ಬ್ಯಾಟಿಂಗ್ ಪಿಚ್‌ನಲ್ಲೂ ಎಡವಿದ್ದೇಕೆ?

7
ಕ್ರಿಕೆಟ್: ಹೊಸ ನಿಯಮಗಳಿಗೆ ಹೊಂದಿಕೊಳ್ಳಲು ಪರದಾಡುತ್ತಿರುವ `ಮಹಿ' ಬಳಗ

ಬ್ಯಾಟಿಂಗ್ ಪಿಚ್‌ನಲ್ಲೂ ಎಡವಿದ್ದೇಕೆ?

Published:
Updated:
ಬ್ಯಾಟಿಂಗ್ ಪಿಚ್‌ನಲ್ಲೂ ಎಡವಿದ್ದೇಕೆ?

ರಾಜ್‌ಕೋಟ್: ಭಾರತ ತಂಡದ ಶಕ್ತಿ ಅಡಗಿರುವುದೇ ಬ್ಯಾಟಿಂಗ್‌ನಲ್ಲಿ. ಮಹೇಂದ್ರ ಸಿಂಗ್ ದೋನಿ ಬಳಗ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡುವ ಪಿಚ್‌ಗಳನ್ನು ಬಯಸುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಪಂದ್ಯ ಬ್ಯಾಟ್ಸ್‌ಮನ್‌ಗಳ `ಸ್ವರ್ಗ' ಎನಿಸಿದ ಪಿಚ್‌ನಲ್ಲಿ ನಡೆದರೂ ಭಾರತಕ್ಕೆ ಜಯ ದೊರೆಯಲಿಲ್ಲ. ಈ ಪಂದ್ಯದಲ್ಲಿ ಎದುರಾದ ಸೋಲು ತಂಡದ ಸಾಮರ್ಥ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.



ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಸ್‌ಸಿಎ) ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಒಂಬತ್ತು ರನ್‌ಗಳ ರೋಚಕ ಗೆಲುವು ಪಡೆದಿತ್ತು. ಹೊಸ ಕ್ರೀಡಾಂಗಣದ ಪಿಚ್ ಯಾವ ರೀತಿ ಇರಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಆದರೆ ಈ ಪಿಚ್ ರಾಜ್‌ಕೋಟ್‌ನಲ್ಲಿ ಇದುವರೆಗೆ ಅಂತರರಾಷ್ಟ್ರೀಯ ಪಂದ್ಯಗಳು ನಡೆಯುತ್ತಿದ್ದ ಮಾಧವರಾವ್ ಸಿಂಧಿಯಾ ಕ್ರೀಡಾಂಗಣದ ಪಿಚ್‌ನ `ಕಾರ್ಬನ್ ಕಾಪಿ'ಯಂತೆ ಇದೆ.

ಮಾಧವರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ಈ ಹಿಂದೆ ಹಲವು ದೊಡ್ಡ ಮೊತ್ತದ ಹೋರಾಟಗಳು ನಡೆದಿದ್ದವು. ಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲೇ ಬೃಹತ್ ಮೊತ್ತದ ಪೈಪೋಟಿ ಕಂಡುಬಂತು.



ಭಾರತ ತವರು ನೆಲದಲ್ಲಿ ಇದುವರೆಗೆ 326 ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆಲುವು ಪಡೆದಿಲ್ಲ. 2002 ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 325 ರನ್‌ಗಳನ್ನು ಬೆನ್ನಟ್ಟಿ ಗೆಲುವು ಪಡೆದದ್ದು ಅತ್ಯುತ್ತಮ ಸಾಧನೆ ಎನಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ಇದನ್ನು ಮೀರಿ ನಿಲ್ಲುವ ಭರವಸೆ ಮೂಡಿಸಿತ್ತು. ಆದರೆ ಕೆಲವೇ ರನ್‌ಗಳ ಅಂತರದಲ್ಲಿ ವಿಫಲವಾಗಿದೆ.



ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿ ಅಗ್ರ ಕ್ರಮಾಂಕದ ಎಲ್ಲ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಪ್ರದರ್ಶನ ಮೂಡಿಬಂದಿತ್ತು. ಆದರೆ ಪ್ರಮುಖ ಘಟ್ಟಗಳಲ್ಲಿ ಒಬ್ಬೊಬ್ಬರೇ ಔಟಾದದ್ದು ಮುಳುವಾಗಿ ಪರಿಣಮಿಸಿತು. ಕೊನೆಯವರೆಗೆ ಕ್ರೀಸ್‌ನಲ್ಲಿ ನಿಲ್ಲುವ ಛಲ ಯಾರೂ ತೋರಲಿಲ್ಲ.



ಒತ್ತಡದ ಸಂದರ್ಭಗಳಲ್ಲಿ ಉತ್ತಮವಾಗಿ ಆಡುವ ಸಾಮರ್ಥ್ಯ ದೋನಿಗೆ ಇದೆ. ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಅವರು ಆಡಿದ ಇನಿಂಗ್ಸ್ ಅದಕ್ಕೆ ಉತ್ತಮ ಉದಾಹರಣೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದೋನಿ ಕ್ರೀಸ್‌ನಲ್ಲಿರುವವರೆಗೂ ಭಾರತಕ್ಕೆ ಗೆಲುವಿನ ಭರವಸೆಯಿತ್ತು. ಅವರ ವಿಕೆಟ್ ಪತನ ಪಂದ್ಯಕ್ಕೆ ತಿರುವು ನೀಡಿತು.



ಭಾರತದ ಹಾಗೆ ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗ ಕೂಡಾ ಅನನುಭವಿಗಳಿಂದಲೇ ಕೂಡಿದೆ. ಬ್ಯಾಟಿಂಗ್ ಕ್ರಮಾಂಕ ನೋಡುವಾಗ ಇಂಗ್ಲೆಂಡ್‌ಗಿಂತ ಭಾರತವೇ ಬಲಿಷ್ಠವಾಗಿ ಕಾಣುತ್ತದೆ. ಆದರೂ ಸೋಲು ಅನುಭವಿಸಿದ್ದು ಅಚ್ಚರಿಗೆ ಎಡೆಮಾಡಿಕೊಟ್ಟಿದೆ.



ಹೊಸ ನಿಯಮದಿಂದ ಹೆಚ್ಚಿದ ಸವಾಲು:

ಏಕದಿನ ಕ್ರಿಕೆಟ್ ನಿಯಮದಲ್ಲಿ ಐಸಿಸಿ ತಂದಿರುವ ಕೆಲವು ಬದಲಾವಣೆಗಳು ಭಾರತಕ್ಕೆ ಸವಾಲಾಗಿ ಪರಿಣಮಿಸಿದೆ. 30 ಯಾರ್ಡ್ ಸರ್ಕಲ್ ಹೊರಗೆ ಕೇವಲ ನಾಲ್ಕು ಫೀಲ್ಡರ್‌ಗಳು ಮಾತ್ರ (`ಪವರ್ ಪ್ಲೇ' ಅವಧಿ ಹೊರತುಪಡಿಸಿ) ನಿಲ್ಲಬೇಕೆಂಬುದು ಹೊಸ ನಿಯಮ.



ಸ್ಪಿನ್ನರ್‌ಗಳನ್ನೇ ನೆಚ್ಚಿಕೊಂಡಿರುವ ಭಾರತಕ್ಕೆ ಇದು ಹಿನ್ನಡೆ ಉಂಟುಮಾಡಿದೆ ಎನ್ನಬಹುದು. ಬೌಂಡರಿ ಗೆರೆ ಕಾಯಲು ಹೆಚ್ಚಿನ ಫೀಲ್ಡರ್‌ಗಳು ಇಲ್ಲದಿರುವಾಗ ಬ್ಯಾಟ್ಸ್‌ಮನ್‌ಗಳು ಭರ್ಜರಿ ಹೊಡೆತಗಳಿಗೆ ಮುಂದಾಗುವರು. ಇದರಿಂದ ಸ್ಪಿನ್ ಬೌಲರ್‌ಗಳಿಗೆ ಒತ್ತಡದಲ್ಲೇ ಇರಬೇಕಾಗುತ್ತದೆ. ಯುವರಾಜ್ ಸಿಂಗ್ ಒಳಗೊಂಡಂತೆ `ಪಾರ್ಟ್ ಟೈಮ್' ಬೌಲರ್‌ಗಳಿಗೆ ಚೆಂಡು ನೀಡಲು ದೋನಿ ಹಿಂಜರಿಯುತ್ತಿರುವುದರ ಹಿಂದಿನ ಕಾರಣ ಇದೇ ಆಗಿದೆ.



ಅಂತಿಮ ಇಲೆವೆನ್‌ನಲ್ಲಿ ಏಳು ಬ್ಯಾಟ್ಸ್‌ಮನ್‌ಗಳಿಗೆ ಸ್ಥಾನ ನೀಡಬೇಕೇ, ಬೇಡವೇ ಎಂಬುದು ಕೂಡಾ ಬಲುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ತಂಡದಲ್ಲಿ ಒಬ್ಬ ಅನುಭವಿ ಬೌಲರ್ ಇರಬೇಕು ಎಂಬ ಉದ್ದೇಶದಿಂದ ಈ ಸರಣಿಗೆ ಇಶಾಂತ್ ಶರ್ಮಗೆ ಸ್ಥಾನ ನೀಡಲಾಗಿದೆ. ಆದರೆ ಶುಕ್ರವಾರ ನೀಡಿದ ಪ್ರದರ್ಶನ ನೋಡಿದರೆ ಇಶಾಂತ್ ತಂಡಕ್ಕೆ ಹೊರೆಯಾಗಿ ಪರಿಣಮಿಸಿದ್ದಾರೆ.  ಅವರು 10 ಓವರ್‌ಗಳಲ್ಲಿ 86 ರನ್ ನೀಡಿದ್ದರು.



ಮೊದಲ ಪಂದ್ಯದಲ್ಲಿ ಸ್ಥಳೀಯ ಆಟಗಾರ ಚೇತೇಶ್ವರ ಪೂಜಾರಗೆ ಸ್ಥಾನ ನೀಡಿದ್ದರೆ ಚೆನ್ನಾಗಿತ್ತು ಎಂದು ಭಾವಿಸುವವರೂ ಇದ್ದಾರೆ. ಆದರೆ ದೋನಿ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ. ಪೂಜಾರ ಆಡದ್ದು ಹಿನ್ನಡೆ ಉಂಟುಮಾಡಿತೇ ಎಂಬ ಪ್ರಶ್ನೆಗೆ ಅವರು ತಟ್ಟನೆ `ಇಲ್ಲ' ಎಂದು ಉತ್ತರಿಸಿದ್ದರು. ಪಾಕಿಸ್ತಾನ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಪ್ರಭಾವಿ ಪ್ರದರ್ಶನ ನೀಡಿದ್ದ ಶಮಿ ಅಹ್ಮದ್ ಅವರನ್ನು ಹೊರಗಿಟ್ಟ ನಿರ್ಧಾರ ಕೂಡಾ ಟೀಕೆಗೆ ಎಡೆಮಾಡಿಕೊಟ್ಟಿದೆ.



ಎರಡನೇ ಏಕದಿನ ಪಂದ್ಯ ಕೊಚ್ಚಿಯಲ್ಲಿ ಮಂಗಳವಾರ ನಡೆಯಲಿದೆ. ತಂಡವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ದೋನಿಗೆ ಸಾಕಷ್ಟು ಸಮಯಾವಕಾಶ ಲಭಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry