ಸೋಮವಾರ, ಮೇ 16, 2022
29 °C
ಐಬಿಎಲ್ ಆಟಗಾರರ ಹರಾಜು: ಚೋಂಗ್, ಸೈನಾಗೆ ಭಾರಿಮೊತ್ತ; ಬೆಂಗಳೂರಿಗೆ ಕಶ್ಯಪ್

ಬ್ಯಾಡ್ಮಿಂಟನ್‌ನಲ್ಲಿ ಹಣದ ಝಣಝಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್): ನಿರೀಕ್ಷೆ ಸುಳ್ಳಾಗಲಿಲ್ಲ. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಟೂರ್ನಿಯ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಭಾರತದ ಆಟಗಾರ್ತಿ ಎನಿಸಿದರು.ಸೋಮವಾರ ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಐಬಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸೈನಾ 72 ಲಕ್ಷ ರೂಪಾಯಿ ಮೊತ್ತಕ್ಕೆ ಹೈದರಾಬಾದ್ ಹಾಟ್‌ಷಾಟ್ ಫ್ರಾಂಚೈಸ್ ಪಾಲಾದರು. ಆದರೆ ಈ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕೆ ಮಾರಾಟವಾಗಿದ್ದು ವಿಶ್ವ ಅಗ್ರ ರ‍್ಯಾಂಕ್‌ನ ಆಟಗಾರ ಮಲೇಷ್ಯಾದ ಲೀ ಚೋಂಗ್ ವೀ. ಅವರಿಗೆ 81 ಲಕ್ಷ ರೂಪಾಯಿ ನೀಡಿ ಮುಂಬೈ ಮಾಸ್ಟರ್ಸ್ ಫ್ರಾಂಚೈಸ್ ಖರೀದಿಸಿತು. ಸೈನಾ ಹಾಗೂ ಚೋಂಗ್ ಅವರ ಮೂಲಬೆಲೆಯನ್ನು 50 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿತ್ತು.ಲಂಡನ್ ಮೂಲದ ಬಾಬ್ ಹೆಟನ್ ಅವರು ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು. ಐಪಿಎಲ್ ಮಾದರಿಯಲ್ಲೇ ಆರಂಭಗೊಳ್ಳುತ್ತಿರುವ ಬ್ಯಾಡ್ಮಿಂಟನ್ ಲೀಗ್ ಆಗಸ್ಟ್ 14ರಿಂದ 31ರವರೆಗೆ ನಡೆಯಲಿದೆ.ಹೈದರಾಬಾದ್ ಅಥವಾ ಲಖನೌ ಫ್ರಾಂಚೈಸ್‌ನತ್ತ ಒಲವು ಹೊಂದಿರುವುದಾಗಿ ಸೈನಾ ಹರಾಜಿಗೆ ಮುನ್ನ ನುಡಿದಿದ್ದರು. ಅವರ ಆ ಆಸೆಯಂತೆ ತವರು ರಾಜ್ಯದ ಫ್ರಾಂಚೈಸ್ ಪಾಲಾದರು.ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಪಿ.ಕಶ್ಯಪ್ ಅವರನ್ನು ಬೆಂಗಳೂರಿನ ಬಾಂಗಾ ಬೀಟ್ಸ್ ಫ್ರಾಂಚೈಸ್ ಖರೀದಿಸಿತು. ಕಶ್ಯಪ್ ಅವರಿಗೆ ಈ ಫ್ರಾಂಚೈಸ್ ನೀಡಿದ ಹಣ 45 ಲಕ್ಷ ರೂಪಾಯಿ. ಕರ್ನಾಟಕದವರೇ ಆದ ಅರವಿಂದ್ ಭಟ್, ಅನೂಪ್ ಶ್ರೀಧರ್, ಆದಿತ್ಯ ಪ್ರಕಾಶ್ ಕೂಡ ಹರಾಜಿನಲ್ಲಿ ವಿವಿಧ ತಂಡಗಳ ಪಾಲಾದರು. ಇತ್ತೀಚಿನ ದಿನಗಳಲ್ಲಿ ಅಮೋಘ ಪ್ರದರ್ಶನದ ಮೂಲಕ ಮಿಂಚಿನ ಸಂಚಲನಕ್ಕೆ ಕಾರಣವಾಗಿರುವ ಪಿ.ವಿ.ಸಿಂಧು 48 ಲಕ್ಷ ರೂಪಾಯಿ ಮೊತ್ತಕ್ಕೆ ಸಹಾರಾ ಸಮೂಹದ ಲಖನೌ ವಾರಿಯರ್ಸ್ ಪಾಲಾದರು. ಚೋಂಗ್ ಅವರನ್ನು ಖರೀದಿಸಲು ಮುಂಬೈ ಮಾಸ್ಟರ್ಸ್ ಹಾಗೂ ದೆಹಲಿ ಸ್ಮ್ಯಾಷರ್ಸ್ ತಂಡಗಳು ಪೈಪೋಟಿಗಿಳಿದವು. ಆದರೆ ಮಲೇಷ್ಯಾದ ಈ ಆಟಗಾರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರ ಜಂಟಿ ಮಾಲೀಕತ್ವದ ಮುಂಬೈ ಮಾಸ್ಟರ್ಸ್ ಪಾಲಾದರು. ಅಷ್ಟೇನು ಹೆಸರು ಮಾಡಿರದ ಪ್ರದ್ಯಾ ಗಾದ್ರೆ ಹಾಗೂ ಕೆ.ಮನೀಷಾ ಅನಿರೀಕ್ಷಿತ ಮೊತ್ತಕ್ಕೆ ಮಾರಾಟವಾದರು. ಪ್ರದ್ಯಾ 27.6 ಲಕ್ಷ ರೂಪಾಯಿ ಮೊತ್ತಕ್ಕೆ ಹೈದರಾಬಾದ್ ಹಾಟ್‌ಷಾಟ್ ತಂಡ ಸೇರಿಕೊಂಡರು. ಮನೀಷಾ 15.6 ಲಕ್ಷ ರೂಪಾಯಿಗೆ ಲಖನೌ ವಾರಿಯರ್ಸ್ ಪಾಲಾದರು. ಈ ಮೊದಲು ನಿಗದಿಪಡಿಸಲಾಗಿದ್ದ ಮೂಲಬೆಲೆಗಿಂತ ಹೆಚ್ಚು ಹಣ ಪಡೆದರು.ಹರಾಜಿನಲ್ಲಿ ಭಾಗವಹಿಸಿದ್ದ ಪ್ರತಿ ಫ್ರಾಂಚೈಸ್‌ಗೂ ವೆಚ್ಚ ಮಿತಿ ಹೇರಲಾಗಿತ್ತು. ಆರು ಸ್ವದೇಶಿ, ನಾಲ್ಕು ವಿದೇಶಿ ಹಾಗೂ ಒಬ್ಬ ಜೂನಿಯರ್ ಆಟಗಾರನನ್ನು ಒಳಗೊಂಡ ತಂಡ ಖರೀದಿಸಲು ಫ್ರಾಂಚೈಸ್‌ಗಳು ತಲಾ 1.5 ಕೋಟಿ ರೂಪಾಯಿ ಹಣ ಖರ್ಚು ಮಾಡಲು ಅವಕಾಶ ನೀಡಲಾಗಿತ್ತು.ಅಶ್ವಿನಿ, ಜ್ವಾಲಾ ಮೂಲಬೆಲೆ ಕಡಿಮೆ: `ಆರಂಭದಲ್ಲಿ ಅಶ್ವಿನಿ ಹಾಗೂ ಜ್ವಾಲಾ ಅವರನ್ನು ಯಾರೂ ಖರೀದಿಸಲಿಲ್ಲ. ಹಾಗಾಗಿ ನಾವು ಅವರ ಮೂಲಬೆಲೆಯನ್ನು 15 ಲಕ್ಷ ರೂಪಾಯಿಗೆ ನಿಗದಿಪಡಿಸಿದ್ದೆವು. ಎಲ್ಲಾ ಐಕಾನ್ ಆಟಗಾರರನ್ನು ಹರಾಜು ಪಟ್ಟಿಯಲ್ಲಿ ಸೇರಿಸಿದ್ದೆವು' ಎಂದು ಸ್ಪೋರ್ಟ್ಸ್ ಸಲ್ಯೂಷನ್ಸ್‌ನ ಸಿಇಒ ಆಶೀಶ್ ಚಡ್ಡಾ ನುಡಿದರು. ಹರಾಜು ಯಶಸ್ವಿಯಾಗಿದೆ: `ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಭಾರತದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯತ್ತ ಎಷ್ಟು ಆಸಕ್ತಿ ಇದೆ ಎಂಬುದಕ್ಕೆ ಈ ಪ್ರತಿಕ್ರಿಯೆ ಸಾಕ್ಷಿ. ಆಟಗಾರರಿಗೆ ಉತ್ತಮ ಮೊತ್ತ ನೀಡಿ ಫ್ರಾಂಚೈಸ್‌ಗಳು ಖರೀದಿಸಿವೆ. ಇದೊಂದು ಸಕಾರಾತ್ಮಕ ಬೆಳವಣಿಗೆ. ಅಷ್ಟು ಮಾತ್ರವಲ್ಲದೇ, ಆಟಗಾರರು ಪ್ರಾಯೋಜಕರಿಂದಲೂ ಹಣ ಪಡೆಯಲಿದ್ದಾರೆ' ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಅಖಿಲೇಶ್ ದಾಸ್ ಗುಪ್ತಾ ತಿಳಿಸಿದ್ದಾರೆ.`ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಐಬಿಎಲ್ ಉತ್ತಮ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿವೆ. ಈಗ ಆಟಗಾರರಿಗೆ ಲಭಿಸಿರುವ ಹಣ ಉತ್ತಮ ಪ್ರದರ್ಶನ ತೋರಲು ಅವರಿಗೆ ಸ್ಫೂರ್ತಿಯಾಗಲಿ' ಎಂದು ರಾಷ್ಟ್ರೀಯ ತಂಡದ ಕೋಚ್ ಪಿ.ಗೋಪಿಚಂದ್ ನುಡಿದರು.ಲಖನೌ ತಂಡದ ಹೆಸರು ಬದಲಾವಣೆ: ಸಹಾರಾ ಸಮೂಹದ ಲಖನೌ ವಾರಿಯರ್ಸ್ ತಂಡದ ಹೆಸರು ಬದಲಾಗುವ ಸಾಧ್ಯತೆ ಇದೆ. ಅದಕ್ಕೆ ಬದಲಾಗಿ ಅವಧ್ ವಾರಿಯರ್ಸ್ ಎಂದು ಹೆಸರಿಡುವ ನಿರೀಕ್ಷೆ ಇದೆ. ಆದರೆ ಅಧಿಕೃತವಾಗಿ ಈ ಬಗ್ಗೆ ನಂತರ ಹೇಳುತ್ತೇವೆ ಎಂದು ಸಹಾರಾ ಇಂಡಿಯಾ ಪರಿವಾರ ತಿಳಿಸಿದೆ.ಅಶ್ವಿನಿ, ಜ್ವಾಲಾಗೆ ನಿರಾಸೆ

ಐಬಿಎಲ್ ಹರಾಜಿನಲ್ಲಿ ತುಂಬಾ ನಿರಾಸೆಗೆ ಕಾರಣವಾಗಿದ್ದು ಡಬಲ್ಸ್ ಪರಿಣತರಾದ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ. ಐಕಾನ್ ಆಟಗಾರರ ಪಟ್ಟಿಯಲ್ಲಿದ್ದ ಇವರಿಬ್ಬರ ಮೂಲಬೆಲೆಯನ್ನು 50 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಆದರೆ ಡಬಲ್ಸ್ ಆಟಗಾರ್ತಿಯರು ಎಂಬ ಕಾರಣಕ್ಕೆ ಕಡಿಮೆ ಮೊತ್ತಕ್ಕೆ ಮಾರಾಟವಾದರು. ಹೈದರಾಬಾದ್‌ನ ಜ್ವಾಲಾ ಅವರಿಗೆ 18.6 ಲಕ್ಷ ರೂಪಾಯಿ ನೀಡಿ ದೆಹಲಿ ಸ್ಮ್ಯಾಷರ್ಸ್ ಫ್ರಾಂಚೈಸ್ ಖರೀದಿಸಿತು. ಕರ್ನಾಟಕದ ಅಶ್ವಿನಿ ಅವರನ್ನು ಪುಣೆ ಪಿಸ್ಟನ್ಸ್ ಫ್ರಾಂಚೈಸ್ ತನ್ನದಾಗಿಸಿಕೊಂಡಿತು. ಆದರೆ ಕೇವಲ 15 ಲಕ್ಷ ರೂಪಾಯಿ ನೀಡಿತು.ಅಶ್ವಿನಿ ಹಾಗೂ ಜ್ವಾಲಾ ಈ ಟೂರ್ನಿಯಲ್ಲಿ ಕೇವಲ ಮಿಶ್ರ ಡಬಲ್ಸ್ ವಿಭಾಗದಲ್ಲಿ ಆಡಲಿದ್ದಾರೆ. ಈ ಕಾರಣ ಫ್ರಾಂಚೈಸ್‌ಗಳು ಅವರತ್ತ ಹೆಚ್ಚು ಗಮನ ಹರಿಸಲಿಲ್ಲ. ಈ ಟೂರ್ನಿಯಲ್ಲಿ ಮಹಿಳಾ ಡಬಲ್ಸ್ ಪಂದ್ಯಗಳು ಇಲ್ಲ. ಬದಲಾಗಿ ಪುರುಷರ ಎರಡು ಸಿಂಗಲ್ಸ್ ಪಂದ್ಯಗಳು, ಮಹಿಳೆಯರ ಒಂದು ಸಿಂಗಲ್ಸ್ ಪಂದ್ಯ, ಪುರುಷರ ಒಂದು ಡಬಲ್ಸ್ ಹಾಗೂ ಒಂದು ಮಿಶ್ರ ಡಬಲ್ಸ್ ಪಂದ್ಯ ನಡೆಯಲಿವೆ. ಪ್ರತಿ ಫ್ರಾಂಚೈಸ್ ಮುಖಾಮುಖಿ ವೇಳೆ ಒಟ್ಟು ಐದು ಪಂದ್ಯಗಳನ್ನು ಆಡಲಿವೆ.ನಮಗೆ ಸಮತೋಲನದಿಂದ ಕೂಡಿದ ತಂಡ ಲಭಿಸಿದೆ. ಆದರೆ ಲೀ ಚೋಂಗ್ ವೀ ಅವರನ್ನು ಖರೀದಿಸಬೇಕು ಎಂಬ ಆಸೆ ಇತ್ತು. ಏಕೆಂದರೆ ನಾನು ಅವರ ಕೋಚ್. ಈಗ ನಮಗೆ ಜ್ವಾಲಾ ಗುಟ್ಟಾ ಲಭಿಸಿದ್ದಾರೆ. ಅವರು ಹಾಗೂ ವಿ.ದಿಜು ಮಿಶ್ರ ಡಬಲ್ಸ್‌ನಲ್ಲಿ ಪಂದ್ಯ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ

-ದೆಹಲಿ ಸ್ಮ್ಯಾಷರ್ಸ್ ತಂಡದ ಕೋಚ್ ರಶೀದ್ ಸಿಡೆಕ್.

ಹರಾಜಿನಲ್ಲಿ ನಮಗೆ ಸೈನಾ ನೆಹ್ವಾಲ್ ಹಾಗೂ ತೌಫಿಕ್ ಹಿದಾಯತ್ ಲಭಿಸಿದ್ದಾರೆ. ಸೈನಾ ಭಾರತದ ಬ್ಯಾಡ್ಮಿಂಟನ್‌ಗೆ ಶಕ್ತಿ ತುಂಬಿದ ಆಟಗಾರ್ತಿ

-ರಾಜೀವ್ ಕಾಮಿನೇನಿ, ಹೈದರಾಬಾದ್ ಹಾಟ್‌ಷಾಟ್ ತಂಡದ ಮಾಲೀಕ

ತಂಡದ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯವಾಗಿತ್ತು. ಅಶ್ವಿನಿ ಅವರನ್ನು ಖರೀದಿಸಿದ ಬಳಿಕ ಫಿಷರ್ ನೀಲ್ಸನ್ ಅವರನ್ನು ತಂಡಕ್ಕೆ ಸೆಳೆಯುವುದು ಅಗತ್ಯವಾಗಿತ್ತು. ಅದಕ್ಕಾಗಿ ಹರಾಜಿನಲ್ಲಿ ಕಠಿಣ ಪೈಪೋಟಿ ಎದುರಾಯಿತು

-ಪುಣೆ ಪಿಸ್ಟನ್ಸ್ ಕೋಚ್ ನಿಖಿಲ್ ಕಾನಿಟ್ಕರ್ಬೇಸರವಾಯಿತು: ಜ್ವಾಲಾ ಗುಟ್ಟಾ

ನವದೆಹಲಿ (ಪಿಟಿಐ):
`ಹರಾಜು ಪ್ರಕ್ರಿಯೆ ನನಗೆ ತುಂಬಾ ಬೇಸರ ಉಂಟು ಮಾಡಿದೆ. ನಾನು ಹಾಗೂ ಅಶ್ವಿನಿ ಪೊನ್ನಪ್ಪ ಐಕಾನ್ ಆಟಗಾರರು ಎಂದು ಒಪ್ಪಂದಕ್ಕೆ ಸಹಿ ಮಾಡಿದ್ದೆವು. ಹಾಗಾಗಿ ನಮಗೆ ಸೂಕ್ತ ನ್ಯಾಯ ಸಿಗಬೇಕಿತ್ತು. ಆದರೆ ನಮ್ಮ ಮುಖಬೆಲೆಯನ್ನೇ ಕಡಿಮೆ ಮಾಡಿದ್ದಾರೆ. ಈ ಬಗ್ಗೆ ನಮಗೆ ಮೊದಲೇ ತಿಳಿಸಬಹುದಿತ್ತು. ಅಷ್ಟು ಮಾತ್ರವಲ್ಲದೇ, ಮಹಿಳೆಯರ ಡಬಲ್ಸ್ ಪಂದ್ಯಗಳನ್ನು ಕಿತ್ತು ಹಾಕಿ ಸಿಂಗಲ್ಸ್ ಪಂದ್ಯಗಳನ್ನು ಹೆಚ್ಚು ಮಾಡಿದ್ದಾರೆ' ಎಂದು ಜ್ವಾಲಾ ಗುಟ್ಟಾ ಅಸಮಾಧಾನ ವ್ಯಕ್ತಪಡಿಸಿದರು.ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರರು

ಸೈನಾ ನೆಹ್ವಾಲ್: ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಏಕೈಕ ಆಟಗಾರ್ತಿ ಸೈನಾ. ಅವರು ಲಂಡನ್ ಒಲಿಂಪಿಕ್ಸ್‌ನ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ  ಮೂರನೇ ಸ್ಥಾನದಲ್ಲಿರುವ ಅವರು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತೆ. 23 ವರ್ಷ ವಯಸ್ಸಿನ ಸೈನಾ ಅವರು ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ.ಪಿ.ಕಶ್ಯಪ್: ಲಂಡನ್ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಆಟಗಾರ ಕಶ್ಯಪ್. ಹೈದರಾಬಾದ್‌ನ ಈ ಆಟಗಾರ ಗೋಪಿಚಂದ್ ಬ್ಯಾಡ್ಮಿಂಣನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. 26 ವರ್ಷ ವಯಸ್ಸಿನ ಅವರು ಸದ್ಯ ಆರನೇ ರ‍್ಯಾಂಕ್ ಹೊಂದಿದ್ದಾರೆ.

ಲೀ ಚೋಂಗ್ ವೀ: ಮಲೇಷ್ಯಾದ ಚೋಂಗ್ ವೀ ಸದ್ಯ ಪುರುಷರ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬೀಜಿಂಗ್ ಹಾಗೂ ಲಂಡನ್ ಒಲಿಂಪಿಕ್ಸ್‌ನಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದರು. 30 ವರ್ಷ ವಯಸ್ಸಿನ ಚೋಂಗ್ ಈಗ ಆ ರಾಷ್ಟ್ರದ ಹೀರೊ ಎನಿಸಿದ್ದಾರೆ.ಐಕಾನ್ ಆಟಗಾರರು

ಸೈನಾ ನೆಹ್ವಾಲ್,  ಪಿ.ಕಶ್ಯಪ್,ಪಿ.ವಿ.ಸಿಂಧು,  ಲೀ ಚೋಂಗ್ ವೀ,  ಅಶ್ವಿನಿ ಪೊನ್ನಪ್ಪ,  ಜ್ವಾಲಾ ಗುಟ್ಟಾಟೂರ್ನಿ ಆರಂಭ: ಆಗಸ್ಟ್ 14 (ನವದೆಹಲಿ)ಮೊದಲ ಹಣಾಹಣಿ: ದೆಹಲಿ ಸ್ಮ್ಯಾಷರ್ಸ್ ಹಾಗೂ ಪುಣೆ ಪಿಸ್ಟನ್ಸ್ಒಟ್ಟು ಪಂದ್ಯ: 90 ಫೈನಲ್: ಆಗಸ್ಟ್ 31 (ಮುಂಬೈ)ಬಹುಮಾನ

ಒಟ್ಟು ಬಹುಮಾನ ಒಂದು ಮಿಲಿಯನ್ ಡಾಲರ್ (ಸುಮಾರು 5.5 ಕೋಟಿ). ಇದು ವಿಶ್ವದಲ್ಲಿಯೇ ಅತಿ ಹೆಚ್ಚು ಬಹುಮಾನ ಹೊಂದಿರುವ ಬ್ಯಾಡ್ಮಿಂಟನ್ ಟೂರ್ನಿ. ವಿಜೇತ ತಂಡಕ್ಕೆ ಬಹುಮಾನ ಮೊತ್ತದ ಶೇಕಡಾ 65 ರಷ್ಟು ಹಾಗೂ ರನ್ನರ್ ಅಪ್‌ಗೆ ಶೇಕಡಾ 35 ರಷ್ಟು ಹಣ ಲಭಿಸಲಿದೆ.ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.