ಬ್ಯಾರಿ ಸಮುದಾಯದ ವಿದ್ಯಾರ್ಥಿಗಳ ಸಮ್ಮಿಲನ

7

ಬ್ಯಾರಿ ಸಮುದಾಯದ ವಿದ್ಯಾರ್ಥಿಗಳ ಸಮ್ಮಿಲನ

Published:
Updated:

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಭಾನುವಾರ ಬ್ಯಾರಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಮ್ಮಿಲನ. ಅದರಲ್ಲೂ ವಿದ್ಯಾರ್ಥಿನಿಯರದ್ದೇ ಮೇಲುಗೈ.ಎಸ್ಸೆಸ್ಸೆಲ್ಸಿಯಿಂದ ಹಿಡಿದು ಬಿ.ಇ, ಬಿ.ಇಡಿಯಲ್ಲಿ ಉತ್ತಮ ಅಂಕ ಗಳಿಸಿರುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಹಿನ್ನೆಲೆಯಲ್ಲಿ `ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್~ ಆಶ್ರಯದಲ್ಲಿ ಇಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಬಹುಮಾನ ಪಡೆದುಕೊಳ್ಳಲು ಬೆಂಗಳೂರು, ಉಡುಪಿ, ಶಿವಮೊಗ್ಗ,  ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಿಂದ ಬಂದಿದ್ದ ನೂರಾರು ಪ್ರತಿಭಾನ್ವಿತರ ಪೈಕಿ ಶೇ 75ಕ್ಕೂ ಹೆಚ್ಚು ಮಂದಿ ಬಾಲಕಿಯರೇ ಇದ್ದುದು ವಿಶೇಷ.ಈ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಶಾಸಕ ಎನ್.ಎ.ಹ್ಯಾರಿಸ್, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅತ್ಯಂತ ಹೆಚ್ಚು ಪ್ರೋತ್ಸಾಹ ನೀಡುವ ಬ್ಯಾರಿ ಸಮುದಾಯದವರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.`ಉನ್ನತ ವಿದ್ಯಾಭ್ಯಾಸ ನಡೆಸುವುದಲ್ಲದೆ ಮುಸ್ಲಿಮರು ಐಎಎಸ್, ಐಪಿಎಸ್ ಮುಂತಾದ ಆಡಳಿತಾತ್ಮಕ ಸೇವೆಯ ಕುರಿತು ಹೆಚ್ಚು ಗಮನ ಹರಿಸಬೇಕು. ಶೈಕ್ಷಣಿಕವಾಗಿ ಮುಂದಕ್ಕೆ ಬರದಿದ್ದರೆ ಮುಸ್ಲಿಂ ಸಮುದಾಯಕ್ಕೆ ಉಳಿಗಾಲವಿಲ್ಲ. ರಾಜಕೀಯವಾಗಿ ಮಾತ್ರವಲ್ಲ ಉನ್ನತ ಹುದ್ದೆಗಳಲ್ಲೂ ಮುಸ್ಲಿಮರ ಪ್ರಾತಿನಿಧ್ಯ ಬಹಳ ಕಡಿಮೆ ಇದೆ~ ಎಂದರು.ಪ್ರೆಸ್ಟೀಜ್ ಬಿಲ್ಡರ್ಸ್‌ ಉದ್ಯಮ ಗುಂಪಿನ ಮುಖ್ಯಸ್ಥ ಇರ್ಫಾನ್ ರಜಾಕ್ ಮಾತನಾಡಿ, `ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆ ಬೆಳಕಿಗೆ ಬರಲು ಸೂಕ್ತ ವೇದಿಕೆಯ ಅಗತ್ಯವಿದೆ. ಶಿಕ್ಷಣದಲ್ಲಿ ಮುಸ್ಲಿಮರು ಮುಂದೆ ಬರಬೇಕು~ ಎಂದರು.24 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ಯಾರಿ ಸೌಹಾರ್ದ ಸಮುದಾಯ ಭವನವನ್ನು ಮುಂದಿನ ತಿಂಗಳಿನಿಂದ ನಗರದಲ್ಲಿ ನಿರ್ಮಿಸಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷ ಬಿ.ಎಂ.ಫಾರೂಕ್ ಅವರು ವಿವರಿಸಿದರು.

ಪುತ್ತೂರಿನ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾಕರ್ತ ಮಿತ್ತೂರು ಉಸ್ಮಾನ್ ಹಾಜಿ ಅವರಿಗೆ `ವರ್ಷದ ಬ್ಯಾರಿ~ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಮಾಜಿ ಸಚಿವ ಬಿ.ಎ.ಮೊಹಿದ್ದೀನ್, ರಾಜ್ಯ ವಕ್ಫ್ ಮಂಡಳಿ ಉಪಾಧ್ಯಕ್ಷ ಶಾಫಿ ಸಅದಿ, ಅಸೋಸಿಯೇಷನ್ ಉಪಾಧ್ಯಕ್ಷ ಸಿದ್ದೀಖ್ ಬ್ಯಾರಿ, ಕಾರ್ಯದರ್ಶಿ ಟಿ.ಕೆ.ಷರೀಫ್, ಗೌರವ ಕಾರ್ಯದರ್ಶಿ ಕುವೇಂಡ ಹಂಝತುಲ್ಲ ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ, ಬಹರೇನ್‌ನ ಉದ್ಯಮಿ ವರ್ಗಿಸ್ ಕುರಿಯನ್ `ಬ್ಯಾರಿ ಟೈಮ್ಸ~ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry