ಬ್ಯಾಟಿಂಗ್ ವೈಫಲ್ಯ; ಮತ್ತೆ ಮುಖಭಂಗ

7
ಪಾಕಿಸ್ತಾನಕ್ಕೆ ಸರಣಿಯಲ್ಲಿ ಗೆಲುವಿನ ಮುನ್ನಡೆ: ಮತ್ತೆ ಮಿಂಚಿದ ನಾಸಿರ್, ಜುನೇದ್

ಬ್ಯಾಟಿಂಗ್ ವೈಫಲ್ಯ; ಮತ್ತೆ ಮುಖಭಂಗ

Published:
Updated:
ಬ್ಯಾಟಿಂಗ್ ವೈಫಲ್ಯ; ಮತ್ತೆ ಮುಖಭಂಗ

ಕೋಲ್ಕತ್ತ: ತಂಡಕ್ಕೆ ಮರಳಿದ ರವೀಂದ್ರ ಜಡೇಜ ಉಪಯುಕ್ತ ಬೌಲಿಂಗ್‌ನಿಂದ ಒದಗಿಸಿಕೊಟ್ಟ ಮೇಲುಗೈಯನ್ನು ಭಾರತ ತಂಡದ ಬ್ಯಾಟ್ಸಮನ್ನರು ಗೆಲುವಿಗೆ ಬಳಸಿಕೊಳ್ಳಲು ವಿಫಲರಾದರು.ಹೊನಲು ಬೆಳಕಿನಲ್ಲಿ ವಿಜೃಂಭಿಸಿದ ಪಾಕಿಸ್ತಾನದ ವೇಗ ಮತ್ತು ಸ್ಪಿನ್ ಬೌಲರ್‌ಗಳ ಎದುರು ಭಾರತ ಆರಂಭದಿಂದಲೇ ಪರದಾಡಿ ಗುರುವಾರ ಎರಡನೇ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲೂ ಸೋಲನುಭವಿಸಿತು.ಪಕ್ಕಾ ವೃತ್ತಿಪರ ಆಟವಾಡಿದ ಪಾಕಿಸ್ತಾನ 85 ರನ್‌ಗಳಿಂದ ಆತಿಥೇಯರನ್ನು ಸೋಲಿಸಿ ಮೂರು ಪಂದ್ಯಗಳ  ಏಕದಿನ ಸರಣಿಯಲ್ಲಿ 2-0 ಗೆಲುವಿನ ಮುನ್ನಡೆ ಪಡೆಯಿತು. ಭಾನುವಾರ ದೆಹಲಿಯಲ್ಲಿ ನಡೆಯುವ ಅಂತಿಮ ಪಂದ್ಯ ಸರಣಿಯ ಅಂತರ ಹೆಚ್ಚು ಕಮ್ಮಿ ಮಾಡಲಷ್ಟೇ ಸಾಧ್ಯ. ಈಡನ್ ಗಾರ್ಡನ್‌ನಲ್ಲಿ ಸತತ ನಾಲ್ಕನೇ ಬಾರಿಯೂ ಪಾಕಿಸ್ತಾನ, ಭಾರತದ ವಿರುದ್ಧ ಗೆಲುವಿನ ನಗೆ ಬೀರಿತು.ಎಡಗೈ ಬ್ಯಾಟ್ಸ್‌ಮನ್ ನಾಸಿರ್ ಜಮ್ಷೆದ್ (106, 124 ಎಸೆತ, 2 ಸಿಕ್ಸರ್, 12 ಬೌಂಡರಿ) ಸತತ ಎರಡನೇ ಶತಕ ಹೊಡೆದ ನಂತರ ಪಾಕಿಸ್ತಾನ ಬ್ಯಾಟಿಂಗ್ ಕುಸಿದಿತ್ತು. ಆದರೆ ಗೆಲ್ಲಲು 251 ರನ್‌ಗಳ ಗುರಿಯನ್ನು ಹೊಂದಿದ್ದ ಭಾರತ ಆರಂಭದಲ್ಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.ಗೌತಮ್ ಗಂಭಿರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಅನಗತ್ಯ ಹೊಡೆತಗಳಿಗೆ ಹೋಗಿ ಬಲಿಯಾದರು. ಜುನೇದ್ ಖಾನ್ ಆರಂಭದ ಸ್ಪೆಲ್‌ನಲ್ಲಿ (7 ಓವರುಗಳಲ್ಲಿ 18ಕ್ಕೆ2) ಭಾರತವನ್ನು ಮತ್ತೊಮ್ಮೆ ಕಾಡಿದರು. ನಂತರ ಸ್ಪಿನ್ನರ್‌ಗಳಾದ ಹಫೀಜ್ ಮತ್ತು ಸಯೀದ್ ಅಜ್ಮಲ್ (20ಕ್ಕೆ3) ಕಟ್ಟಿಹಾಕಿದರು.ಗಂಭೀರ್ (11) ಹೊರ ಹೋಗುತ್ತಿದ್ದ ಚೆಂಡನ್ನು ವಿಕೆಟ್‌ಗೆ ಎಳೆದುಕೊಂಡರೆ, ಕೊಹ್ಲಿ (6), ಜುನೇದ್ ಬೌಲಿಂಗ್‌ನಲ್ಲಿ ಲೆಗ್‌ಸ್ಟಂಪ್‌ನಾಚೆ ಇದ್ದ ಚೆಂಡನ್ನು ಹಿಂದೆ ತಿರುಗಿಸಲು ಹೋಗಿ ವಿಕೆಟ್‌ಕೀಪರ್ ಕಮ್ರಾನ್ ಅಕ್ಮಲ್ ಎಡಕ್ಕೆ ಜಿಗಿದು ಹಿಡಿದ ಉತ್ತಮ ಕ್ಯಾಚಿಗೆ ಬಲಿಯಾದರು.

ಯುವರಾಜ್ ಸಿಂಗ್ (9) ದೊಡ್ಡ ಹೊಡೆತಕ್ಕೆ ಹೋಗಿ ವಿಕೆಟ್ ಕೀಪರ್‌ಗೆ ಕ್ಯಾಚಿತ್ತ ಮೇಲೆ (70 ರನ್ನಿಗೆ 4 ವಿಕೆಟ್) ಭಾರತ ಗೆಲುವಿನ ಯತ್ನಿಸಿದಂತೆ ಕಾಣಲಿಲ್ಲ. ವಿರೇಂದ್ರ ಸೆಹ್ವಾಗ್ (31) ಎಂದಿಗಿಂತ ಸ್ವಲ್ಪ ಹೆಚ್ಚು ಹೊತ್ತು ಆಡಿದ್ದೇ ಬಂತು.ಕಳೆದ ಪಂದ್ಯದಂತೆ ನಾಯಕ ದೋನಿ ಏಕಾಂಗಿಯಾಗಿ ಆಡಿ 54 ರನ್‌ಗಳೊಡನೆ (89 ಎಸೆತ, 1 ಸಿಕ್ಸರ್, 4 ಬೌಂಡರಿ) ಔಟಾಗದೇ ಉಳಿದರು. ಇನಿಂಗ್ಸ್‌ನಲ್ಲಿ ಬೌಂಡರಿಗಳೇ ಬತ್ತಿ ಹೋಗಿದ್ದವು. 11ನೇ ಓವರಿನಿಂದ 40 ಓವರುಗಳ ನಡುವೆ ಬಂದಿದ್ದು ಬರೇ ಎರಡು ಬೌಂಡರಿಗಳು ಮಾತ್ರ!ಸತತವಾಗಿ ವಿಫಲರಾಗಿದ್ದ ರೋಹಿತ್ ಶರ್ಮ ಬದಲು ಆಲ್‌ರೌಂಡರ್ ರವೀಂದ್ರ ಜಡೇಜ ಅವರನ್ನು ತಂಡಕ್ಕೆ ತೆಗೆದುಕೊಂಡಿದ್ದು ಸೂಕ್ತ ನಿರ್ಧಾರವಾಗಿತ್ತು. ಅಪಾಯಕಾರಿಯಾಗಿ ಕಾಣುತ್ತಿದ್ದ ಮೊಹಮದ್ ಹಫೀಜ್ (74 ಎಸೆತಗಳಲ್ಲಿ 76, 10 ಬೌಂಡರಿ), ನಾಸಿರ್ ಜಮ್ಷೆದ್ ಮತ್ತು ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಅವರನ್ನು ಮೂರು ಓವರುಗಳ ಅಂತರದಲ್ಲಿ ಬಲಿ ಪಡೆದು ಪಾಕ್ ಕುಸಿತಕ್ಕೆ ಅವರು ದಾರಿ ಮಾಡಿಕೊಟ್ಟರು.ಬ್ಯಾಟಿಂಗ್ ಪವರ್‌ಪ್ಲೇ ಅವಧಿಯಲ್ಲಿ ಮೊದಲ ಓವರ್‌ನಲ್ಲೇ ನಿರ್ಗಮಿಸಿದ ನಾಯಕ ಮಿಸ್ಬಾ (2), ಅಶ್ವಿನ್‌ಗೆ ಬಲಿಯಾದರು. ನಂತರ ಇಶಾಂತ್ ಶರ್ಮ ಮೂರು ವಿಕೆಟ್‌ಗಳನ್ನು ಪಡೆದು ಪಾಕ್ ಪತನಕ್ಕೆ ಕಾರಣಾದರು.ಇದಕ್ಕೆ ಮೊದಲು ಎಡಗೈ ಆಟಗಾರ ನಾಸಿರ್ ಜಮ್ಷೆದ್ ಮತ್ತು ಮಹಮದ್ ಹಫೀಜ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಟಾಸ್ ಸೋತು ಆಡಲು ಇಳಿದ ಪಾಕಿಸ್ತಾನ ಮೊದಲ 24 ಓವರುಗಳಲ್ಲಿ 141 ರನ್ ಕಲೆಹಾಕಿ ನಾಗಾಲೋಟದಲ್ಲಿ ಸಾಗಿತ್ತು. ಬೆಳಗಿನ ಜಾವ ಒಂದಿಷ್ಟು ಮಳೆಯಾಗಿದ್ದರಿಂದ ಪಿಚ್ ಬೌಲರ್‌ಗಳಿಗೆ ನೆರವಾಗಬಹುದೆಂಬ ನಾಯಕ ದೋನಿ ನಿರೀಕ್ಷೆ ಹುಸಿಯಾಯಿತು. ಅದು ಒಂದೇ ರೀತಿ ವರ್ತಿಸಿತು.ಚೆನ್ನೈ ಪಂದ್ಯದಲ್ಲಿ ವಿಫಲರಾದ ಮಹಮದ್ ಹಫೀಜ್ ಜತೆ ಜಮ್ಷೆದ್ ನಾಸಿರ್ ಭಾರತದ ಕ್ಷೇತ್ರರಕ್ಷಕರ ಮಧ್ಯೆ ಯಿಂದ ಚೆಂಡನ್ನು ಆರಾಮವಾಗಿ ಬೌಂಡರಿಗಳಿಗೆ ಅಟ್ಟತೊಡಗಿದರು. ಭುವನೇಶ್ವರ ಕುಮಾರ್ ಆಗಲಿ, ಅಶೋಕ್ ದಿಂಡಾ ಆಗಲಿ ಪರಿಣಾಮಕಾರಿಯಾಗಲಿಲ್ಲ.ಅಶ್ವಿನ್ ಬೌಲಿಂಗ್‌ನಲ್ಲಿ ವಿಶ್ವಾಸಭರಿತ ಆಫ್ ಡ್ರೈವ್‌ನೊಡನೆ ಶತಕ ದಾಟಿದ ನಾಸಿರ್ ಇರುವವರೆಗೆ ಪಾಕಿಸ್ತಾನ 280-300 ಮೊತ್ತ ಗಳಿಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಪಾಕ್ ಗಳಿಸಲು ಶಕ್ತವಾಗಿದ್ದು 250 ರನ್‌ಗಳನ್ನಷ್ಟೇ. ಆದರೆ ಆ ಮೊತ್ತ ಭಾರತ ತಂಡಕ್ಕೆ 15 ಓವರುಗಳಾಗುವಷ್ಟರಲ್ಲಿ ದೊಡ್ಡದಾಗಿ ಕಂಡಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry