ್ಲಿ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಪಶ್ಚಿಮ ಬಂಗಾಳದ ಆಟಗಾರರು ವಿದರ್ಭ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿದರು. ಮೊದಲ ಎಸೆತ­ದಲ್ಲೇ ವಿದರ್ಭದ ವಿಕೆಟ್ ಕಬಳಿಸಿದ ರಫೀಕುಲ್‌ ಸಂಭ್ರಮ, ಸಂಜು ವಿಕೆಟ್‌ ಕಬಳಿಸಿದ ಗೋಬಿಂದೋ, ನಾಯಕ ಶೈಲೇಶ್‌ ವಾಸ್ನಿಕ್‌ ಕ್ಯಾಚ್‌ ಪಡೆದ ಫೀಲ್ಡರ್‌ನ ಕೇಕೆ ಇತ್ಯಾದಿ ಮೊದಲ ಇನ್ನಿಂಗ್ಸ್‌ನ ಹೈಲೈಟ್ಸ್‌.4.4 ಓವರ್‌ಗಳಲ್ಲಿ ಜಯ ಗಳಿಸಿದ ಪಶ್ಚಿಮ ಬಂಗಾಳ ತಂಡದ ಬ್ಯಾಟಿಂಗ್‌ ಮೊದಲ ಪಂದ್ಯಕ್ಕೂ ಟೂರ್ನಿಗೂ ಭರ್ಜರಿ ಆರಂಭ ಒದಗಿಸಿಕೊಟ್ಟಿತು. ದೇಬಬ್ರತ್‌ ರಾಯ್‌ ಅವರ ಆನ್‌ಡ್ರೈವ್‌ಗಳು, ಉತ್ಪಲ್‌ ಅವರ ಲಾಫ್ಟ್‌ಗಳು ಹಸಿರು ಅಂಗಣದಲ್ಲಿ ಖ್ಯಾತ ಆಟಗಾರರು ಆಡಿದ ನೆನಪುಗಳಿಗೆ ಮರುಜೀವ ತುಂಬಿದವು.ನಂತರದ ಪಂದ್ಯದಲ್ಲಿ ಗುಜರಾತ್‌ನ ಮೂರು ವಿಕೆಟ್‌ ಕಬಳಿಸಿದ ತಮಿಳುನಾಡು ತಂಡದ ವಿ.ಹರಿ, ಎರಡನೇ ಇನ್ನಿಂಗ್ಸ್‌ನಲ್ಲಿ ಗುಜರಾತ್‌ನ ನಾಲ್ಕು ವಿಕೆಟ್ ಕಬಳಿಸಿದ ವೇದ್‌ ಪ್ರಕಾಶ್‌, ಅಜೇಯ 31 ರನ್‌ ಗಳಿಸಿ ಪಶ್ಚಿಮ ಬಂಗಾಳಕ್ಕೆ ಎರಡನೇ ಜಯ ತಂದುಕೊಟ್ಟ ಬಬಾನ್‌ ಸಿಂಗ್‌ ಮುಂತಾದವರು ಕೆಎಸ್‌ಸಿಎ ಮೈದಾನದಲ್ಲಿ ಮಿಂಚು ಹರಿಸಿದರು. ಕರ್ನಾಟಕ ಜಿಮ್ಖಾನಾ ಮೈದಾನದಲ್ಲೂ ಉತ್ತಮ ಹೋರಾಟ ಕಂಡು ಬಂತು. ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಉರುಳಿಸಿದ ಆಂಧ್ರಪ್ರದೇಶದ ಅನಿಲ್‌ ನಾಯ್ಡು, ಮೂರು ವಿಕೆಟ್‌ ಕಬಳಿಸಿದ ಮಧ್ಯಪ್ರದೇಶದ ಪ್ರದೀಪ ಬಿ, ಎರಡನೇ ಪಂದ್ಯದಲ್ಲಿ ಅಜೇಯ 33 ರನ್‌ ಗಳಿಸಿದ ಹರಿಯಾಣದ ಆರಂಭಿಕ ಆಟಗಾರ ಪ್ರದೀಪ ಚಾಹಲ್‌ ಮುಂತಾದವರು ಗಮನ ಸೆಳೆದರು.ಉದ್ಘಾಟನೆ

ಬೆಳಿಗ್ಗೆ  ಸುಂದರ ವಾತಾವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತ ಅಥ್ಲೀಟ್‌ ಎಂ.ಮಹಾದೇವ ಟೂರ್ನಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಕ್ರಿಕೆಟಿಗ ಅಶೋಕ ವಾಡೇಕರ್‌ ಸುಂದರವಾದ ಕೆಎಸ್‌ಸಿಎ ಮೈದಾನವನ್ನು ನೋಡಿದರೆ ಹಳೆಯ ನೆನಪುಗಳು ಮರುಕಳಿಸುತ್ತವೆ ಎಂದು ಹೇಳಿದರು.‘ಅಂಗವಿಕಲ ಕ್ರೀಡಾಪಟುಗಳು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಆದರೂ ಕ್ರೀಡೆಯಲ್ಲಿ ಅರ್ಪಣಾ ಮನೋಭಾವದಿಂದ ತೊಡಗಿಸಿಕೊಂಡಿದ್ದಾರೆ. ಅಂಥವರಿಗೆ ಪ್ರೋತ್ಸಾಹ ನೀಡಲು ಸಮಾಜ ಮುಂದೆ ಬರಬೇಕು’ ಎಂದು ಅವರು ಹೇಳಿದರು. ಅಂಗವಿಕಲರ ಕ್ರಿಕೆಟ್‌ ಸಂಸ್ಥೆಯ ಚೇರ್‌ಮನ್‌ ಉಮೇಶ ನಾರಾಯಣ ಕುಲಕರ್ಣಿ, ಕೆಎಸ್‌ಸಿಎ ಧಾರವಾಡ ವಲಯದ ಸಂಚಾಲಕ ಬಾಬಾ ಭೂಸದ, ರಾಜ್ಯ ಅಂಗವಿಕ­ಲರ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಗುಂಜಾಳ, ಶಂಕರ ಅಯ್ಯರ್‌, ಡೆನಿಸನ್‌ ಹೋಟೆಲ್‌ನ ಚೇತನ್‌ ಕಾಮತ್‌, ಅಭಿಷೇಕ್‌ ನಾಯಕ್‌ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.