ಬ್ರಹ್ಮಪುತ್ರ ಮಂಡಳಿ ಪುನಃ ರಚಿಸಲು ಕೇಂದ್ರ ನಿರ್ಧಾರ

7

ಬ್ರಹ್ಮಪುತ್ರ ಮಂಡಳಿ ಪುನಃ ರಚಿಸಲು ಕೇಂದ್ರ ನಿರ್ಧಾರ

Published:
Updated:

ನವದೆಹಲಿ (ಪಿಟಿಐ): ಅಸ್ಸಾಂನಲ್ಲಿ ಪದೇಪದೇ ಕಂಡುಬರುತ್ತಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕಂಡುಬಂದ ವೈಫಲ್ಯದ ಹಿನ್ನೆಲೆಯಲ್ಲಿ ಬ್ರಹ್ಮಪುತ್ರ ಮಂಡಳಿಯನ್ನು ಪುನರ್‌ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಪ್ರಸ್ತುತ ಇರುವ ಸುಮಾರು 32 ವರ್ಷಗಳಷ್ಟು ಹಳೆಯದಾದ ಮಂಡಳಿಯನ್ನು ಪುನರ್‌ರಚಿಸಿ, ಅದನ್ನು ಈಶಾನ್ಯ ಪ್ರಾಂತ್ಯದ ಎಲ್ಲ ರಾಜ್ಯಗಳ ಜಲ ಸಂಪನ್ಮೂಲಗಳ ನಿರ್ವಹಣೆ ಮತ್ತು ಅಭಿವೃದ್ಧಿಯ ಸಂಸ್ಥೆಯನ್ನಾಗಿ ಮಾರ್ಪಡಿಸಲು ಇದೇ ವೇಳೆ ಕೇಂದ್ರ ತೀರ್ಮಾನಿಸಿದೆ.ಈ ಹಿನ್ನೆಲೆಯಲ್ಲಿ ಮಂಡಳಿಯ ಪುನರ್‌ರಚನೆಯ ಕರಡು ಪ್ರಸ್ತಾವದ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವು ಈಶಾನ್ಯ ಪ್ರಾಂತ್ಯದ ಏಳು ಮುಖ್ಯಮಂತ್ರಿಗಳನ್ನು ಕೋರಿದೆ. ಜೊತೆಗೆ ಪ್ರಸ್ತುತ ಇರುವ 1980ರ ಬ್ರಹ್ಮಪುತ್ರ ಮಂಡಳಿ ಕಾಯ್ದೆಗೆ ತಿದ್ದುಪಡಿ ತರಲು ಮತ್ತು ಬ್ರಹ್ಮಪುತ್ರ ಮಂಡಳಿಯನ್ನು ಬ್ರಹ್ಮಪುತ್ರ ನದಿ ಕಣಿವೆ ಪ್ರಾಧಿಕಾರವನ್ನಾಗಿ ಪರಿವರ್ತಿಸಲು ಸರ್ಕಾರ ಹೊಸ ಶಾಸನವೊಂದನ್ನು ಜಾರಿಗೆ ತರಲಿದೆ.ಬ್ರಹ್ಮಪುತ್ರ ನದಿಯ ಅಭಿವೃದ್ಧಿಗಾಗಿ ಮಂಡಳಿ ಇದುವರೆಗೆ ಯಾವ ಬಲವಾದ ಕಾರ್ಯವನ್ನೂ ಕೈಗೊಳ್ಳದೇ ಇರುವುದು ಮಂಡಳಿಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದಾಗ ತಿಳಿದುಬಂತು ಎಂದು ಕರಡು ಪ್ರಸ್ತಾವದಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry