ಬ್ರಹ್ಮಕಲಶೋತ್ಸವ ಸಂಭ್ರಮ

7
ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ

ಬ್ರಹ್ಮಕಲಶೋತ್ಸವ ಸಂಭ್ರಮ

Published:
Updated:
ಬ್ರಹ್ಮಕಲಶೋತ್ಸವ ಸಂಭ್ರಮ

ಬಂಟ್ವಾಳ ತಾಲ್ಲೂಕಿನ ಪ್ರಮುಖ ನಗರ ವಿಟ್ಲ. ತುಳುನಾಡ ಪರಂಪರೆಯ ರಾಜಮನೆತನದ ಆಳ್ವಿಕೆಯ ಸಾಕ್ಷಿಯಾಗಿರುವ ಎರಡು ಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ 17 ಗ್ರಾಮಗಳನ್ನೊಳಗೊಂಡಿದ್ದ ಭೂಭಾಗ. ವಿಟ್ಲ ಅರಸು ವಂಶಜರ ಆಳ್ವಿಕೆಯಲ್ಲೇ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಇದೀಗ ಹಬ್ಬದ ಸಡಗರದಲ್ಲಿದೆ. ಸುಮಾರು 9 ಕೋಟಿ ರೂಪಾಯಿ ವೆಚ್ಚದಲ್ಲಿ ಪುನಃ ನಿರ್ಮಾಣಗೊಂಡ ಈ ದೇವಸ್ಥಾನಕ್ಕೆ ಜನವರಿ 9 ರಿಂದ 21ವರೆಗೆ ಇಲ್ಲಿ  ಬ್ರಹ್ಮಕಲಶೋತ್ಸವ ನಡೆಯಲಿದೆ.ವಿಟ್ಲ ಸೀಮೆಯ ದೇವಸ್ಥಾನಗಳಲ್ಲೆಲ್ಲ ಇದೇ ಪ್ರಮುಖ ದೇವಾಲಯ ಮತ್ತು ಗಾತ್ರದ ದೃಷ್ಟಿಯಿಂದಲೂ ಇದನ್ನು ಮೀರಿಸುವ ದೇಗುಲಗಳಿಲ್ಲ. ಇದು ಸುಮಾರು ಒಂದು ಸಾವಿರ ವರ್ಷಗಳಿಗೂ ಮಿಕ್ಕಿದ ಪ್ರಾಚೀನ ದೇವಸ್ಥಾನವೆಂದು ಹಿರಿಯರು ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಈ ಮಹಾ ಸಮಾರಂಭಕ್ಕೆ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿದೆ. ವಿಟ್ಲದ ವಿವಿಧ ಸಂಘ- ಸಂಸ್ಥೆಗಳ ಕಾರ್ಯಕರ್ತರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಹಗಲಿರುಳು ಆ ದೇವರಿಗೆ ಶ್ರಮದಾನದ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.ಸ್ಥಳ ಪುರಾಣದ: ಈ ದೇವಾಲಯಕ್ಕೆ ಸ್ಥಳ ಪುರಾಣವೊಂದು ಪ್ರಚಲಿತಲ್ಲಿದೆ. ಈ ಪ್ರದೇಶದಲ್ಲಿ ಪಾಂಡವರು ತಮ್ಮ ಸುತ್ತಾಟದ ಸಂದರ್ಭದಲ್ಲಿ ನೆಲೆಸಿದ್ದರಂತೆ. ತಮ್ಮ ನೆನಪಿಗಾಗಿ ಶಿವನನ್ನು ಸ್ಥಾಪಿಸುವುದಕ್ಕೆ ಮನಮಾಡಿದ ಪಾಂಡವರು ವಾಯುವೇಗದಲ್ಲಿ ಗಮಿಸಬಲ್ಲ ಭೀಮನನ್ನು ಕಾಶಿಗೆ ಕಳುಹಿಸಿ ಲಿಂಗಗಳನ್ನು ತರಲು ನಿಯೋಜಿಸಿದರು. ಭೀಮ ಲಿಂಗಗಳನ್ನು ತರುವಾಗ ತಡವಾಗಿದ್ದರಿಂದ ನಿಶ್ಚಿತ ಲಗ್ನದಲ್ಲಿ ಆತನು ಆಗಮಿಸುವುದಕ್ಕೆ ಮೊದಲೇ ಶಿಲೆಯೊಂದನ್ನು ಪ್ರತಿಷ್ಠಿಸಿ ಪೂಜೆ ನೆರವೇರಿಸಲಾಯಿತು.ಆದರೆ ಭೀಮನು ಆಗಮಿಸಿ ಪ್ರತಿಷ್ಠಾಪಿಸಿದ ಶಿಲೆಯನ್ನು ಕಿತ್ತೆಸೆದು ತಾನು ತಂದ ಲಿಂಗಗಳನ್ನು ಪ್ರತಿಷ್ಠಾಪಿಸಿದನು. ಭೀಮನು ಕಿತ್ತೆಸೆದ ಲಿಂಗವು ವಿಟ್ಲ ದೇಗುಲದ ಬಡಗು ದಿಕ್ಕಿನಲ್ಲಿ ಕೆರೆಯ ಮಧ್ಯೆ ಕಲ್ಲಿನ ಮಂಟಪದಲ್ಲಿ ಈಗಲೂ ಇದೆಯೆಂದು ಹೇಳಲಾಗುತ್ತಿದೆ. ಹೀಗೆ ಈ ಶಿವಲಿಂಗಗಳು ಪಾಂಡವರಿಂದ ಪ್ರತಿಷ್ಠೆಗೊಂಡಿದೆ ಎನ್ನಲಾಗಿದೆ. ನೈವೇದ್ಯಕ್ಕೆ ಬೇರೇನೂ ಇಲ್ಲದುದರಿಂದ ಅದಾಗಲೇ ನೈವೇದ್ಯ ಮಾಡಲಾದ ಅನ್ನಕ್ಕಿಷ್ಟು ನೀರು ಚಿಮುಕಿಸಿ ಅದನ್ನೊಮ್ಮೆ ಬೆಂಕಿಗಿರಿಸಿ ತೆಗೆದು ನೈವೇದ್ಯ ಮಾಡಿದನು ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಇಲ್ಲಿನ ಪಂಚಲಿಂಗನಿಗೆ ತಂಗುಳನ್ನದ ನೈವೇದ್ಯವೆಂದು ಇಂದಿಗೂ ನಡೆದುಕೊಂಡು ಬಂದಿದೆ.ಜೀರ್ಣೋದ್ಧಾರ ಕಾರ್ಯಗಳು: 1436ರಲ್ಲಿ ಈ ದೇವಸ್ಥಾನದ ಜೀರ್ಣೋದ್ಧಾರ ನಡೆದಿದೆ ಎಂಬ ಉಲ್ಲೇಖ ಸಿಗುತ್ತದೆ. 1744ರಲ್ಲಿ ಭಾಗಶಃ ಜೀರ್ಣೋದ್ಧಾರವಾಗಿರಬೇಕು. ನೂತನ ಲೋಹ ಮಂಟಪದ ನಿರ್ಮಾಣ ಮತ್ತು ಧ್ವಜಸ್ತಂಭ ನವೀಕರಣ ಮಾತ್ರ ನಡೆದಿರಬೇಕು ಎಂದು ಊಹಿಸಲಾಗುತ್ತಿದೆ. 18-19ನೆಯ ಶತಮಾನದ ಕಾಲ ವಿಟ್ಲದ ಅರಮನೆಯ ಕಷ್ಟಕಾಲ. ಈ ಕಾಲದಲ್ಲಿ ದೇವಸ್ಥಾನ ಜೀರ್ಣವಾಗುತ್ತ ಹೋಯಿತು, ಅರಮನೆಯಲ್ಲಿ ದೊರಕಿದ ದಾಖಲೆಗಳ ಪ್ರಕಾರ 1864-65ರಲ್ಲಿ ಜೀರ್ಣೋದ್ಧಾರ ಮಾಡಿದ ಬಗ್ಗೆಯೂ ಉಲ್ಲೇಖವಿದೆ. ಬಳಿಕ 1894ರಲ್ಲಿ ಪೂರ್ಣವಾಗಿ ಜೀರ್ಣೋದ್ಧಾರಗೊಂಡಿತು. ಆಗ ಬರೆಯಲಾದ ಶಾಸನವು ಧ್ವಜಸ್ತಂಭದ ಪೀಠದಲ್ಲಿದೆ. ಆ ಕಾಲದಲ್ಲಿ ಸುಭದ್ರಮ್ಮ ಯಾನೆ ದೊಡ್ಡಮ್ಮ ಅರಸಿಯವರ ಉಸ್ತುವಾರಿಯಲ್ಲಿ ಜೀರ್ಣೋದ್ಧಾರ ನಡೆದಿರಬೇಕು. ಆಗ ರವಿವರ್ಮ ನರಸಿಂಹ ರಾಜರು ಯುವರಾಜರಾಗಿದ್ದರು ಎಂದು ತಿಳಿದುಬರುತ್ತದೆ.1928ರಲ್ಲಿ ಅಮ್ಮನವರ ಗುಡಿಯ ಜೀರ್ಣೋದ್ಧಾರವನ್ನು ಇವರೇ ಮಾಡಿಸಿದರು. 1990-95ರಲ್ಲಿ ಅಲ್ಪಸ್ವಲ್ಪ ಜೀರ್ಣೋದ್ಧಾರ ಕಾರ್ಯಗಳು ನೆರವೇರಿತ್ತು. 2001ರಲ್ಲಿ ಸುಮಾರು 3.85 ಕೋಟಿ ರೂ. ವೆಚ್ಚದ ಬೃಹತ್ ದೇಗುಲದ ಪುನರ್ನಿರ್ಮಾಣ ಕಾರ್ಯಕ್ಕೆ ಭಕ್ತಾಭಿಮಾನಿಗಳು ಕೈ ಜೋಡಿಸಿದ್ದು ಭರದಿಂದ ಸಾಗಿತ್ತು. ಆದರೆ ಆರಂಭದಲ್ಲಿ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಖರ್ಚಾಗುವ ಸಂಭವವಿದ್ದು ಈಗಾಗಲೇ  ಸುಮಾರು 7 ಕೋಟಿ ರೂ.ಗಳಿಗೂ ಮಿಕ್ಕಿ ಖರ್ಚು ಮಾಡಲಾಗಿದೆ. ಆದರೆ ಕಾಮಗಾರಿ ಪೂರ್ತಿಯಾಗುವುದಕ್ಕೆ ಇನ್ನೂ 1.5 ಕೋಟಿಗೂ ಮಿಕ್ಕಿ ಧನಸಂಗ್ರಹವಾಗಬೇಕಿದೆ. ಏಪ್ರಿಲ್ ತಿಂಗಳಲ್ಲಿ ಬ್ರಹ್ಮಕಲಶಾಭಿಷೇಕ ಉತ್ಸವಕ್ಕೆ ದಿನ ನಿಗದಿಮಾಡಲಾಗಿತ್ತಾದರೂ ಕಾಮಗಾರಿ ಕುಂಠಿತಗೊಂಡದ್ದರಿಂದ ಮುಂದಿನ ಉತ್ತರಾಯಣ ಕಾಲದಲ್ಲಿ ಅಂದರೆ 2013ರಲ್ಲಿ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗಿತ್ತು. ಅದರಂತೆ ಅದೀಗ ನಡೆಯುತ್ತಿದೆ.ಜೀರ್ಣೋದ್ಧಾರ ಸಮಿತಿ: ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ, ಅಧ್ಯಕ್ಷರಾಗಿ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಕಾರ್ಯಾಧ್ಯಕ್ಷರಾಗಿ ಜಗನ್ನಾಥ ಸಾಲ್ಯಾನ್, ಕೋಶಾಧಿಕಾರಿಯಾಗಿ ಸುಬ್ರಾಯ ಪೈ ಹಾಗೂ ಕೆ. ಸದಾಶಿವ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ ವಿಟ್ಲ ಕಾರ್ಯ ನಿರ್ವಹಿಸುತ್ತಿದ್ದಾರೆ.ಬ್ರಹ್ಮಕಲಶೋತ್ಸವ ಸಮಿತಿ: ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಅಧ್ಯಕ್ಷರಾಗಿ ಎಲ್.ಎನ್ ಕೂಡೂರು, ಸಹ ಕೋಶಾಧಿಕಾರಿಯಾಗಿ ಪಿ ರಾಧಾಕೃಷ್ಣ ಪೈ ಹಾಗೂ ಬಿ ಶಾಂತಾರಾಮ ಶೆಟ್ಟಿ, ಕೋಶಾಧಿಕಾರಿ ಹಾಗೂ ಕಾರ್ಯದರ್ಶಿಯಾಗಿ ವಿಟ್ಲ ಅರಮನೆಯ ಅನುವಂಶಿಕ ಮೊಕ್ತೇಸರರು ವಿ ಜನಾರ್ದನ ವರ್ಮ ಅರಸರು ಕಾರ್ಯ ನಿರ್ವಹಿಸುತ್ತಿದ್ದಾರೆ.ದೇಗುಲ ನಿರ್ಮಾಣ: ದೇಗುಲ ಬೃಹದಾಕಾರವಿದ್ದು ಹೊರಗಿನ ಗೋಡೆಯಲ್ಲಿ 421 ಕೆಂಪು ಕಲ್ಲುಗಳ 42 ಸಾಲನ್ನು ಕಟ್ಟಲಾಗುತ್ತಿದೆ. ಒಳಗಿನ ಗೋಡೆಯಲ್ಲಿ 421 ಕೆಂಪು ಕಲ್ಲುಗಳ 52 ಸಾಲನ್ನು ಕಟ್ಟಲಾಗಿದೆ. 17/9 ಇಂಚು ಆಕಾರದ ಒಟ್ಟು 33,584 ಕಲ್ಲುಗಳನ್ನು ಗೋಡೆಗೆ ಬಳಸಲಾಗಿದೆ. ಕೋರೆಯಲ್ಲೇ ಈ ಅಳತೆಯ ಕಲ್ಲುಗಳನ್ನು ತೆಗೆಯಲಾಗಿದೆ. ಎತ್ತರದ ಭಾಗದಲ್ಲಿ ಒಂದು ಕಲ್ಲನ್ನು ಮೇಸ್ತ್ರಿಗೆ ತಲುಪಿಸುವುದಕ್ಕೆ 7 ಮಂದಿ ಸಹಾಯಕರು ಬೇಕೇ ಬೇಕು. ಉತ್ತಮ ತರಬೇತಿ ಹೊಂದಿದ ಕರುಣಾಕರ ಮೇಸ್ತ್ರಿ ಅವರ 14-15 ಮಂದಿ ತಂಡ ಗೋಡೆ ನಿರ್ಮಿಸಿದ್ದಾರೆ.ಕೆಂಪುಕಲ್ಲು ಕಟ್ಟುವಾಗ ಸಿಮೆಂಟ್ ಉಪಯೋಗಿಸಿಲ್ಲ. ಬದಲಿಗೆ ಬೆಲ್ಲ, ಸುಣ್ಣದ ಅಂಶ (ಕುಮ್ಮಯ), ಎರ್ಪೆ ಸೊಪ್ಪು, ಕುರ್ಮಸೊಪ್ಪು, ತೊಗಟೆ, ಆಲದ ಕೆತ್ತೆಗಳನ್ನು ಬೆರೆಸಿ 15 ದಿನಗಳ ಕಾಲ ಹುಳಿ ಬರಿಸಿ ಮಿಶ್ರಣ ತಯಾರಿಸಿ ಕಲ್ಲು ಜೋಡಣೆ ಕಾರ್ಯ ನಡೆಯುತ್ತದೆ. ಮರದ ಮಾಡು, ಕೆತ್ತನೆ ಕಾರ್ಯಗಳ ಕಾರ್ಯವೂ ಅಭಿವೃದ್ಧಿಯ ಹಂತದಲ್ಲಿದೆ. ನೂತನ ಕೊಡಿಮರವನ್ನು ಎಳ್ಳೆಣ್ಣೆಯಲ್ಲಿ ಮುಳುಗಿಸಿಡಲಾಗಿತ್ತು. ಕೆಲ ದಿನಗಳ ಹಿಂದೆ ಅದನ್ನು ಪುನಃ ಸ್ಥಾಪಿಸಲಾಗಿದೆ. ಒಟ್ಟಿನಲ್ಲಿ 2011ರಲ್ಲಿ ಬೃಹತ್ ದೇಗುಲದ ನಿರ್ಮಾಣ ಕಾರ್ಯ ಪೂರ್ತಿಯಾಗಿ ಬ್ರಹ್ಮಕಲಶಾಭಿಷೇಕೋತ್ಸವ ನಡೆಸಲು ಸಮಿತಿ ತೀರ್ಮಾನಿಸಿದ್ದು, ಇದೀಗ ಎಲ್ಲಾ ಕಾಮಗಾರಿ ಮುಗಿಯುತ್ತಾ ಬಂದಿದೆ. ಇದರ ಒಟ್ಟು ವೆಚ್ಚ ರೂ. 9 ಕೋಟಿ ಆಗಿದೆ.ಅದ್ದೂರಿ ಪ್ರಚಾರ: ಇದೀಗ ವಿಟ್ಲದ ಅಲ್ಲಲ್ಲಿ ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ಬ್ಯಾನರ್, ಕಟೌಟು ರಾರಾಜಿಸುತ್ತಿದೆ. ಬಸ್ಸುಗಳಲ್ಲಿ, ಆಟೋ ರಿಕ್ಷಾ, ಕಾರು, ಅಂಗಡಿ, ಹೋಟೆಲ್ ಮುಂತಾದ ಕಡೆಗಳಲ್ಲಿ ಸ್ಟಿಕ್ಕರ್ ಅಂಟಿಸಿ ಅದ್ದೂರಿ ಪ್ರಚಾರ ನೀಡಲಾಗುತ್ತಿದೆ. ಪೇಟೆಯಲ್ಲಿ ಬಂಟಿಂಗ್ಸ್ ಮೊದಲಾದವುಗಳನ್ನು ಅಳವಡಿಸಲಾಗಿದೆ. ಈ ಸಮಾರಂಭಕ್ಕೆ ರಾಜ್ಯ, ರಾಷ್ಟ್ರೀಯ ಮಟ್ಟದ ಧಾರ್ಮಿಕ ಮುಖಂಡರು ರಾಜಕೀಯ ನೇತಾರರು ಆಗಮಿಸಲಿದ್ದಾರೆ. ಬ್ರಹ್ಮಕಲಶೋತ್ಸವದ ಬಳಿಕ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ವಿಟ್ಲದಲ್ಲಿ ಜನವರಿ ಒಂದು ತಿಂಗಳು ಪೂರ್ತಿ ಹಬ್ಬದ ವಾತಾವರಣ ನೆಲೆಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry