ಶುಕ್ರವಾರ, ಏಪ್ರಿಲ್ 16, 2021
31 °C

ಬ್ಯಾಡ್ಮಿಂಟನ್: ಸೂಪರ್ ಸೈನಾಗೆ ಕಂಚಿನ ಉಡುಗೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ಜೀವನ ಒಮ್ಮಮ್ಮೆ ಯಾವ ರೀತಿಯಲ್ಲಿ ತಿರುವು ಪಡೆಯುತ್ತದೆ, ಅಲ್ಲವೇ? `ಸೂಪರ್~ ಸೈನಾ ನೆಹ್ವಾಲ್‌ಗೆ ಕೊನೆಯಲ್ಲೊಂದು ಅದೃಷ್ಟ ಒಲಿದಿರಬಹುದು. ಆದರೆ ಸೈನಾ ಈ ಬಾರಿ ಪದಕ ಗೆದ್ದು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಕ್ರೀಡಾಭಿಮಾನಿಗಳಿದ್ದರು. ಹೆಚ್ಚಿನವರು ಆ ಭರವಸೆ ಹೊಂದಿದ್ದರು.ಅದಕ್ಕೆ ಕಾರಣ ಸೈನಾ ಅವರು ಕಠಿಣ ಪ್ರಯತ್ನ ಹಾಕಿ ಈ ಬಾರಿ ಸಿದ್ಧತೆ ನಡೆಸಿದ್ದ ರೀತಿ.   ಒಲಿಂಪಿಕ್ಸ್ ಪದಕದ ಕನಸು ಹೊತ್ತೇ ಅವರು ಲಂಡನ್‌ಗೆ ಬಂದಿದ್ದರು. ಆದರೆ ಈ ರೀತಿ ತಮಗೆ ಪದಕ ಬರಬಹುದು ಎಂದು ಅವರು ಖಂಡಿತ ನಿರೀಕ್ಷಿಸಿರಲಿಲ್ಲ.ವೆಂಬ್ಲೆ ಅರೆನಾ ಕೋರ್ಟ್‌ನಲ್ಲಿ ಶನಿವಾರ ಒಂದು ಪವಾಡ ನಡೆದೇ ಹೋಯಿತು.  ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಮೂರನೇ ಸ್ಥಾನಕ್ಕಾಗಿನ ಪಂದ್ಯದ ವೇಳೆ ಚೀನಾದ ವಾಂಗ್ ಕ್ಸಿನ್‌ಗೆ ಅದೃಷ್ಟ ಕೈಕೊಟ್ಟ ಕಾರಣ ನೆಹ್ವಾಲ್ ಅವರ ಬಹುದಿನಗಳ ಕನಸೊಂದು ನನಸಾಯಿತು. ಕಂಚಿನ ಪದಕದ `ಉಡೊಗೊರೆ~ ಲಭಿಸಿತು.ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಎರಡನೇ ಮಹಿಳೆ ಎಂಬ ಐತಿಹಾಸಿಕ ಸಾಧನೆಗೆ ಸೈನಾ ಕಾರಣರಾದರು. ಈ ಪಂದ್ಯದಲ್ಲಿ 21-18, 1-0ರಲ್ಲಿ ಮುಂದಿದ್ದ ಕ್ಸಿನ್ ಎಡಗಾಲು ಮಂಡಿ ನೋವಿನ ಕಾರಣ ಹಿಂದೆ ಸರಿದರು. ಆ ಮೂಲಕ ಎರಡನೇ ರ‌್ಯಾಂಕ್‌ನಆಟಗಾರ್ತಿಯ ಪದಕದ ಕನಸು ಭಗ್ನಗೊಂಡಿತು.ಮಂಡಿ ನೋವುಂಟಾದ ಸಂದರ್ಭದಲ್ಲಿ ವಾಂಗ್ 20-18ರಲ್ಲಿ  ಮುಂದಿದ್ದರು. ಮೊದಲ ಗೇಮ್ ಗೆಲ್ಲಲು ಒಂದು ಪಾಯಿಂಟ್ ಬೇಕಿತ್ತು. ಸೈನಾ ಬ್ಯಾಕ್ ಕೋರ್ಟ್‌ಗೆ ಕಳುಹಿಸಿದ ಶಟಲ್‌ಅನ್ನು ಸ್ಮ್ಯಾಷ್ ಮಾಡಲು ಜಿಗಿದಾಗ ಮೊಣಕಾಲಿಗೆ ನೋವಾಯಿತು. ಚಿಕಿತ್ಸೆ ಪಡೆದು ವಾಪಸ್ ಬಂದ ಅವರು ಈ ಗೇಮ್ ಗೆದ್ದರು. ಎರಡನೇ ಗೇಮ್‌ನಲ್ಲಿ ಬ್ಯಾಂಡೇಜ್ ಕಟ್ಟಿಕೊಂಡು ಆಡಲು ಇಳಿದ ಅವರು ಮೊದಲ ಪಾಯಿಂಟ್  ಜಯಿಸಿದರು. ಆದರೆ ಮತ್ತೆ ತೀವ್ರ ನೋವಿಗೆ ಒಳಗಾದರು. ಹಾಗಾಗಿ ಆಟ ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ.ಕಂಚಿನ ಪದಕಕ್ಕಾಗಿ ನಡೆದ ಈ ಪಂದ್ಯದ ಮೊದಲ ಗೇಮ್ ಆರಂಭದಿಂದಲೇ ಕುತೂಹಲ ಕೆರಳಿಸುತ್ತಾ ಹೋಯಿತು. ಚೀನಾದ ಆಟಗಾರ್ತಿ ಪ್ರತಿ ಪಾಯಿಂಟ್ ಗೆಲ್ಲಲು ಸಾಕಷ್ಟು ಕಸರತ್ತು ನಡೆಸಬೇಕಾಯಿತು. ಕ್ಸಿನ್ ಈ ಹಿಂದಿನ ಆರು ಪೈಪೋಟಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆದ್ದ್ದ್ದಿದರು. ಇಲ್ಲೂ ಅವರು ಸತತವಾಗಿ ಮುನ್ನಡೆ ಸಾಧಿಸುತ್ತಾ ಸಾಗಿದರು.ಈ ಗೇಮ್‌ನ ಆರಂಭದಲ್ಲೇ ಕ್ಸಿನ್ 3-0 ಪಾಯಿಂಟ್‌ನಿಂದ ಮುನ್ನಡೆದರು. ತಮಗಿಂತ ಹೆಚ್ಚಿನ ರ‌್ಯಾಂಕ್‌ನ ಆಟಗಾರ್ತಿಗೆ ತಿರುಗೇಟು ನೀಡಲು ಪ್ರಯತ್ನಿಸಿದ ಸೈನಾ 5-5 ಸಮಬಲ ಮಾಡಿಕೊಂಡರು. 6-6, 6-7, 6-8, 6-9, 6-10, 6-11 ಹೀಗೆ ಪಂದ್ಯ ಸಾಗಿತು. ಚೀನಾದ ಎಡಗೈ ಆಟಗಾರ್ತಿಯ ಸ್ಮ್ಯಾಷ್‌ಗಳನ್ನು ನಿಖರವಾಗಿ ಹಿಂಗಿರುಗಿಸಲು ನೆಹ್ವಾಲ್ ತುಂಬಾ ಕಷ್ಟಪಟ್ಟರು. ಕ್ಸಿನ್ ಸತತವಾಗಿ ಎಂಟು ಪಾಯಿಂಟ್ ಗೆದ್ದು 14-6ರಲ್ಲಿ ಮುನ್ನಡೆದರು.ಆದರೆ ಸೈನಾ ಆಕರ್ಷಕ ಡ್ರಾಪ್‌ಗಳ ಮೂಲಕ ತಿರುಗೇಟು ನೀಡುವ ಸೂಚನೆ ನೀಡಿದರು. ಚೀನಾದ ಆಟಗಾರ್ತಿ ಗೇಮ್ ಪಾಯಿಂಟ್‌ನಲ್ಲಿದ್ದಾಗ ಸೈನಾ ಸತತ ನಾಲ್ಕು ಪಾಯಿಂಟ್ ಗೆದ್ದರು. ಈ ಮೂಲಕ 18-20ಕ್ಕೆ ಬಂದು ನಿಂತರು. ಕಾಲು ನೋವಿನ ನಡುವೆಯೂ ಆಕರ್ಷಕ ಸ್ಮ್ಯಾಷ್ ಹಾಕಿದ ಕ್ಸಿನ್ 21-18ರಲ್ಲಿ ಆ ಗೇಮ್ ಗೆದ್ದು 1-0 ಮುನ್ನಡೆ ಸಾಧಿಸಿದರು. ಆದರೆ ಕ್ಸಿನ್ ಅವರ ಅದೃಷ್ಟ ಕೈಕೊಟ್ಟಿತು. ಸೈನಾ ಅವರ ಬಹುದಿನಗಳ ಕನಸೊಂದು ನನಸಾಯಿತು.ಕ್ಸುಯೇರಿಗೆ ಚಿನ್ನ: ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ಚಿನ್ನ ಚೀನಾದ ಲೀ ಕ್ಸುಯೇರಿ ಪಾಲಾಯಿತು. ಅವರು ಫೈನಲ್‌ನಲ್ಲಿ 21-15, 21-23, 21-17ರಲ್ಲಿ ತಮ್ಮದೇಶದವರೇ ಆದ ಅಗ್ರ ರ‌್ಯಾಂಕ್‌ನ ಆಟಗಾರ್ತಿ ಯಿಹಾನ್ ವಾಂಗ್ ಎದುರು ಗೆದ್ದರು. ಯಿಹಾನ್ ಎದುರು ಸೈನಾ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.