ಮಂಗಳವಾರ, ನವೆಂಬರ್ 19, 2019
22 °C

ಬ್ರಹ್ಮಚಾರಿ ಪರೋಪಕಾರಿ!

Published:
Updated:

`ಮಿಸ್ಸಮ್ಮೋ, ನಿಂಗೆ ಈ ಮಿಸ್ಸಮ್ಮ ಅನ್ನೋ ಹೆಸರ್ನ ಯಾರಿಟ್ರು ಮತ್ತೆ ಯಾಕಿಟ್ರು?' ಹರಟೆಕಟ್ಟೆಯಲ್ಲಿ ಗುಡ್ಡೆ ಆರಂಭಕ್ಕೇ ಇಂಥದ್ದೊಂದು ಪ್ರಶ್ನೆ ಎತ್ತಿದಾಗ ಮಿಸ್ಸಮ್ಮಗೆ ಕಸಿವಿಸಿಯಾಯಿತು. `ಯಾಕೋ ತರ್ಲೆ, ನನ್ನ ಹೆಸರಿನ ಕತೆ ಕಟ್ಕಂಡು ನಿಂಗೇನಾಗ್ಬೇಕು? ಈಗ ನಿನ್ನ ಗುಡ್ಡೆ ಅಂತ ಕರೀತಾರಲ್ಲ, ಅದನ್ಯಾರಿಟ್ರು? ಯಾಕಿಟ್ರು?' ಮಿಸ್ಸಮ್ಮ ತಿರುಗೇಟು ನೀಡಿದಳು.ತಕ್ಷಣ ತೆಪರೇಸಿ `ಮಿಸ್ಸಮ್ಮೋ ನಿಂಗೊತ್ತಿಲ್ವಾ? ಅದನ್ನ ನಾನೂ ದುಬ್ಬೀರ ಸೇರಿ ಇಟ್ಟಿದ್ದು. ಇವನ ಒರಿಜಿನಲ್ ಹೆಸರು ಗಣೇಶ ಅಂತ. ಊರಲ್ಲಿ ಭಾನ್‌ಭಾನುವಾರ ಕುರಿ ಕುಯ್ದು ಪಾಲಾಕಿ ಗುಡ್ಡೆಮಟನ್ ಮಾರ್ತಿದ್ದ. ಎಲ್ರೂ ಇವುನ್ನ ಗುಡ್ಡೆ ಗಣೇಶ, ಗುಡ್ಡೆ ಗಣೇಶ ಅಂತ ಕರೀತಿದ್ರು. ನಾವು ಗಣೇಶನ್ನ ತೆಗೆದುಹಾಕಿ ಬರೀ ಗುಡ್ಡೆ ಅಂತ ಇಟ್ಟಿದೀವಿ' ಎಂದು ನಕ್ಕ.ತನ್ನ ಪೂರ್ವೇತಿಹಾಸ ಬಹಿರಂಗಗೊಂಡು ಎಲ್ಲರೆದುರು ಮುಜುಗರಕ್ಕೀಡಾದರೂ ಪಟ್ಟು ಬಿಡದ ಗುಡ್ಡೆ `ಗೊತ್ತಾಯ್ತ ಮಿಸ್ಸಮ್ಮ? ಈಗ ನಿಂದು ಹೇಳು' ಎಂದ.`ಥು ಇವನೊಬ್ಬ, ನಾನು ಮದುವೆ ಆಗಲ್ಲ ಅಂತ ಪ್ರತಿಜ್ಞೆ ಮಾಡಿದೀನಿ ಕಣೊ, ಆಗ ಫ್ರೆಂಡ್ಸ್ ಎಲ್ಲ ಮಿಸ್ಸಮ್ಮ ಮಿಸ್ಸಮ್ಮ ಅಂತ ಗೇಲಿ ಮಾಡ್ತಿದ್ರು. ಬರ್ತಾ ಬರ್ತಾ ಅದೇ ಖಾಯಂ ಆಗೋಯ್ತು.'`ಅಂದ್ರೇ ನೀನು ಬ್ರಹ್ಮಚಾರಿ ಅನ್ನು...' ಗುಡ್ಡೆ ಅಷ್ಟಕ್ಕೇ ಬಿಡಲಿಲ್ಲ.`ಅದೆಲ್ಲ ಗೊತ್ತಿಲ್ಲ ಕಣಲೆ, ಮದುವೆ ಆಗಲ್ಲ ಅಷ್ಟೆ'

`ಮತ್ತೆ ನಿನ್ನ ವಂಶೋದ್ಧಾರ ಹೆಂಗೆ?'`ನಂದ್ಯಾವ ರಾಜವಂಶ ಬಿಡೋ ನಿನ್ನ, ಎಲ್ಲ ಇರೋ ಆ ರಾಹುಲ್‌ಗಾಂಧಿನೇ ಮದುವೆ ಬ್ಯಾಡ, ಬ್ರಹ್ಮಚಾರಿ ಆಗ್ತೀನಿ ಅಂತಿರೋವಾಗ ನಂದೇನ್ ಮಹಾ?...'ಮಿಸ್ಸಮ್ಮನ ಮಾತು ಕೇಳಿ ದುಬ್ಬೀರ ನಿಟ್ಟುಸಿರುಬಿಟ್ಟ. `ಯಾಕೋ ಈ ದೇಶದಲ್ಲಿ ಬ್ರಹ್ಮಚಾರಿಗಳ ಸಂಖ್ಯೆ ಹೆಚ್ಚಾಗ್ತಾ ಐತೆ ಕಣೊ ಗುಡ್ಡೆ, ಈ ದೇಶಾನ ಬ್ರಹ್ಮಚಾರಿಗಳ ಕೈಗೆ ಒಪ್ಪಿಸೋಂಥ ಕಾಲ ಬಂತು ಅನ್ಸುತ್ತೆ...' ಎಂದ.`ಏನು ಹಂಗಂದ್ರೆ?' ಮಿಸ್ಸಮ್ಮ ಪ್ರಶ್ನಿಸಿದಳು.`ಮುಂದಿನ ಲೋಕಸಭಾ ಚುನಾವಣೇಲಿ ಈ ದೇಶ ಬ್ರಹ್ಮಚಾರಿಗಳ ಕೈಗೆ ಹೋಗೋದು ಗ್ಯಾರಂಟಿ. ಕಾಂಗ್ರೆಸ್ ಗೆದ್ರೆ ರಾಹುಲ್‌ಗಾಂಧಿ, ಬಿ.ಜೆ.ಪಿ. ಗೆದ್ರೆ ನರೇಂದ್ರ ಮೋದಿ ಪ್ರಧಾನಿ ಆಗ್ತಾರೆ. ಇಬ್ರೂ ಬ್ರಹ್ಮಚಾರಿಗಳೇ ಅಲ್ವ ಮಿಸ್ಸಮ್ಮ?'`ಆಗ್ಲಿ, ಏನ್ ತಪ್ಪು? ಬ್ರಹ್ಮಚಾರಿಗಳು ದೇಶ ಆಳಬಾರ್ದಾ? ಬ್ರಹ್ಮಚಾರಿಗಳು ಅಂದ್ರೆ `ಪರೋಪಕಾರಂ ಇದಂ ಶರೀರಂ' ಅನ್ನೋ ತರ ಬದುಕೋರು. ತಮ್ಮ ವಂಶ ಉದ್ಧಾರ ಆಗದಿದ್ರು ಚಿಂತಿಲ್ಲ, ದೇಶ ಉದ್ಧಾರ ಆಗಬೇಕು ಅನ್ನೋರು ಗೊತ್ತಾ?' ಮಿಸ್ಸಮ್ಮ ಬ್ರಹ್ಮಚಾರಿಗಳ ಪರ ವಕಾಲತ್ತು ವಹಿಸಿದಳು.`ಹೌದೌದು, ಬ್ರಹ್ಮಚಾರಿಗಳು ಅಂದ್ರೆ ಜವಾಬ್ದಾರಿ ಒಲ್ಲದೋರು, ಬೇಲಿ ಇಲ್ಲದೋರು, ಸ್ವೇಚ್ಛಾಚಾರಿಗಳು, ಯಾವಾಗ್ಲು ಪಕ್ಕದ ಮನೆ ಬಗ್ಗೆನೇ ಆಸಕ್ತಿ ತೋರ್ಸೋರು... ನಂಗೊತ್ತಿಲ್ವಾ?' ಗುಡ್ಡೆ ಕಿಚಾಯಿಸಿದ.`ಹೇಯ್ ಏನೋ ಹಂಗಂದ್ರೆ? ಒದೀತೀನಿ ನೋಡು. ಬ್ರಹ್ಮಚಾರಿಗಳು ಯಾರಿಗೂ ಹೊರೆಯಾಗಲ್ಲ. ತಮ್ಮ ಸುಖಕ್ಕಿಂತ ದೇಶದ ಸುಖ ಮುಖ್ಯ ಅವರಿಗೆ. ಈಗ ಸಂಸಾರದ ಬಂಧನ ಬೇಡ ಅಂತ ಮೋದಿ ಜನಸೇವೆ ಮಾಡ್ತಿಲ್ವಾ? ಮುಂದೆ ದೇಶದ ಜವಾಬ್ದಾರಿ ಹೊರೋಕೆ ರೆಡಿಯಾಗಿಲ್ವ? ಈಗಾಗ್ಲೆ ಅಮ್ಮ ಜಯಲಲಿತ ಗ್ರೀನ್ ಸಿಗ್ನಲ್ ಕೊಟ್ಟಿದಾರಂತೆ. ಮೊನ್ನೆ ಅಕ್ಕ ಮಮತಾ ಬ್ಯಾನರ್ಜಿ ಹತ್ರಾನೂ ಮಾತುಕತೆ ನಡೆದಿದೆಯಂತೆ. ಎಲ್ರೂ ಮೋದಿ ಜೊತೆ ಕೈ ಜೋಡಿಸೋಕೆ ಒಪ್ಪಿದಾರಂತೆ' ಮಿಸ್ಸಮ್ಮ ಸಮರ್ಥಿಸಿಕೊಂಡಳು.`ಓ, ಗೊತ್ತಾಯ್ತು ಬಿಡು. ಇಲ್ಲೆವರೆಗೆ ಬಿಜೆಪಿಯೋರು ಎನ್.ಡಿ.ಎ ಅಂತ ಮಾಡ್ಕಂಡು ದೇಶ ಆಳಿದ್ರು. ಈಗ ಮೋದಿ ಎನ್.ಬಿ.ಎ. ಅಂತ ಮಾಡ್ಕಂಡು ದೇಶ ಆಳೋಕೆ ಹೊಂಟಿದಾರೆ ಅನ್ನು...'`ಎನ್.ಬಿ.ಎ ನಾ? ಏನು ಹಂಗಂದ್ರೆ?' ತೆಪರೇಸಿಗೆ ಕುತೂಹಲ.`ನ್ಯಾಶನಲ್ ಬ್ರಹ್ಮಚಾರೀಸ್ ಅಲೈಯನ್ಸ್! ಅಂದ್ರೇ ರಾಷ್ಟ್ರೀಯ ಬ್ರಹ್ಮಚಾರಿಗಳ ಒಕ್ಕೂಟ ಅಂತ. ಮೋದಿ ಸಾಹೇಬ್ರು ಬರೀ ಬ್ರಹ್ಮಚಾರಿಗಳನ್ನೇ ಹುಡಿಕ್ಕೊಂಡು ಹೊಂಟಂಗೆ ಕಾಣುಸ್ತತಿ. ಜಯಲಲಿತ ಆತು, ಮಮತಾ ಬ್ಯಾನರ್ಜಿ ಆತು. ಇನ್ನು ಮೇಡಂ ಮಾಯಾವತಿ ಮತ್ತು ಸಾಧ್ವಿ ಉಮಾಭಾರತಿ ಅವರ್ನೂ ಸೇರಿಸ್ಕೊಂಬಿಟ್ರೆ `ಬೃಹತ್ ಬ್ರಹ್ಮಚಾರಿ ಭಾರತ' ನಿರ್ಮಾಣ ಮಾಡಿಬಿಡಬಹುದು. ಮಾರ್ಗದರ್ಶನ ಮಾಡಾಕೆ ಹೆಂಗಿದ್ರೂ ಬ್ರಹ್ಮಚಾರಿಗಳೇ ಆದ ವಾಜಪೇಯಿ ತಾತ ಇದ್ದೇ ಇದಾರೆ ಅಲ್ವಾ?' ಗುಡ್ಡೆ ತನ್ನ ಅಗಾಧ ರಾಜಕೀಯ ಜ್ಞಾನ ಪ್ರದರ್ಶಿಸಿದ.`ಜೊತೆಗೆ ಈ ಮಿಸ್ಸಮ್ಮನ್ನೂ ಸೇರಿಸಿದ್ರೆ ಹೆಂಗೆ?' ತೆಪರೇಸಿ ನಗುತ್ತಾ ಕಾಲೆಳೆಯೋಕೆ ನೋಡಿದಾಗ ಮಿಸ್ಸಮ್ಮಗೆ ಸಿಟ್ಟು ಬಂತು `ಲೇ ತರ್ಲೆಗಳಾ, ಬ್ರಹ್ಮಚಾರಿಗಳಿಗೆ ಅಧಿಕಾರ ಸಿಕ್ರೆ ಮಾತ್ರ ಈ ದೇಶ ಉದ್ಧಾರ ಆಗೋದು ತಿಳ್ಕಳ್ರಿ. ದುಡ್ಡು, ಆಸ್ತಿ ಮಾಡಿಡೋಕೆ ಅವರಿಗೇನು ಹೆಂಡ್ರಾ ಮಕ್ಕಳಾ? ಮೋದಿ ಆಗ್ಲಿ, ರಾಹುಲ್‌ಗಾಂಧಿ ಆಗ್ಲಿ. ಒಳ್ಳೆ ಆಡಳಿತ ಗ್ಯಾರಂಟಿ.ಭೂಮಿ ನುಂಗಲ್ಲ, ಮೇವು-ಗೊಬ್ಬರ ತಿನ್ನಲ್ಲ, ಹೆಲಿಕಾಪ್ಟರು-ಹೆಣದ ಪೆಟ್ಟಿಗೇಲಿ ದುಡ್ಡು ಹೊಡೆಯಲ್ಲ, ಬೋಫೋರ್ಸೂ ಇಲ್ಲ, ಭೂಫೋರ್ಸೂ ಇಲ್ಲ...'`ಹೌದೌದು, ಮೂರು ಸಾವಿರ ಸೀರೆ, ಐನೂರು ಗೌನು, ಕೆ.ಜಿ.ಗಟ್ಲೆ ಚಿನ್ನ... ಇವರು ಬ್ರಹ್ಮಚಾರಿಗಳು...' ಗುಡ್ಡೆ ಮಿಸ್ಸಮ್ಮನ ಮಾತನ್ನ ಅರ್ಧಕ್ಕೇ ನಿಲ್ಲಿಸಿ ವ್ಯಂಗ್ಯವಾಡಿದ.`ಏನೋ ಹೆಣ್ಮಕ್ಳು ಆಸೆಪಡ್ತಾವೆ ಬಿಡಲೆ, ನೀನು ಬರೀ ಆ ಜಯಲಲಿತಮ್ಮುಂದೇ ಹೇಳ್ತೀಯಪ. ಮಮತಾ ಮಾಯಾವತಿ ಅವರ್ನ ನೋಡು, ಎಷ್ಟು ಸಿಂಪಲ್ ಅದಾರೆ. ಮೋದಿನೂ ಅಷ್ಟೆ, ಜುಬ್ಬಾ ಪೈಜಾಮ, ಮೇಲೊಂದು ಶಾಲು, ಒಂಚೂರು ಗಡ್ಡ... ಬಿಟ್ರೆ ಇನ್ನೇನೈತಪ?' ದುಬ್ಬೀರ ಮಿಸ್ಸಮ್ಮನ ಪರ ವಾದಿಸಿದ.ಅಷ್ಟೆಲ್ಲ ಚರ್ಚೆ ನಡೀತಿದ್ರೂ ಪಿಟಿಕ್ಕೆನ್ನದೆ ಸುಮ್ಮನೆ ಕುಳಿತಿದ್ದ ಚಾಂದ್‌ನನ್ನು ನೋಡಿ ಗುಡ್ಡೆ `ಅರೆ ಚಾಂದು, ಯಾಕೋ ಏನೂ ಮಾತಾಡ್ತಿಲ್ಲ? ಏನು ಯೋಚಿಸ್ತಿದೀಯ?' ಎಂದ.`ಏನಿಲ್ಲ ಗುಡ್ಡೆದುಕೆ ಬೈ, ನಾವು ಹಿಂದೆ ಇಂದ್ರಾಗಾಂಧಿಗೆ ಓಟ್ ಹಾಕಿದೀವಿ, ಉಸ್ಕೆಬಾದ್ ರಾಜೀವ್‌ಗಾಂಧಿಗೆ ಹಾಕಿದೀವಿ. ಅಬ್‌ತೋ ರಾಹುಲ್‌ಗಾಂಧಿ ಅದಾರೆ. ಅವರು ಬ್ರಹ್ಮಚಾರಿ ಆಗಿಬಿಟ್ರೆ ಮುಂದೆ ನಾವು ಯಾರಿಗೆ ಓಟು ಹಾಕೋದು ಅಂತ ಯೋಚ್ನೆ ಮಾಡ್ತಿದ್ದೆ...'`ಅರೇ ಪೂಜಾಗಾಂಧಿ ಅದಾರಲ್ಲ ಬಿಡೋ... ಯಾಕೆ ಯೋಚನೆ ಮಾಡ್ತೀಯ?' ಗುಡ್ಡೆ ಜೋಕ್ ಮಾಡಿದಾಗ ಎಲ್ಲರೂ ಗೊಳ್ಳಂತ ನಕ್ಕರು.`ನಂಗೂ ಹಂಗೇ ಅನ್ಸುತ್ತಪ್ಪ, ರಾಹುಲ್‌ಗಾಂಧಿ ಎಷ್ಟು ಹ್ಯಾಂಡ್‌ಸಮ್ಮೋಗಿದಾರೆ. ಸುಮ್ನೆ ಯಾಕೆ ಮದುವೆ ಆಗಬಾರ್ದು ಅಲ್ವಾ?' ಮಿಸ್ಸಮ್ಮ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಾಗ ತೆಪರೇಸಿಗೆ ಆಶ್ಚರ್ಯ! `ಏನ್ ಮಿಸ್ಸಮ್ಮೋ, ಏನ್ ಸಮಾಚಾರ? ರಾಹುಲ್‌ಗಾಂಧಿ ಹ್ಞೂ ಅಂದ್ರೆ ನೀನೂ ಒಂದ್ ಕೈ ನೋಡಂಗಿದೀಯ?' ಎಂದು ಕಣ್ಣು ಮಿಟುಕಿಸಿದ.`ಥು ಸುಮ್ಕಿರೋ ತರ್ಲೆ, ನಾನೆಲ್ಲಿ ಅವರೆಲ್ಲಿ...' ಮಿಸ್ಸಮ್ಮ ನಗುತ್ತ ನಾಚಿಕೆಯಿಂದ ಕೂತಲ್ಲೇ ನುಲಿದಾಗ ಗುಡ್ಡೆ `ಓ... ಓ... ಗೊತ್ತಾತು ಗೊತ್ತಾತು, ಬ್ರಹ್ಮಚಾರಿ ಬಿದ್ದ ಜಾರಿ ಅನ್ನಂಗೆ ನಿಂಗೂ ಒಳಗೊಳಗೇ ಆಸೆ ಐತೆ' ಎಂದ. ಹರಟೆಕಟ್ಟೆಯಲ್ಲಿ ಮತ್ತೆ ಜೋರು ನಗು.`ಈ ಬ್ರಹ್ಮಚಾರಿಗಳ ಕತೆ ಸಾಕು ಬಿಡ್ರಪ್ಪ, ನಮ್ಮ ಯಡ್ಯೂರಪ್ಪ, ಸಿದ್ದರಾಮಣ್ಣ, ಕುಮಾರಸ್ವಾಮೀದು ಏನಾದ್ರು ಇದ್ರೆ ಹೇಳ್ರಿ' ದುಬ್ಬೀರ ಕೇಂದ್ರದಿಂದ ಸೀದಾ ರಾಜ್ಯ ರಾಜಕೀಯಕ್ಕೆ ಬಂದ.ಆಗ ತೆಪರೇಸಿ `ನಿಂಗೊತ್ತಿಲ್ವಾ? ಯಡ್ಯೂರಪ್ಪ ಮೊನ್ನೆ ಮಾಧ್ಯಮದೋರ ಮುಂದೆ ಕಣ್ಣೀರು ಹಾಕಿದ್ರಂತೆ' ಎಂದ.

`ಹೌದಾ? ಯಾಕಂತೆ?'`ಅದ್ಯಾವುದೋ ಬೀದರ್‌ನ ಮಠದಲ್ಲಿ ಮೂವರು ಕಿರಿಸ್ವಾಮಿಗಳು ಅಗಲಿದ ತಮ್ಮ ಗುರುವನ್ನು ಬಿಟ್ಟಿರಲಾಗದೆ ಅಗ್ನಿಪ್ರವೇಶ ಮಾಡಿದ್ರಲ್ಲ, ಅದನ್ನ ನೆನೆಸ್ಕಂಡು ಕಣ್ಣೀರು ಹಾಕಿದ್ರಂತೆ'`ಪಾಪ, ಏನಂದ್ರಂತೆ?'`ಆ ಮೂವರು ಶಿಷ್ಯಂದಿರದು ಎಂಥ ಗುರುಪ್ರೇಮ. ತಮ್ಮ ಗುರುವನ್ನು ಬಿಟ್ಟಿರಲಾಗದೆ ಅಗ್ನಿಗೇ ಆಹುತಿಯಾಗಿಬಿಟ್ರು. ನನಗೂ ನಾಲ್ವರು ಶಿಷ್ಯಂದಿರಿದ್ರು. ಕೆ.ಜೆ.ಪಿ. ಸೇರ್ತೀವಿ ಸೇರ್ತೀವಿ ಅಂತ ಹೇಳಿ ಕೊನೇ ಗಳಿಗೇಲಿ ಕೈಕೊಟ್ಟು ನನ್ನ ಚುನಾವಣೆ ಅನ್ನೋ ಬೆಂಕಿಗೆ ತಳ್ಳಿ ತಾವು ಬಚಾವಾಗಿಬಿಟ್ರು, ಗುರುದ್ರೋಹಿಗಳು... ಅಂದ್ರಂತೆ!'

 

ಪ್ರತಿಕ್ರಿಯಿಸಿ (+)