ಭಾನುವಾರ, ಅಕ್ಟೋಬರ್ 20, 2019
24 °C

ಬ್ಯಾಡ್ಮಿಂಟನ್: ಸೈನಾ ಪರಾಭವ

Published:
Updated:

ನವದೆಹಲಿ (ಪಿಟಿಐ): ಭಾರತದ ಸೈನಾ ನೆಹ್ವಾಲ್ ಸೋಲ್‌ನಲ್ಲಿ ನಡೆಯುತ್ತಿರುವ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲು ಕಂಡರು.ಶುಕ್ರವಾರ ನಡೆದ ಪಂದ್ಯದಲ್ಲಿ ಸೈನಾ 17-21, 10-21ರಲ್ಲಿ ಚೀನಾದ ಆರನೇ ಶ್ರೇಯಾಂಕದ ಎಂಜಿಯೊ ಜೇಯಿಂಗ್ ಎದುರು ಸೋಲು ಅನುಭವಿಸಿದರು. ಈ ಹೋರಾಟ ಕೇವಲ 26 ನಿಮಿಷಗಳಲ್ಲಿ ಅಂತ್ಯ ಕಂಡಿತು.

 ಹೈದರಾಬಾದ್‌ನ ಆಟಗಾರ್ತಿ ಮೊದಲ ಗೇಮ್‌ನಲ್ಲಿ 5-1ರಲ್ಲಿ ಮುನ್ನಡೆಯಲ್ಲಿದ್ದರು.ಈ ವೇಳೆ ಅತ್ಯುತ್ತಮ ಸ್ಮಾಷ್‌ಗಳನ್ನು ಸಿಡಿಸಿದ ಚೀನಾದ ಆಟಗಾರ್ತಿ 8-8ರಲ್ಲಿ ಸಮಬಲ ಸಾಧಿಸಿದರು. ನಂತರ ಈ ಮುನ್ನಡೆಯನ್ನು 14-10ಕ್ಕೆ ಹೆಚ್ಚಿಸಿಕೊಂಡರು. ಈ ಹಂತದಲ್ಲಿ ಸೈನಾಗೆ ಜೇಯಿಂಗ್ ಎದುರು ತಕ್ಕ ಪ್ರತಿರೋಧ ತೋರಲು ಸಾಧ್ಯವಾಗಲಿಲ್ಲ.ಎರಡನೇ ಗೇಮ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಭಾರತದ ಆಟಗಾರ್ತಿ 7-6ರಲ್ಲಿ ಮುನ್ನಡೆಯನ್ನು ಗಳಿಸಿದ್ದರು. ಸತತ ಆರು ಪಾಯಿಂಟ್‌ಗಳನ್ನು ಕಲೆ ಹಾಕಿದ ಜೇಯಿಂಗ್ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.ಈ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಸೈನಾ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು. ಜನವರಿ 10ರಿಂದ ಆರಂಭವಾಗುವ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಇವರು ಸ್ಪರ್ಧಿಸಲಿದ್ದಾರೆ.ಮಿಶ್ರ ಡಬಲ್ಸ್‌ನಲ್ಲೂ ಸೋಲು: ಭಾರತದ ಜ್ವಾಲಾ ಗುಟ್ಟಾ ಹಾಗೂ ವಿ. ದಿಜು ಜೋಡಿ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲು ಕಂಡಿತು. ಡೆನ್ಮಾರ್ಕ್‌ನ ಜೋಕಿಮ್ ಫಿಸ್ಚರ್ ನೆಲ್ಸನ್ ಹಾಗೂ ಕ್ರಿಸ್ಟಿನ್ನಾ ಪೆಡರ್ಸನ್ ಜೋಡಿ 21-19, 21-12ರಲ್ಲಿ ಭಾರತದ ಸ್ಪರ್ಧಿಗಳಿಗೆ ಸೋಲುಣಿಸಿ ಸೆಮಿಫೈನಲ್‌ಗೆ ಮುನ್ನಡೆಯಿತು. ಈ ಮೂಲಕ ಭಾರತದ ಸವಾಲು ಈ ಟೂರ್ನಿಯಲ್ಲಿ ಅಂತ್ಯ ಕಂಡಿತು.

Post Comments (+)