ಬ್ಯಾಡ್ಮಿಂಟನ್: ಭಾರತ ಶುಭಾರಂಭ

7

ಬ್ಯಾಡ್ಮಿಂಟನ್: ಭಾರತ ಶುಭಾರಂಭ

Published:
Updated:

ಟೋಕಿಯೊ (ಪಿಟಿಐ): ಉತ್ತಮ ಪ್ರದರ್ಶನ ತೋರಿದ ಭಾರತದ ಆಟಗಾರರು ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್   ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿದ್ದಾರೆ.  ಉದಯೋನ್ಮುಖ ಆಟಗಾರ್ತಿ ಪಿ ವಿ ಸಿಂಧು ಸುಲಭ ಗೆಲುವು ಪಡೆದು ಎರಡನೇ ಸುತ್ತಿಗೆ ಮುನ್ನಡೆದರೆ, ಆನಂದ್ ಪವಾರ ಹಾಗೂ ಕೆ.ಶ್ರೀಕಾಂತ್ ತಮಗಿಂತಲೂ ಹೆಚ್ಚಿನ ಶ್ರೇಯಾಂಕದ ಆಟಗಾರರನ್ನು ಮಣಿಸಿ ಅಚ್ಚರಿ ಫಲಿತಾಂಶಕ್ಕೆ ಕಾರಣರಾದರು.

ಟೂರ್ನಿಯಲ್ಲಿ ಎಂಟನೇ ಶ್ರೇಯಾಂಕ ಪಡೆದಿರುವ ಸಿಂಧು ಮೊದಲ ಸುತ್ತಿನಲ್ಲಿ 21-12, 21-13ರಲ್ಲಿ ಸ್ಥಳೀಯ ಆಟಗಾರ್ತಿ ಯುಕಿನೊ ನಕೈ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿ ಎರಡನೇ ಸುತ್ತಿಗೆ ಮುನ್ನಡೆದರು. ಅರ್ಧ ಗಂಟೆಗೂ ಕಡಿಮೆ ಸಮಯದಲ್ಲಿ ಗೆಲುವು ದಾಖಲಿಸಿದ ಸಿಂಧು, ಗುರುವಾರ ನಡೆಯಲಿರುವ ಎರಡನೇ ಸುತ್ತಿನ ಪಂದ್ಯದಲ್ಲಿ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ.ಪವಾರ್ 21-17, 7-21, 21-18ರಲ್ಲಿ ವಿಶ್ವ  ರ‍್ಯಾಂಕಿಂಗ್‌ನ 12 ಸ್ಥಾನದಲ್ಲಿರುವ ಹಾಗೂ 2004ರ  ಅಥೆನ್ಸ್ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತ ಇಂಡೊನೇಷ್ಯಾದ ಸೊನಿ ದ್ವಿ ಕುನ್ಕೊರೊ ಅವರನ್ನು ಮಣಿಸಿದರು.ವಿಶ್ವ 37 ರ‍್ಯಾಂಕಿಂಗ್‌ನಲ್ಲಿರುವ ಹಾಗೂ 2007 ಮತ್ತು 2009ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪವಾರ್, ಒಟ್ಟು 59 ನಿಮಿಷಗಳ ಹೋರಾಟದಲ್ಲಿ ಪಂದ್ಯ ತಮ್ಮದಾಗಿಸಿಕೊಂಡರು.

ಪ್ರಸಕ್ತ ಸಾಲಿನ ಥಾಯ್ಲೆಂಡ್ ಗ್ರ್ಯಾಂಡ್ ಪ್ರಿಕ್ಸ್ ಟೂರ್ನಿಯ ಚಾಂಪಿಯನ್, ಆಂಧ್ರದ ಕೆ.ಶ್ರೀಕಾಂತ್  ಸಹ ಗೆಲುವಿನ ಓಟ ಮುಂದುವರಿಸಿದ್ದಾರೆ. ಶ್ರೀಕಾಂತ್  22-20, 22-24, 21-18ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 18 ಸ್ಥಾನದಲ್ಲಿರುವ ಶೊ ಸಸಕಿ ಎದುರು ಪ್ರಯಾಸದ ಗೆಲುವು ಪಡೆದರು. ಈ ಹೋರಾಟ ಒಂದು ಗಂಟೆ ಹಾಗೂ ಎಂಟು ನಿಮಿಷಗಳ ಕಾಲ ನಡೆಯಿತು.

 ಬಲಿಷ್ಠ ಸ್ಮ್ಯಾಷ್‌ಗಳ ಮೂಲಕ ಮಿಂಚಿದ ಶ್ರೀಕಾಂತ್‌ಗೆ ಎದುರಾಳಿ ಶೊ ಸಹ ಉತ್ತಮ ಪೈಪೋಟಿ ನೀಡಿದರು. ಮುಂದಿನ ಸುತ್ತಿನಲ್ಲಿ ಶ್ರೀಕಾಂತ್, ಎರಡನೇ ಶ್ರೇಯಾಂಕ ಹಾಗೂ ವಿಶ್ವ ರ‍್ಯಾಂಕಿಂಗ್ ಎರಡರಲ್ಲೂ ಎರಡನೇ ಸ್ಥಾನದಲ್ಲಿರುವ ಚೀನಾದ ಚೆಂಗ್‌ಲಾಂಗ್ ವಿರುದ್ಧ ಸೆಣಸಲಿದ್ದಾರೆ.  ಇನ್ನು, ಪುರುಷ ವಿಭಾಗದ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಅಜಯ್ ಜಯರಾಮ್ 21-11, 21-18 ರಲ್ಲಿ ಚೀನಾದ ತೈಪೆನ ಟಿಯನ್ ಚೆನ್ ಚೋ ಎದುರು ಮೇಲುಗೈ ಸಾಧಿಸಿದರು. ಆದರೆ ಸೌರಭ ವರ್ಮಾ ಹಾಗೂ ಬಿ. ಸಾಯಿ ಪ್ರಣೀತ್ ಅವರು ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.

ಸೌರಭ್ 24-22, 19-21, 14-21ರಲ್ಲಿ ಜುನ್ ಟೇಕ್‌ಮುರಾ ಕೈಯಲ್ಲಿ ಸೋತರೇ ಸಾಯಿ ಪ್ರಣೀತ್ 21-23, 18-21ರಲ್ಲಿ ಹಾಂಕಾಂಗ್‌ನ ಯುನ್ ಹು ಎದುರು ಪರಾಭವಗೊಂಡರು.

ಮಹಿಳೆಯ ಸಿಂಗಲ್ಸ್ ವಿಭಾಗದಲ್ಲಿ ತನ್ವಿ ಲಾಡ್ ಅವರು 15-21, 10-21ರಲ್ಲಿ ಜಪಾನಿನ ಸಯಕಾ ತಕಹಶಿ ಕೈಯಲ್ಲಿ ಸೋತು ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ಹೊರ ನಡೆದಿದ್ದಾರೆ.

ಇನ್ನು, ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಮನು ಅತ್ರಿ ಹಾಗೂ ಬಿ. ಸುಮೀತ್ ರೆಡ್ಡಿ ಜೋಡಿ 21-17, 21-15ರಲ್ಲಿ ಸ್ಥಳೀಯ ಹಿರೊಯುಕಿ ಸಯೆಕಿ ಹಾಗೂ  ರಯೊಟಾ ತಹತಾ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry