ಶನಿವಾರ, ನವೆಂಬರ್ 23, 2019
17 °C

ಬ್ಯಾಸ್ಕೆಟ್‌ಬಾಲ್: ಯಂಗ್ ಓರಿಯನ್ಸ್‌ಗೆ ಜಯ

Published:
Updated:

ಬೆಂಗಳೂರು: ಯಂಗ್ ಓರಿಯನ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ರಾಜ್ಯ ಯೂತ್ (16 ವರ್ಷ ವಯಸ್ಸಿನೊಳಗಿನವರ) ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಪಂದ್ಯದಲ್ಲಿ ಜಯ ಸಾಧಿಸಿದರು.ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಯಂಗ್ ಓರಿಯನ್ಸ್ 57-41 ಪಾಯಿಂಟ್‌ಗಳಿಂದ ಬೆಂಗಳೂರು ಸ್ಪೋರ್ಟಿಂಗ್ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ 28-20 ರಲ್ಲಿ ಮುನ್ನಡೆ ಸಾಧಿಸಿದ್ದ ವಿಜಯಿ ತಂಡದ ಪರ ಮೈಕಲ್ 14 ಪಾಯಿಂಟ್ ಕಲೆಹಾಕಿದರು.ದಿನದ ಮತ್ತೊಂದು ಪಂದ್ಯದಲ್ಲಿ ಅಪ್ಪಯ್ಯ ಬ್ಯಾಸ್ಕೆಟ್‌ಬಾಲ್ ಕ್ಲಬ್ 56-53 ರಲ್ಲಿ ಐಬಿಬಿಸಿ ಎದುರು ರೋಚಕ ಗೆಲುವು ಪಡೆಯಿತು. ಸಿದ್ಧ (19) ಮತ್ತು ಪ್ರಶಾಂತ್ (15) ಅಪ್ಪಯ್ಯ ಕ್ಲಬ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿಜಯಿ ತಂಡ ವಿರಾಮದ ವೇಳೆಗೆ 23-20 ರಲ್ಲಿ ಮೇಲುಗೈ ಪಡೆದಿತ್ತು.ಪ್ರೊಟೆಕ್ ಚಾಲೆಂಜರ್ಸ್ 37-18 ರಲ್ಲಿ ಶಿವಮೊಗ್ಗ ಯೂತ್ಸ್ ವಿರುದ್ಧ ಗೆಲುವು ಪಡೆದರೆ, ಜೆಎಸ್‌ಸಿ 44-30 ರಲ್ಲಿ ಬಿಸಿಬಿಸಿ ತಂಡವನ್ನು ಮಣಿಸಿತು. ಇತರ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಹಲಸೂರು ಎಸ್‌ಯು 26-20 ರಲ್ಲಿ ವಿವೇಕ್ಸ್ ಕ್ಲಬ್ ಮೇಲೂ, ವಿಎನ್‌ಎಸ್‌ಸಿ 32-21 ರಲ್ಲಿ ಹೊಯ್ಸಳ ಹಾಸನ ಎದುರೂ, ಎಸ್‌ಎಐ ಧಾರವಾಡ ತಂಡ ಭಾರತ್ ಎಸ್‌ಯು ಮೇಲೂ ಗೆಲುವು ಪಡೆದವು.ಬಾಲಕಿಯರ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಮಂಡ್ಯದ ಡಿವೈಎಸ್‌ಎಸ್ 43-21 ರಲ್ಲಿ ಮರ್ಚಂಟ್ಸ್ ದಾವಣಗೆರೆ ಎದುರೂ, ಮೌಂಟ್ಸ್ ಕ್ಲಬ್ 49-28 ರಲ್ಲಿ ಶಿವಮೊಗ್ಗ ಯೂತ್ಸ್ ಮೇಲೂ, ವಿಮಾನಪುರ ಕ್ಲಬ್ 43-32 ರಲ್ಲಿ ಅಪ್ಪಯ್ಯ ಕ್ಲಬ್ ವಿರುದ್ಧವೂ, ವಿದ್ಯಾನಗರ ಕ್ರೀಡಾಶಾಲೆ 29-6 ರಲ್ಲಿ ಬೀಗಲ್ಸ್ ಎದುರೂ ಗೆಲುವು ಪಡೆದು ಸೆಮಿಫೈನಲ್ ಲೀಗ್‌ಗೆ ಪ್ರವೇಶಿಸಿದವು.

ಪ್ರತಿಕ್ರಿಯಿಸಿ (+)