ಮಂಗಳವಾರ, ಮೇ 11, 2021
20 °C

ಬ್ಯಾಡಗಿ ಪುರಸಭೆಗೆ ಗ್ರಹಣ

ಪ್ರಜಾವಾಣಿ ವಾರ್ತೆ/ ವೀರೇಶ ಕೊಪ್ಪದ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ಹಿಂದೆ ಬ್ಯಾಡಗಿ ಪುರಸಭೆ ಬೆಳಗಾವಿ ವಿಭಾಗ ಮಟ್ಟದಲ್ಲಿ ಅತ್ಯುತ್ತಮ ಪುರಸಭೆ ಎನ್ನುವ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ನಾಲ್ಕು ಬಾರಿ ಮೊದಲ ಸ್ಥಾನ ಗಳಿಸುವ ಮೂಲಕ ಸುಮಾರು  ್ಙ  16.5ಲಕ್ಷ ಬಹುಮಾನ ಗಿಟ್ಟಿಸಿಕೊಂಡಿತ್ತು. ಇಷ್ಟು ಹಿರಿಮೆ ಹೊಂದಿರುವ ಪುರಸಭೆ ಸದ್ಯ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ವಿದ್ಯುತ್ ದೀಪಗಳ ನಿರ್ವಹಣೆ ಕೈಗೊಳ್ಳಲು ತಿಣಕಾಡುತ್ತಿದೆ.ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಚರಂಡಿಗಳಲ್ಲಿ ನೀರು ಹರಿಯದೆ ಕೊಳೆ ತುಂಬಿಕೊಂಡಿದೆ. ಚರಂಡಿಗಳ ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟದಿಂದ ರೋಸಿ ಹೋಗಿರುವ ಪಟ್ಟಣದ ಜನತೆ ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.40ಕ್ಕೂ ಹೆಚ್ಚು ಕಾಯಂ ಹಾಗೂ ಗುತ್ತಿಗೆ ಪೌರ ಕಾರ್ಮಿಕರರಿದ್ದರೂ ತಿಂಗಳಿಗೊಮ್ಮೆಯಾದರೂ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಅಧಿಕಾರಿಗಳು ಸಹ ಒಂದಿಲ್ಲೊಂದು ಕಾರಣ ನೀಡಿ ಜಾರಿಕೊಳ್ಳುತ್ತಿದ್ದಾರೆ. ಹೀಗಾಗಿ ಪಟ್ಟಣದಲ್ಲಿ ಡೆಂಗೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪಟ್ಟಣದಲ್ಲಿ ಒಬ್ಬ ಬಾಲಕ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 4ಮಕ್ಕಳು ಶಂಕಿತ ಡೆಂಗೆ ಜ್ವರಕ್ಕೆ ಬಲಿಯಾಗಿದ್ದು, ನೂರಕ್ಕೂ ಹೆಚ್ಚು ಶಂಕಿತ ಡೆಂಗೆ ಪೀಡಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ ವಿದ್ಯಾನಗರ, ಇಸ್ಲಾಂಪುರ, ಹೂಗಾರ ಗಲ್ಲಿ, ಮುಖ್ಯ ರಸ್ತೆ, ಬನಶಂಕರಿ ರಸ್ತೆ, ಕಟಗರ ಓಣಿ, ಗಾಂಧಿನಗರ, ಗುಮ್ಮನಹಳ್ಳ ರಸ್ತೆ ಸೇರಿದಂತೆ ಚರಂಡಿಗಳಲ್ಲಿ ನಿಂತ ಕಲುಷಿತ ನೀರಿನಿಂದ ಸೊಳ್ಳೆಗಳು ಹೆಚ್ಚುತ್ತಿವೆ. ರಸ್ತೆ ಬದಿಗೆ ಹಾಕಿರುವ ಘನತಾಜ್ಯವನ್ನು ಪುರಸಭೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಹಂದಿಗಳ ಕಾಟ ಸಹ ಹೆಚ್ಚಾಗಿದೆ ಎಂದು ವಿದ್ಯಾನಗರದ ನಿವಾಸಿಗಳಾದ ಮಾಲತೇಶ ಬುಲಬುಲೆ, ಚಂದ್ರಶೇಖರ ಕೊಪ್ಪದ, ವಿ.ಎಂ.ಶಿರಗಂಬಿ ಆರೋಪಿಸುತ್ತಾರೆ. ಉರಿಯದ ಹೈಮಾಸ್ಟ್ ದೀಪಗಳು:  ್ಙ  10 ಲಕ್ಷಕ್ಕೂ ಹೆಚ್ಚು ಮೊತ್ತದ ಹಣವನ್ನು ಸಂಸದರ ನಿಧಿಯಿಂದ ಬಳಕೆ ಮಾಡಿಕೊಂಡು ಬಸ್ ನಿಲ್ದಾಣದ ನೆಹರೂ ವೃತ್ತ ಹಾಗೂ ಸುಭಾಷ್ ವೃತ್ತದಲ್ಲಿ ತಲಾ ಒಂದೊಂದು ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಈ ಎರಡು ವೃತ್ತಗಳಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ತೆರೆದುಕೊಂಡಿದ್ದು, ಪ್ರಖರವಾದ ಬೆಳಕಿನಿಂದ ವ್ಯಾಪಾರ ಕಡಿಮೆಯಾಗುತ್ತದೆ ಎನ್ನುವ ಉದ್ದೇಶದಿಂದ ಅವುಗಳ ಮಾಲೀಕರು ಪುರಸಭೆಯೊಂದಿಗೆ ಲಾಭಿ ನಡೆಸಿ ಹೈಮಾಸ್ಟ್ ವಿದ್ಯುತ್ ದೀಪಗಳು ಉರಿಯದಂತೆ ಮಾಡಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ. ಇದರಿಂದ ಪ್ರಮುಖ ವೃತ್ತಗಳಲ್ಲಿ ಕತ್ತಲೆ ಆವರಿಸಿದ್ದು ಬಸ್ ನಿಲ್ದಾಣದಿಂದ ಹೊರಡುವ  ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಕಿರಿಕಿರಿ ಅನುಭವಿಸುವಂತಾಗಿದೆ.ನೆಹರೂ ವೃತ್ತ ಈಗ ಕುಡುಕರ ಮೂತ್ರ ವಿಸರ್ಜನೆಯ ಸ್ಥಳವಾಗಿರುವುದು ಒಂದು ವಿಪರ್ಯಾಸದ ಸಂಗತಿಯಾಗಿದೆ. ಈ ಕುರಿತು ಹಲವು ಬಾರಿ ಪುರಸಭೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಸ್‌ಎಫ್‌ಐ ಜಿಲ್ಲಾ ಘಕಟದ ಉಪಾಧ್ಯಕ್ಷ ಮಂಜುನಾಥ ಪೂಜಾರ ಅಸಮಾಧಾನ ವ್ಯಕ್ತಪಡಿಸುತ್ತಾರೆ.ಪಟ್ಟಣದ ಐದು ಭಾಗಗಳಲ್ಲಿ ಮಿನಿ ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಕೋಳಿ ಮಾಂಸ ಮಾರಾಟ ಮಳಿಗೆ ತಲೆ ಎತ್ತಿರುವ ಎಸ್‌ಜೆಜೆಎಂ ಸರ್ಕಾರಿ ಪದವಿ ಪೂರ್ವ ಕಾಲೇಜು ವೃತ್ತ ಹಾಗೂ ಮದ್ಯದಂಗಡಿ ತಲೆ ಎತ್ತಿರುವ ಎಪಿಎಂಸಿ 2ನೇ ಗೇಟಿನ ಹತ್ತಿರದಲ್ಲಿ ಅಳವಡಿಸಿರುವ ಮಿನಿ ಹೈಮಾಸ್ಟ್ ದೀಪಗಳು ಬೆಳಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ವೃತ್ತದ ಮೂಲಕ ಹಾಯ್ದು ಹೋಗುವ ಮಹಿಳೆಯರು ಕತ್ತಲಾದರೆ ಇಲ್ಲಿ ಸಂಚರಿಸಲು ಹಿಂಜರಿಯುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.