ಬ್ಯಾಟ್ಸ್‌ಮನ್‌ಗಳು ಮಿಂಚುವ ವಿಶ್ವಕಪ್: ಡೇನಿಯಲ್ ವೆಟೋರಿ ಭವಿಷ್ಯ

7

ಬ್ಯಾಟ್ಸ್‌ಮನ್‌ಗಳು ಮಿಂಚುವ ವಿಶ್ವಕಪ್: ಡೇನಿಯಲ್ ವೆಟೋರಿ ಭವಿಷ್ಯ

Published:
Updated:
ಬ್ಯಾಟ್ಸ್‌ಮನ್‌ಗಳು ಮಿಂಚುವ ವಿಶ್ವಕಪ್: ಡೇನಿಯಲ್ ವೆಟೋರಿ ಭವಿಷ್ಯ

ನಾಗಪುರ (ಪಿಟಿಐ): ಯಾವುದೇ ರೀತಿಯ ಪಿಚ್ ಇರಲಿ ಅದಕ್ಕೆ ಹೊಂದಿಕೊಂಡು ಆಡಿ ದೊಡ್ಡದೊಂದು ಕನಸು ನನಸಾಗಿಸಿಕೊಳ್ಳುವ ಆಶಯದೊಂದಿಗೆ ಬಂದಿದ್ದೇವೆ ಎಂದು ನ್ಯೂಜಿಲೆಂಡ್ ತಂಡ ನಾಯಕ ಡೇನಿಯಲ್ ವೆಟೋರಿ ಹೇಳಿದರು.

‘ಬ್ಯಾಟ್ಸ್‌ಮನ್‌ಗಳು ಮಿಂಚುವ ವಿಶ್ವಕಪ್’ ಇದಾಗಿರುತ್ತದೆಂದು ಭವಿಷ್ಯ ನುಡಿದಿರುವ ವೆಟೋರಿ ತಮ್ಮ ತಂಡವೂ ಬ್ಯಾಟಿಂಗ್‌ನಲ್ಲಿ ಬಲವುಳ್ಳದ್ದಾಗಿದೆ ಎಂದು ವಿಶ್ವಾಸದಿಂದ ನುಡಿದರು.

ಕಿವೀಸ್ ತಂಡದ ಆಟಗಾರರಾದ ಬ್ರೆಂಡನ್ ಮೆಕ್ಲಮ್, ಜೆಸ್ಸಿ ರೈಡರ್, ಜ್ಯಾಮಿ ಹೌವ್, ಮಾರ್ಟಿನ್ ಗುಪ್ಟಿಲ್, ರಾಸ್ ಟೇಲರ್, ಸ್ಕಾಟ್ ಸ್ಟೈರಿಸ್, ಕೇನ್ ವಿಲಿಯಮ್ಸನ್, ಜೇಮ್ಸ್ ಫ್ರಾಂಕ್ಲಿನ್, ಜೇಕಬ್ ಓರಾಮ್, ನಥಾನ್ ಮೆಕ್ಲಮ್, ಲುಕ್ ವುಡ್‌ಕಾಕ್, ಕೇಲ್ ಮಿಲ್ಸ್, ಟಿಮ್ ಸೌಥೀ ಹಾಗೂ ಹ್ಯಾಮಿಷ್ ಬೆನೆಟ್ ಅವರು ಗುರುವಾರ ಇಲ್ಲಿ ತಾಲೀಮಿನಲ್ಲಿ ಪಾಲ್ಗೊಂಡರು.

ಪ್ರೇರಣೆ ನೀಡುವ ರೋಡ್ಸ್ (ಕೊಲಂಬೊ ವರದಿ): ವಿಶ್ವಖ್ಯಾತ ಕ್ಷೇತ್ರರಕ್ಷಕ ಜಾಂಟಿ ರೋಡ್ಸ್ ಅವರು ತಮ್ಮ ತಂಡದ ಕೋಚಿಂಗ್ ಸಿಬ್ಬಂದಿಯಲ್ಲಿ ಇರುವುದರಿಂದ ಪ್ರೇರಣೆ ಸಿಗುವಂತ ವಾತಾವರಣವಿದೆ ಎಂದು ಕೀನ್ಯಾ ತಂಡದ ಪ್ರಮುಖ ಆಟಗಾರರ ಕಾಲಿನ್ಸ್ ಒಬುಯಾ ಅಭಿಪ್ರಾಯಪಟ್ಟಿದ್ದಾರೆ.

2003ರಲ್ಲಿ ಅಚ್ಚರಿಪಡುವ ರೀತಿಯಲ್ಲಿ ಸೆಮಿಫೈನಲ್ ತಲುಪಿದ್ದ ಕೀನ್ಯಾದವರು ಕೆಲವು ವರ್ಷಗಳಿಂದ ಅನೇಕ ಕೊರತೆಗಳನ್ನು ಅನುಭವಿಸಿದ್ದರು. ಅದರಲ್ಲಿಯೂ ಕ್ಷೇತ್ರ ರಕ್ಷಣೆ ಸಾಕಷ್ಟು ದುರ್ಬಲವಾಗಿತ್ತು. ಆದರೆ ರೋಡ್ಸ್ ಅವರನ್ನು ಕ್ಷೇತ್ರ ರಕ್ಷಣೆಯ ತರಬೇತಿಗೆ ಕರೆದುಕೊಂಡು ಬಂದ ನಂತರ ಮಿಂಚಿನ ವೇಗದಲ್ಲಿ ಮುನ್ನುಗ್ಗಿ ಚೆಂಡನ್ನು ತಡೆಯುವ ಶಕ್ತಿಯನ್ನು ಕೀನ್ಯಾ ಆಟಗಾರರು ಪ್ರದರ್ಶಿಸತೊಡಗಿದ್ದಾರೆ. ‘ರೋಡ್ಸ್ ಪ್ರತಿಯೊಬ್ಬ ಆಟಗಾರನಲ್ಲಿ ವಿಶ್ವಾಸ ಹೆಚ್ಚುವಂತೆ ಮಾಡಿದ್ದಾರೆ’ ಎಂದರು ಒಬುಯಾ.

ಗುರುವಾರ ಅಭ್ಯಾಸದ ನಂತರ ಮಾತನಾಡಿದ ಕೀನ್ಯಾ ತಂಡದ ನಾಯಕ ಜಿಮ್ಮಿ ಕಮಾಂಡೆ ಅವರು ‘2003ರ ವಿಶ್ವಕಪ್‌ನಲ್ಲಿ ನಮ್ಮ ತಂಡವು ಸೆಮಿಫೈನಲ್ ತಲುಪಿದ್ದು ಕನಸಿನ ಅನುಭವ. ಈಗಲೂ ಅಂಥ ಅಚ್ಚರಿ ಸಾಧ್ಯ. ಆದರೆ ಆತುರವಿಲ್ಲ; ಒಂದೊಂದು ಪಂದ್ಯವನ್ನು ಸವಾಲಾಗಿ ಸ್ವೀಕರಿಸಿ ಆಡುತ್ತಾ ಸಾಗುತ್ತೇವೆ’ ಎಂದು ಹೇಳಿದರು.

ವಿಶ್ವಾಸ ಪಡೆದಿದ್ದೇವೆ (ಚೆನ್ನೈ ವರದಿ): ಕಳೆದ ಕೆಲವು ವರ್ಷಗಳಲ್ಲಿ ದೇಶದ ಕ್ರಿಕೆಟ್ ಸಾಕಷ್ಟು ಸಂಕಷ್ಟದಲ್ಲಿ ಸಾಗಿ ಈಗ ಮತ್ತೆ ಚೇತರಿಸಿಕೊಂಡಿದೆ. ತಂಡಕ್ಕೆ ಒಂದು ಸ್ಪಷ್ಟ ಸ್ವರೂಪವೂ ದೊರೆತಿದೆ. ಆಟಗಾರರೂ ನಿಧಾನವಾಗಿ ವಿಶ್ವಾಸ ಪಡೆದಿದ್ದಾರೆ ಎಂದು ಜಿಂಬಾಬ್ವೆ ತಂಡದ ನಾಯಕ ಎಲ್ಟಾನ್ ಚಿಗುಂಬುರಾ ಅವರು ತಿಳಿಸಿದರು.

‘ದೊಡ್ಡ ನಿರೀಕ್ಷೆ ಏನೂ ಇಲ್ಲ. ಮೊದಲು ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಪ್ರಬಲ ತಂಡಗಳು ನಮ್ಮ ಗುಂಪಿನಲ್ಲಿವೆ. ಆದ್ದರಿಂದ ಯಶಸ್ಸು ಭಾರಿ ಕಷ್ಟದ ಹಾದಿ ಮುಂದಿದೆ’ ಎಂದು ಈ ತಂಡದ ಕೋಚ್ ಆ್ಯಲನ್ ಬುಚರ್ ನುಡಿದರು. ದುಬೈನಲ್ಲಿ ಕೆಲವು ದಿನ ಇದ್ದು ಅಭ್ಯಾಸ ಮಾಡಿದ್ದು ಆಟಗಾರರಿಗೆ ಪ್ರಯೋಜನಕಾರಿ ಆಗಿದೆ ಎಂದು ಕೂಡ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಕ್ವಾರ್ಟರ್ ಫೈನಲ್ ಗುರಿ (ಢಾಕಾ ವರದಿ): ಕೆನಡಾ ತಂಡದವರು ಈ ಬಾರಿಯ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ನಾಯಕ ಆಶಿಶ್ ಬಾಗೈ ಅವರು ‘ಒಂದು ತಂಡವಾಗಿ ನಮ್ಮ ಸಾಮರ್ಥ್ಯವೇನು ಎನ್ನುವುದನ್ನು ಸ್ಪಷ್ಟವಾಗಿ ಅರಿತಿದ್ದೇವೆ. ಅದರ ಆಧಾರದಲ್ಲಿ ಗುರಿ ನಿರ್ಧರಿಸಿಕೊಂಡಿದ್ದೇವೆ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry