ಬ್ಯಾಟಿಂಗ್ ಮಹಾಕಾವ್ಯದ ರಮ್ಯಕವಿ ಲಕ್ಷ್ಮಣ್

7

ಬ್ಯಾಟಿಂಗ್ ಮಹಾಕಾವ್ಯದ ರಮ್ಯಕವಿ ಲಕ್ಷ್ಮಣ್

Published:
Updated:
ಬ್ಯಾಟಿಂಗ್ ಮಹಾಕಾವ್ಯದ ರಮ್ಯಕವಿ ಲಕ್ಷ್ಮಣ್

ಕೋಲ್ಕತ್ತ: ಅಬ್ಬರದ ಹೊಡೆತಗಳ ಪ್ರಾಸದ ಚುಟುಕು ಕವಿತೆಯಂತೆ ಮುದ ನೀಡುವ ಇನಿಂಗ್ಸ್ ಬರೆಯುವುದಿಲ್ಲ. ಹತ್ತಾರು ನುಡಿಗಳ ಹಾಡಿನಂತೆ ಆಡುವುದಂತೂ ಸಾಧ್ಯವೇ ಇಲ್ಲ. ಬರೆಯುವುದಾದರೆ ಅದು ಅದ್ಭುತ ಬ್ಯಾಟಿಂಗ್ `ಮಹಾಕಾವ್ಯ~ವೇ ಆಗಿರಬೇಕು. ಅದೇ ಲಕ್ಷ್ಮಣ್ ಆಟದ ರೀತಿ.ಬ್ಯಾಟ್ ಹಿಡಿದು ನಿಂತರ ಚೆಂಡನ್ನು ದಂಡಿಸುವಾಗಲೂ ಮಧುರವಾದ ಪ್ರೀತಿ. ಆದ್ದರಿಂದಲೇ ಅದು ಉಗ್ರವಾದ ಆಟವೆನಿಸದು. ಪ್ರೇಮದ ಶಾಯಿ ತುಂಬಿದ ಲೇಖನಿಯಂತೆ ಅವರ ಬ್ಯಾಟ್. ಆದ್ದರಿಂದಲೇ ಎದೆಯೊಳಗೆ ಗಟ್ಟಿಯಾಗಿ ನಿಲ್ಲುವಂಥ ಇನಿಂಗ್ಸ್ ಕಟ್ಟುವ ರಮ್ಯಕವಿಯಾಗುತ್ತಾರೆ `ವಿವಿಎಸ್~. ರಮಣೀಯ ತಾಣದಲ್ಲಿ ಕುಳಿತು ಕವಿ ಕಾವ್ಯ ಬರೆಯುವಂತೆಯೇ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಈ ಬ್ಯಾಟ್ಸ್‌ಮನ್ ಬೆರಗಾಗಿಸುವಂಥ ಆಟದ ಕಾವ್ಯ ಬರೆಯುತ್ತಲೇ ಸಾಗಿದ್ದಾರೆ. ಅದೇ ವಿಶೇಷ. ಅಂಥ ವಿಶಿಷ್ಟ    ಇನಿಂಗ್ಸ್‌ಗಳ ಸಾಲಿಗೆ ಮತ್ತೊಂದು ಅಜೇಯ ಶತಕವೂ ಸೇರಿಕೊಂಡಿದೆ.ನೆಚ್ಚಿನ ಅಂಗಳದಲ್ಲಿ ಮೆಚ್ಚುವಂಥ ಬ್ಯಾಟಿಂಗ್. ಪ್ರತಿಯೊಂದು ಹೊಡೆತವೂ ಲಯಬದ್ಧ. ಅದೇ ಗತಿಯಲ್ಲಿ ರನ್‌ಗಳ ಸುಗ್ಗಿ. ವಿರಸದಿಂದ ಅಲ್ಲ ಸರಸದಿಂದ ಲಕ್ಷ್ಮಣ್ ಚೆಂಡಿನ ಕೆನ್ನೆಗೆ ತಟ್ಟಿದಾಗ ಪ್ರೇಕ್ಷಕರ ಎದೆಯಲ್ಲಿಯೂ ಮೃದು ಮಧುರ ಗಾನ. ಹೈದರಾಬಾದ್‌ನ ಈ ಕ್ರಿಕೆಟಿಗ ಶತಕ ಮುಟ್ಟಿ ಬ್ಯಾಟ್ ಎತ್ತಿದಾಗ ಗ್ಯಾಲರಿಯಲ್ಲಿ ಕುಳಿತ ಚೆಂದದ ಚೆಲುವೆಯ ಮುಖದಲ್ಲಿಯೂ ತಿದ್ದಿ ತೀಡಿದ ಮುದ್ದಾದ ಮಂದಹಾಸ.ಇಂಥದೊಂದು ಇನಿಂಗ್ಸ್ ಕಟ್ಟಿದ ಲಕ್ಷ್ಮಣ್ (176; 280 ಎಸೆತ, 12 ಬೌಂಡರಿ) ಅವರಿಗೆ ಏಳನೇ ವಿಕೆಟ್‌ನಲ್ಲಿ ಜೊತೆಯಾಗಿ ನಿಂತಿದ್ದು ನಾಯಕ ಮಹೇಂದ್ರ ಸಿಂಗ್ ದೋನಿ (144; 175 ಎ., 10 ಬೌಂಡರಿ, 5 ಸಿಕ್ಸರ್). ಹೊಂದಿಕೆಯಾಗದ ಜುಗಲ್‌ಬಂದಿ ಅದು. `ಮಹಿ~ಗೆ ಚೆಂಡನ್ನು ಬೌಂಡರಿಗೆ ಅಟ್ಟುವ ಆತುರ. ಆದರೆ ವಿವಿಎಸ್ ಅವರದ್ದು ಮಾತ್ರ ಮಂದಗತಿ. ರಾಂಚಿಯ ಮಿಂಚು ದೋನಿ ಅವರು ಲಾಂಗ್‌ಆನ್‌ನಲ್ಲಿ ಸಿಡಿಸಿದ ಸಿಕ್ಸರ್‌ಗಳ ಅದ್ಭುತದ ನಡುವೆಯೂ ಲಕ್ಷ್ಮಣ್ ಹೊಳಪು ಕಳೆದುಕೊಳ್ಳಲಿಲ್ಲ. ಅಂತೂ ಇವರಿಬ್ಬರ ಜೊತೆಯಾಟದಲ್ಲಿ ಬಂದಿದ್ದು 224 (304 ಎಸೆತ) ರನ್.ಪರಿಣಾಮವಾಗಿ ಪ್ರವಾಸಿ ವೆಸ್ಟ್ ಇಂಡೀಸ್‌ಗೆ ಸಂಕಷ್ಟ. ಮೊದಲ ಇನಿಂಗ್ಸ್‌ನಲ್ಲಿಯೇ ಅದರ ಮುಂದೆ ಬೃಹತ್ ಮೊತ್ತದ ಸವಾಲು. ಏಳು ವಿಕೆಟ್ ನಷ್ಟಕ್ಕೆ 631 ರನ್‌ಗಳನ್ನು ಗಳಿಸಿದ ಆತಿಥೇಯ ಭಾರತದವರಿಗೆ ಮಾತ್ರ ಭಾರಿ ಸಮಾಧಾನ. ಮೊದಲ ದಿನ ರಾಹುಲ್ ದ್ರಾವಿಡ್ ಶತಕದೊಂದಿಗೆ ವಿಶ್ವಾಸ ಪಡೆದಿದ್ದ ತಂಡಕ್ಕೆ ಲಕ್ಷ್ಮಣ್ ಹಾಗೂ ದೋನಿ ಅವರ ಶತಕದಾಟದಿಂದ ಇನ್ನಷ್ಟು ಬಲ. ಈಗ ಇನಿಂಗ್ಸ್ ಗೆಲುವಿ ಪಾತರಗಿತ್ತಿ ಹಿಡಿಯುವತ್ತ ಚಿತ್ತ.ಬೌಲಿಂಗ್ ಕೂಡ ಪ್ರಭಾವಿಯಾಗುವ ಸ್ಪಷ್ಟ ಸಂಕೇತ ಸಿಕ್ಕಾಗಿದೆ. ಕೆರಿಬಿಯನ್ನರನ್ನು ಈಗಿರುವ ಮೊತ್ತದಲ್ಲಿಯೇ ಎರಡು ಬಾರಿ ಕಟ್ಟಿಹಾಕುವ ವಿಶ್ವಾಸವಂತೂ `ಮಹಿ~ ಪಡೆಗಿದೆ. ಆದರೆ ಅದಕ್ಕೆ ಇಲ್ಲಿನ ವಾತಾವರಣ ಸಾಥ್ ನೀಡಬೇಕು. ಮಂದಬೆಳಕಿನಿಂದ ಬಾಕಿ ಮೂರು ದಿನಗಳಾಟದಲ್ಲಿ ಹೆಚ್ಚಿನ ಕಾಲ ಕಳೆದು ಹೋದರೆ ಜಯದ ನಿರೀಕ್ಷೆ ಕೈಬಿಡಬೇಕಾದ ಆತಂಕ.ದ್ವಿತಿಯ ಟೆಸ್ಟ್‌ನ ಎರಡನೇ ದಿನದ ಆಟಕ್ಕೆ ಮಂದ ಬೆಳಕಿನ ಕಾರಣ ಬೇಗ ತೆರೆ ಬೀಳುವ ಹೊತ್ತಿಗೆ ವಿಂಡೀಸ್‌ಗೆ ಭಾರತದವರು ಎರಡು ಪೆಟ್ಟು ಕೊಟ್ಟಿದ್ದು ಮಹತ್ವದ್ದು. ವೆಸ್ಟ್ ಇಂಡೀಸ್ ತನ್ನ ಆರಂಭಿಕ ಜೋಡಿಯನ್ನು ಕಳೆದುಕೊಂಡಿದೆ. ಆದ್ದರಿಂದ ಇನಿಂಗ್ಸ್ ಬೆಳೆಸುವುದು ದೊಡ್ಡ ಸವಾಲು. 12 ಓವರುಗಳಲ್ಲಿ 34 ರನ್ ಮಾತ್ರ ಗಳಿಸಿರುವ ಪ್ರವಾಸಿಗಳು ಇನ್ನೂ 597 ರನ್ ಹಿಂದಿದ್ದಾರೆ.ಇನಿಂಗ್ಸ್‌ಗೆ ಭದ್ರ ಬುನಾದಿ ಹಾಕಬೇಕೆಂದು ಹನ್ನೊಂದರ ಪಟ್ಟಿಗೆ ಸೇರಿದ್ದ ಆ್ಯಡ್ರಿನ್ ಭರತ್ ಒಂದೇ ರನ್‌ನೊಂದಿಗೆ ನಿರ್ಗಮನ. ಉಮೇಶ್ ಯಾದವ್ ಅವರ ಎರಡನೇ ಎಸೆತವೇ ಭರತ್‌ಗೆ ಆಘಾತಕಾರಿ. ವೀರೇಂದ್ರ ಸೆಹ್ವಾಗ್ ಕೈಗೆ ಅವರು ಸುಲಭವಾಗಿ ಚೆಂಡನ್ನೊಪ್ಪಿಸಿದರು. ಭಾನುವಾರವಷ್ಟೇ `ಪ್ರೀತಿ~ಯನ್ನು ವಿವಾಹವಾಗಿ              ಮತ್ತೆ ಬೌಲಿಂಗ್ ಕರ್ತವ್ಯ ನಿರ್ವಹಿಸಲು ಬಂದಿರುವ ರವಿಚಂದ್ರನ್ ಅಶ್ವಿನ್‌ಗೆ ಕ್ರೇಗ್ ಬ್ರಾಥ್‌ವೈಟ್ ಅವರ ವಿಕೆಟ್ ಮೊದಲ ಉಡುಗೊರೆ.ಬ್ಯಾಟಿಂಗ್‌ನಲ್ಲಿ ಪ್ರಭಾವಿ ಎನಿಸಿದ ಆತಿಥೇಯರು ಬೌಲಿಂಗ್‌ನಲ್ಲಿಯೂ ಯಶಸ್ವಿಯಾಗುವ ನಿರೀಕ್ಷೆಯಂತೂ ಇದೆ. ಚೆಂಡು ತಿರುವು ಪಡೆಯುತ್ತಿದೆ. ಆದ್ದರಿಂದ ಬಾಕಿ ಮೂರು ದಿನಗಳಲ್ಲಿ ಯಶಸ್ಸಿನ ಕಡೆಗೆ ಓಟ ಸಾಧ್ಯವಾಗಬಹುದು. ಮೂರನೇ ದಿನವಾದ ಬುಧವಾರದ ಆಟವು ಬೆಳಿಗ್ಗೆ 8.30ಕ್ಕೆ ಆರಂಭವಾಗಲಿದೆ. ಆಗ ಪಿಚ್‌ನಲ್ಲಿ ತೇವ ಇರುವ ಸಾಧ್ಯತೆಯೂ ಹೆಚ್ಚು. ಅಂಥ ಪರಿಸ್ಥಿತಿ ವೇಗಿಗಳಿಗೆ ಪ್ರಯೋಜನಕಾರಿ. ಮುಂಚೂಣಿಯ ವೇಗಿ ಇಶಾಂತ್ ಶರ್ಮ ದಾಳಿಯೂ ಮೊನಚು ಪಡೆದರೆ ಎದುರಾಳಿ ಪಡೆಗೆ ಆಪತ್ತು ಖಚಿತ!

22 ಸಂವತ್ಸರ ಪೂರೈಸಿದ ಸಚಿನ್

ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22 ಸಂವತ್ಸರಗಳನ್ನು ಪೂರೈಸಿದರು. 1989ರ ನವೆಂಬರ್ 15ರಂದು ಕರಾಚಿಯಲ್ಲಿ ಪಾಕಿಸ್ತಾನ ಎದುರು ಪದಾರ್ಪಣೆ ಮಾಡಿದ್ದರು.

 

ಸ್ಕೋರ್ ವಿವರ:

ಭಾರತ: ಪ್ರಥಮ ಇನಿಂಗ್ಸ್ 151.2 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 631 ಡಿಕ್ಲೇರ್ಡ್‌

(ಸೋಮವಾರದ ಆಟದಲ್ಲಿ: 87.3 ಓವರುಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 346)

ವಿ.ವಿ.ಎಸ್.ಲಕ್ಷ್ಮಣ್ ಔಟಾಗದೆ  176

ಯುವರಾಜ್ ಸಿಂಗ್ ಎಲ್‌ಬಿಡಬ್ಲ್ಯು ಬಿ ಡರೆನ್ ಸಾಮಿ  25

ಎಂ.ಎಸ್. ದೋನಿ ಸಿ ಕಾರ್ಲ್‌ಟನ್ ಬಿ ಕೆಮರ್ ರೋಷ್  144

ರವಿಚಂದ್ರನ್ ಅಶ್ವಿನ್ ಔಟಾಗದೆ  04

ಇತರೆ: (ಬೈ-6, ಲೆಗ್‌ಬೈ-5, ವೈಡ್-2, ನೋಬಾಲ್-9)  22

ವಿಕೆಟ್ ಪತನ: 1-66 (ವೀರೇಂದ್ರ ಸೆಹ್ವಾಗ್; 12.1), 2-149 (ಗೌತಮ್ ಗಂಭೀರ್; 34.2), 3-205 (ಸಚಿನ್ ತೆಂಡೂಲ್ಕರ್; 51.6), 4-345 (ರಾಹುಲ್ ದ್ರಾವಿಡ್; 86.6), 5-346 (ಇಶಾಂತ್ ಶರ್ಮ; 87.3), 6-396 (ಯುವರಾಜ್ ಸಿಂಗ್; 97.5), 7-620 (ಮಹೇಂದ್ರ ಸಿಂಗ್ ದೋನಿ; 148.3).

ಬೌಲಿಂಗ್: ಫಿಡೆಲ್ ಎಡ್ವರ್ಡ್ಸ್  22.2-1-81-1 (ನೋಬಾಲ್-1), ಡರೆನ್ ಸಾಮಿ 25-0-132-2 (ವೈಡ್-1), ಕೆಮರ್ ರೋಷ್ 26-1-106-2 (ನೋಬಾಲ್-6, ವೈಡ್-1), ಮರ್ಲಾನ್ ಸ್ಯಾಮುಯಲ್ಸ್ 27-0-104-0, ದೇವೇಂದ್ರ ಬಿಶೋ  45-2-154-1 (ನೋಬಾಲ್-1), ಕ್ರೇಗ್ ಬ್ರಾಥ್‌ವೈಟ್ 6-0-43-1 (ನೋಬಾಲ್-1).ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 12 ಓವರುಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 34

ಎ. ಭರತ್ ಸಿ ವೀರೇಂದ್ರ ಸೆಹ್ವಾಗ್ ಬಿ ಉಮೇಶ್ ಯಾದವ್  01

ಬ್ರಾಥ್‌ವೈಟ್ ಸಿ ಗೌತಮ್ ಗಂಭೀರ್ ಬಿ ರವಿಚಂದ್ರನ್ ಅಶ್ವಿನ್  17

ಕ್ರಿಕ್ ಎಡ್ವರ್ಡ್ಸ್ ಬ್ಯಾಟಿಂಗ್  12

ಡರೆನ್ ಬ್ರಾವೊ ಬ್ಯಾಟಿಂಗ್  04

ವಿಕೆಟ್ ಪತನ: 1-3 (ಆ್ಯಡ್ರಿನ್ ಭರತ್; 1.2), 2-30 (ಕ್ರೇಗ್ ಬ್ರಾಥ್‌ವೈಟ್; 11.1).

ಬೌಲಿಂಗ್: ಪ್ರಗ್ಯಾನ್ ಓಜಾ 6-2-10-0, ಉಮೇಶ್ ಯಾದವ್ 1-0-3-1, ರವಿಚಂದ್ರನ್ ಅಶ್ವಿನ್ 5-2-21-1 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry