ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ಸೈನಾ

7

ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ಸೈನಾ

Published:
Updated:

ಒಯೆನ್ಸ್, ಡೆನ್ಮಾರ್ಕ್ (ಪಿಟಿಐ/ಐಎಎನ್‌ಎಸ್): ಭಾರತದ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ವಿಶ್ವದಲ್ಲಿ ನಾಲ್ಕನೇ ರ‌್ಯಾಂಕ್ ಹೊಂದಿರುವ ಸೈನಾ ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ 21-15, 21-14ರಲ್ಲಿ ಜಪಾನ್‌ನ ಮಿನಾಸು ಮಿಥಾನಿ ಅವರನ್ನು ಮಣಿಸಿದರು.ಒಟ್ಟು 20 ನಿಮಿಷ ನಡೆದ ಪಂದ್ಯದಲ್ಲಿ ಹೈದರಾಬಾದ್‌ನ ಆಟಗಾರ್ತಿ ಮೊದಲ ಸುತ್ತಿನ ಪಂದ್ಯಕ್ಕೆ ಅನಿರೀಕ್ಷಿತ ತಿರುವು ನೀಡಿದರು. ಆರಂಭದಿಂದಲೇ ಕರಾರುವಾಕ್ಕಾಗಿ ಆಡಿದ ಮಿನಾಸು ಒಂದೂ ಸರ್ವ್ ಕಳೆದುಕೊಳ್ಳದೇ 15 ಪಾಯಿಂಟ್ಸ್ ಕಲೆ ಹಾಕಿದರು. ಇದರಿಂದ ಜಪಾನ್‌ನ ಆಟಗಾರ್ತಿ 15-0ರಲ್ಲಿ ಮುನ್ನಡೆ ಸಾಧಿಸಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸೈನಾಗೆ ಆರಂಭಿಕ ಆಘಾತ ಒಡ್ಡಿದರು. ಈ ವೇಳೆ ಚುರುಕಾದ ಸೈನಾ 21 ಪಾಯಿಂಟ್ಸ್ ಗಳಿಸಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟರು. ಎರಡನೇ ಗೇಮ್‌ನಲ್ಲಿ ಇಬ್ಬರೂ ಆಟಗಾರ್ತಿಯರು ಪ್ರಬಲ ಪೈಪೋಟಿ ನಡೆಸಿದ್ದರು. ಒಂದು ಹಂತದಲ್ಲಿ 17-14 ರಲ್ಲಿ ಮುನ್ನಡೆಯಲ್ಲಿದ್ದ ಸೈನಾ ಕೊನೆಯಲ್ಲಿ ನಾಲ್ಕು ಪಾಯಿಂಟ್ಸ್ ಗಳಿಸಿ ಗೆಲುವಿನ ನಗೆ ಬೀರಿದರು.ಸೌರಭ್‌ಗೆ ಸೋಲು:
ಪುರುಷರ ವಿಭಾಗದ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ನೀಡಿದ್ದ ಸೌರಭ್ ವರ್ಮಾ ಎರಡನೇ ಸುತ್ತಿನಲ್ಲಿ 19-21, 17-21ರಲ್ಲಿ ಇಂಡೋನೇಷ್ಯಾದ ಸೋನಿ ಡೆವೊ ಕುನ್‌ಕೊರೊ ಎದುರು ಸೋಲು ಕಂಡರು.ಮೊದಲ ಸುತ್ತಿನಲ್ಲಿ ಸೌರಭ್ 21-18, 21-14ರಲ್ಲಿ ವಿಶ್ವದಲ್ಲಿ ಎಂಟನೇ ರ‌್ಯಾಂಕ್ ಹೊಂದಿರುವ ಪೀಟರ್ ಹಾಗ್ ಗಾಡೆ ಅವರಿಗೆ ಆಘಾತ ನೀಡಿದರು. ಶ್ರೀನಗರದಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸೌರಭ್ ಮೊದಲ ಸುತ್ತಿನಲ್ಲಿಯೇ ಸೋಲು ಕಂಡಿದ್ದರು.ಆದರೆ, ಇಲ್ಲಿ 42 ನಿಮಿಷ ಹೋರಾಟ ನಡೆಸಿ ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಪೀಟರ್‌ಗೆ ಸೋಲುಣಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದರು. ಅಜಯ್ ಜಯರಾಮನ್ 21-19, 8-21, 9-21ರಲ್ಲಿ ಚೀನಾದ ಪೆಂಗ್ಯೂ ಎದುರು ನಿರಾಸೆ ಕಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry