ಬುಧವಾರ, ಜೂನ್ 16, 2021
23 °C
ಶಾಸಕ ರಮೇಶ್‌ಕುಮಾರ್‌ ವಿಷಾದ

ಬ್ಯಾನರುಗಳಲ್ಲಿ ಇಂದಿರಾ ಗಾಂಧಿ ಭಾವಚಿತ್ರವೇ ಕಾಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕಾಂಗ್ರೆಸ್‌ (ಐ) ಪಕ್ಷವನ್ನು ಕಟ್ಟಿ ಬೆಳೆಸಿದ ಇಂದಿರಾ ಗಾಂಧಿಯವರ ಭಾವಚಿತ್ರವೇ ಇಂದು ಪಕ್ಷದ ಬ್ಯಾನರುಗಳಲ್ಲಿ ಕಾಣುತ್ತಿಲ್ಲ. ಇವರ ಬದಲು ರಿಯಲ್‌ ಎಸ್ಟೇಟ್‌ನಲ್ಲಿರುವವರು, ಉದ್ಯೋಗಪತಿಗಳ ಭಾವಚಿತ್ರಗಳು ರಾರಾಜಿಸುತ್ತಿವೆ ಎಂದು ಶಾಸಕ ರಮೇಶ್‌ಕುಮಾರ್‌ ವಿಷಾದ ವ್ಯಕ್ತಪಡಿಸಿದರು.ನಗರದ ಪತ್ರಿಕಾ ಭವನದಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್‌ ಹಾಗೂ ಕೊಡಗು ಪ್ರೆಸ್‌ ಕ್ಲಬ್‌ ಆಶ್ರಯದಲ್ಲಿ ಸೋಮವಾರ ನಡೆದ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.ಇಂದು ರಾಜಕಾರಣದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಹಿಂದೊಮ್ಮೆ ಶಾಸಕರಾಗಿದ್ದ ಕೆ.ಎಚ್‌. ಪಾಟೀಲ ಅವರು ಮದ್ಯದ ಅಂಗಡಿ ನಡೆಸಲು ಲೈಸೆನ್ಸ್‌ ಹೊಂದಿದ್ದರು. ಶಾಸಕರಾದವರು ಮದ್ಯದ ಅಂಗಡಿ ನಡೆಸುವುದು ತರವಲ್ಲವೆಂದು ಇಂದಿರಾ ಗಾಂಧಿ ಅವರು ಕೆ.ಎಚ್‌. ಪಾಟೀಲ ಅವರನ್ನು ಪಕ್ಷದಿಂದ ಅಮಾನತುಪಡಿಸಿದ್ದರು. ಇಂತಹ ಮೌಲ್ಯಗಳು ಇಂದು ಕಾಣಲು ಸಾಧ್ಯವೇ? ಎಂದು ಪ್ರಶ್ನಿಸಿದರು.ಪಕ್ಷದ ಇತಿಹಾಸ, ದೇಶದ ರಾಜಕೀಯ ಇತಿಹಾಸವನ್ನು ಇಂದು ಯಾರೂ ಸ್ಮರಿಸುತ್ತಿಲ್ಲ. ಪಕ್ಷ ಕಟ್ಟಿದವರಿಗಿಂತ ದುಡ್ಡು ಸುರಿಯುವವರನ್ನೇ ನೆಚ್ಚಿಕೊಳ್ಳಲಾಗುತ್ತಿದೆ. ಉದ್ಯಮಿಗಳು ನೇರವಾಗಿ ರಾಜಕೀಯ ರಂಗ ಪ್ರವೇಶಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಪ್ರಾಮಾಣಿಕ  ರಾಜಕಾರಣ ಮಾಡುವುದು ಕಷ್ಟ ಎಂದು ಕಳವಳ ವ್ಯಕ್ತಪಡಿಸಿದರು.ಕಾಂಗ್ರೆಸ್‌ ಸೇರಿದಂತೆ ಎಲ್ಲ ಪಕ್ಷಗಳಲ್ಲಿ ಭ್ರಷ್ಟರು ಇದ್ದಾರೆ. ಇವರ ನಡುವೆ ಸಮನ್ವಯತೆ ಇದ್ದು, ಪ್ರಾಮಾಣಿಕ ರಾಜಕಾರಣಿಗಳನ್ನು ಸೋಲಿಸಲು ಎಲ್ಲ ಪಕ್ಷದ ಭ್ರಷ್ಟರು ಒಂದಾಗುತ್ತಾರೆ. ಪ್ರಾಮಾಣಿಕರನ್ನು ಕಂಡರೆ ಮುಗಿಬೀಳುತ್ತಾರೆ. ಇದಕ್ಕೆ ಮಾಧ್ಯಮಗಳು ಕೂಡ ಹೊರತಾಗಿಲ್ಲ. ಅಪ್ರಾಮಾಣಿಕ, ಭ್ರಷ್ಟರು, ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆಯುವ ಉದ್ಯಮಿಗಳ ಬಗ್ಗೆ ಏಕೆ ಮಾಧ್ಯಮಗಳು ಚಕಾರ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.ಇಂದಿನ ರಾಜಕೀಯ ಭ್ರಷ್ಟ ವ್ಯವಸ್ಥೆಯ ಬಗ್ಗೆ ಜನರಲ್ಲಿ ಆಕ್ರೋಶವಿದೆ. ಬದಲಾವಣೆಯಾಗಬೇಕೆಂದು ಬಯಸುತ್ತಿರುವುದು ನಿಜ. ಇದರ ಫಲವೇ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಹೆಚ್ಚು ಸ್ಥಾನಗಳು ದೊರೆತಿದ್ದವು. ಜನರಲ್ಲಿ ಅಡಗಿದ್ದ ಆಕ್ರೋಶವನ್ನು ಆಮ್‌ ಆದ್ಮಿ ಪಕ್ಷ ದೇಶಕ್ಕೆ ಸಾರಿ ತೋರಿಸಿತು ಎಂದು ಹೇಳಿದರು.ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ‘ಪ್ರಜಾವಾಣಿ’ ಮೈಸೂರು ಬ್ಯುರೋ ಮುಖ್ಯಸ್ಥ ಎಂ.ಎಸ್‌. ರಾಜೇಂದ್ರಕುಮಾರ್‌ ಹಾಗೂ ‘ದಿ ಹಿಂದೂ’ ಪತ್ರಿಕೆಯ ರಾಜ್ಯ ಬ್ಯೂರೋ ಮುಖ್ಯಸ್ಥ ಜೀವನ್‌ ಚಿಣ್ಣಪ್ಪ ಅವರನ್ನು ‘ಪ್ರಜಾವಾಣಿ’ ವಿಶೇಷ ವರದಿಗಾರರಾದ ರವೀಂದ್ರ ಭಟ್‌ ಸನ್ಮಾನಿಸಿದರು. ಕೊಡಗು ಪತ್ರಿಕಾ ಭವನ ಟ್ರಸ್ಟಿನ ಮ್ಯಾನೇಜಿಂಗ್‌ ಟ್ರಸ್ಟಿ ಬಿ.ಎನ್‌. ಮನು ಶೆಣೈ, ಕೊಡಗು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಯು.ಎಂ. ಪೂವಯ್ಯ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.