ಬ್ಯಾಡ್ಮಿಂಟನ್: ಫೈನಲ್‌ಗೆ ಪಿ.ವಿ. ಸಿಂಧು, ಕಶ್ಯಪ್

6

ಬ್ಯಾಡ್ಮಿಂಟನ್: ಫೈನಲ್‌ಗೆ ಪಿ.ವಿ. ಸಿಂಧು, ಕಶ್ಯಪ್

Published:
Updated:

ಲಖನೌ (ಐಎಎನ್‌ಎಸ್): ಹೈದರಾಬಾದ್‌ನಲ್ಲಿ ಸಹೋದರಿಯ ವಿವಾಹ ಸಂಭ್ರಮ. ಲಖನೌನಲ್ಲಿ ಸಯ್ಯದ್ ಮೋದಿ ಗ್ರ್ಯಾನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಸಲ ಫೈನಲ್ ಪ್ರವೇಶಿಸಿದ ಖುಷಿ. ಈ ಎರಡೂ ಸಂತಸದ ಕ್ಷಣ ಎದುರಾಗಿದ್ದು ಭಾರತದ ಯುವ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ.

ಬಾಬು ಬನಾರಸಿ ದಾಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮಹಿಳೆಯರ ವಿಭಾಗದ ಸಿಂಗಲ್ಸ್‌ನ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು 21-12, 21-14ರಲ್ಲಿ ಥಾಯ್ಲೆಂಡ್‌ನ ಸಪ್ಸೆರಿ ಟರೆಟಾನೆಚಾಯ ವಿರುದ್ಧ ಗೆಲುವು ಸಾಧಿಸಿದರು.ವಿಶ್ವದ 24ನೇ ರ‌್ಯಾಂಕ್‌ನಲ್ಲಿರುವ ಭಾರತದ ಆಟಗಾರ್ತಿ ತಮ್ಮ ಸಹೋದರಿಯ ವಿವಾಹಕ್ಕೆ ತೆರಳದೇ ಇಲ್ಲಿ ನಾಲ್ಕರ ಘಟ್ಟದ ಪಂದ್ಯವನ್ನು ಆಡಿದ್ದು ವಿಶೇಷವಾಗಿತ್ತು. ಫೈನಲ್ ಪಂದ್ಯದಲ್ಲಿ ಹೈದರಾಬಾದ್‌ನ ಸಿಂಧು ವಿಶ್ವ ಮಟ್ಟದಲ್ಲಿ 33ನೇ ರ‌್ಯಾಂಕಿಂಗ್ ಹೊಂದಿರುವ ಇಂಡೋನೇಷ್ಯಾದ ಲಿಂಡಾವೆನಿ ಫೆನೆಟ್ರಿ ಎದುರು ಪೈಪೋಟಿ ನಡೆಸಲಿದ್ದಾರೆ.ಈ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಸಿಂಧುಗೆ ಎರಡೂ ಗೇಮ್‌ಗಳಲ್ಲಿ ಪ್ರಬಲ ಪ್ರತಿರೋಧ ಎದುರಾಗಲಿಲ್ಲ. ಈ ಗೆಲುವಿನ ಮೂಲಕ 13 ಅಂಕಗಳನ್ನು ಕಲೆ ಹಾಕಿದರು.ಉಡುಗೊರೆ ನೀಡುವೆ: `ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕು ಎನ್ನುವ ಕನಸು ಹೊಂದಿದ್ದೆ. ಆ ಕನಸು ಕೈಗೂಡುವ ಕಾಲ ಈಗ ಕೂಡಿ ಬಂದಿದೆ. ಆದ್ದರಿಂದ ಸಹೋದರಿಯ ವಿವಾಹಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇಲ್ಲಿ ಪ್ರಶಸ್ತಿ ಗೆದ್ದು ನೂತನ ದಂಪತಿಗೆ ಅದನ್ನು ಉಡುಗೊರೆಯಾಗಿ ನೀಡುತ್ತೇನೆ' ಎಂದು ಸಿಂಧು ಪಂದ್ಯದ ನಂತರ ಪ್ರತಿಕ್ರಿಯಿಸಿದರು.

`ಕಳೆದ ವರ್ಷದ ಟೂರ್ನಿಯ ವೇಳೆ ಜ್ವರ ಹಾಗೂ ಸ್ನಾಯುಸೆಳೆತದ ನೋವಿನಿಂದ ಬಳಲಿದ್ದೆ. ಆದ್ದರಿಂದ ಎರಡನೇ ಸುತ್ತಿನ ಪಂದ್ಯದಲ್ಲಿಯೇ ಸೋಲು ಕಂಡಿದ್ದೆ. ಆದರೆ, ಈ ಸಲ ಪ್ರಶಸ್ತಿ ಗೆಲ್ಲುವ ಅವಕಾಶ ಲಭಿಸಿದೆ. ಫೈನಲ್ ಪ್ರವೇಶಿಸಿದ್ದಕ್ಕೆ ಖುಷಿಯಾಗಿದೆ' ಎಂದು ಅವರು ಹೇಳಿದರು.ಪ್ರಶಸ್ತಿ ಘಟ್ಟಕ್ಕೆ ಕಶ್ಯಪ್: ಪರುಪಳ್ಳಿ ಕಶ್ಯಪ್ ಪುರುಷರ ವಿಭಾಗದ     ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ನಾಲ್ಕರ ಘಟ್ಟದ ಹೋರಾಟದಲ್ಲಿ ಹೈದರಾಬಾದ್‌ನ ಆಟಗಾರ 21-18, 23-21ರಲ್ಲಿ ಇಂಡೋನೇಷ್ಯಾದ ಟಾಮಿ ಸುಗಿರ್ಟೊ ಎದುರು ಗೆಲುವು ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry