ಸೋಮವಾರ, ನವೆಂಬರ್ 18, 2019
29 °C

ಬ್ಯಾಡ್ಮಿಂಟನ್: ಸಿಂಧುಗೆ ಸೋಲು

Published:
Updated:

ತೈಪೆ (ಪಿಟಿಐ): ಮಾಜಿ ಅಗ್ರ ರ‌್ಯಾಂಕ್‌ನ ಆಟಗಾರ್ತಿಯನ್ನೇ ಸೋಲಿಸಿ ಗಮನಾರ್ಹ ಪ್ರದರ್ಶನ ತೋರಿದ್ದ ಭಾರತ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ್ದಾರೆ.ಶುಕ್ರವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಸಿಂಧು 19-21, 21-16, 11-21ರಲ್ಲಿ ಜಪಾನ್‌ನ ಎರಿಕೊ ಹಿರೋಸ್ ಎದುರು ಪರಾಭವಗೊಂಡರು. 60 ನಿಮಿಷ ನಡೆದ ಈ ಹೋರಾಟದಲ್ಲಿ ಭಾರತದ ಆಟಗಾರ್ತಿ ಮೊದಲ ಎರಡು ಗೇಮ್‌ಗಳಲ್ಲಿ ಉತ್ತಮ ಆಟ ತೋರಿದ್ದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಅವರಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ.ವಿಶ್ವ ರ‌್ಯಾಂಕಿಂಗ್‌ನಲ್ಲಿ 16ನೇ ಸ್ಥಾನದಲ್ಲಿರುವ ಸಿಂಧು ಮೊದಲ ಗೇಮ್‌ನಲ್ಲಿ ಕೊಂಚದರಲ್ಲಿ ಸೋಲು ಕಂಡರು. ಈ ಗೇಮ್ ಒಂದು ಹಂತದಲ್ಲಿ 14-14 ಪಾಯಿಂಟ್‌ಗಳಿಂದ ಸಮಬಲಕ್ಕೆ ಕಾರಣವಾಗಿತ್ತು. ಆದರೆ ಕೊನೆಯಲ್ಲಿ ಜಪಾನ್‌ನ ಆಟಗಾರ್ತಿ ಗೇಮ್ ಮೇಲೆ ಹಿಡಿತ ಸಾಧಿಸಿದರು. ನಂತರದ ಗೇಮ್‌ನಲ್ಲಿ ತಿರುಗೇಟು ನೀಡಿದ ಸಿಂಧು ಸಮಬಲಕ್ಕೆ ಕಾರಣರಾದರು. ಆ ಬಳಿಕ 17ರ ಹರೆಯದ ಆಟಗಾರ್ತಿ ಸ್ಥಿರ ಪ್ರದರ್ಶನ ತೋರಲಿಲ್ಲ.

ಪ್ರತಿಕ್ರಿಯಿಸಿ (+)